ಶಬರಿಮಲೆಯಲ್ಲಿ ಮಕರ ಜ್ಯೋತಿ ಕಣ್ತುಂಬಿಕೊಂಡ ಅಯ್ಯಪ್ಪ ಭಕ್ತರು

7

ಶಬರಿಮಲೆಯಲ್ಲಿ ಮಕರ ಜ್ಯೋತಿ ಕಣ್ತುಂಬಿಕೊಂಡ ಅಯ್ಯಪ್ಪ ಭಕ್ತರು

Published:
Updated:

ಪಟ್ಟನಂತಿಟ್ಟ (ಕೇರಳ): ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಸೇರಿದ್ದ ಸಾವಿರಾರು ಭಕ್ತರು ಸೋಮವಾರ ಸಂಜೆ 6.35ಕ್ಕೆ 
ಮಕರಜ್ಯೋತಿಯನ್ನು ಕಣ್ತುಂಬಿಕೊಂಡರು.

ಕೇರಳದ ನಾನಾ ಭಾಗ ಸೇರಿದಂತೆ ಕರ್ನಾಟಕ, ತಮಿಳುನಾಡು ಮತ್ತು ಆಂಧ್ರ ಪ್ರದೇಶದಿಂದ ಭಾನುವಾರವೇ ಆಗಮಿಸಿದ್ದ ಭಕ್ತರು ಅಯ್ಯಪ್ಪ ದೇವಸ್ಥಾನ ಮತ್ತು ಸುತ್ತಮುತ್ತ ಪ್ರದೇಶಗಳಲ್ಲಿ ಬೀಡುಬಿಟ್ಟಿದ್ದರು.

ಸಂಜೆ 6 ಗಂಟೆಗೆ ದೀಪಾರಾಧನೆ ಸಂಪ್ರದಾಯ ಮುಗಿದ ಅರ್ಧ ಗಂಟೆಯ ನಂತರ ಪೊನ್ನಂಬಲಮೇಡು ಪರ್ವತಶ್ರೇಣಿಯಲ್ಲಿ ಜ್ಯೋತಿ ಕಾಣಿಸಿಕೊಂಡಿತು. ಒಂದು ನಿಮಿಷದಲ್ಲಿ ಮೂರು ಬಾರಿ ಜ್ಯೋತಿ ಪ್ರಜ್ವಲವಾಗಿ ಉರಿಯಿತು. ಭಕ್ತರ ಹರ್ಷೋದ್ಘಾರ ಮತ್ತು 
ಅಯ್ಯಪ್ಪ ನಾಮಸ್ಮರಣೆ ಮುಗಿಲುಮುಟ್ಟಿತು.

ನಂತರ ಸಂಪ್ರದಾಯದಂತೆ ಮಕರ ಸಂಕ್ರಮಣ ಪೂಜೆ ನಡೆಯಿತು. ಪಂದಳ ಅರಮನೆಯಿಂದ ಮೆರವಣಿಗೆಯಲ್ಲಿ ಶಬರಿಮಲೆಗೆ 
ತರಲಾದ ಅಯ್ಯಪ್ಪ ಸ್ವಾಮಿಯ ಆಭರಣಗಳಿಂದ ಮೂರ್ತಿಯನ್ನು ಅಲಂಕರಿಸಲಾಗಿತ್ತು.

ಖ್ಯಾತ ಹಿನ್ನಲೆ ಗಾಯಕಿ ಪಿ.ಸುಶೀಲಾ ಅವರು ಪ್ರಾರ್ಥನೆ ಸಲ್ಲಿಸಿದರು. ಇದೇ ವೇಳೆ ಅವರಿಗೆ ಕೇರಳ ಸರ್ಕಾರದ ‘ಹರಿವರಾಸನಂ’ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಭಕ್ತರ ಸಂಖ್ಯೆ ಗಣನೀಯವಾಗಿ ಇಳಿಮುಖವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸೋಮವಾರ ಸಂಜೆ 5 ಗಂಟೆಯವರೆಗೆ ಶಬರಿಮಲೆ ತಲುಪಿದ ಭಕ್ತರ ಸಂಖ್ಯೆ 48 ಸಾವಿರದಷ್ಟಿತ್ತು. ಭಾನುವಾರ ಭೇಟಿ ನೀಡಿದ್ದ ಭಕ್ತರು ಇಲ್ಲಿಯೇ ಬಿಡಾರ ಹೂಡಿದ್ದರು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಸಂಖ್ಯೆ ತುಂಬಾ ಕಡಿಮೆ.

ವಾರ್ಷಿಕ ಪೂಜೆಗಾಗಿ ಶಬರಿಮಲೆ ಅಯ್ಯಪ್ಪ ದೇಗುಲದ ಬಾಗಿಲನ್ನು ಸುಮಾರು ಎರಡು ತಿಂಗಳ ಹಿಂದೆ ತೆರೆಯಲಾಗಿತ್ತು. ಜನವರಿ 20ರಂದು ದೇಗುಲದ ಬಾಗಿಲು ಮುಚ್ಚಲಾಗುವುದು. 19ರ ಬಳಿಕ ಭಕ್ತರಿಗೆ ಪ್ರವೇಶ ಇರುವುದಿಲ್ಲ.
 

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !