ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾರಾಷ್ಟ್ರ: ಮತ್ತೆ ಡಾನ್ಸ್‌ ಬಾರ್‌, ನಿಷೇಧ ಬೇಡ, ನಿಯಂತ್ರಣ ಇರಲಿ: ಸುಪ್ರೀಂ

ರಾಜ್ಯ ಸರ್ಕಾರ ವಿಧಿಸಿದ್ದ ಕಠಿಣ ನಿರ್ಬಂಧಗಳು ರದ್ದು l
Last Updated 17 ಜನವರಿ 2019, 20:15 IST
ಅಕ್ಷರ ಗಾತ್ರ

ನವದೆಹಲಿ: ಕೆಲವು ಷರತ್ತುಗಳೊಂದಿಗೆ ಮಹಾರಾಷ್ಟ್ರದಲ್ಲಿ ಮತ್ತೆ ಡಾನ್ಸ್‌ ಬಾರ್‌ಗಳನ್ನು ಆರಂಭಿಸಲುಸುಪ್ರಿಂಕೋರ್ಟ್‌ ಗುರುವಾರ ಒಪ್ಪಿಗೆ ನೀಡಿದೆ.

ಆದರೆ, ಡಾನ್ಸ್‌ ಬಾರ್‌ಗಳ ಪರವಾನಗಿ ಮತ್ತು ಕಾರ್ಯನಿರ್ವಹಣೆಗೆ ಸಂಬಂಧಿಸಿದಂತೆ 2016ರಲ್ಲಿ ಮಹಾರಾಷ್ಟ್ರ ಸರ್ಕಾರ ರೂಪಿಸಿದ್ದ ಕೆಲವು ಕಾನೂನುಗಳನ್ನು ನ್ಯಾಯಾಲಯ ರದ್ದುಪಡಿಸಿದೆ. ಇವುಗಳಲ್ಲಿ ಹಲವು ಬದಲಾವಣೆಗಳನ್ನು ಮಾಡಲು ಸೂಚಿಸಿದೆ.

‘2005ರಿಂದ ಇದುವರೆಗೆ ಡಾನ್ಸ್‌ ಬಾರ್‌ ನಡೆಸಲು ಪರವಾನಗಿ ನೀಡಿಲ್ಲ. ಡಾನ್ಸ್‌ ಬಾರ್‌ಗಳಿಗೆ ನಿಯಂತ್ರಣ ಬೇಕು. ಆದರೆ, ಸಂಪೂರ್ಣ ನಿಷೇಧ ಬೇಡ. ಕಾಲಕ್ಕೆ ತಕ್ಕಂತೆ ಸಮಾಜದಲ್ಲಿನ ನೈತಿಕತೆಯ ಗುಣಮಟ್ಟವೂ ಬದಲಾಗುತ್ತದೆ’ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಇದೇ ಸಂದರ್ಭದಲ್ಲಿ ಕೆಲವು ನಿಯಮಗಳನ್ನು ಸಹ ಸಡಿಲಗೊಳಿಸಲಾಗಿದೆ. ಡಾನ್ಸ್‌ಬಾರ್‌ಗಳಲ್ಲಿ ಕಡ್ಡಾಯವಾಗಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಬೇಕು ಎನ್ನುವ ನಿಯಮವನ್ನು ರದ್ದುಪಡಿಸಿದೆ. ಸಿಸಿಟಿವಿ ಕ್ಯಾಮೆರಾಗಳಿಂದ ಖಾಸಗಿತನಕ್ಕೆ ಧಕ್ಕೆಯಾಗುತ್ತದೆ ಎಂದು ನ್ಯಾಯಮೂರ್ತಿ ಎ.ಕೆ. ಸಿಕ್ರಿ ನೇತೃತ್ವದ ಪೀಠವು ಅಭಿಪ್ರಾಯಪಟ್ಟಿದೆ.

‘ಡಾನ್ಸ್‌ ಬಾರ್‌ಗಳು ಧಾರ್ಮಿಕ ಸ್ಥಳಗಳು ಮತ್ತು ಶೈಕ್ಷಣಿಕ ಸಂಸ್ಥೆಗಳಿಂದ ಒಂದು ಕಿಲೋ ಮೀಟರ್‌ ದೂರದಲ್ಲಿರಬೇಕು ಎನ್ನುವ ಕಡ್ಡಾಯ ನಿಯಮ ಅಸಾಂವಿಧಾನಿಕ ಎಂದು ಪೀಠ ತಿಳಿಸಿದೆ.

ಬಾರ್‌ ಕೊಠಡಿ ಮತ್ತು ಡಾನ್ಸ್ ನಡೆಯುವ ಸ್ಥಳದ ನಡುವೆ ಅಂತರ ಇರಬೇಕು ಎಂದು 2016ರಲ್ಲಿ ರೂಪಿಸಿದ್ದ ಕಾನೂನನ್ನು ಸಹ ನ್ಯಾಯಾಲಯ ರದ್ದುಪಡಿಸಿದೆ.

ಮಹಾರಾಷ್ಟ್ರ ಸರ್ಕಾರ 2016ರಲ್ಲಿ ರೂಪಿಸಿದ್ದ ಕಾನೂನು ಪ್ರಶ್ನಿಸಿ ಹೋಟೆಲ್‌ ಮತ್ತು ರೆಸ್ಟೋರೆಂಟ್‌ ಮಾಲೀಕರು ಅರ್ಜಿ ಸಲ್ಲಿಸಿದ್ದರು.

ಹೊಸದಾಗಿ ಡಾನ್ಸ್‌ ಬಾರ್‌ಗಳನ್ನು ಆರಂಭಿಸಲು ಸಲ್ಲಿಸಿರುವ ಅರ್ಜಿಗಳ ಬಗ್ಗೆ ಹಳೆಯ ಕಾನೂನು ಅನ್ವಯವೇ ತ್ವರಿತವಾಗಿ ನಿರ್ಧಾರ ಕೈಗೊಳ್ಳಬೇಕು ಎಂದು 2017ರ ಜನವರಿ 11ರಂದು ಸುಪ್ರೀಂ ಕೋರ್ಟ್‌ ಮಹಾರಾಷ್ಟ್ರ ಸರ್ಕಾರಕ್ಕೆ ಸೂಚಿಸಿತ್ತು. ಆದರೆ, ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ ಆದೇಶವನ್ನು ಪಾಲಿಸುತ್ತಿಲ್ಲ ಎಂದು ಮಾಲೀಕರು ಆಕ್ಷೇಪ ವ್ಯಕ್ತಪಡಿಸಿದ್ದರು.

ಈ ವಾದವನ್ನು ತಳ್ಳಿಹಾಕಿದ್ದ ಮಹಾರಾಷ್ಟ್ರ ಸರ್ಕಾರ ಹೊಸ ಕಾಯ್ದೆಯನ್ನು ಸಮರ್ಥಿಸಿಕೊಂಡಿತ್ತು.

‘ಡಾನ್ಸ್‌ ಬಾರ್‌ಗಳಲ್ಲಿನ ನೃತ್ಯಗಳಿಂದ ಮಹಿಳೆಯರ ಘನತೆಗೆ ಧಕ್ಕೆಯಾಗುತ್ತಿದೆ. ಜತೆಗೆ ಇದು ಸಾರ್ವಜನಿಕರ ನೈತಿಕತೆಗೆ ಸಂಬಂಧಿಸಿದ್ದು ಮತ್ತು ಭ್ರಷ್ಟಾಚಾರಕ್ಕೂ ಕಾರಣವಾಗುತ್ತಿದೆ’ ಎಂದು ನ್ಯಾಯಾಲಯಕ್ಕೆ ಸಲ್ಲಿಸಿದ್ದ ಪ್ರಮಾಣಪತ್ರದಲ್ಲಿ ಹೇಳಿತ್ತು. ‘ಸಾರ್ವಜನಿಕ ಸ್ಥಳಗಳಲ್ಲಿ ಅಸಭ್ಯ ವರ್ತನೆ ತಡೆಯುವುದು ಭಾರತದಲ್ಲಿ ಸಾರ್ವಜನಿಕ ನೀತಿಯಾಗಿದೆ. ಹೋಟೆಲ್‌, ರೆಸ್ಟೋರೆಂಟ್‌ ಮತ್ತು ಬಾರ್‌ ಕೊಠಡಿಗಳಲ್ಲಿ ಅಸಭ್ಯ ನೃತ್ಯ ನಿಷೇಧಿಸಿರುವುದು ಮತ್ತು ಮಹಿಳೆಯರ ಘನತೆಯ ರಕ್ಷಣೆ ಕಾಯ್ದೆಯು ಸಾರ್ವಜನಿಕ ನೀತಿಯನ್ನು ಪ್ರತಿಬಿಂಬಿಸುತ್ತದೆ’ ಎಂದು ಮಹಾರಾಷ್ಟ್ರ ಸರ್ಕಾರ ತಿಳಿಸಿತ್ತು.

ನ್ಯಾಯಾಲಯ ವಿಧಿಸಿದ ಷರತ್ತುಗಳು

*ಪ್ರದರ್ಶನಕಾರರಿಗೆ ಟಿಪ್ಸ್‌ ನೀಡಬಹುದು. ಆದರೆ, ಅವರ ಮೇಲೆ ಹಣ ತೂರಬಾರದು.

*ಸಂಜೆ 6 ಗಂಟೆಯಿಂದ 11.30ರವರೆಗೆ ಮಾತ್ರ ಡಾನ್ಸ್‌ ಬಾರ್‌ಗಳು ತೆರೆಯಬೇಕು.

‘ಇದು ದೊಡ್ಡ ಜಯ’

‘ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪು ನಮಗೆ ಸಂದ ದೊಡ್ಡ ಜಯ’ ಎಂದು ಭಾರತೀಯ ಬಾರ್‌ ಗರ್ಲ್ಸ್‌ ಒಕ್ಕೂಟದ ಅಧ್ಯಕ್ಷೆ ವರ್ಷಾ ಕಾಳೆ ತಿಳಿಸಿದ್ದಾರೆ.

‘ಸುಮಾರು 75 ಸಾವಿರ ಮಹಿಳೆಯರು ಡಾನ್ಸ್‌ ಬಾರ್‌ಗಳಲ್ಲಿ ಕೆಲಸ ಮಾಡುತ್ತಿದ್ದರು. ಆದರೆ, 2005ರಲ್ಲಿ ಅಸಭ್ಯ ವರ್ತನೆ ಹೆಸರಿನಲ್ಲಿ ರಾಜ್ಯ ಸರ್ಕಾರ ಡಾನ್ಸ್‌ ಬಾರ್‌ಗಳನ್ನು ಮುಚ್ಚಿದ್ದರಿಂದ 40 ಸಾವಿರ ಮಹಿಳೆಯರು ಈ ವೃತ್ತಿಯಿಂದ ದೂರವಾಗಿ ಇತರ ಕೆಲಸಗಳಲ್ಲಿ ತೊಡಗಿಕೊಂಡರು. ಸುಮಾರು 35ಸಾವಿರ ಮಹಿಳೆಯರು ಹೋಟೆಲ್‌ಗಳಲ್ಲಿ ಹಾಡುಗಾರರಾಗಿ ಮತ್ತು ಇತರ ಕೆಲಸಗಳಲ್ಲಿ ತೊಡಗಿಸಿಕೊಂಡರು’ ಎಂದು ವಿವರಿಸಿದ್ದಾರೆ.

’ಸರ್ಕಾರ ತಕ್ಷಣವೇ ಪರವಾನಗಿ ನೀಡುವುದನ್ನು ಆರಂಭಿಸಿ ಮಹಿಳೆಯರಿಗೆ ಉದ್ಯೋಗಾವಕಾಶ ಕಲ್ಪಿಸಬೇಕು’ ಎಂದು ಒತ್ತಾಯಿಸಿದರು.

‘ರಾಜ್ಯ ಸರ್ಕಾರದ ನಿರ್ಧಾರ ಮಹಿಳೆಯರ ಜೀವನದ ಹಕ್ಕನ್ನು ಉಲ್ಲಂಘಿಸಿತ್ತು. ನ್ಯಾಯಾಲಯ ಮೊದಲಿನಿಂದಲೂ ನೃತ್ಯವನ್ನು ಒಂದು ಉದ್ಯೋಗವಾಗಿ ಪರಿಗಣಿಸಿತ್ತು. ಮಹಿಳೆಯರ ಘನತೆಯ ಬಗ್ಗೆ ನಿಜವಾಗಿಯೂ ಸರ್ಕಾರಕ್ಕೆ ಕಾಳಜಿ ಇದ್ದರೆ ಮುಂಬೈನಲ್ಲಿ ಮುಕ್ತವಾಗಿ ವೇಶ್ಯಾವಾಟಿಕೆ ನಡೆಸಲು ಏಕೆ ಅವಕಾಶ ನೀಡಿದೆ’ ಎಂದು ಸಾಮಾಜಿಕ ಕಾರ್ಯಕರ್ತೆ ಅಭಾ ಸಿಂಗ್‌ ಪ್ರಶ್ನಿಸಿದ್ದಾರೆ.

**

ನ್ಯಾಯಾಲಯದ ನಿರ್ದೇಶನ ಪಾಲಿಸಲು ಬದ್ಧ. ಆದರೆ, ಡಾನ್ಸ್‌ ಬಾರ್‌ಗಳ ಹೆಸರಿನಲ್ಲಿ ಅನೈತಿಕ ಚಟುವಟಿಕೆ ನಡೆಸುವವರ ವಿರುದ್ಧ ಕ್ರಮಕೈಗೊಳ್ಳಲಾಗುವುದು
- ರಂಜಿತ್‌ ಪಾಟೀಲ್‌, ಗೃಹ ಸಚಿವ

**

ಡಾನ್ಸ್‌ ಬಾರ್‌ ಮಾಲೀಕರ ಜತೆ ಹೊಂದಾಣಿಕೆ ಮಾಡಿಕೊಂಡಿರುವ ರಾಜ್ಯ ಸರ್ಕಾರ ನ್ಯಾಯಾಲಯದಲ್ಲಿ ಸಮರ್ಪಕವಾಗಿ ವಾದ ಮಂಡಿಸಿಲ್ಲ
- ನವಾಬ್‌ ಮಲೀಕ್‌, ಎನ್‌ಸಿಪಿ ವಕ್ತಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT