ಶರದ್ ಪವಾರ್ರನ್ನು ಅರ್ಥ ಮಾಡಿಕೊಳ್ಳಲು 100 ಬಾರಿ ಹುಟ್ಟಿಬರಬೇಕು: ಸಂಜಯ್ ರಾವತ್

ಮುಂಬೈ: ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್ಸಿಪಿ) ವರಿಷ್ಠ ಶರದ್ ಪವಾರ್ ಅವರನ್ನು ಅರ್ಥ ಮಾಡಿಕೊಳ್ಳಬೇಕಾದರೆ 100 ಬಾರಿ ಹುಟ್ಟಿಬರಬೇಕು ಎಂದು ಶಿವಸೇನಾ ವಕ್ತಾರ ಸಂಜಯ್ ರಾವತ್ ಮಂಗಳವಾರ ಹೇಳಿದ್ದಾರೆ.
ಶಿವಸೇನಾ, ಎನ್ಸಿಪಿ ಮತ್ತು ಕಾಂಗ್ರೆಸ್ ಸೇರಿ ಮಹಾರಾಷ್ಟ್ರ ಸರ್ಕಾರ ರಚಿಲಿವೆ ಎಂದು ಈ ಹಿಂದೆ ಹೇಳಿದ್ದ ಪವಾರ್, ಶಿವಸೇನಾ–ಬಿಜೆಪಿ ಅವರ ಹಾದಿ ನೋಡಿಕೊಳ್ಳಲಿದೆ ಎಂದು ಸೋಮವಾರ ಹೇಳಿದ್ದರು. ಜತೆಗೆ ಸರ್ಕಾರ ರಚನೆ ಬಗ್ಗೆ ಇನ್ನಷ್ಟು ಮಾತುಕತೆ ಅಗತ್ಯ ಎಂದು ಹೇಳಿದ್ದರು. ಈ ಕುರಿತು ಪತ್ರಕರ್ತರು ಕೇಳಿದ ಪ್ರಶ್ನೆಗೆ ರಾವತ್ ಮೇಲಿನ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ: ಶೀಘ್ರದಲ್ಲೇ ಶಿವಸೇನಾ ನೇತೃತ್ವದ ಸರ್ಕಾರ ರಚನೆಯಾಗಲಿದೆ: ಸಂಜಯ್ ರಾವುತ್
‘ಪವಾರ್ ಮತ್ತು ನಮ್ಮ ಮೈತ್ರಿ ಬಗ್ಗೆ ನೀವು ತಲೆಕೆಡಿಸಿಕೊಳ್ಳಬೇಡಿ. ಶೀಘ್ರದಲ್ಲೇ, ಡಿಸೆಂಬರ್ ವೇಳೆಗೆ ಶಿವಸೇನಾ ನೇತೃತ್ವದ ಮೈತ್ರಿ ಸರ್ಕಾರ ಮಹಾರಾಷ್ಟ್ರದಲ್ಲಿ ಅಸ್ತಿತ್ವಕ್ಕೆ ಬರಲಿದೆ. ಅದು ಸ್ಥಿರ ಸರ್ಕಾರವಾಗಿರಲಿದೆ’ ಎಂದು ರಾವತ್ ಹೇಳಿದ್ದಾರೆ.
ಶಿವಸೇನಾ ಸರ್ಕಾರ ರಚಿಸುವುದರಲ್ಲಿ ಸಂಶಯವೇ ಇಲ್ಲ. ಮಾಧ್ಯಮಗಳು ಗೊಂದಲ ಸೃಷ್ಟಿಸುತ್ತಿವೆ ಎಂದೂ ಅವರು ಹೇಳಿದ್ದಾರೆ.
ಇದನ್ನೂ ಓದಿ: ಮೊಹಮ್ಮದ್ ಘೋರಿಯಂತೆ ಬೆನ್ನಿಗೆ ಚೂರಿ ಹಾಕಿದ ಬಿಜೆಪಿ: ಶಿವಸೇನಾ
ಎನ್ಸಿಪಿಯನ್ನು ಪ್ರಧಾನಿ ನರೇಂದ್ರ ಮೋದಿ ರಾಜ್ಯಸಭೆಯಲ್ಲಿ ಹೊಗಳಿದ್ದರ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ‘ಪವಾರ್ ಅವರನ್ನು ಮೋದಿ ಹೊಗಳಿದ್ದರಲ್ಲಿ ತಪ್ಪೇನಿದೆ? ಹಿಂದೆ, ಪವಾರ್ ತಮ್ಮ ರಾಜಕೀಯ ಗುರು ಎಂದು ಬಹಿರಂಗವಾಗಿ ಮೋದಿ ಒಪ್ಪಿಕೊಂಡಿದ್ದರು. ಹೀಗಾಗಿ ಈ ವಿಚಾರವನ್ನು ರಾಜಕೀಯವಾಗಿ ನೋಡಬೇಡಿ’ ಎಂದು ಹೇಳಿದ್ದಾರೆ.