ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಧಾನಿ ಮೋದಿಯನ್ನು ಭೇಟಿಯಾಗಲಿದ್ದಾರೆ ಶರದ್ ಪವಾರ್: ಎನ್‌ಸಿಪಿ ವಕ್ತಾರ ನವಾಬ್

Last Updated 20 ನವೆಂಬರ್ 2019, 4:42 IST
ಅಕ್ಷರ ಗಾತ್ರ

ನವದೆಹಲಿ:ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಮುಖ್ಯಸ್ಥ ಶರದ್ ಪವಾರ್ ಅವರು ಇಂದು ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಲಿದ್ದಾರೆ. ಮಹಾರಾಷ್ಟ್ರ ರಾಜಕೀಯ ಬೆಳವಣಿಗೆ ದಿನಕ್ಕೊಂದು ತಿರುವು ಪಡೆಯುತ್ತಿರುವ ಬೆನ್ನಲ್ಲೇ ಈ ಭೇಟಿ ನಿಗದಿಯಾಗಿದೆ.

‘ಇಂದು ಮಧ್ಯಾಹ್ನ ಶರದ್ ಪವಾರ್ ಅವರು ಸಂಸತ್‌ನಲ್ಲಿ ಮೋದಿಯವರನ್ನು ಭೇಟಿಯಾಗಲಿದ್ದಾರೆ. ಮಹಾರಾಷ್ಟ್ರದ ರೈತರ ಸಮಸ್ಯೆಗಳ ಬಗ್ಗೆ ಚರ್ಚಿಸಲು ಭೇಟಿ ನಿಗದಿಯಾಗಿದೆ. ರೈತರಿಗೆ ಪರಿಹಾರ ಬಿಡುಗಡೆ ಮಾಡುವಂತೆ ಆಗ್ರಹಿಸಲಿದ್ದಾರೆ’ ಎಂದು ಎನ್‌ಸಿಪಿ ವಕ್ತಾರ ನವಾಬ್ ಮಲಿಕ್ ತಿಳಿಸಿದ್ದಾರೆ.

ಅಕಾಲಿಕ ಮಳೆಯಿಂದಾಗಿ ಮಹಾರಾಷ್ಟ್ರದಲ್ಲಿ ಈ ವರ್ಷ ಸುಮಾರು 70 ಲಕ್ಷ ಹೆಕ್ಟೇರ್ ಪ್ರದೇಶದ ಬೆಳೆ ಹಾನಿಯಾಗಿದೆ. ಅಂದಾಜು ₹ 5,000 ಕೋಟಿ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.

ಮಹಾರಾಷ್ಟ್ರದಲ್ಲಿ ಬಿಜೆಪಿ–ಶಿವಸೇನಾ ಮೈತ್ರಿ ಮುರಿದುಬಿದ್ದು, ರಾಷ್ಟ್ರಪತಿ ಆಳ್ವಿಕೆ ಹೇರಿಕೆಯಾದ ಬಳಿಕ ಪವಾರ್–ಮೋದಿ ಮಧ್ಯೆ ನಡೆಯುತ್ತಿರುವ ಮೊದಲ ಭೇಟಿ ಇದಾಗಿದೆ. ರಾಜ್ಯಸಭೆಯ 250ನೇ ಅಧಿವೇಶನದಲ್ಲಿ ಎನ್‌ಸಿಪಿಯನ್ನು ಮೋದಿ ಹೊಗಳಿದ್ದೂ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಬಿಜೆಪಿ–ಶಿವಸೇನಾ ಮೈತ್ರಿ ಮುರಿದುಬಿದ್ದ ಬಳಿಕ ಶಿವಸೇನಾಗೆ ಸರ್ಕಾರ ರಚಿಸಲುಕಾಂಗ್ರೆಸ್ ಜತೆ ಸೇರಿಕೊಂಡು ಬೆಂಬಲ ಸೂಚಿಸಲು ಮುಂದಾಗಿದ್ದ ಪವಾರ್ ಸೋಮವಾರ ದಿಢೀರ್ ನಿಲುವು ಬದಲಿಸಿದ್ದರು. ಶಿವಸೇನಾ–ಬಿಜೆಪಿ ದಾರಿ ಅವರು ನೋಡಿಕೊಳ್ಳಲಿ, ಕಾಂಗ್ರೆಸ್–ಎನ್‌ಸಿಪಿ ತಮ್ಮದೇ ಆದ ರಾಜಕೀಯ ಮಾಡಲಿವೆ ಎಂದು ಹೇಳಿದ್ದರು. ಅದಾದ ಬಳಿಕ ಮತ್ತೆ ಭಿನ್ನ ಹೇಳಿಕೆ ನೀಡಿದ್ದ ಅವರು, ಮಹಾರಾಷ್ಟ್ರ ಸರ್ಕಾರ ರಚನೆ ನಿಟ್ಟಿನಲ್ಲಿ ಇನ್ನಷ್ಟು ಮಾತುಕತೆ ಅಗತ್ಯ. ಹಿರಿಯ ನಾಯಕರ ಬಳಿ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳಲಿದ್ದೇವೆ. ನಮಗೆ 6 ತಿಂಗಳ ಸಮಯವಿದೆ ಎಂದು ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT