ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾರಾಷ್ಟ್ರ: ಬಿಜೆಪಿ--– ಸೇನಾ ಗೆಲುವಿನ ನಾಗಾಲೋಟ

Last Updated 23 ಮೇ 2019, 19:41 IST
ಅಕ್ಷರ ಗಾತ್ರ

ಮುಂಬೈ: ಮಹಾರಾಷ್ಟ್ರವನ್ನು ಕಾಡುತ್ತಿದ್ದ ಬರ ಹಾಗೂ ರೈತರ ಸಮಸ್ಯೆಗಳು ಬಿಜೆಪಿ–ಶಿವಸೇನಾ ಮೈತ್ರಿಕೂಟದ ಗೆಲುವಿಗೆ ಅಡ್ಡಿಯಾಗಿಲ್ಲ. ಹಿಂದಿನ ಬಾರಿಯಂತೆ ಮೈತ್ರಿಕೂಟವು ತನ್ನ ಸ್ಥಾನಗಳನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. 48ರ ಪೈಕಿ 41 ಕ್ಷೇತ್ರಗಳಲ್ಲಿ ಕೇಸರಿ ಧ್ವಜ ಹಾರಿದೆ.

ಶರದ್ ಪವಾರ್ ನೇತೃತ್ವದ ಎನ್‌ಸಿಪಿ ನಾಲ್ಕು ಸ್ಥಾನಗಳನ್ನು ಗೆಲ್ಲಲಷ್ಟೇ ಶಕ್ತವಾಗಿದೆ. ಕಾಂಗ್ರೆಸ್ ಈ ಹಿಂದಿಗಿಂತಲೂ ಕಳಪೆ ಪ್ರದರ್ಶನ ನೀಡಿದ್ದು, ಬಹುತೇಕ ದೂಳೀಪಟವಾಗಿದೆ. ಈ ಕಾರಣಕ್ಕೆ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಅವರು ಈ ವಿಜಯವನ್ನು ‘ಸುನಾಮಿ’ ಎಂದು ಬಣ್ಣಿಸಿದ್ದಾರೆ. 2014ರ ಮೋದಿ ಅಲೆಯು 2019ರಲ್ಲಿ ಸುನಾಮಿಯಾಗಿ ಬದಲಾಗಿದೆ ಎಂದು ಹೇಳಿದ್ದಾರೆ.

ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿದ್ದ ಎನ್‌ಸಿಪಿ–ಕಾಂಗ್ರೆಸ್‌ನ ಎರಡಂಕಿ ಫಲಿತಾಂಶ ದಾಖಲಿಸುವ ಗುರಿ ಚೂರಾಗಿದೆ. ಮಾಜಿ ಮುಖ್ಯಮಂತ್ರಿ ಅಶೋಕ್ ಚೌಹಾಣ್ ಹಾಗೂ ಕೇಂದ್ರದ ಮಾಜಿ ಸಚಿವ ಸುಶೀಲ್‌ಕುಮಾರ್ ಶಿಂಧೆ ಅವರು ಬಿಜೆಪಿ ಎದುರು ಮಂಡಿಯೂರಿದ್ದಾರೆ.

ಪ್ರಕಾಶ್ ಅಂಬೇಡ್ಕರ್ ನೇತೃತ್ವದಲ್ಲಿ ಹೊಸದಾಗಿ ಅಸ್ತಿತ್ವಕ್ಕೆ ಬಂದಿದ್ದ ವಂಚಿತ ಬಹುಜನ ಅಘಾಡಿ (ವಿಬಿಎ) ಪಕ್ಷವು ಬಹುತೇಕ ಕ್ಷೇತ್ರಗಳಲ್ಲಿ ಮೂರನೇ ಸ್ಥಾನ ಗಳಿಸಿದೆ. ಎನ್‌ಸಿ‍‍ಪಿ–ಕಾಂಗ್ರೆಸ್ ಮೈತ್ರಿಕೂಟದ ಮತಗಳನ್ನು ವಿಬಿಎ ಕಿತ್ತುಕೊಂಡಿದೆ. ಪ್ರಕಾಶ್ ಅಂಬೇಡ್ಕರ್ ಸ್ಪರ್ಧಿಸಿದ್ದ ಎರಡೂ ಕ್ಷೇತ್ರಗಳಲ್ಲಿ ಸೋತಿದ್ದರೂ ಎರಡು ಹಾಗೂ ಮೂರನೇ ಸ್ಥಾನ ಗಳಿಸಿದ್ದಾರೆ.ಪವಾರ್‌ ಅವರ ಪುತ್ರಿ ಸುಪ್ರಿಯಾ ಸುಳೆ ಅವರು ಬಾರಾಮತಿಯಲ್ಲಿ ಗೆದ್ದಿದ್ದರೆ, ಪವಾರ್ ಸಂಬಂಧಿ ಪಾರ್ಥ ಪವಾರ್ ಅವರು 2 ಲಕ್ಷ ಮತಗಳಿಂದ ಸೋಲನುಭವಿಸಿದ್ದಾರೆ.

ಅಭ್ಯರ್ಥಿಗಳನ್ನು ಕಣಕ್ಕಿಳಿಸದಿದ್ದರೂ ಮಹಾರಾಷ್ಟ್ರ ನವನಿರ್ಮಾಣ ಸೇನೆಯ ರಾಜ್ ಠಾಕ್ರೆ ಅವರು ಮೋದಿ ವಿರುದ್ಧ ಪ್ರಚಾರ ನಡೆಸಿದ್ದರು. ಅವರ ಈ ಯತ್ನ ಫಲ ನೀಡಿಲ್ಲ. ಮುಂಬೈನ ಆರು ಕ್ಷೇತ್ರಗಳಲ್ಲಿ ಬಿಜೆಪಿ–ಸೇನಾ ಮೈತ್ರಿಕೂಟ ಮೇಲುಗೈ ಸಾಧಿಸಿದೆ.

ಮುಖೇಶ್ ಅಂಬಾನಿ ಬೆಂಬಲಿಸಿದ್ದ ಮಿಲಿಂದ್ ದೇವ್ರಾ, ನಟಿ ಊರ್ಮಿಳಾ ಸೋಲುಂಡಿದ್ದಾರೆ. ಕೇಂದ್ರ ಸರ್ಕಾರದ ವಿರುದ್ಧ ಟೀಕಾಪ್ರಹಾರ ಮಾಡುತ್ತಾ ಬಂದಿದ್ದ ಶಿವಸೇನೆಯು ಲೋಕಸಭೆಯಲ್ಲಿ ಬಿಜೆಪಿ ಜೊತೆ ಕೈ ಜೋಡಿಸುವ ಅನುಮಾನ ಇತ್ತು. ಆದರೆ ಕೊನೆ ಕ್ಷಣದಲ್ಲಿ ಮೈತ್ರಿ ಮಾಡಿಕೊಂಡು ರಾಜಕೀಯ ವಿರೋಧಿಗಳಿಗೆ ಸೋಲಿನ ರುಚಿ ತೋರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT