ಶನಿವಾರ, ಡಿಸೆಂಬರ್ 14, 2019
24 °C

ಮಹಾರಾಷ್ಟ್ರ: ಕಾಂಗ್ರೆಸ್‌ ಎನ್‌ಸಿಪಿ ಸಭೆ ಮುಂದೂಡಿಕೆ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆ ಕುರಿತು ಚರ್ಚಿಸಲು ಕಾಂಗ್ರೆಸ್‌ ನಾಯಕರ ಜೊತೆ ಎನ್‌ಸಿಪಿಯು ಮಂಗಳವಾರ ಹಮ್ಮಿಕೊಂಡಿದ್ದ ಸಭೆ ರದ್ದಾಗಿದೆ.

‘ಇಂದಿರಾ ಗಾಂಧಿ ಅವರ ಜನ್ಮದಿನದ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಬೇಕಾಗಿದ್ದರಿಂದ ಸಭೆಯನ್ನು ರದ್ದುಪಡಿಸುವಂತೆ ಕಾಂಗ್ರೆಸ್‌ ನಾಯಕರು ಕೇಳಿಕೊಂಡಿದ್ದರು. ಬುಧವಾರ ಸಭೆ ನಡೆಯಲಿದೆ’ ಎಂದು ಎನ್‌ಸಿಪಿ ವಕ್ತಾರ ನವಾಬ್‌ ಮಲಿಕ್‌ ತಿಳಿಸಿದರು.

ಮಲ್ಲಿಕಾರ್ಜುನ ಖರ್ಗೆ, ಅಹ್ಮದ್‌ ಪಟೇಲ್‌, ಕೆ.ಸಿ. ವೇಣುಗೋಪಾಲ್‌ ಹಾಗೂ ರಾಜ್ಯದ ಕೆಲವು ಕಾಂಗ್ರೆಸ್‌ ನಾಯಕರು, ಎನ್‌ಸಿಪಿಯ ಪ್ರಫುಲ್‌ ಪಟೇಲ್‌, ಸುನಿಲ್‌ ತಾಟ್ಕರೆ, ಅಜಿತ್‌ ಪವಾರ್‌, ಜಯಂತ್‌ ಪಾಟೀಲ್‌ ಅವರೊಡನೆ ಚರ್ಚೆ ನಡೆಸಲಿದ್ದಾರೆ. ಇತ್ತೀಚೆಗಷ್ಟೇ ಎನ್‌ಸಿಪಿ ಮುಖಂಡ ಶರದ್‌ ಪವಾರ್‌ ಅವರು ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ಅವರನ್ನು ಭೇಟಿಮಾಡಿ ಚರ್ಚಿಸಿದ್ದರು.

‘ಘೋರಿ’ಗೆ ಬಿಜೆಪಿ ಹೋಲಿಕೆ: ಹಲವು ವರ್ಷಗಳ ಕಾಲ ಮಿತ್ರಪಕ್ಷವಾಗಿದ್ದ ಬಿಜೆಪಿಯನ್ನು ಶಿವಸೇನಾ, ಪೃಥ್ವಿರಾಜ ಚೌಹಾಣ ಅವರನ್ನು ವಂಚಿಸಿದ್ದ ಮೊಹಮ್ಮದ್‌ ಘೋರಿಗೆ ಹೋಲಿಸಿದೆ.

ಪಕ್ಷದ ಮುಖವಾಣಿ ‘ಸಾಮ್ನಾ’ದಲ್ಲಿ ಬಿಜೆಪಿಯನ್ನು ಟೀಕೆಗೆ ಒಳಪಡಿಸಿದ ಶಿವಸೇನಾ, ‘ನಮಗೆ ಸವಾಲು ಒಡ್ಡಿರುವ ಬಿಜೆಪಿಯನ್ನು ಬೇರುಸಹಿತ ಕಿತ್ತುಹಾಕುತ್ತೇವೆ. ಈಗ ಬಿಜೆಪಿಯ ಮುಖಂಡರು ಎನಿಸಿಕೊಂಡವರಲ್ಲಿ ಅನೇಕರು ಎನ್‌ಡಿಎ ರಚನೆಯಾಗುತ್ತಿದ್ದ ಕಾಲದಲ್ಲಿ ಚಿಕ್ಕ ಮಕ್ಕಳಾಗಿದ್ದರು ಎಂಬುದನ್ನು ಮರೆಯಬಾರದು’ ಎಂದಿದೆ.

‘ಮಹಮ್ಮದ್‌ ಘೋರಿಯು ಪೃಥ್ವಿರಾಜ್‌ ವಿರುದ್ಧ ಹಲವು ಯುದ್ಧಗಳನ್ನು ಸೋತಿದ್ದ. ಪ್ರತಿ ಬಾರಿಯೂ ಘೋರಿಯನ್ನು ಪೃಥ್ವಿರಾಜರು ಕ್ಷಮಿಸಿದ್ದರು. ಆದರೆ, ಒಂದು ಯುದ್ಧದಲ್ಲಿ ಘೋರಿ ಗೆಲುವಾಯಿತು. ಕೂಡಲೇ ಆತ ಪೃಥ್ವಿರಾಜರ ಹತ್ಯೆ ಮಾಡಿದ್ದ. ಮಹಾರಾಷ್ಟ್ರದಲ್ಲಿ ಶಿವಸೇನೆಯೂ ಅನೇಕ ಕೃತಘ್ನರನ್ನು ಕ್ಷಮಿಸುತ್ತಾ ಬಂದಿದೆ. ಈಗ ಅವರೇ ನಮ್ಮ ಬೆನ್ನಿಗೆ ಇರಿಯಲು ಯತ್ನಿಸುತ್ತಿದ್ದಾರೆ’ ಎಂದು ‘ಸಾಮ್ನಾ’ದಲ್ಲಿ ಟೀಕಿಸಲಾಗಿದೆ.

ಶುಕ್ರವಾರ ಸಭೆ: ಸರ್ಕಾರ ರಚನೆಯ ವಿಚಾರದಲ್ಲಿ ಎನ್‌ಸಿಪಿಯು ಎಚ್ಚರಿಕೆಯ ಹೆಜ್ಜೆಗಳನ್ನಿಡುತ್ತಿರುವುದನ್ನು ಗಮನಿಸಿದ ಶಿವಸೇನಾ, ಮುಂದಿನ ಹೆಜ್ಜೆಗಳ ಬಗ್ಗೆ ತೀರ್ಮಾನ ಕೈಗೊಳ್ಳಲು ಶುಕ್ರವಾರ (ನ. 22) ಶಾಸಕಾಂಗ ಪಕ್ಷದ ಸಭೆ ಆಯೋಜಿಸಿದೆ.

‘ಪಕ್ಷದ ಮುಖಂಡ ಉದ್ಧವ್‌ ಠಾಕ್ರೆ ಶಾಸಕರನ್ನುದ್ದೇಶಿಸಿ ಮಾತನಾಡಲಿದ್ದಾರೆ’ ಎಂದು ಶಿವಸೇನಾದ ನಾಯಕರು ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು