ಗುರುವಾರ , ನವೆಂಬರ್ 14, 2019
23 °C

ಮಹಾರಾಷ್ಟ್ರ: ಸರ್ಕಾರ ರಚಿಸುವಂತೆ ರಾಜ್ಯಪಾಲರಿಂದ ಬಿಜೆಪಿಗೆ ಅಹ್ವಾನ

Published:
Updated:

ಮಹಾರಾಷ್ಟ್ರ: ಶಿವಸೇನೆ ಹಾಗೂ ಬಿಜೆಪಿ ನಡುವೆ ಅಧಿಕಾರಕ್ಕಾಗಿ ಹಗ್ಗಜಗ್ಗಾಟ ನಡೆದಿರುವ ಬೆನ್ನಲ್ಲೇ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಬಿಜೆಪಿಗೆ ಸರ್ಕಾರ ರಚಿಸುವಂತೆ ರಾಜ್ಯಪಾಲರಾದ ಭಗತ್ ಸಿಂಗ್ ಕೊಶ್ಯಾರಿ ಆಹ್ವಾನ ನೀಡಿದ್ದಾರೆ.

ವಿಧಾನಸಭಾ ಚುನಾವಣೆ ನಡೆದು 15 ದಿನ ಕಳೆದರೂ ಇನ್ನೂ ಯಾವುದೇ ಪಕ್ಷ ಸರ್ಕಾರ ರಚಿಸುವ ಕುರಿತು ಹಕ್ಕು ಮಂಡಿಸದೇ ಇದ್ದ ಕಾರಣ ಬಿಜೆಪಿ ನಾಯಕ, ಉಸ್ತುವಾರಿ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಹಕ್ಕು ಮಂಡಿಸಿ ಸರ್ಕಾರ ರಚಿಸಲು ಅವಕಾಶ ನೀಡಿದ್ದಾರೆ.

ಚುನಾವಣಾ ಪೂರ್ವ ಮೈತ್ರಿ: ಬಿಜೆಪಿ ಹಾಗೂ ಶಿವಸೇನೆ ಪಕ್ಷಗಳು ತಾವು ಸರ್ಕಾರ ರಚಿಸಲು ಸಿದ್ಧ ಎಂದು ಹೇಳಿವೆ. ಅಕ್ಟೋಬರ್ 21ರಂದು ನಡೆದ ವಿಧಾನಸಭಾ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡಿದ್ದ ಬಿಜೆಪಿ, ಶಿವಸೇನೆ ಪಕ್ಷಗಳು 161 ಸ್ಥಾನಗಳನ್ನು ಗೆದ್ದುಕೊಂಡಿವೆ. ಆದರೆ, ಅಧಿಕಾರ ಹಂಚಿಕೆ ಕುರಿತು ಎರಡೂ ಪಕ್ಷಗಳಲ್ಲಿ ಭಿನ್ನಾಭಿಪ್ರಾಯ ಉಂಟಾಗಿ ಇದುವರೆಗೂ ಸರ್ಕಾರ ರಚಿಸಲು ಸಾಧ್ಯವಾಗಿಲ್ಲ.

ಒಟ್ಟು 288 ಸ್ಥಾನಗಳನ್ನು ಹೊಂದಿರುವ ಮಹಾರಾಷ್ಟ್ರ ವಿಧಾನಸಭೆಯಲ್ಲಿ 105 ಸ್ಥಾನಗಳನ್ನು ಪಡೆದು ಅತಿದೊಡ್ಡ ಪಕ್ಷವಾಗಿ ಬಿಜೆಪಿ ಹೊರಹೊಮ್ಮಿದೆ. ಹೀಗಾಗಿ ಸರ್ಕಾರ ರಚಿಸುವಂತೆ ರಾಜ್ಯಪಾಲರು ಆಹ್ವಾನಿಸಿದ್ದಾರೆ.

ಹಕ್ಕುಮಂಡಿಸಿದ ನಂತರ ವಿಧಾನಸಭೆಯಲ್ಲಿ ಬಹುಮತ ಸಾಬೀತು ಪಡಿಸಬೇಕಾಗುತ್ತದೆ. ಇದು ಸಾಧ್ಯವಾಗದಿದ್ದರೆ ರಾಜ್ಯಪಾಲರು ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ.

ಪ್ರತಿಕ್ರಿಯಿಸಿ (+)