ಬುಧವಾರ, ಮೇ 27, 2020
27 °C

ಲಾಕ್ ಡೌನ್: ಶ್ರೀಮಂತರಿಗೆ ಸಂಚರಿಸಲು ಅನುಮತಿ, ಪೊಲೀಸ್ ಅಧಿಕಾರಿಗೆ ಕಡ್ಡಾಯ ರಜೆ

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ಮುಂಬೈ (ಮಹಾರಾಷ್ಟ್ರ): ಲಾಕ್‌‌ಡೌನ್ ಸಮಯದಲ್ಲಿ 23 ಮಂದಿ ಖಾಸಗಿ ವ್ಯಕ್ತಿಗಳಿಗೆ ಖಂಡಾಲಾದಿಂದ ಮಹಾಬಲೇಶ್ವರ್‌‌ಗೆ ಸಂಚರಿಸಲು ಅನುಮತಿ ನೀಡಿದ ಆರೋಪದ ಮೇಲೆ ಹಿರಿಯ ಪೊಲೀಸ್ ಅಧಿಕಾರಿ ಅಮಿತಾಬ್ ಗುಪ್ತಾ ಅವರನ್ನು ಮಹಾರಾಷ್ಟ್ರ ಸರ್ಕಾರ ಕಡ್ಡಾಯ ರಜೆಯ ಮೇಲೆ ಕಳುಹಿಸಿ ಮತ್ತೊಬ್ಬ ಅಧಿಕಾರಿಗೆ ಗೃಹಸಚಿವಾಲಯದ ಜವಾಬ್ದಾರಿ ವಹಿಸಿದೆ.

ಈ ಸಂಬಂಧ ಸುದ್ದಿಗಾರರಿಗೆ ವಿಷಯ ತಿಳಿಸಿದ ಗೃಹ ಸಚಿವ ಅನಿಲ್ ದೇಶಮುಖ್, ಅಮಿತಾಬ್ ಅವರನ್ನು ತಕ್ಷಣಕ್ಕೆ ಜಾರಿಗೆ ಬರುವಂತೆ  ಕಡ್ಡಾಯ ರಜೆಯ ಮೇಲೆ ಕಳುಹಿಸಲಾಗಿದ್ದು, ವಿಚಾರಣೆಗೆ ಆದೇಶಿಸಲಾಗಿದೆ ಎಂದು ತಿಳಿಸಿದ್ದಾರೆ.

ಏಪ್ರಿಲ್ 8ರಂದು ಅಮಿತಾಬ್ ಗುಪ್ತಾ ಅವರು ಖಾಸಗಿ ಹಣಕಾಸು ಸಂಸ್ಥೆ ಡಿಎಚ್ಎಫ್ಎಲ್ ಸಂಸ್ಥೆಯ ವಾಧವನ್ ಕುಟುಂಬದ 23 ಮಂದಿಗೆ ಮುಂಬೈನ ಖಂಡಾಲ ಪ್ರದೇಶದಿಂದ ಮಹಾಬಲೇಶ್ವರ್ ಪ್ರದೇಶಕ್ಕೆ ತೆರಳಲು ಅನುಮತಿ ನೀಡಿ ಪತ್ರವನ್ನೂ ನೀಡಿದ್ದರು.

ಪತ್ರದಲ್ಲಿ ನಾಲ್ಕು ಕಾರುಗಳಿಗೆ ಅನುಮತಿ ನೀಡಿದ್ದರು. ಈ ಕುಟುಂಬ ತನಗೆ ಪರಿಚಯವಿದ್ದು, ಇವರಿಗೆ ಖಂಡಾಲಾದಿಂದ ಮಹಾಬಲೇಶ್ವರ್‌‌ಗೆ ಕೌಟುಂಬಿಕ ಕಾರಣಕ್ಕಾಗಿ ತುರ್ತುಭೇಟಿ ನೀಡಬೇಕಾಗಿದೆ. ಇದಕ್ಕಾಗಿ ನಾಲ್ಕು ಕಾರುಗಳು ಹಾಗೂ 23 ಮಂದಿಗೆ ತೆರಳಲು ಸಹಕರಿಸಬೇಕೆಂದು ತಿಳಿಸಲಾಗಿತ್ತು.


ಮಹಾರಾಷ್ಟ್ರ ಐಪಿಎಸ್ ಅಧಿಕಾರಿ ಅಮಿತಾಬ್ ಗುಪ್ತಾ

ಲಾಕ್ ಡೌನ್ ಸಮಯದಲ್ಲಿ ಯಾರೊಬ್ಬರೂ ಮನೆಯಿಂದ ಹೊರಗೆ ಬರಬಾರದು ಎಂಬ ನಿಯಮ ಜಾರಿಯಲ್ಲಿದ್ದರೂ ಈ ಕುಟುಂಬಕ್ಕೆ ಮಾತ್ರ ಅನುಮತಿ ನೀಡಿರುವುದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿತ್ತು. ಈ ವಿಷಯವನ್ನು ಪರಿಗಣಿಸಿದ ಗೃಹ ಸಚಿವ ಅನಿಲ್ ದೇಶಮುಖ್ ಕೂಡಲೆ ಅಧಿಕಾರಿಯ ವಿರುದ್ಧ ತನಿಖೆಗೆ ಆದೇಶಿಸಿ ಕಡ್ಡಾಯ ರಜೆ ಮೇಲೆ ಕಳುಹಿಸಿದ್ದಾರೆ.

ಡಿಎಚ್ಎಫ್ಎಲ್‌ನ ವಾಧವನ್ ಕುಟುಂಬದ ಕಪಿಲ್ ವಾಧವನ್, ಅರುಣಾ ವಾಧವನ್, ವನಿತಾ ವಾಧವನ್, ಟೀನಾ ವಾಧವನ್, ಧೀರಜ್ ವಾಧವನ್, ಕಾರ್ತಿಕ್ ವಾಧವನ್, ಪೂಜಾ ವಾಧವನ್, ಯುವಿಕಾ ವಾಧವನ್, ಆನ್ ವಾಧವನ್, ಶುತೃಘ್ನಘಾಗಾ, ಮನೋಜ್ ಯಾದವ್, ವಿನಿದ್ ಶುಕ್ಲಾ, ಅಶೋಕ್ ವಫೇಲ್ಕರ್, ದಿವಾನ್ ಸಿಂಗ್, ಅಮೋಲ್ ಮಂಡಲ್, ಲೋಹಿತ್ ಫರ್ನಾಂಡಿಸ್, ಜಸ್ ಪ್ರೀತ್ ಸಿಂಗ್ ಅರಿ, ಜಸ್ಟಿನ್ ಡಿಮೆಲೋ, ಇಂದ್ರಕಾಂತ್ ಚೌದರಿ, ಪ್ರದೀಪ್ ಕಾಂಬ್ಳೆ, ಎಲಿಜಬೆತ್ ಅಯ್ಯಪಿಳ್ಳೈ, ರಮೇಶ್ ಶರ್ಮಾ, ತರ್ಕಾರ್ ಸರ್ಕಾರ್ ಅವರು ಮೂರು ಮಹಾರಾಷ್ಟ್ರ ನೋಂದಣಿ ಕಾರುಗಳು, ಎರಡು ಜಾರ್ಖಂಡ್ ನೋಂದಣಿ ಕಾರುಗಳಲ್ಲಿ ಪ್ರಯಾಣಿಸಿದ್ದರು.


ಡಿವಾನ್ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ (ಡಿಎಚ್ಎಫ್ಎಲ್)ನ ಕಪಿಲ್ ವಾಧವನ್ ಶಾರುಕ್ ಜೊತೆ

ಮಹಾಬಲೇಶ್ವರ್ ತಲುಪಿದಾಗ ಅಲ್ಲಿನ ಪೊಲೀಸರು ಅವರನ್ನು ತಡೆದು ಪ್ರಶ್ನಿಸಿದಾಗ ಗೃಹಸಚಿವಾಲಯದ ಪ್ರಧಾನ ಕಾರ್ಯದರ್ಶಿ ಅಮಿತಾಬ್ ಗುಪ್ತಾ ಅವರ ಪತ್ರ ತೋರಿಸಿದ್ದಾರೆ. ಈ ಸಮಯದಲ್ಲಿ ಕಡ್ಡಾಯ ನಿಯಮ ಜಾರಿಯಲ್ಲಿದೆ. ಸರ್ಕಾರಿ ಅಧಿಕಾರಿಗಳನ್ನು ಹೊರತುಪಡಿಸಿ ಯಾರೂ ಈ ರೀತಿ ಸಂಚಾರ ಮಾಡುವಂತಿಲ್ಲ ಎಂದು ಬುದ್ದಿ ಹೇಳಿದ ಪೊಲೀಸರು ಎಲ್ಲಾ 23 ಮಂದಿಯನ್ನು ಕ್ವಾರಂಟೈನ್‌‌ಗೆ ಒಳಪಡಿಸಿದ್ದಾರೆ.


ಅಮಿತಾಬ್ ಗುಪ್ತಾ ನೀಡಿರುವ ಅನುಮತಿ ಪತ್ರ

ಅಲ್ಲದೆ, ಮಹಾಬಲೇಶ್ವರ ಪೊಲೀಸರು ಇವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. 

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು