ಮಂಗಳವಾರ, ಅಕ್ಟೋಬರ್ 15, 2019
29 °C
ವಿಬಿಎ, ಎಎಪಿ, ಎಐಎಂಐಎಂ ಸ್ಪರ್ಧೆ: ಕಾಂಗ್ರೆಸ್‌–ಎನ್‌ಸಿಪಿಗೆ ಏಟು

ಮಹಾರಾಷ್ಟ್ರ ವಿಧಾನಸಭೆ | ಬಿಜೆಪಿ–ಸೇನಾ ಆತ್ಮವಿಶ್ವಾಸ ಹೆಚ್ಚಿಸಿದ ಪ‍ಕ್ಷಾಂತರ

Published:
Updated:
Prajavani

ಮುಂಬೈ: ಮಹಾರಾಷ್ಟ್ರದಲ್ಲಿ ಇದೇ 21ರಂದು ನಡೆಯುವ ಚುನಾವಣೆಯಲ್ಲಿ, ಕಾಂಗ್ರೆಸ್‌–ಎನ್‌ಸಿಪಿ ನೇತೃತ್ವದ ಮೈತ್ರಿಕೂಟದ (ಮಹಾ ಅಘಾಡಿ) ಸಂಖ್ಯಾಬಲವನ್ನು ಈಗಿರುವುದಕ್ಕಿಂತ ಕುಗ್ಗಿಸಲು ಬಿಜೆಪಿ–ಶಿವಸೇನಾ ನೇತೃತ್ವದ ಆರು ಪಕ್ಷಗಳ ಮೈತ್ರಿಕೂಟ (ಮಹಾಯುತಿ) ಪ್ರಯತ್ನಿಸಲಿದೆ. 

288 ಸದಸ್ಯ ಬಲದ ವಿಧಾನಸಭೆ ಚುನಾವಣೆಯು ಹಲವು ದೊಡ್ಡ ನಾಯಕರು ಮತ್ತು ಕುಟುಂಬಗಳಿಗೆ ಅಗ್ನಿಪರೀಕ್ಷೆಯಾಗಲಿದೆ. ಚುನಾವಣಾ ಹೋರಾಟದ ಸ್ವರೂಪವೇನು ಎಂಬುದು ಈಗ ಬಹುತೇಕ ನಿಚ್ಚಳವಾಗಿದೆ.

2014 ಮತ್ತು 2019ರ ಲೋಕ ಸಭಾ ಚುನಾವಣೆಗಳಲ್ಲಿನ ಹೀನಾಯ ಸೋಲಿನಿಂದಾಗಿ ಕಾಂಗ್ರೆಸ್‌ ಪಕ್ಷವೇ ಅಸ್ತವ್ಯಸ್ತವಾಗಿದೆ. ಶರದ್‌ ಪವಾರ್‌ ನೇತೃತ್ವದ ಎನ್‌ಸಿಪಿಯಿಂದ ಹಲವು ಪ್ರಮುಖ ಮುಖಂಡರು ಬಿಜೆಪಿ ಮತ್ತು ಶಿವಸೇನಾಕ್ಕೆ ವಲಸೆ ಹೋಗಿದ್ದಾರೆ. ಹಾಗಾಗಿ, ಕಾಂಗ್ರೆಸ್‌, ಎನ್‌ಸಿಪಿಗೆ ಈಗ ಇರುವ ಕ್ಷೇತ್ರಗಳನ್ನು ಉಳಿಸಿಕೊಳ್ಳುವುದೇ ದೊಡ್ಡ ಸವಾಲು. 

ರಾಜ್‌ ಠಾಕ್ರೆ ನೇತೃತ್ವದ ಮಹಾರಾಷ್ಟ್ರ ನವನಿರ್ಮಾಣ ಸೇನಾ (ಎಂಎನ್‌ಎಸ್‌) ಸ್ಪರ್ಧೆಯು ಶಿವಸೇನಾದ ಸಾಂಪ್ರ ದಾಯಿಕ ಮತಗಳಲ್ಲಿ ಒಂದು ಭಾಗಕ್ಕೆ ಕನ್ನ ಹಾಕಬಹುದು. ಆದರೆ, ಪ್ರಕಾಶ್‌ ಅಂಬೇಡ್ಕರ್‌ ನೇತೃತ್ವದ ಬಹುಜನ ವಂಚಿತ್‌ ಅಘಾಡಿ (ವಿಬಿಎ), ಎಐಎಂಐಎಂ ಮತ್ತು ಎಎಪಿಯ ಸ್ಪರ್ಧೆಯಿಂದಾಗಿ ಕಾಂಗ್ರೆಸ್‌–ಎನ್‌ಸಿಪಿ ಮೈತ್ರಿಕೂಟಕ್ಕೆ ಭಾರಿ ತೊಡಕಾಗಲಿದೆ. ಎರಡು ದೊಡ್ಡ ಮೈತ್ರಿಕೂಟಗಳು ಮತ್ತು ಕೆಲವು ಪ್ರಮುಖ ಪಕ್ಷಗಳ ಸ್ಪರ್ಧೆಯಿಂದಾಗಿ ಚುನಾವಣಾ ಕಣ ಕುತೂಹಲಕಾರಿಯಾಗಿದೆ.

ಮುಖ್ಯಮಂತ್ರಿ ಯಾರು: ಪ್ರಶ್ನೆಗೆ ಉತ್ತರವಿಲ್ಲ

ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ ಮತ್ತು ಶಿವಸೇನಾ ಮುಖ್ಯಸ್ಥ ಉದ್ಧವ್‌ ಠಾಕ್ರೆ ಅವರು ಸೀಟು ಹಂಚಿಕೆ ಅಂತಿಮಗೊಂಡ ಬಳಿಕ ಮೊದಲ ಬಾರಿಗೆ ಶುಕ್ರವಾರ ಜಂಟಿ ಮಾಧ್ಯಮಗೋಷ್ಠಿ ನಡೆಸಿದರು. ಮುಂದಿನ ಮುಖ್ಯಮಂತ್ರಿ ಯಾರು ಎಂಬ ಪ್ರಶ್ನೆಗೆ ಈ ಇಬ್ಬರೂ ಹಾರಿಕೆಯ ಉತ್ತರ ನೀಡಿದ್ದಾರೆ.

ಫಡಣವೀಸ್‌ ಅವರು ಎರಡನೇ ಅವಧಿಗೆ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಬಿಜೆಪಿ ಹೇಳುತ್ತಿದೆ. ಆದರೆ, ಉದ್ಧವ್‌ ಅವರ ಮಗ ಆದಿತ್ಯ ಠಾಕ್ರೆ ಮುಂದಿನ ಮುಖ್ಯಮಂತ್ರಿ ಎಂದು ಶಿವಸೇನಾ ಬಿಂಬಿಸುತ್ತಿದೆ. ಮಾಧ್ಯಮಗೋಷ್ಠಿಯಲ್ಲಿ ಆದಿತ್ಯ ಅವರೂ ಇದ್ದರು.

‘ಯುವ ನಾಯಕ ಆದಿತ್ಯ ಅವರಿಗೆ ಸ್ವಾಗತ. ವರ್ಲಿ ಕ್ಷೇತ್ರದಲ್ಲಿ ಅವರು ದಾಖಲೆ ಅಂತರದಲ್ಲಿ ಗೆಲ್ಲಲಿದ್ದಾರೆ’ ಎಂದು ಫಡಣವೀಸ್‌ ಹೇಳಿದರು. ಮುಂದಿನ ಮುಖ್ಯಮಂತ್ರಿ ಯಾರು ಎಂಬ ಪ್ರಶ್ನೆಗೆ ‘ನಿಮಗೆ ಯಾಕೆ ಆತುರ’ ಎಂದು ಮರುಪ್ರಶ್ನೆ ಎಸೆದರು. ಬಿಜೆಪಿಗಿಂತ ಬಹಳ ಕಡಿಮೆ ಕ್ಷೇತ್ರಗಳಲ್ಲಿ ಸೇನಾ ಸ್ಪರ್ಧಿಸುತ್ತಿದೆ. ಹೀಗಿರುವಾಗ ಮುಂದಿನ ಮುಖ್ಯಮಂತ್ರಿ ಯಾರು ಎಂಬ ಪ್ರಶ್ನೆಗೆ ಉದ್ಧವ್‌ ಅವರು, ‘ರಾಜಕಾರಣದಲ್ಲಿ ಎಲ್ಲವೂ ಸಂಖ್ಯೆಯ ಮೇಲೆ ಅವಲಂಬಿತವಲ್ಲ’ ಎಂದರು.

ಸ್ಪರ್ಧಾಕಣದಲ್ಲಿ ಇತರರು

* 288 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿರುವ ವಿಬಿಎ

*120+ ಎಂಎನ್‌ಎಸ್‌ ಸ್ಪರ್ಧೆಯ ಕ್ಷೇತ್ರಗಳು

* 50 ಎಐಎಂಐಎಂ ಅಭ್ಯರ್ಥಿಗಳು ಕಣಕ್ಕಿಳಿಯುವ ಕ್ಷೇತ್ರಗಳು

* 50 ಎಎಪಿ ಸ್ಪರ್ಧಿಸಲಿರುವ ಕ್ಷೇತ್ರಗಳು

Post Comments (+)