ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾರಾಷ್ಟ್ರ ರಾಜಕಾರಣ | ಹಕ್ಕು ಮಂಡಿಸದ ಬಿಜೆಪಿ, ಪಟ್ಟು ಬಿಡದ ಶಿವಸೇನೆ

ರಾಷ್ಟ್ರಪತಿ ಆಳ್ವಿಕೆ_ಸಾಧ್ಯತೆ
Last Updated 8 ನವೆಂಬರ್ 2019, 1:17 IST
ಅಕ್ಷರ ಗಾತ್ರ

ಮುಂಬೈ:ಮಹಾರಾಷ್ಟ್ರ ಸರ್ಕಾರ ರಚನೆ ಬಿಕ್ಕಟ್ಟು ಗುರುವಾರವೂ ಕೊನೆಯಾಗಲಿಲ್ಲ.

ಈಗಿನ ವಿಧಾನಸಭೆಯ ಅವಧಿಯು ಇದೇ ಶನಿವಾರಕ್ಕೆ ಕೊನೆಗೊಳ್ಳಲಿದೆ. ಆದರೆ, ಯಾವುದೇ ಪಕ್ಷ ಅಥವಾ ಮೈತ್ರಿಕೂಟ ಸರ್ಕಾರ ರಚನೆಯ ಹಕ್ಕನ್ನು ಮಂಡಿಸಿಲ್ಲ. ಹೀಗಾಗಿ ರಾಷ್ಟ್ರಪತಿ ಆಳ್ವಿಕೆ ಜಾರಿಯಾಗುವ ಸಾಧ್ಯತೆ ಇದೆ ಎಂದು ಪ್ರಮುಖ ನಾಲ್ಕೂ ಪಕ್ಷಗಳು ಆತಂಕ ವ್ಯಕ್ತಪಡಿಸಿವೆ.

ಮಹಾರಾಷ್ಟ್ರ ಬಿಜೆಪಿ ನಾಯಕರು ಗುರುವಾರ ರಾಜ್ಯದ ರಾಜ್ಯಪಾಲರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಆದರೆ ಸರ್ಕಾರ ರಚನೆಯ ಹಕ್ಕು ಮಂಡಿಸಿಲ್ಲ.

‘ಅಲ್ಪಮತದ ಸರ್ಕಾರ ರಚಿಸಲು ನಮಗೆ ಇಷ್ಟವಿಲ್ಲ. ಸರ್ಕಾರ ರಚನೆಯಲ್ಲಿ ವಿಳಂಬವಾಗುತ್ತಿರುವ ಬಗ್ಗೆ ರಾಜ್ಯಪಾಲರ ಜತೆ ಚರ್ಚಿಸಿದ್ದೇವೆ. ಇಂತಹ ಸ್ಥಿತಿಯಲ್ಲಿ ಏನು ಮಾಡಬಹುದು ಎಂಬುದರ ಬಗ್ಗೆಯೂ ಚರ್ಚೆ ನಡೆಸಿದ್ದೇವೆ’ ಎಂದು ರಾಜ್ಯ ಬಿಜೆಪಿ ನಾಯಕ ಸುಧೀರ್ ಮುನಗಂಟಿವಾರ್ ಮಾಹಿತಿ ನೀಡಿದ್ದಾರೆ.

‘ಮಹಾಯುತಿ’ ಎಂಬ ಮೈತ್ರಿಕೂಟವನ್ನು ರಚಿಸಿಕೊಂಡು ಚುನಾವಣೆ ಎದುರಿಸಿ, ಸರಳ ಬಹುಮತ ಪಡೆದಿರುವ ಬಿಜೆಪಿ–ಶಿವಸೇನಾ, ಈವರೆಗೆ ಅಧಿಕಾರ ಹಂಚಿಕೆ ವಿಚಾರದಲ್ಲಿ ಒಮ್ಮತಕ್ಕೆ ಬಂದಿಲ್ಲ. ಎರಡೂ ಪಕ್ಷಗಳು ತಮ್ಮ ಈ ಹಿಂದಿನ ನಿಲುವಿಗೆ ಜೋತುಬಿದ್ದಿವೆ. ಹೀಗಾಗಿ ಸರ್ಕಾರ ರಚನೆ ವಿಳಂಬವಾಗುತ್ತಿದೆ.

‘ದೇವೇಂದ್ರ ಫಡಣವೀಸ್ ನೇತೃತ್ವದಲ್ಲೇ ನೂತನ ಸರ್ಕಾರ ರಚನೆಯಾಗಲಿದೆ. ಫಡಣವೀಸ್ ಅವರೇ ಮುಖ್ಯಮಂತ್ರಿಯಾಗಲಿದ್ದಾರೆ’ ಎಂದು ಬಿಜೆಪಿ ಕೇಂದ್ರ ನಾಯಕ ನಿತಿನ್ ಗಡ್ಕರಿ ಹೇಳಿದ್ದಾರೆ. ರಾಜ್ಯ ನಾಯಕರೂ ಇದೇ ಮಾತು ಹೇಳಿದ್ದಾರೆ.

ಆದರೆ, ಎರಡೂವರೆ ವರ್ಷ ಮುಖ್ಯಮಂತ್ರಿ ಹುದ್ದೆ ತಮಗೆ ಬಿಟ್ಟುಕೊಡಬೇಕು ಎಂದು ಶಿವಸೇನಾ ಮತ್ತೆ ಹೇಳಿದೆ. ಅಲ್ಲದೆ, ‘ನೂತನ ಸರ್ಕಾರದ ಮೊದಲ ಮುಖ್ಯಮಂತ್ರಿ ನಮ್ಮ ಪಕ್ಷದವರೇ ಆಗಿರಲಿದ್ದಾರೆ’ ಎಂದು ಶಿವಸೇನಾ ಶಾಸಕ ಅಬ್ದುಲ್ ಸತ್ತಾರ್ ಹೇಳಿದ್ದಾರೆ.

ಪಕ್ಷಾಂತರ ಭೀತಿ:ಶಿವಸೇನಾ, ಎನ್‌ಸಿಪಿ ಮತ್ತು ಕಾಂಗ್ರೆಸ್‌ ಶಾಸಕರನ್ನು ಬಿಜೆಪಿ ತನ್ನತ್ತ ಸೆಳೆಯಬಹುದು ಎಂದು ಈ ಮೂರು ಪಕ್ಷಗಳ ನಾಯಕರು ಆತಂಕ ವ್ಯಕ್ತಪಡಿಸಿದ್ದಾರೆ. ಶಿವಸೇನಾವು ತನ್ನ ಎಲ್ಲಾ ಶಾಸಕರನ್ನು ಮುಂಬೈನ ಹೋಟೆಲ್‌ ಒಂದರಲ್ಲಿ ಇರಿಸಿದೆ. ಕಾಂಗ್ರೆಸ್‌ ತನ್ನ ಎಲ್ಲಾ ಶಾಸಕರನ್ನು ಮಧ್ಯಪ್ರದೇಶ ಅಥವಾ ರಾಜಸ್ಥಾನಕ್ಕೆಕಳುಹಿಸಲು ಸಿದ್ಧತೆ ನಡೆಸಿದೆ.

ಶಿವಸೇನಾ ಶಾಸಕರಿಗೆ ಹೋಟೆಲ್‌ ವಾಸ್ತವ್ಯ
* ಶಿವಸೇನಾವು ಸರ್ಕಾರ ರಚಿಸುವುದಾದರೆ, ಅವರಿಗೆ ಬೆಂಬಲ ನೀಡಲು ಒಪ್ಪಿಗೆ ನೀಡಿ ಎಂದು‍ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಕೋರಲು ನಿರ್ಧರಿಸಿದ ಮಹಾರಾಷ್ಟ್ರ ಕಾಂಗ್ರೆಸ್‌ನ ಕೆಲವು ಶಾಸಕರು
* ಮುಂಬೈನಲ್ಲಿ ಶಿವಸೇನಾ ಶಾಸಕರ ಸಭೆ. ‘ಸರ್ಕಾರ ರಚನೆ ಸಂಬಂಧ ಪಕ್ಷದ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರೇ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದ್ದಾರೆ’ ಎಂಬ ನಿರ್ಣಯ ಅಂಗೀಕಾರ
* ‘ಶಿವಸೇನಾಕ್ಕೆ ಮುಖ್ಯಮಂತ್ರಿ ಹುದ್ದೆ ನೀಡಲು ಒಪ್ಪಿಗೆ ಇದ್ದರೆ ಮಾತ್ರ ಬಿಜೆಪಿ ನಾಯಕರು ಮಾತುಕತೆಗೆ ಬರಲಿ’ ಎಂಬ ನಿರ್ಣಯ ಅಂಗೀಕರಿಸಿದ ಶಿವಸೇನಾ
* ಮುಂಬೈನ ಬಾಂದ್ರಾದ ಹೋಟೆಲ್‌ನಲ್ಲಿ ಶಿವಸೇನಾ ಶಾಸಕರ ವಾಸ್ತವ್ಯ. ಹೊರಗಿನವರ ಜತೆ ಸಂಪರ್ಕ ಇಲ್ಲ. ಪಕ್ಷದ ಹಿರಿಯ ನಾಯಕರಿಂದ ಶಾಸಕರ ಮೇಲೆ ನಿಗಾ
* ಕಾದು ನೋಡುವ ತಂತ್ರಕ್ಕೆ ಮೊರೆಹೋದ ಎನ್‌ಸಿಪಿ
* ರಾಜ್ಯಪಾಲರನ್ನು ಭೇಟಿ ಮಾಡಿದ ಮಹಾರಾಷ್ಟ್ರ ಅಡ್ವೊಕೇಟ್ ಜನರಲ್‌. ಸರ್ಕಾರ ರಚನೆಯಾಗದಿದ್ದರೆ ಏನು ಮಾಡಬೇಕು ಎಂಬುದರ ಬಗ್ಗೆ ಚರ್ಚೆ
* ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರನ್ನು ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಲಾಗುತ್ತದೆ ಎಂಬ ವದಂತಿ. ‘ರಾಜ್ಯ ರಾಜಕಾರಣಕ್ಕೆ ಹಿಂತಿರುಗುವುದಿಲ್ಲ’ ಎಂದು ಸ್ಪಷ್ಟನೆ ನೀಡಿದ ಗಡ್ಕರಿ

**

ಬಿಜೆಪಿಯ ಬೆದರಿಕೆ ತಂತ್ರಗಳು ಇನ್ನು ಮುಂದೆ ನಡೆಯುವುದಿಲ್ಲ. ಸರ್ಕಾರ ರಚನೆಗೆ ನಮ್ಮ ಎದುರು ಬೇರೆ ಆಯ್ಕೆಗಳಿವೆ. ನಮ್ಮವರೇ ಮುಖ್ಯಮಂತ್ರಿ ಆಗಲಿದ್ದಾರೆ.
–ಸಂಜಯ್ ರಾವುತ್, ಶಿವಸೇನಾ ವಕ್ತಾರ

**

ಕೆಲವು ಶಾಸಕರನ್ನು ಸೆಳೆಯುವ ಪ್ರಯತ್ನ ನಡೆದಿದೆ. ಇದರಿಂದ ಉಪಯೋಗವಿಲ್ಲ. ಪಕ್ಷಾಂತರ ಮಾಡಿದವರನ್ನು ಉಪಚುನಾವಣೆಯಲ್ಲಿ ಸೋಲಿಸುತ್ತೇವೆ.
–ಜಯಂತ್ ಪಾಟಿಲ್, ಎನ್‌ಸಿಪಿ ರಾಜ್ಯ ಘಟಕದ ಅಧ್ಯಕ್ಷ

**

ಬಿಜೆಪಿ ತನ್ನ ಶಾಸಕರನ್ನು ಬೇಟೆಯಾಡಲಿದೆ ಎಂಬ ಆತಂಕ ಶಿವಸೇನಾಕ್ಕೆ ಇದೆ. ಇಂತಹ ಅನೈತಿಕ ರಾಜಕಾರಣ ಮಾಡುವ ಬಿಜೆಪಿ ರಾಜ್ಯದಲ್ಲಿ ಸರ್ಕಾರ ರಚಿಸಬೇಕೆ?
–ಸಚಿನ್‌ ಸಾವಂತ್, ಮಹಾರಾಷ್ಟ್ರ ಕಾಂಗ್ರೆಸ್‌ ನಾಯಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT