ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮನಗರ ಜಿಲ್ಲೆಗೆ ಗರಿಷ್ಠ ಮತದಾನದ ಹಿರಿಮೆ

ಮುಂದಿನ ನಾಯಕನ ಆಯ್ಕೆಗೆ ಚನ್ನಪಟ್ಟಣ ಕ್ಷೇತ್ರದಲ್ಲಿ ಅತಿಹೆಚ್ಚು: ರಾಮನಗರದಲ್ಲಿ ಕನಿಷ್ಠ ಪ್ರಮಾಣ ದಾಖಲು
Last Updated 14 ಮೇ 2018, 9:45 IST
ಅಕ್ಷರ ಗಾತ್ರ

ರಾಮನಗರ: ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿಯೇ ಅತಿ ಹೆಚ್ಚು ಮತದಾನ ಮಾಡಿದ ಜಿಲ್ಲೆಗಳ ಪೈಕಿ ರಾಮನಗರವು ಮುಂಚೂಣಿಯಲ್ಲಿದೆ. ಶನಿವಾರ ನಡೆದ ಮತದಾನ ಪ್ರಕ್ರಿಯೆಯಲ್ಲಿ ಇಲ್ಲಿನ ಶೇ 84.55 ಜನರು ತಮ್ಮ ಹಕ್ಕನ್ನು ಚಲಾವಣೆ ಮಾಡಿದ್ದಾರೆ.

ಇದು ಈಚಿನ ಚುನಾವಣೆಗಳಲ್ಲಿ ಆಗಿರುವ ಗರಿಷ್ಠ ಪ್ರಮಾಣದ ಮತದಾನವಾಗಿದೆ. 2013ರ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಸರಾಸರಿ ಶೇ 82.99ರಷ್ಟು ಮತದಾನವಾಗಿತ್ತು. 2008ರ ಚುನಾವಣೆಯಲ್ಲಿ ಜಿಲ್ಲೆಯಲ್ಲಿನ ಶೇ 76.34 ಮಂದಿ ತಮ್ಮ ಹಕ್ಕು ಚಲಾವಣೆ ಮಾಡಿದ್ದರು.

ಎಲ್ಲಿ ಹೆಚ್ಚು, ಎಲ್ಲಿ ಕಡಿಮೆ: ತೀವ್ರ ಕುತೂಹಲ ಕೆರಳಿಸಿದ್ದ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಪ್ರಮಾಣದ ಮತದಾನವಾಗಿದೆ. ಇಲ್ಲಿನ ಶೇ 86.32 ಮಂದಿ ಮತಗಟ್ಟೆಗಳತ್ತ ಹೆಜ್ಜೆ ಇಟ್ಟಿದ್ದಾರೆ. ಮಾಗಡಿ ಕ್ಷೇತ್ರವು ನಂತರದ ಸ್ಥಾನದಲ್ಲಿದೆ. ಇಲ್ಲಿನ ಶೇ 85.83 ರಷ್ಟು ಜನರು ತಮ್ಮ ಮುಂದಿನ ನಾಯಕನನ್ನು ಚುನಾಯಿಸಿದ್ದಾರೆ. ಕನಕಪುರ ಕ್ಷೇತ್ರವು ಮೂರನೇ ಸ್ಥಾನದಲ್ಲಿದ್ದು ಇಲ್ಲಿನ ಶೇ 83,40 ಜನರು ಮತಗಟ್ಟೆಗಳತ್ತ ಚಿತ್ತ ಹರಿಸಿದ್ದಾರೆ. ರಾಮನಗರ ವಿಧಾನಸಭೆ ಕ್ಷೇತ್ರದಲ್ಲಿ ಅತಿ ಕಡಿಮೆ ಅಂದರೆ 82.55ರಷ್ಟು ಮತದಾನವಾಗಿದೆ.

ಪುರುಷರೇ ಮುಂದು: ಮಾಗಡಿ ಹೊರತುಪಡಿಸಿ ಜಿಲ್ಲೆಯ ಉಳಿದ ಮೂರು ಕ್ಷೇತ್ರಗಳಲ್ಲಿ ಮಹಿಳಾ ಮತದಾರರ ಸಂಖ್ಯೆಯೇ ಹೆಚ್ಚಿದೆ. ಇವರನ್ನು ಮತಗಟ್ಟೆಗಳತ್ತ ಸೆಳೆಯುವ ಸಲುವಾಗಿ ಚುನಾವಣಾ ಆಯೋಗವು ಈ ಬಾರಿ ವಿಶೇಷವಾಗಿ ‘ಪಿಂಕ್‌’ ಮತಗಟ್ಟೆಗಳನ್ನು ಪರಿಚಯಿಸಿತ್ತು. ಸಂಪೂರ್ಣವಾಗಿ ಮಹಿಳಾ ಸಿಬ್ಬಂದಿಯನ್ನೇ ನೇಮಿಸುವ ಮೂಲಕ ಅವರಲ್ಲಿನ ಮುಜುಗರವನ್ನು ಹೋಗಲಾಡಿಸುವ ಪ್ರಯತ್ನ ಮಾಡಿತ್ತು. ಆದಾಗ್ಯೂ ನಾಲ್ಕು ಕ್ಷೇತ್ರಗಳಲ್ಲಿ ಮತದಾನ ಮಾಡಿದವರಲ್ಲಿ ಗಂಡಸರೇ ಹೆಚ್ಚಿದ್ದಾರೆ. ಜಿಲ್ಲೆಯಲ್ಲಿ ಒಟ್ಟಾರೆ ಶೇ 85.50ಷ್ಟು ಪುರುಷರು ಮತ
ಹಾಕಿದ್ದರೆ, ಶೇ 83.62ರಷ್ಟು ಮಹಿಳೆಯರು ಮಾತ್ರ ಮತದಾನ ಮಾಡಲು ಸಾಧ್ಯವಾಗಿದೆ.

ಮಾಗಡಿ ಮತಕ್ಷೇತ್ರದಲ್ಲಿನ ಶೇ 86.27 ಮತದಾರರು ಮತ ಚಲಾವಣೆ ಮಾಡಿದರೆ, ಶೇ 85.40ರಷ್ಟು ಸ್ತ್ರೀಯರು ಮಾತ್ರ ಈ ಕೆಲಸ ಮಾಡಿದ್ದಾರೆ. ರಾಮನಗರ ಕ್ಷೇತ್ರದಲ್ಲಿ ಶೇ 83.61ರಷ್ಟು ಪುರುಷರು ಹಕ್ಕು ಚಲಾಯಿಸಿದ್ದರೆ,
ಶೇ 81.51 ಮಹಿಳೆಯರಿಗೆ ಮಾತ್ರ ಇದು ಸಾಧ್ಯವಾಗಿದೆ. ಕನಕಪುರದಲ್ಲಿ 84.88 ಪುರುಷರು ಮತಗಟ್ಟೆಗಳತ್ತ ಸುಳಿದಿದ್ದರೆ, ಶೇ 81.94 ಮಹಿಳೆಯರು ಮಾತ್ರ ಮತದಾನಕ್ಕೆ ಆಸಕ್ತಿ ತೋರಿದ್ದಾರೆ. ಚನ್ನಪಟ್ಟಣದಲ್ಲಿ ಶೇ 87.16 ರಷ್ಟು ಪುರುಷರು ಹಾಗೂ 85.51 ರಷ್ಟು ಮಹಿಳೆಯರು ತಮ್ಮ ಮತದಾನದ ಅಸ್ತ್ರ ಪ್ರಯೋಗಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT