ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರು ದಶಕದಲ್ಲಿ ಇಬ್ಬರೇ ಶಾಸಕಿಯರು

ಶಿವಮೊಗ್ಗ ವಿಧಾನಸಭಾ ಕ್ಷೇತ್ರಗಳಲ್ಲಿ ಮಹಿಳೆಯರ ಪ್ರಾತಿನಿಧ್ಯ ನಗಣ್ಯ
Last Updated 17 ಏಪ್ರಿಲ್ 2018, 10:53 IST
ಅಕ್ಷರ ಗಾತ್ರ

ಶಿವಮೊಗ್ಗ: ನಾಲ್ಕು ಮುಖ್ಯಮಂತ್ರಿಗಳನ್ನು ರಾಜ್ಯಕ್ಕೆ ಕೊಡುಗೆಯಾಗಿ ನೀಡಿರುವ ಜಿಲ್ಲೆ ಶಿವಮೊಗ್ಗ. ಹಲವು ಹೋರಾಟ, ಪಕ್ಷ, ರಾಜಕೀಯ, ಸಂಘಟನೆಗಳ ತವರೂರು ಎಂಬ ಖ್ಯಾತಿಯೂ ಈ ಜಿಲ್ಲೆಗಿದೆ. ಇಂತಹ ಜಿಲ್ಲೆಯ ರಾಜಕೀಯ ಇತಿಹಾಸದಲ್ಲಿ ಈವರೆಗೆ ಕೇವಲ ಇಬ್ಬರು ಮಹಿಳೆಯರು ಮಾತ್ರವೇ ಶಾಸಕರಾಗಿ ಆಯ್ಕೆಯಾಗಿದ್ದಾರೆ.

ಶಾಸನಸಭೆಗಳಲ್ಲಿ ಮಹಿಳೆಯರ ರಾಜಕೀಯ ಸಬಲೀಕರಣ ಆಗಬೇಕು. ಅವರಿಗೆ ನ್ಯಾಯಬದ್ಧ ಪ್ರಾತಿನಿಧ್ಯ ಸಿಗಬೇಕು ಎಂಬ ಮಾತುಗಳು, ಹೋರಾಟ, ವಾದಗಳು ನಿರಂತರವಾಗಿ ನಡೆಯುತ್ತಿವೆ. ಶಿವಮೊಗ್ಗದಲ್ಲೂ ಮಹಿಳಾಪರ ಹೋರಾಟಗಳಿಗೆ ಕೊರತೆಯಿಲ್ಲ. ಆದರೆ ಜಿಲ್ಲೆಯ ಕಳೆದ 60 ವರ್ಷಗಳ ಇತಿಹಾಸ ಅವಲೋಕಿಸಿದರೆ, ವಿಧಾನಸಭೆಯಲ್ಲಿ ಮಹಿಳೆಯರ ಪ್ರಾತಿನಿಧ್ಯ ನಗಣ್ಯ.

ಶಿವಮೊಗ್ಗ ಜಿಲ್ಲೆ 7 ವಿಧಾನಸಭೆ ಕ್ಷೇತ್ರಗಳನ್ನು ಹೊಂದಿದೆ. 1957 ರಿಂದ ಈವರೆಗೆ ಹತ್ತಾರು ಚುನಾವಣೆಗಳು ಇಲ್ಲಿ ನಡೆದಿವೆ. ಅಂದಿನಿಂದ ಇಂದಿನವರೆಗೂ ಮಹಿಳೆಯರು ನಿರಂತರವಾಗಿ ಚುನಾವಣೆಗೆ ಸ್ಪರ್ಧಿಸುತ್ತಲೇ ಇದ್ದಾರೆ. ಆದರೆ ಚುನಾವಣೆ ಇತಿಹಾಸ ಪುಟದಲ್ಲಿ ಈವರೆಗೆ ಕಾಣಸಿಗುವುದು ಇಬ್ಬರು ಶಾಸಕಿಯರು ಮಾತ್ರ. ಅವರಲ್ಲಿ ಒಬ್ಬರು ರತ್ನಮ್ಮ ಮಾಧವ ರಾವ್ ಮತ್ತೊಬ್ಬರು ಶಾರದಾ ಪೂರ‍್ಯಾನಾಯ್ಕ್.

ರತ್ನಮ್ಮ ಮಾಧವರಾವ್‌ : ಜಿಲ್ಲೆಯ ಮೊದಲ ಮಹಿಳಾ ಶಾಸಕಿ ಎಂಬ ಹಿರಿಮೆ ರತ್ನಮ್ಮ ಮಾಧವರಾವ್‌ ಅವರಿಗಿದೆ. ಇವರು 1957 ರಲ್ಲಿ ಮೊದಲ ಬಾರಿಗೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾದರು. ತಮ್ಮ ಮೊದಲ ಚುನಾವಣೆಯಲ್ಲಿಯೇ 12,223 ಮತಗಳನ್ನು ಪಡೆದು ಜಯಗಳಿಸಿದ್ದರು. ನಂತರ 1962 ರ ಚುನಾವಣೆಯಲ್ಲಿಯೂ 14,081 ಮತಗಳನ್ನು ಪಡೆದು ಮರು ಆಯ್ಕೆಯಾದರು.

ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗಿ: ಸ್ವಾತಂತ್ರ್ಯ ಚಳವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿದ ಮಹಿಳೆಯರಲ್ಲಿ ರತ್ನಮ್ಮ ಮಾಧವರಾವ್‌ ಕೂಡ ಒಬ್ಬರು. ಆ ದಿನಗಳಲ್ಲಿ ಅವರು ಸ್ವಾತಂತ್ರ್ಯ ಚಳವಳಿಯ ಮುಂಚೂಣಿ ಮಹಿಳಾ ನಾಯಕಿಯಾಗಿದ್ದರು. ಪಾನ ನಿಷೇಧ ಸತ್ಯಾಗ್ರಹ ಸಂದರ್ಭದಲ್ಲಿ ಅವರು 1942 ರಲ್ಲಿ ಸೆರಮನೆ ವಾಸ ಅನುಭವಿಸಿದ್ದರು. ನಂತರ ನಡೆದ ಸ್ವಾತಂತ್ರ್ಯ ಹೋರಾಟದಲ್ಲಿ ಎರಡನೆಯ ಬಾರಿಗೆ ಅವರು ಬ್ರಿಟಿಷರಿಂದ ಜೈಲು ಶಿಕ್ಷೆ ಅನುಭವಿಸಬೇಕಾಯಿತು. ಆ ಸಮಯದಲ್ಲಿ ಅವರು ತಮ್ಮ ಒಂದೂವರೆ ತಿಂಗಳ ಮಗುವಿನೊಂದಿಗೆ ಜೈಲಿನಲ್ಲಿದ್ದರು ಎಂದು ಅವರ ಕುಟುಂಬಕ್ಕೆ ಹತ್ತಿರವಾಗಿದ್ದ ರುಕ್ಮಿಣಿ ವೇದಾವ್ಯಾಸ ‘ಪ್ರಜಾವಾಣಿ’ಯೊಂದಿಗೆ ಮಾಹಿತಿ ಹಂಚಿಕೊಂಡಿದ್ದಾರೆ.

ರಸ್ತೆಗೆ ರತ್ನಮ್ಮ ಹೆಸರು: ದೇಶಕ್ಕೆ ಸ್ವಾತಂತ್ರ್ಯ ನಂತರ ಕಾಂಗ್ರೆಸ್ ರತ್ನಮ್ಮ ಮಾಧವ ರಾವ್ ಅವರನ್ನು ಶಿವಮೊಗ್ಗದಿಂದ ನಾಮನಿರ್ದೇಶನ ಮಾಡಲು ನಿರ್ಧರಿಸಿತ್ತು. ಅವರು ಎದುರಿಸಿದ ಎರಡು ಚುನಾವಣೆಯಲ್ಲೂ ಜಯಗಳಿಸಿದರು. ನಂತರ ಅವರು ಚುನಾವಣೆ ಎದುರಿಸಲಿಲ್ಲ. ಇಂದಿಗೂ ಶಿವಮೊಗ್ಗ ನಗರದ ದುರ್ಗಿಗುಡಿಯಲ್ಲಿರುವ ರಸ್ತೆಗೆ ರತ್ನಮ್ಮ ಮಾಧವರಾವ್ ಅವರ ಹೆಸರು ಇಟ್ಟಿರುವುದು ಅವರ ಕಾರ್ಯವೈಖರಿಗೆ ಹಿಡಿದ ಕನ್ನಡಿ.

ಶಾರದಾ ಪೂರ‍್ಯಾನಾಯ್ಕ: ರತ್ನಮ್ಮ ಮಾಧವರಾವ್‌ ನಂತರ ಸುಮಾರು ಐದು ದಶಕಗಳ ಕಾಲ ಜಿಲ್ಲೆಯ ಈ ಭಾಗದ ಮಹಿಳೆಯರು ವಿಧಾನಸೌಧದ ಮೆಟ್ಟಿಲು ತುಳಿಯಲಿಲ್ಲ. ಐದು ದಶಕಗಳ ನಂತರ ಶಾರದಾ ಪೂರ‍್ಯಾನಾಯ್ಕ್ ಜಿಲ್ಲೆಯ ಎರಡನೇ ಮಹಿಳಾ ಶಾಸಕಿಯಾಗಿ ಆಯ್ಕೆಯಾದ ಹಿರಿಮೆಗೆ ಪಾತ್ರರಾಗಿದ್ದರು. 2013 ರಲ್ಲಿ ಇವರು ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದದಲ್ಲಿ ಜೆಡಿಎಸ್‌ ಪಕ್ಷದಿಂದ ಆಯ್ಕೆಯಾಗಿದ್ದರು.

ಶಾರದಾ  2013ರಲ್ಲಿ ಇಬ್ಬರು ಮಾಜಿ ಶಾಸಕರಾದ ಜಿ. ಬಸವಣ್ಯಪ್ಪ ಹಾಗೂ ಕೆ.ಜಿ. ಕುಮಾರಸ್ವಾಮಿ ಅವರ ವಿರುದ್ಧ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಇದೀಗ ಮತ್ತೆ ಕಣಕ್ಕೆ ಇಳಿದಿದ್ದಾರೆ. ಈ ಬಾರಿಯೂ ಗೆಲುವು ಸಿಕ್ಕರೆ  ರತ್ನಮ್ಮ ಮಾಧವರಾವ್‌ ಅವರ ದಾಖಲೆ ಸರಿಗಟ್ಟುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT