ಸೋಮವಾರ, ಆಗಸ್ಟ್ 19, 2019
28 °C
ಆಂಧ್ರಪ್ರದೇಶ, ನಾಸಿಕ್‌ನಲ್ಲಿ ಪ್ರವಾಹ

ಮಹಾರಾಷ್ಟ್ರದಲ್ಲಿ ಮಳೆ; ಉಕ್ಕಿದ ಗೋದಾವರಿ

Published:
Updated:
Prajavani

ನಾಸಿಕ್: ಮಹಾರಾಷ್ಟ್ರದಾದ್ಯಂತ ಭಾನುವಾರ ಭಾರಿ ಪ್ರಮಾಣದ ಮಳೆ ಸುರಿದಿದ್ದು, ಮುಂಬೈ, ಠಾಣೆ, ಪಾಲ್ಘಾರ್, ನಾಸಿಕ್ ಜಿಲ್ಲೆಗಳ ಜನರು ತೀವ್ರ ಸಂಕಷ್ಟದಲ್ಲಿ ಸಿಲುಕಿದ್ದಾರೆ. 

ಗೋದಾವರಿ ನದಿ ಪ್ರವಾಹದಿಂದ ನಾಸಿಕ್ ಜಿಲ್ಲೆಯಲ್ಲಿ ಪ್ರವಾಹದ ಸ್ಥಿತಿ ನಿರ್ಮಾಣವಾಗಿದೆ. ಪುಣೆಯಲ್ಲಿ ಶಾಲಾ, ಕಾಲೇಜುಗಳಿಗೆ ಸೋಮವಾರ ರಜೆ ಘೋಷಿಸಲಾಗಿದೆ. ಮುಲಾ, ಮುಠಾ, ಪಾವನಾ, ಭೀಮಾ ಮತ್ತು ನೀರಾ ನದಿಗಳಲ್ಲಿ ಪ್ರವಾಹ ಉಂಟಾಗಿದೆ. ಪ್ರವಾಹದ ಸಂಕಷ್ಟಕ್ಕೆ ಈಡಾಗಿದ್ದ 2 ಸಾವಿರ ಜನರನ್ನು ರಕ್ಷಿಸಲಾಗಿದೆ.

ಮುಂಬೈ ಮಹಾನಗರದಲ್ಲಿ ಮಧ್ಯರಾತ್ರಿಯಿಂದ ಸುರಿದ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿದೆ. ಪಾಲ್ಘಾರ್ ಜಿಲ್ಲೆಯಲ್ಲಿ 16 ವರ್ಷದ ಬಾಲಕನೊಬ್ಬ ಪ್ರವಾಹದ ನೀರಿನಲ್ಲಿ ಕೊಚ್ಚಿ ಹೋಗಿದ್ದಾನೆ.  

400 ಮಂದಿ ಸ್ಥಳಾಂತರ: 

ಮೀಠೀ ನದಿಯಲ್ಲಿ ಪ್ರವಾಹ ಹೆಚ್ಚಳವಾಗಿದ್ದು, ಮುಂಬೈನ ಸಮೀಪದ ಕ್ರಾಂತಿ ನಗರದ 400 ನಿವಾಸಿಗಳನ್ನು ಸ್ಥಳಾಂತರ ಮಾಡಲಾಗಿದೆ. ರಾಜಾ ಮೆಹಬೂಬ್ ಶೇಕ್ ಎಂಬ ವ್ಯಕ್ತಿ ಧಾರಾವಿ ಹಳ್ಳದಲ್ಲಿ ಕೊಚ್ಚಿಹೋಗಿರುವ ಶಂಕೆಯಿದೆ. 

58 ಜನರ ರಕ್ಷಣೆ: ಮುಳುಗಡೆಯಾಗಿರುವ ಠಾಣೆ ಜಿಲ್ಲೆಯ ಜು–ನಂದಖುರಿ ಗ್ರಾಮದ 58  ಜನರನ್ನು ವಾಯುಪಡೆಯ ಎಂಐ–17 ಹೆಲಿಕಾಪ್ಟರ್ ಮೂಲಕ ಸ್ಥಳಾಂತರಿಸಲಾಯಿತು. 

ಆಂಧ್ರ: 74 ಸಾವಿರ ಜನರಿಗೆ ಸಂಕಷ್ಟ

ಗೋದಾವರಿ ನದಿ ಪ್ರವಾಹದಿಂದ ಆಂಧ್ರಪ್ರದೇಶದ 74,000 ಮಂದಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಪೈಕಿ 17,632 ಜನರನ್ನು ಪರಿಹಾರ ಕೇಂದ್ರಗಳಿಗೆ ಸ್ಥಳಾಂತರ ಮಾಡಲಾಗಿದೆ. ಸಂತ್ರಸ್ತರಿಗೆ 35 ಸಾವಿರ ಆಹಾರ ಪೊಟ್ಟಣಗಳನ್ನು ವಿತರಿಸಲಾಗಿದೆ. 

ಪೂರ್ವ ಹಾಗೂ ಪಶ್ಚಿಮ ಗೋದಾವರಿ ಜಿಲ್ಲೆಯ ಆರು ಮಂಡಲಗಳು ಪ್ರವಾಹದ ನೀರಿನಲ್ಲಿ ಮುಳುಗಿವೆ. ಎರಡೂ ಜಿಲ್ಲೆಗಳಲ್ಲಿ ರಸ್ತೆ ಸಂಪರ್ಕ ಜಾಲ ಸಂಪೂರ್ಣ ಹದಗೆಟ್ಟಿದೆ. ವಿದ್ಯುತ್ ಸಂಪರ್ಕ ಕಡಿತ ಮುಂದುವರಿದಿದೆ. 

ಧವಳೇಶ್ವರಂನ ಸರ್ ಆರ್ಥರ್ ಕಾಟನ್ ಬ್ಯಾರೇಜ್‌ನಿಂದ 13.58 ಲಕ್ಷ ಕ್ಯೂಸೆಕ್ ನೀರು ಹೊರಬಿಡಲಾಗುತ್ತಿದ್ದು, ನದಿಪಾತ್ರದ ಜನರಿಗೆ ಎರಡನೇ ಎಚ್ಚರಿಕೆ ನೀಡಲಾಗಿದೆ. ವಿಪತ್ತು ಪರಿಹಾರ ತಂಡಗಳು ಸಂತ್ರಸ್ತ ಜನರಿಗೆ ಅಗತ್ಯ ಆಹಾರ ಸಾಮಗ್ರಿ ಪೂರೈಸುತ್ತಿವೆ. 

ಕೊವ್ವೂರಿನ ಗೋಷ್ಪದ ಕ್ಷೇತ್ರ ಮುಳುಗಡೆಯಾಗಿದ್ದು, ಇಲ್ಲಿನ ದೇವಸ್ಥಾನ ಬಂದ್ ಮಾಡಲಾಗಿದೆ. ನಿರ್ಮಾಣ ಹಂತದ ಪೋಲವರಂ ಜಲಾಶಯದ ನೀರಿನ ಮಟ್ಟ 29 ಮೀಟರ್‌ಗೆ ಏರಿಕೆಯಾಗಿದೆ. ದೇವಿಪಟ್ಟಣಂ ಮಂಡಲದ ದ್ವೀಪ ಗ್ರಾಮಗಳಲ್ಲಿ ಐದು ದಿನಗಳಿಂದ ವಿದ್ಯುತ್ ಪೂರೈಕೆ ಇಲ್ಲ.

ಪಶ್ಚಿಮ ಗೋದಾವರಿಯ ಎದ್ದುವಾಗು ಮತ್ತು ಸಿದ್ದರಾಮವಾಗು ಸೇತುವೆಗಳು ಮುಳುಗಡೆಯಾಗಿವೆ. ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ. ಈ ಗ್ರಾಮಗಳ ಸಂತ್ರಸ್ತರಿಗೆ 25 ಕೆ.ಜಿ.ಅಕ್ಕಿ, ಎಣ್ಣೆ, ಬೇಳೆ, ಸೀಮೆ ಎಣ್ಣೆ ಪೂರೈಸಲಾಗಿದೆ. 

ಮಳೆ ಹಾಗೂ ಪ್ರವಾಹದ ಅವಾಂತರ

* ಗುಜರಾತ್‌ನ ಅಂಬಿಕಾ ಮತ್ತು ಪೂರ್ಣಾ ನದಿಗಳ ಪ್ರವಾಹದಿಂದಾಗಿ ನವಸಾರಿ ಜಿಲ್ಲೆಯಲ್ಲಿ ಸುಮಾರು 5 ಸಾವಿರ ಜನರನ್ನು ಸ್ಥಳಾಂತರ ಮಾಡಲಾಗಿದೆ.

* ವಾಯುಪಡೆಯ ಎರಡು ಹೆಲಿಕಾಪ್ಟರ್‌ಗಳು ಮುಳುಗಡೆಯಾಗಿರುವ ಮೆಂಧರ್ ಗ್ರಾಮದ 45 ಜನರನ್ನು ಭಾನುವಾರ ಏರ್‌ಲಿಫ್ಟ್ ಮಾಡಿವೆ. 

*  ಡಾಂಗ್ ಜಿಲ್ಲೆಯ ವಾಘೈ ತಾಲ್ಲೂಕಿನಲ್ಲಿ ಶನಿವಾರ ಹಾಗೂ ಭಾನುವಾರ 340 ಮಿ.ಮೀಟರ್ ಮಳೆಯಾಗಿದೆ. ವಲಸಾಡ್ ಹಾಗೂ ಸೂರತ್ ಜಿಲ್ಲೆಯಲ್ಲಿ ಮಳೆ ಮುಂದುವರಿದಿದೆ.

* ಮಹಾರಾಷ್ಟ್ರದ ಸಾಯಖೇಡ ಗ್ರಾಮದ 60 ಮಂದಿಯನ್ನು ಸುರಕ್ಷಿತ ಜಾಗಕ್ಕೆ ಸ್ಥಳಾಂತರ ಮಾಡಲಾಗಿದೆ

* ತ್ರಯಂಬಕೇಶ್ವರದಲ್ಲಿ ದಿನದಲ್ಲಿ ಒಂದೇ ದಿನದಲ್ಲಿ 315 ಮಿ.ಮೀ ಮಳೆಯಾಗಿದೆ

* ಧರ್ನಾ ಜಲಾಶಯದಿಂದ 26 ಸಾವಿರ ಕ್ಯೂಸೆಕ್ ನೀರು ನದಿಗೆ ಹರಿಸಲಾಗುತ್ತಿದೆ

* ಮುಂಬೈ, ಠಾಣೆ ಹಾಗೂ ಪಾಲ್ಘಾರ್‌ನಲ್ಲಿ ಕಾರ್ಯಾಚರಣೆಗೆ ಎನ್‌ಡಿಆರ್‌ಎಫ್‌ನ 6 ಹೆಚ್ಚುವರಿ ತಂಡ ಕಳುಹಿಸಲು ಮಹಾರಾಷ್ಟ್ರ ಮನವಿ ಮಾಡಿದೆ

* ವಿದ್ಯುತ್ ಪೂರೈಕೆ ಉಪಕೇಂದ್ರಗಳು ಮಳೆ ನೀರಿನಲ್ಲಿ ಮುಳುಗಡೆಯಾದ ಕಾರಣ, ಠಾಣೆ ಹಾಗೂ ಪಾಲ್ಘಾರ್ ಜಿಲ್ಲೆಗಳ ಸಾವಿರಾರು ಜನರು ವಿದ್ಯುತ್ ಇಲ್ಲದೆ ಭಾನುವಾರ ಪರದಾಡಿದರು

* ಪಾಲ್ಘಾರ್ ಜಿಲ್ಲೆಯ ಪಂಜಲ್ ನದಿ ಮೇಲೆ ವಾಡಾ ಮತ್ತು ಮಾಲ್ವಾಡಾ ನಡುವೆ ಸಂಪರ್ಕ ಕಲ್ಪಿಸುವ ಸೇತುವೆಯ ಮುಖ್ಯ ಭಾಗ ನೀರಿನಲ್ಲಿ ಕೊಚ್ಚಿಹೋಗಿದೆ  

* ವಿರಾರ್‌ನ ಬದಾನೆ ಗ್ರಾಮದಲ್ಲಿ 15 ಜನರನ್ನು ಸ್ಥಳಾಂತರಿಸಲಾಗಿದೆ. ಮನೂರ್‌ನಲ್ಲಿ ಜಲಾವೃತ ಗೋದಾಮಿನಲ್ಲಿದ್ದ ನಾಲ್ವರು ಹಾಗೂ ಇತರೆ ಜಾಗಗಳಲ್ಲಿ 8 ಜನರನ್ನು ರಕ್ಷಿಸಲಾಗಿದೆ

* ವಲೀವ್‌ನ ಖಾನ್‌ಬಾಗ್‌ ಸೇತುವೆ ಮೇಲೆ ಕೆಟ್ಟುನಿಂತಿದ್ದ ಲಾರಿಯಲ್ಲಿದ್ದ ಮೂವರನ್ನು ಕ್ರೇನ್ ಬಳಸಿ ರಕ್ಷಿಸಲಾಯಿತು

* ಫುಲ್‌ಪಾಡಾದ ಪಾಡಿ ಕಿಂಡಿ ಜಲಾಶಯದಲ್ಲಿ ವ್ಯಕ್ತಿಯೊಬ್ಬ ಕೊಚ್ಚಿಹೋಗಿರುವ ಶಂಕೆಯಿದ್ದು, ಶೋಧ ನಡೆಸಲಾಗುತ್ತಿದೆ 

Post Comments (+)