ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಳಾ ಸಾಹೇಬ್ ಠಾಕ್ರೆ ಬದುಕಿರುತ್ತಿದ್ದರೆ ಬಿಜೆಪಿಗೆ ಈ ಧೈರ್ಯ ಇರುತ್ತಿತ್ತೇ?

ಎನ್‌ಸಿಪಿ ನಾಯಕನ ಪ್ರಶ್ನೆ
Last Updated 4 ನವೆಂಬರ್ 2019, 12:41 IST
ಅಕ್ಷರ ಗಾತ್ರ

ಮುಂಬೈ: ಬಿಜೆಪಿ-ಶಿವಸೇನಾ ಮೈತ್ರಿ ವಿಚಾರದಲ್ಲಿ ಒಮ್ಮತ ಮೂಡದೆ ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಯ ಬಿಕ್ಕಟ್ಟು ಮುಂದುವರಿದಿರುವ ಬೆನ್ನಲ್ಲೇ ಎನ್‌ಸಿಪಿನಾಯಕ ರೋಹಿತ್ ರಾಜೇಂದ್ರ ಪವಾರ್ ಎನ್‌ಡಿಎ ಮೈತ್ರಿ ಪಕ್ಷಗಳ ಹೋರಾಟದಲ್ಲಿ ಪ್ರಜಾಪ್ರಭುತ್ವಕ್ಕೆ ಅವಮಾನ ಮಾಡಲಾಗುತ್ತಿದೆ ಎಂದು ಕಿಡಿಕಾರಿದ್ದಾರೆ.

ಈ ಕುರಿತು ಫೇಸ್‌ಬುಕ್ಪೋಸ್ಟ್ ನಲ್ಲಿ ಬರೆದಿರುವ ಅವರು, ಬಾಳಾಸಾಹೇಬ್ ಠಾಕ್ರೆ ಅವರನ್ನು ನಾನು ಗೌರವಿಸುತ್ತೇನೆ ಮತ್ತು ಒಂದು ವೇಳೆ ಶಿವಸೇನೆಯ ಸಂಸ್ಥಾಪಕ ಇಂದು ಬದುಕಿದ್ದರೆ, ಬಿಜೆಪಿಯು ಇಂದು ಇದೇ ಧೈರ್ಯತೋರಿಸುತ್ತಿತ್ತೇ ಎಂದು ಪ್ರಶ್ನಿಸಿದ್ದಾರೆ.ಮಹಾರಾಷ್ಟ್ರವು ಜನರಿಂದ ಗೌರವವನ್ನು ಸಂಪಾದಿಸಿದಂತ ಹಲವು ನಾಯಕರಿಂದ ಆಶೀರ್ವದಿಸಲ್ಪಟ್ಟಿದೆ. ಅಂತರವರಲ್ಲಿ ಗೌರವಾನ್ವಿತ ಬಾಳಾಸಾಹೇಬ್ ಠಾಕ್ರೆ ಕೂಡ ಒಬ್ಬರು. ಅವರನ್ನು ನಾನು ಗೌರವಿಸಲು ಹಲವು ಕಾರಣಗಳಿವೆ. ಅವುಗಳಲ್ಲಿ ರಾಷ್ಟ್ರ ರಾಜಕೀಯದಲ್ಲಿ ಅವರಿಗಿದ್ದ ಘನತೆ ಪ್ರಮುಖ ಕಾರಣವಾಗಿದೆ ಎಂದು ಹೇಳಿದ್ದಾರೆ.

ಚುನಾವಣೆಗೂ ಮುನ್ನ ಬಿಜೆಪಿಯು ಶಿವಸೇನೆಯೊಂದಿಗೆ ಸಮಾನ ಅಧಿಕಾರವನ್ನು ಹಂಚಿಕೊಳ್ಳುವುದಾಗಿ ಹೇಳಿತ್ತು. ಆದರೆ ಈಗ ತನ್ನ ಮಾತಿಗೆ ತಪ್ಪಿ ನಡೆಯುತ್ತಿದೆ. ಹೀಗಾಗಿ ಬಾಳಾಸಾಹೇಬ್ ಠಾಕ್ರೆಯು ಇಂದು ಬದುಕಿದ್ದರೆ ಬಿಜೆಪಿ ಇಂದೂ ಅದೇ ಶೌರ್ಯವನ್ನು ತೋರುತ್ತಿತ್ತೇ ಎನ್ನುವ ಪ್ರಶ್ನೆಯನ್ನು ಹುಟ್ಟುಹಾಕುತ್ತದೆ ಎಂದು ಬರೆದುಕೊಂಡಿದ್ದಾರೆ.

ಬರದಿಂದಾಗಿ ತತ್ತರಿಸಿದ್ದ ರೈತರು ಇದೀಗ ಭಾರಿ ಮಳೆಯಿಂದಾಗಿ ತೊಂದರೆಗೀಡಾಗಿದ್ದಾರೆ. ಇಂತಹ ವೇಳೆಯಲ್ಲಿ ಒಬ್ಬ ನಾಗರಿಕನಾಗಿ ಸರ್ಕಾರ ರಚನೆಯಲ್ಲಿ ಉಂಟಾಗುತ್ತಿರುವ ವಿಳಂಬ ನೀತಿಯಿಂದಾಗಿ ತಲ್ಲಣ ಉಂಟಾಗಿದೆ. ಗ್ರಾಮೀಣ ಸೇರಿದಂತೆ ನಗರ ಪ್ರದೇಶಗಳ ಜನರು ಹಲವಾರು ತೊಂದರೆಗಳನ್ನು ಎದುರಿಸುತ್ತಿದ್ದಾರೆ. ಆದಷ್ಟು ಬೇಗ ಸರ್ಕಾರ ರಚಿಸಿ ಸಾಮಾನ್ಯ ಜನರಿಗೆ ನೆರವಾಗಬೇಕಿದೆ. ಜನರು ನಮ್ಮನ್ನು ವಿರೋಧ ಪಕ್ಷವನ್ನಾಗಿ ಆಯ್ಕೆ ಮಾಡಿದ್ದಾರೆ. ನಾವು ತೀರ್ಪನ್ನು ಒಪ್ಪಿಕೊಂಡಿದ್ದೇವೆ ಮತ್ತು ಕೆಲಸವನ್ನು ಪ್ರಾರಂಭಿಸಿದ್ದೇವೆ. ಆದರೆ ಇತ್ತೀಚಿಗಿನ ಬಿಜೆಪಿ ಮತ್ತು ಶಿವಸೇನೆ ನಡುವಿನ ಕಿತ್ತಾಟವು ಪ್ರಜಾಪ್ರಭುತ್ವಕ್ಕೆ ಅವಮಾನ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರೋಹಿತ್ ಪವಾರ್ ಹಿರಿಯ ರಾಜಕಾರಣಿ ಶರದ್ ಪವಾರ್ ಅವರ ಸೋದರಳಿಯನಾಗಿದ್ದು, ಇತ್ತೀಚೆಗಷ್ಟೇ ನಡೆದ ವಿಧಾನಸಭೆ ಚುನಾವಣೆಯಲ್ಲಿ ಕರ್ಜತ್ಜಾಮ್‌ಖೇಡ್ವಿಧಾನಸಭಾ ಕ್ಷೇತ್ರದಿಂದ ಗೆದ್ದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT