ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮಹಾ’ ರಾಜಕಾರಣ: ಸಂಸತ್ತಿನಲ್ಲಿ ರಿಂಗಣ

ಲೋಕಸಭೆಯಲ್ಲಿ ಗದ್ದಲ, ಇಬ್ಬರು ಸಂಸದರನ್ನು ಹೊರಹಾಕಲು ಸ್ಪೀಕರ್‌ ಆದೇಶ l ರಾಜ್ಯಸಭೆಯಲ್ಲೂ ಕೋಲಾಹಲ
Last Updated 25 ನವೆಂಬರ್ 2019, 18:32 IST
ಅಕ್ಷರ ಗಾತ್ರ

ನವದೆಹಲಿ: ಮಹಾರಾಷ್ಟ್ರದ ರಾಜಕೀಯ ಬೆಳವಣಿಗೆಗಳು ಸಂಸತ್ತಿನ ಉಭಯ ಸದನಗಳಲ್ಲಿಸೋಮವಾರ ಪ್ರತಿಧ್ವನಿಸಿವೆ.

ಕಾಂಗ್ರೆಸ್‌ ನೇತೃತ್ವದಲ್ಲಿ ವಿರೋಧಪಕ್ಷಗಳು ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಭಾರಿ ಪ್ರತಿಭಟನೆ ನಡೆಸಿದ್ದರಿಂದ ಎರಡೂ ಸದನಗಳ ಕಲಾಪಗಳನ್ನು ಮಂಗಳವಾರಕ್ಕೆ ಮುಂದೂಡಲಾಯಿತು.

ಲೋಕಸಭೆಯಲ್ಲಿ ಪ್ರಶ್ನೋತ್ತರ ವೇಳೆಯಲ್ಲಿ ಉಪ ಪ್ರಶ್ನೆಯೊಂದನ್ನು ಕೇಳಬೇಕಾಗಿದ್ದ ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಅ‌ವರು ಮಹಾರಾಷ್ಟ್ರದ ವಿಚಾರವನ್ನು ಪ್ರಸ್ತಾಪಿಸುವ ಮೂಲಕ ಪ್ರತಿಭಟನೆಗೆ ವೇದಿಕೆ ಸಜ್ಜುಗೊಳಿಸಿದರು.

ಇದಾಗುತ್ತಿದ್ದಂತೆ ಕಾಂಗ್ರೆಸ್‌ ಸದಸ್ಯರೆಲ್ಲರೂ ಸರ್ಕಾರದ ವಿರುದ್ಧ ಘೋಷಣೆ ಕೂಗಲಾರಂಭಿಸಿದರು. ಕೆಲವರು ಘೋಷಣಾ ಫಲಕಗಳನ್ನು ಹಿಡಿದು ಸ್ಪೀಕರ್‌ ಅವರ ಆಸನದ ಮುಂದೆ ಪ್ರತಿಭಟನೆ ಆರಂಭಿಸಿದರು. ಸಂಸದರಾದ ಹಿಬಿ ಏಡನ್‌ ಹಾಗೂ ಟಿ.ಎನ್‌. ಪ್ರತಾಪನ್‌ ಅವರು ‘ಪ್ರಜಾಪ್ರಭುತ್ವದ ಕಗ್ಗೊಲೆಯನ್ನು ನಿಲ್ಲಿಸಿ, ಸಂವಿಧಾನವನ್ನು ಉಳಿಸಿ, ಪ್ರಜಾಪ್ರಭುತ್ವವನ್ನು ಉಳಿಸಿ’ ಎಂದು ಬರೆದಿದ್ದ ಬ್ಯಾನರ್‌ ಹಿಡಿದಿದ್ದರು. ಇದು ಸ್ಪೀಕರ್‌ ಓಂ ಬಿರ್ಲಾ ಅವರ ಸಿಟ್ಟಿಗೆ ಕಾರಣವಾಯಿತು.

ಬ್ಯಾನರ್‌ ತೆರವುಗೊಳಿಸುವಂತೆ ಸೂಚಿಸಿದರೂ, ಸದಸ್ಯರು ನಿರಾಕರಿಸಿದಾಗ ಅವರನ್ನು ಹೊರಗೆ ಕಳುಹಿಸುವಂತೆ ಮಾರ್ಷಲ್‌ಗಳಿಗೆ ಸ್ಪೀಕರ್‌ ಸೂಚನೆ ನೀಡಿದರು. ಈ ಸಂದರ್ಭದಲ್ಲಿ ಗದ್ದಲ ಸೃಷ್ಟಿಯಾಗಿ ಕಲಾಪವನ್ನು 12 ಗಂಟೆಗೆ ಮುಂದೂಡಲಾಯಿತು. 12 ಗಂಟೆಗೂ ಗದ್ದಲ ಮುಂದುವರಿದಿದ್ದರಿಂದ ಪುನಃ ಮಧ್ಯಾಹ್ನ 2 ಗಂಟೆಯವರೆಗೆ ಕಲಾಪವನ್ನು ಮುಂದೂಡಲಾಯಿತು.

2 ಗಂಟೆಗೆ ಕಲಾಪ ಆರಂಭವಾದಾಗ ಗದ್ದಲ ಇರಲಿಲ್ಲ. ಆಗ ತಮ್ಮ ಹೇಳಿಕೆಯನ್ನು ಮಂಡಿಸುವಂತೆ ಕೇಂದ್ರ ಸಚಿವರಿಗೆ ಸ್ಪೀಕರ್‌ ಸೂಚನೆ ನೀಡಿದರು. ಈ ಸಂದರ್ಭದಲ್ಲಿ ಪುನಃ ಸ್ಪೀಕರ್‌ ಆಸನದ ಮುಂದೆ ಧಾವಿಸಿದ ಕಾಂಗ್ರೆಸ್‌ ನಾಯಕರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಈ ಸಂದರ್ಭದಲ್ಲಿ ತೃಣಮೂಲ ಕಾಂಗ್ರೆಸ್‌ ಸದಸ್ಯರೂ ಸಾಥ್‌ ನೀಡಿದರು.

ಈ ಘೋಷಣೆ– ಗದ್ದಲದ ನಡುವೆಯೇ ಎಸ್‌ಪಿಜಿ ಕಾಯ್ದೆ ತಿದ್ದುಪಡಿ ಮಸೂದೆ ಸೇರಿದಂತೆ ನಾಲ್ಕು ಮಸೂದೆಗಳನ್ನು ಮಂಡಿಸಲಾಯಿತು. ಗದ್ದಲ ಮುಂದುವರಿದ ಪರಿಣಾಮ ಕಲಾಪವನ್ನು ಮಂಗಳವಾರಕ್ಕೆ ಮುಂದೂಡಲಾಯಿತು.

ಕಲಾಪ ಮುಂದೂಡಿಕೆಯ ನಂತರವೂ ಕಾಂಗ್ರೆಸ್‌ ಸದಸ್ಯರು ಘೋಷಣೆಗಳನ್ನು ಕೂಗುತ್ತಲೇ ಇದ್ದರು. ಇನ್ನೊಂದೆಡೆ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಟಿಎಂಸಿ ಸಂಸದರ ಜೊತೆ ಮಾತುಕತೆಯಲ್ಲಿ ತೊಡಗಿರುವುದು ಕಂಡುಬಂತು.

ರಾಜ್ಯಸಭೆಯಲ್ಲೂ ಇದೇ ವಿಚಾರವಾಗಿ ಸದಸ್ಯರು ಗದ್ದಲ ನಡೆಸಿದರು. ‘ಮೊದಲೇ ನೋಟಿಸ್‌ ನೀಡದ ಹೊರತು, ರಾಷ್ಟ್ರಪತಿ ಆಡಳಿತ ಜಾರಿಮಾಡಿದ ಅಥವಾ ರದ್ದು ಮಾಡಿದ ವಿಚಾರವಾಗಿ ಸದನದಲ್ಲಿ ಚರ್ಚೆಗೆ ಅವಕಾಶ ನೀಡಲು ಸಾಧ್ಯವಿಲ್ಲ’ ಎಂದು ಸಭಾಪತಿ ವೆಂಕಯ್ಯ ನಾಯ್ಡು ಸ್ಪಷ್ಟಪಡಿಸಿದರು. ಆದರೆ ಸದಸ್ಯರು ಇದನ್ನು ಒಪ್ಪಲು ಸಿದ್ಧರಿರಲಿಲ್ಲ. ಮಧ್ಯಾಹ್ನ 2 ಗಂಟೆಗೆ ಕಲಾಪ ಆರಂಭವಾದಾಗಲೂ ಕಾಂಗ್ರೆಸ್‌, ಡಿಎಂಕೆ ಹಾಗೂ ಎಡಪಂಥೀಯ ಪಕ್ಷಗಳು ಮಹಾರಾಷ್ಟ್ರ ಬೆಳವಣಿಗೆಗಳ ಚರ್ಚೆ ನಡೆಸಬೇಕು ಎಂದು ಪಟ್ಟು ಹಿಡಿದಿದ್ದರಿಂದ ಕಲಾಪವನ್ನು ಮಂಗಳವಾರಕ್ಕೆ ಮುಂದೂಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT