ವಿಶ್ವಕ್ಕೆ ಅಹಿಂಸೆಯ ಬಲ ನೀಡಿದ ಬಾಪು; ರಾಷ್ಟ್ರಪಿತನಿಗೆ ಗಣ್ಯರಿಂದ ನಮನ

7
2019ರಲ್ಲಿ ಅದ್ದೂರಿ ಆಚರಣೆಗೆ ನಿರ್ಧಾರ: ಪ್ರಧಾನಿ ನರೇಂದ್ರ ಮೋದಿ

ವಿಶ್ವಕ್ಕೆ ಅಹಿಂಸೆಯ ಬಲ ನೀಡಿದ ಬಾಪು; ರಾಷ್ಟ್ರಪಿತನಿಗೆ ಗಣ್ಯರಿಂದ ನಮನ

Published:
Updated:
Deccan Herald

ನವದೆಹಲಿ: ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ 150ನೇ ಜನ್ಮದಿನಾಚರಣೆ ಅಂಗವಾಗಿ, ರಾಜ್‌ಘಾಟ್‌ನಲ್ಲಿರುವ ಅವರ ಸ್ಮಾರಕಕ್ಕೆ ರಾಷ್ಟ್ರಪತಿ ರಾಮನಾಥ ಕೋವಿಂದ್‌, ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಪುಷ್ಪ ನಮನ ಸಲ್ಲಿಸಿದರು.

‘ಗಾಂಧಿಯವರ ಮೌಲ್ಯಗಳಾದ ಶಾಂತಿ, ಸೋದರತ್ವ, ಎಲ್ಲರನ್ನು ಒಳಗೊಂಡ ರಾಷ್ಟ್ರೀಯ ಅಭಿವೃದ್ಧಿಗೆ ನಮ್ಮನ್ನು ಮತ್ತೊಮ್ಮೆ ಸಮರ್ಪಿಸಿಕೊಳ್ಳೋಣ. ಗಾಂಧಿಯವರ ಸಂದೇಶವು ಎಲ್ಲರಿಗೂ, ಎಲ್ಲ ಕಾಲದಲ್ಲೂ ಪ್ರಸ್ತುತ’ ಎಂದು ರಾಷ್ಟ್ರಪತಿ ಕೋವಿಂದ್‌ ಟ್ವೀಟ್‌ ಮಾಡಿದ್ದಾರೆ.

ಮಾನವೀಯತೆ ಒಗ್ಗೂಡಿಸುವ ಶಕ್ತಿ: ‘ಗಾಂಧಿಯವರ ಉದಾತ್ತ ಚಿಂತನೆಗಳು ವಿಶ್ವದ ಲಕ್ಷಾಂತರ ಜನರಿಗೆ ಬಲ ನೀಡಿವೆ. ವಿಶ್ವದ ಪ್ರಗತಿಗಾಗಿ ಬದುಕಿದ ಅಗ್ರಮಾನ್ಯ ವ್ಯಕ್ತಿ ಬಾಪು’ ಎಂದು ಟ್ವೀಟ್‌ ಮೋದಿ ಮಾಡಿದ್ದಾರೆ.

‘ಬಾಪುವಿನ ಅಹಿಂಸಾ ತತ್ವವು ಮಾನವೀಯತೆಯನ್ನು ಒಗ್ಗೂಡಿಸುವ ಶಕ್ತಿ ಹೊಂದಿದೆ. ಆದರೆ, ಭಯೋತ್ಪಾದನೆ, ತೀವ್ರವಾದ ಹಾಗೂ ಬುದ್ಧಿಹೀನ ದ್ವೇಷವು ರಾಷ್ಟ್ರವನ್ನು ವಿಭಜಿಸುತ್ತಿವೆ’ ಎಂದು ಹೇಳಿದ್ದಾರೆ.

‘ವಿಶ್ವವು ಭಯೋತ್ಪಾದನೆ ಹಾಗೂ ದ್ವೇಷದಿಂದ ನಲುಗುತ್ತಿದೆ. ಇದರಿಂದ ರಾಷ್ಟ್ರಗಳ ವಿಭಜನೆ ಜೊತೆಗೆ ಸಮಾಜ ಒಡೆಯುವ ಕೆಲಸ ನಡೆಯುತ್ತಿದೆ. ಈ ಸಂದರ್ಭದಲ್ಲಿ ಗಾಂಧಿಯವರ ಶಾಂತಿ ಮತ್ತು ಅಹಿಂಸೆಯ ತತ್ವ ಅಳವಡಿಸಿಕೊಳ್ಳುವುದು ಅತ್ಯಗತ್ಯವಿದೆ’ ಎಂದು ಬ್ಲಾಗ್‌ನಲ್ಲಿ ಗಾಂಧೀಜಿ ಸಂದೇಶ ಹಂಚಿಕೊಂಡಿದ್ದಾರೆ. 2019ರ ಅಕ್ಟೋಬರ್‌ 2 ರಂದು ಗಾಂಧಿಯವರ ಜನ್ಮದಿನವನ್ನು ಅದ್ದೂರಿಯಾಗಿ ಆಚರಿಸಲು ಸರ್ಕಾರ ಯೋಜನೆ ರೂಪಿಸಿದೆ ಎಂದು ಪ್ರಧಾನಿ ತಿಳಿಸಿದ್ದಾರೆ.

ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು, ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ,ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ, ಮಾಜಿ ಪ್ರಧಾನಿ ಮನಮೋಹನ ಸಿಂಗ್‌, ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌, ಕೇಂದ್ರದ ಸಚಿವರು, ವಿವಿಧ ದೇಶಗಳ ರಾಯಭಾರಿಗಳು, ಹಿರಿಯ ಅಧಿಕಾರಿಗಳು,ರಾಜಕೀಯ ಪಕ್ಷಗಳ ಮುಖಂಡರು ರಾಜ್‌ಘಾಟ್‌ಗೆ ತೆರಳಿ ಗೌರವ ಸಲ್ಲಿಸಿದರು. 

13 ಲಕ್ಷ ಸಸಿ ನೆಟ್ಟ ರೈಲ್ವೆ ಇಲಾಖೆ: ಮಹಾತ್ಮ ಗಾಂಧಿ ಜಯಂತಿ ಅಂಗವಾಗಿ ಭಾರತೀಯ ರೈಲ್ವೆ ತನ್ನ 1,300 ಕಿಲೋ ಮೀಟರ್‌ ಸಂಪರ್ಕ ಜಾಲದ ವ್ಯಾಪ್ತಿಯಲ್ಲಿ 13.26 ಲಕ್ಷ ಸಸಿಗಳನ್ನು ನೆಟ್ಟು ಹಸಿರೀಕರಣ ಕಾರ್ಯದಲ್ಲಿ ತೊಡಗಿದೆ. ಸೆಪ್ಟೆಂಬರ್‌ 15ರಿಂದ ಅಕ್ಟೋಬರ್‌ 2ರ ಅವಧಿಯಲ್ಲಿ ಈ ಕಾರ್ಯ ಕೈಗೊಳ್ಳಲಾಗಿದೆ. ರೈಲ್ವೆ ಸಚಿವಾಲಯ ಈ ಅವಧಿಯಲ್ಲಿ ‘ಸ್ವಚ್ಛತೆಯೇ ಸೇವೆ ಪಾಕ್ಷಿಕ’ ಅಭಿಯಾನವನ್ನು ಹಮ್ಮಿಕೊಂಡಿತ್ತು. ಇದರ ಭಾಗವಾಗಿ ಸಸಿಗಳನ್ನು ನೆಡಲಾಯಿತು ಎಂದು ಇಲಾಖೆಯ ‍ಪ್ರಕಟಣೆ ತಿಳಿಸಿದೆ.

‘ಜನರ ಪಾಲ್ಗೊಳ್ಳುವಿಕೆಯಿಂದ ಸ್ವಚ್ಚತೆ’

‘ರಾಜಕೀಯ ನಾಯಕತ್ವದೊಂದಿಗೆ ಸಾರ್ವಜನಿಕ ಧನಸಹಾಯ, ಪಾಲುದಾರಿಕೆ ಹಾಗೂ ಜನರ ಪಾಲ್ಗೊಳ್ಳುವಿಕೆಯಿಂದ ವಿಶ್ವದಲ್ಲಿ ಸಂಪೂರ್ಣ ನೈರ್ಮಲ್ಯ ಸಾಧಿಸಲು ಸಾಧ್ಯ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ನಾಲ್ಕು ವರ್ಷಗಳ ಹಿಂದೆ ದೇಶದಲ್ಲಿ ಶೇ 60 ರಷ್ಟು ಜನರು ಬಯಲು ಶೌಚಾಲಯದ ಮೇಲೆ ಅವಲಂಬಿತರಾಗಿದ್ದರು. ಈಗ ಅದು ಶೇ 20ಕ್ಕೆ ಇಳಿದಿದೆ. ಬಹುತೇಕ ನಗರಗಳಲ್ಲಿ ಶೇ 90 ರಷ್ಟು ಶೌಚಾಲಯಗಳನ್ನು ನಿರ್ಮಿಸಲಾಗಿದ್ದು, ಅವುಗಳು ಬಯಲು ಶೌಚ ಮುಕ್ತ ಎಂದು ಘೋಷಿಸಿಕೊಂಡಿವೆ ಎಂದರು.

ಶಾಸ್ತ್ರಿ ಜನ್ಮ ದಿನಾಚರಣೆ: ರಾಷ್ಟ್ರಪತಿ ರಾಮನಾಥ ಕೋವಿಂದ್‌, ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು, ಪ್ರಧಾನಿ ನರೇಂದ್ರ ಮೋದಿ ಅವರು ವಿಜಯ್‌ ಘಾಟ್‌ಗೆ ತೆರಳಿ ಮಾಜಿ ಪ್ರಧಾನಿ ಲಾಲ್‌ಬಹದ್ದೂರ್‌ ಶಾಸ್ತ್ರಿ ಅವರ ಸ್ಮಾರಕಕ್ಕೆ ಗೌರವ ಸಲ್ಲಿಸಿದರು 4 ವರ್ಷಗಳಿಂದ ಗಾಂಧಿ ಶಾಂತಿ ಪ್ರಶಸ್ತಿ ನೀಡಿಲ್ಲ

ಗಾಂಧಿ ಶಾಂತಿ ಪ್ರಶಸ್ತಿ ನಾಲ್ಕು ವರ್ಷಗಳಿಂದ ಯಾರಿಗೂ ನೀಡಿಲ್ಲ

ದೇಶವು ಮಹಾತ್ಮ ಗಾಂಧಿಯ ಜನ್ಮದಿನವನ್ನು ಆಚರಿಸುತ್ತಿದೆ. ಆದರೆ, ರಾಷ್ಟ್ರಪಿತನ ಹೆಸರಿನಲ್ಲಿ ಸ್ಥಾಪಿಸಲಾಗಿರುವ ಅಂತರರಾಷ್ಟ್ರೀಯ ಗಾಂಧಿ ಶಾಂತಿ ಪ್ರಶಸ್ತಿಯನ್ನು ಸತತ ನಾಲ್ಕು ವರ್ಷಗಳಿಂದ ಯಾರಿಗೂ ನೀಡಿಲ್ಲ.

2014ರಲ್ಲಿ ಇಸ್ರೊಗೆ ಈ ಪ್ರಶಸ್ತಿ ನೀಡಲಾಗಿತ್ತು. ‘ಈ ಪ್ರಶಸ್ತಿಗೆ ಅರ್ಹರ ಹೆಸರುಗಳನ್ನು ರಾಜ್ಯಸರ್ಕಾರಗಳು ಕಳೆದ ನಾಲ್ಕು ವರ್ಷಗಳಿಂದ ಕಳುಹಿಸಿವೆ. ಆದರೆ, ಇದಕ್ಕೆ ಅನುಮೋದನೆ ದೊರೆಯಬೇಕಿದೆ. ಪ್ರಶಸ್ತಿ ಪುರಸ್ಕೃತರ ಹೆಸರು ಘೋಷಿಸಲು ವಿಳಂಬವಾಗುತ್ತಿರುವುದು ಏಕೆ ಎಂದು ಹೇಳುವುದು ಕಷ್ಟ’ ಎಂಬುದಾಗಿ ಕೇಂದ್ರ ಸಂಸ್ಕೃತಿ ಸಚಿವಾಲಯ ಅಧಿಕಾರಿಗಳು ಹೇಳಿದ್ದಾರೆ.

ಅಮೆರಿಕ: ಗಾಂಧಿಗೆ ಮರಣೋತ್ತರ ಪ್ರಶಸ್ತಿ

ಶಾಂತಿ ಮತ್ತು ಅಹಿಂಸಾ ಹೋರಾಟಗಳನ್ನು ಸಾರಿ, ಅದಕ್ಕೆ ಉತ್ತೇಜನ ನೀಡಿದ ಮಹಾತ್ಮ ಗಾಂಧಿ ಸಾಧನೆಯನ್ನು ಪರಿಗಣಿಸಿ ಅವರಿಗೆ ಚಿನ್ನದ ಪದಕವನ್ನು ಮರಣೋತ್ತರವಾಗಿ ನೀಡಲು ಅಮೆರಿಕ ಕಾಂಗ್ರೆಸ್‌ ನಿರ್ಣಯ ತೆಗೆದುಕೊಂಡಿದೆ.

ಅಮೆರಿಕದ ಪ್ರತಿನಿಧಿ ಸಭೆಯಲ್ಲಿ ನ್ಯೂಯಾರ್ಕ್‌ ಪ್ರತಿನಿಧಿಸುವ ಕಾಂಗ್ರೆಸ್‌ನ ಮಹಿಳಾ ಸಂಸದೆ ಕ್ಯಾರೊಲಿನ್‌ ಮಾಲೊನಿ ಅವರು ಸೆಪ್ಟೆಂಬರ್‌ 23ರಂದು ಈ ಸಂಬಂಧ ನಿರ್ಣಯವನ್ನು (ಎಚ್‌ ಆರ್‌6916) ಮಂಡಿಸಿದರು. ಇದಕ್ಕೆ ಭಾರತ ಮೂಲದ ಅಮೆರಿಕ ಸಂಸದರಾದ ಅಮಿ ಬೆರಾ, ರಾಜಾ ಕೃಷ್ಣಮೂರ್ತಿ,ರೊ ಖನ್ನಾ, ಪ್ರಮೀಳಾ ಜಯಪಾಲ್‌ ಅವರು ಬೆಂಬಲ ಸೂಚಿಸಿದ್ದಾರೆ.

****

ಸಮಾನತೆ, ಗೌರವ, ಅಂರ್ತಗತ ಮತ್ತು ಸಬಲೀಕರಣದ ನಿಟ್ಟಿನಲ್ಲಿ ಬದುಕು ಕಾಣುವ ವಿಶ್ವದ ಲಕ್ಷಾಂತರ ಜನರಿಗೆ ಮಹಾತ್ಮ ಗಾಂಧೀಜಿ ಭರವಸೆಯ ಬೆಳಕಾಗಿ ಉಳಿದಿದ್ದಾರೆ
– ನರೇಂದ್ರ ಮೋದಿ, ಪ್ರಧಾನಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !