ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾರಾಷ್ಟ್ರ ಹಿಂದುಳಿದ ವರ್ಗಗಳ ಆಯೋಗದ ವರದಿ ಸಲ್ಲಿಕೆ: ಮರಾಠರಿಗೆ ಮೀಸಲಾತಿ ಖಚಿತ

Last Updated 15 ನವೆಂಬರ್ 2018, 20:22 IST
ಅಕ್ಷರ ಗಾತ್ರ

ಮುಂಬೈ: ಉದ್ಯೋಗ ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಮರಾಠ ಸಮುದಾಯಕ್ಕೆ ಮೀಸಲಾತಿ ಕಲ್ಪಿಸಲು ಮಹಾರಾಷ್ಟ್ರ ಸರ್ಕಾರ ಸಿದ್ಧತೆ ನಡೆಸಿದೆ.

ಮರಾಠ ಸಮುದಾಯ ಡಿಸೆಂಬರ್‌ 1ರಂದು ಅದ್ದೂರಿ ಸಂಭ್ರಮಾಚರಣೆಗೆ ಸಿದ್ಧವಾಗಬೇಕು ಎಂದು ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ ನೀಡಿರುವ ಹೇಳಿಕೆಯಿಂದ ಇದು ಸ್ಪಷ್ಟವಾಗಿದೆ.

ಮರಾಠ ಸಮುದಾಯದ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿ ಕುರಿತ ವರದಿಯನ್ನು ಮಹಾರಾಷ್ಟ್ರ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಗುರುವಾರ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಿ.ಕೆ. ಜೈನ್‌ ಅವರಿಗೆ ಸಲ್ಲಿಸಿದ ಬಳಿಕ ಫಡಣವೀಸ್‌ ಈ ಹೇಳಿಕೆ ನೀಡಿದ್ದಾರೆ.

‘ಕೆಲವರು ನವೆಂಬರ್‌ 26ರಿಂದ ಪ್ರತಿಭಟನೆ ಆರಂಭಿಸುವುದಾಗಿ ಬೆದರಿಕೆ ಹಾಕಿದ್ದಾರೆ. ಕೇವಲ ಹೆಸರಿಗಾಗಿ ಯಾಕೆ ಇಂತಹ ಕೆಲಸ ಮಾಡುತ್ತೀರಿ. ಪ್ರತಿಭಟನೆ ಮಾಡುವ ಬದಲು ಡಿಸೆಂಬರ್‌ 1ರಂದು ಸಂಭ್ರಮಾಚರಣೆಗೆ ಸಿದ್ಧರಾಗಿ’ ಎಂದು ಅಹಮದ್‌ನಗರ ಜಿಲ್ಲೆಯ ಶನಿಶಿಂಗ್ಣಾಪುರದಲ್ಲಿ ಫಡಣವೀಸ್‌ ಹೇಳಿದ್ದಾರೆ.

ನಿವೃತ್ತ ನ್ಯಾಯಮೂರ್ತಿ ಎನ್‌.ಜಿ. ಗಾಯಕವಾಡ ನೇತೃತ್ವದ ಆಯೋಗವು ಎರಡು ಲಕ್ಷ ಮನವಿ ಮತ್ತು ದಾಖಲೆಗಳನ್ನು ಪರಿಶೀಲಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ವರದಿಯನ್ನು ಅಧ್ಯಯನ ಮಾಡಿದ ಬಳಿಕ ಸಚಿವ ಸಂಪುಟದಲ್ಲಿ ಮಂಡಿಸಲಾಗುವುದು’ ಎಂದು ಡಿ.ಕೆ. ಜೈನ್‌ ತಿಳಿಸಿದ್ದಾರೆ.

ವರದಿಯ ಅಂಶಗಳನ್ನು ಬಹಿರಂಗಪಡಿಸಿಲ್ಲ. ಆದರೆ, ಉದ್ಯೋಗ ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಮೀಸಲಾತಿ ಕಲ್ಪಿಸಬೇಕು ಎನ್ನುವ ಮರಾಠ ಸಮುದಾಯದ ಬೇಡಿಕೆಯ ಪರವಾಗಿಯೇ ವರದಿ ಸಲ್ಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಇತರ ಹಿಂದುಳಿದ ವರ್ಗಗಳ ಮೀಸಲಾತಿಗೆ ಧಕ್ಕೆಯಾಗದಂತೆ ಮರಾಠ ಸಮುದಾಯಕ್ಕೆ ಪ್ರಾತಿನಿಧ್ಯ ನೀಡುವಂತೆ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಒಟ್ಟು ಶೇಕಡ 52ರಷ್ಟು ಮೀಸಲಾತಿಯಲ್ಲಿ ಪರಿಶಿಷ್ಟ ಜಾತಿಗೆ ಶೇಕಡ 13, ಪರಿಶಿಷ್ಟ ಪಂಗಡಕ್ಕೆ ಶೇಕಡ 7 ಹಾಗೂ ಹಿಂದುಳಿದ ವರ್ಗಕ್ಕೆ ಶೇಕಡ 19ರಷ್ಟು, ವಿಶೇಷ ಹಿಂದುಳಿದ ವರ್ಗ ಮತ್ತು ಅಲೆಮಾರಿ ಬುಡಕಟ್ಟು ಜನಾಂಗಕ್ಕೆ ಶೇಕಡ 13ರಷ್ಟು ನಿಗದಿಪಡಿಸಲಾಗಿದೆ.

ಮಹಾರಾಷ್ಟ್ರದ 11.25 ಕೋಟಿ ಜನ ಸಂಖ್ಯೆಯಲ್ಲಿ ಶೇಕಡ 33ರಷ್ಟು ಮರಾಠ ಸಮುದಾಯ ಇದೆ. ಹಲವು ದಶಕಗಳಿಂದ ಮೀಸಲಾತಿ ಕಲ್ಪಿಸುವಂತೆ ಈ ಸಮುದಾಯ ಹೋರಾಟ ನಡೆಸುತ್ತಿದೆ. ಮರಾಠ ಸಮುದಾಯಕ್ಕೆ ಶೇಕಡ 16ರಷ್ಟು ಮೀಸಲಾತಿ ಕಲ್ಪಿಸಬೇಕು. ಇದಕ್ಕಿಂತ ಕಡಿಮೆ ನೀಡಬಾರದು. ಮರಾಠರಿಗೆ ಮೀಸಲಾತಿ ನೀಡುವುದರಿಂದ ಶೇಕಡ 68ಕ್ಕೆ ಹೆಚ್ಚಲಿದೆ ಎಂದು ಸಚಿವರೊಬ್ಬರು ತಿಳಿಸಿದ್ದಾರೆ.

ಕಾಂಗ್ರೆಸ್‌ ಬೆಂಬಲ

ಮೀಸಲಾತಿ ವಿಷಯದಲ್ಲಿ ಸರ್ಕಾರಕ್ಕೆ ಸಹಕಾರ ನೀಡುವುದಾಗಿ ಕಾಂಗ್ರೆಸ್‌ ತಿಳಿಸಿದೆ.

ಆಯೋಗದ ವರದಿಯನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಬೇಕು ಮತ್ತು ತಕ್ಷಣವೇ ಅನುಷ್ಠಾನಗೊಳಿಸಬೇಕು ಎಂದು ರಾಜ್ಯ ಕಾಂಗ್ರೆಸ್‌ ಅಧ್ಯಕ್ಷ ಅಶೋಕ್‌ ಚವ್ಹಾಣ್‌ ತಿಳಿಸಿದ್ದಾರೆ.

*ಮುಂದಿನ 15 ದಿನಗಳಲ್ಲಿ ವರದಿ ಆಧಾರದ ಮೇಲೆ ಸಾಂವಿಧಾನಿಕ ಕ್ರಮಗಳನ್ನು ಪೂರ್ಣಗೊಳಿಸಲಾಗುವುದು
-ದೇವೇಂದ್ರ ಫಡಣವೀಸ್‌,ಮುಖ್ಯಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT