ಗುರುವಾರ , ಡಿಸೆಂಬರ್ 5, 2019
22 °C

ಮಹಾರಾಷ್ಟ್ರ ರಾಜಕಾರಣ | ಆಪರೇಷನ್ ಕಮಲ, ಸಾಮಾನ್ಯ ಕಾರ್ಯಕ್ರಮ– ಏನೆಲ್ಲಾ ಲೆಕ್ಕಾಚಾರ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಮಹಾರಾಷ್ಟ್ರದಲ್ಲಿ ತಮ್ಮ ಪಕ್ಷಕ್ಕೆ ಬೆಂಬಲ ನೀಡುವಂತೆ ಆಹ್ವಾನಿಸಿರುವ ಶಿವಸೇನಾಗೆ ಕಾಂಗ್ರೆಸ್‌–ಎನ್‌ಸಿಪಿ ಮೈತ್ರಿಕೂಟವು ಸಾಮಾನ್ಯ ಕನಿಷ್ಠ ಕಾರ್ಯಕ್ರಮದ ಬೇಡಿಕೆ ಮುಂದಿಟ್ಟಿದೆ. ಆ ಮೂಲಕ ಶಿವಸೇನಾವನ್ನು ಹತೋಟಿಯಲ್ಲಿಡುವ ಯೋಜನೆಯನ್ನು ಕಾಂಗ್ರೆಸ್–ಎನ್‌ಸಿಪಿ ಪಕ್ಷಗಳ ನಾಯಕರು ರೂಪಿಸಿದ್ದಾರೆ ಎನ್ನಲಾಗಿದೆ. ಮುಖ್ಯಮಂತ್ರಿ ಗದ್ದುಗೆ ಏರುವ ಸನ್ನಾಹದಲ್ಲಿರುವ ಶಿವಸೇನಾಗೆ ಕಾಂಗ್ರೆಸ್‌–ಎನ್‌ಸಿಪಿ ಮೈತ್ರಿಕೂಟವು ಸಾಮಾನ್ಯ ಕನಿಷ್ಠ ಕಾರ್ಯಕ್ರಮಕ್ಕೆ ಒಪ್ಪಕೊಳ್ಳಬೇಕೆಂಬ ಬೇಡಿಕೆ ಮುಂದಿಟ್ಟಿದೆ. 

ಕಾಂಗ್ರೆಸ್‌ ಪಕ್ಷವು ಶಿವಸೇನಾ–ಎನ್‌ಸಿಪಿ ಮೈತ್ರಿಕೂಟಕ್ಕೆ ಹೊರಗಿನಿಂದ ಬೆಂಬಲ ನೀಡುವ ಸಾಧ್ಯತೆಗಳನ್ನು ಶರದ್‌ ಪವಾರ್‌ ತಳ್ಳಿಹಾಕಿದ್ದಾರೆ.

ಇದನ್ನೂ ಓದಿ: ಚಾಲ್ತಿಗೆ ಬಂದಿದೆ ಎನ್‌ಸಿಪಿ–ಶಿವಸೇನೆ ಮೈತ್ರಿ ಲೆಕ್ಕಾಚಾರ

‘ಮಹಾರಾಷ್ಟ್ರದಲ್ಲಿ ತಾವು ಸರ್ಕಾರ ರಚಿಸುವುದಾದರೆ, ಕಾಂಗ್ರೆಸ್ ಪಕ್ಷವು ಸರ್ಕಾರದ ಭಾಗವಾಗಿರಲಿದೆ,’ ಎಂದು ಸ್ಪಷ್ಟಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಮುಖಂಡರಾದ ಅಹ್ಮದ್‌ ಪಟೇಲ್‌, ಮಲ್ಲಿಕಾರ್ಜುನ್ ಖರ್ಗೆ ಮತ್ತು ಕೆ.ಸಿ. ವೇಣುಗೋಪಾಲ್‌ ಅವರೊಂದಿಗೆ ಸಾಮಾನ್ಯ ಕನಿಷ್ಠ ಕಾರ್ಯಕ್ರಮದ ಬಗ್ಗೆ ಶರದ್‌ ಪವಾರ್‌ ಚರ್ಚೆ ನಡೆಸಿದ್ದಾರೆ.

‘ಮೈತ್ರಿ ಮಾಡಿಕೊಳ್ಳುವುದಾದರೆ, ಕಾಂಗ್ರೆಸ್‌ ಪಕ್ಷವು ಸರ್ಕಾರದ ಭಾಗವಾಗಿರಬೇಕು. ಮೊದಲು ಕಾಂಗ್ರೆಸ್‌ ಮತ್ತು ಎನ್‌ಸಿಪಿ ನಡುವೆ ಪೂರ್ಣ ಒಮ್ಮತ ಮೂಡಬೇಕಿದೆ. ಆ ನಂತರ ಮಿತ್ರಪಕ್ಷಗಳ ಸಾಮಾನ್ಯ ಕನಿಷ್ಠ ಕಾರ್ಯಕ್ರಮಕ್ಕೆ ಶಿವಸೇನಾ ಒಪ್ಪಿಕೊಳ್ಳಬೇಕು’ ಎಂದು ಪವಾರ್‌ ಹೇಳಿದ್ದಾರೆ. ಪವಾರ್‌ ವ್ಯಕ್ತಪಡಿಸಿರುವ ಅಭಿಪ್ರಾಯಗಳಿಗೆ ಕಾಂಗ್ರೆಸ್‌ ನಾಯಕರು ತಲೆದೂಗಿಸಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಎನ್‌ಸಿಪಿ, ಕಾಂಗ್ರೆಸ್‌ ಪರ ಒಲವು ತೋರಿದ ಶಿವಸೇನೆ

‘ಮೈತ್ರಿಗೂ ಮುನ್ನ, ಅಲ್ಪಸಂಖ್ಯಾತರ ಅಭಿವೃದ್ಧಿಗೆ ತಾನು ಬದ್ಧವಾಗಿದ್ದೇನೆಂಬ ನಿಲುವನ್ನು ಶಿವಸೇನಾ ಸಾರ್ವಜನಿಕವಾಗಿ ಸ್ಪಷ್ಟಪಡಿಸಬೇಕು. ತಮ್ಮ ಜಾತ್ಯತೀತ ಸಿದ್ದಾಂತಗಳೊಂದಿಗೆ ಯಾವುದೇ ರಾಜಿ ಇಲ್ಲ,’ ಎಂದು ಪವಾರ್ ತಿಳಿಸಿದ್ದಾರೆ. ‌

ಕೃಷಿ ಸಾಲ ಮನ್ನಾ, ನಿರುದ್ಯೋಗ ಭತ್ಯೆ ಮತ್ತು ಹೊಸ ಕೈಗಾರಿಕೆಗಳಲ್ಲಿ ಸ್ಥಳೀಯ ಯುವಕರಿಗೆ ಉದ್ಯೋಗ ಸೇರಿದಂತೆ ಪಕ್ಷದ ಪ್ರಣಾಳಿಕೆಯಲ್ಲಿದ್ದ ಪ್ರಮುಖ ಕಾರ್ಯಸೂಚಿಗಳನ್ನು ಮೈತ್ರಿಕೂಟ ಸರ್ಕಾರ ಒಳಗೊಂಡಿರಬೇಕು ಎಂಬುದನ್ನು ಕಾಂಗ್ರೆಸ್ ಸ್ಪಷ್ಟಪಡಿಸಿದೆ.

ಇದನ್ನೂ ಓದಿ: ಬಿಜೆಪಿ ಜಸ್ಟ್‌ ಪಾಸ್‌, ವಿಪಕ್ಷಗಳಿಗೆ ಶಕ್ತಿ ಕೊಟ್ಟ ಮತದಾರ

ದಟ್ಟಗೊಳ್ಳುತ್ತಿದೆ ಆಪರೇಷನ್‌ ಕಮಲದ ಸಂಶಯ

ಈ ಎಲ್ಲ ಬೆಳವಣಿಗೆಗಳ ನಡುವೆ, ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಡಳಿತ ಹೇರಲಾಗಿದ್ದು, ವಿವಿಧ ಪಕ್ಷಗಳು ಸರ್ಕಾರ ರಚನೆಗೆ ಕಸರತ್ತು ನಡೆಸಲು ಅವಕಾಶ ಮುಕ್ತವಾಗಿದೆ. ಆ ಮೂಲಕ ಕರ್ನಾಟಕದಂತೆ ಮಹಾರಾಷ್ಟ್ರದಲ್ಲೂ ಸಹ ಬಿಜೆಪಿಯು ‘ಆಪರೇಶನ್‌ ಕಮಲ’ ಕೈಹಾಕಬಹುದು ಎಂಬ ಸಂಶಯಗಳು ರಾಜಕೀಯ ವಲಯದಲ್ಲಿ ದಟ್ಟವಾಗಿವೆ.

ಆ ಸಂಶಯಗಳಿಗೆ ಇಂಬು ನೀಡುವಂತೆ ಹೇಳಿಕೆ ನೀಡಿರುವ ಬಿಜೆಪಿ ನಾಯಕ ನಾರಾಯಣ್‌ ರಾಣೆ ಅವರು, ‘ನಾನು ದೇವೇಂದ್ರ ಫಡಣವೀಸ್‌ ಅವರನ್ನು ಭೇಟಿಯಾಗಿದ್ದೇನೆ. ಆ ವೇಳೆಯಲ್ಲಿ, ಸರ್ಕಾರ ರಚನೆಗೆ ನಾವು ಪ್ರಯತ್ನಿಸಲೇಬೇಕಿದೆ. ಸರ್ಕಾರ ರಚಿಸಲು ಸಾಧ್ಯವಿರುವ ಎಲ್ಲ ಅವಕಾಶಗಳನ್ನು ನಾವು ಉಪಯೋಗಿಸಿಕೊಳ್ಳಬೇಕು. ಶಿವಸೇನಾ ಪಕ್ಷವು ಕಾಂಗ್ರೆಸ್‌–ಎನ್‌ಸಿಪಿ ಮೈತ್ರಿಕೂಟದ ಜೊತೆ ಕೈಜೋಡಿಸುವ ಸಾಧ್ಯತೆಗಳು ಕಡಿಮೆ ಇವೆ. ಶಿವಸೇನಾದವರನ್ನು ಮೂರ್ಖರನ್ನಾಗಿ ಮಾಡಲಾಗುತ್ತಿದೆ’ ಎಂದು ಫಡಣವೀಸ್‌ ತಿಳಿಸಿದ್ದಾರೆ ಎಂಬುದಾಗಿ ರಾಣೆ ಹೇಳಿದ್ದಾರೆ.

ಇದನ್ನೂ ಓದಿ: ಮಹಾರಾಷ್ಟ್ರ ಚುನಾವಣಾ ಫಲಿತಾಂಶದ ಸಾಮಾಜಿಕ ಪ್ರಾಮುಖ್ಯತೆ

ಮಂಗಳವಾರ ನಡೆದ ಬಿಜೆಪಿ ಕೋರ್‌ ಕಮಿಟಿ ಸಭೆಯ ನಂತರ ಕಾದುನೋಡುವ ತಂತ್ರಕ್ಕೆ ಬಿಜೆಪಿ ನಾಯಕರು ಮೊರೆ ಹೋಗಿದ್ದಾರೆ ಎನ್ನಲಾಗುತ್ತಿದೆ. ಈ ಬಗ್ಗೆ ಸ್ಪಷ್ಟನೆ ನೀಡಿರುವ ಹಿರಿಯ ಬಿಜೆಪಿ ನಾಯಕ ಸುಧೀರ್  ಮುಂಗಟಿವಾರ್‌ ಅವರು, ‘ರಾಜ್ಯದಲ್ಲಾಗುತ್ತಿರುವ ಬೆಳವಣಿಗೆಗಳನ್ನು ನಾವು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ಕಾಂಗ್ರೆಸ್‌–ಎನ್‌ಸಿಪಿ ಮೈತ್ರಿಕೂಟವು ಶಿವಸೇನಾಕ್ಕೆ ಬೆಂಬಲ ನೀಡುವ ಬಗ್ಗೆ ಯಾವುದೇ ಸ್ಪಷ್ಟನೆ ನೀಡಿಲ್ಲ. ಶಿವಸೇನಾ ನಾಯರನ್ನೂ ಸಹ ಭೇಟಿಯಾಗಿಲ್ಲ’ ಎಂದು ಹೇಳುವ ಮೂಲಕ ತಮ್ಮ ಪಕ್ಷ ಅಧಿಕಾರ ಹಿಡಿಯುವ ನಿಟ್ಟಿನಲ್ಲಿ ಕಾರ್ಯನಿರತವಾಗಿದೆ ಎಂಬುದರ ಸೂಚನೆ ನೀಡಿದ್ದಾರೆ.

ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಡಳಿತ ಹೇರಿಕೆ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್, ‘ರಾಷ್ಟ್ರಪತಿ ಹೇರಿಕೆ ದುರದೃಷ್ಟಕರ. ಬಿಜೆಪಿ–ಶಿವಸೇನಾ ಮೈತ್ರಿಗೆ ರಾಜ್ಯದ ಜನ ಸ್ಪಷ್ಟ ಆದೇಶ ನೀಡಿದ್ದಾರೆ. ರಾಜ್ಯವು ಆದಷ್ಟು ಬೇಗ ಸ್ಥಿರ ಸರ್ಕಾರ ಹೊಂದಲಿದೆ ಎನ್ನುವ ನಂಬಿಕೆ ಇದೆ’ ಎಂದಿದ್ದಾರೆ. 

ಮಹಾರಾಷ್ಟ್ರದಲ್ಲಿ ಆಪರೇಷನ್‌ ಕಮಲಕ್ಕೆ ಬಿಜೆಪಿ ಮುಂದಾಗಲಿದೆಯಾ ಎಂಬುದನ್ನು ಕಾದುನೋಡಬೇಕಿದೆ.

ಇನ್ನಷ್ಟು...

ಮಹಾರಾಷ್ಟ್ರ ಫಲಿತಾಂಶ ವಿಶ್ಲೇಷಣೆ | ಬದಲಾದ ರಾಜಕೀಯ ಸಮೀಕರಣ

ಸಂಪಾದಕೀಯ | ಪಕ್ಷಗಳಿಗೆ ಪಾಠ‌ ಕಲಿಸಿದ ಮತದಾರ

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು