ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವನ್ಯಜೀವಿಗಳ ಬಾಯಾರಿಕೆಗೆ ‘ನೀರು ಗುಂಡಿ’

Last Updated 29 ಮಾರ್ಚ್ 2018, 6:28 IST
ಅಕ್ಷರ ಗಾತ್ರ

ಮುಂಡಗೋಡ: ನೀರಿಗಾಗಿ ವನ್ಯಜೀವಿಗಳು ಪರಿತಪಿಸುತ್ತಿರುವುದನ್ನು ಕಂಡ ಮುಂಡಗೋಡ ಅರಣ್ಯ ಇಲಾಖೆ, ಪ್ರಾಣಿ, ಪಕ್ಷಿಗಳ ಬಾಯಾರಿಕೆಯನ್ನು ಇಂಗಿಸಲು ಮುಂದಾಗಿದೆ. ಕಾಡಿನ ಮಧ್ಯದಲ್ಲಿ ಹಾಗೂ ಪ್ರಾಣಿಗಳು ಜಲಮೂಲ ಅರಸುತ್ತ ಬಂದು ಹೋಗುವ ಸ್ಥಳಗಳಲ್ಲಿ ಕೃತಕವಾಗಿ ನೀರಿನ ತೊಟ್ಟಿಗಳನ್ನು ನಿರ್ಮಿಸಿ, ನೀರು ತುಂಬುವ ಕೆಲಸ ಮಾಡುತ್ತಿದೆ.

ಇಲ್ಲಿಯ ಅರಣ್ಯ ವಲಯ ವ್ಯಾಪ್ತಿಯ ಸನವಳ್ಳಿ, ಚವಡಳ್ಳಿ, ಇಂದೂರ ಸೇರಿದಂತೆ ಇನ್ನಿತರ ಕಡೆಗಳಲ್ಲಿ ನೀರು ತುಂಬಿಸಿಡಲಾಗುತ್ತಿದೆ. ಕಾಡುಪ್ರಾಣಿಗಳಲ್ಲಿ ಮುಖ್ಯವಾಗಿ, ಜಿಂಕೆಗಳು ನೀರಿಗಾಗಿ ನಾಡಿಗೆ ಬಂದು ಜೀವಕಳೆದುಕೊಳ್ಳುತ್ತಿರುವ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗುತ್ತಿದೆ.

ಕಳೆದ ಕೆಲ ದಿನಗಳಿಂದ ಆಹಾರ, ನೀರು ಅರಸುತ್ತ ಜಿಂಕೆಗಳು ನಾಡಿನ ಸನಿಹ ಬಂದು ನಾಯಿಗಳ ದಾಳಿಗೆ ಬಲಿಯಾಗುತ್ತಿವೆ. ಜಿಂಕೆಗಳ ರಕ್ಷಣೆಗೆ ಮುಂದಾಗಿರುವ ಅರಣ್ಯ ಇಲಾಖೆ ಸಿಬ್ಬಂದಿ, ಬತ್ತಿರುವ ಕೆರೆ–ಕಟ್ಟೆಗಳ ಸನಿಹ ಇಲ್ಲವೇ ಜಿಂಕೆಗಳು ಗುಂಪು, ಗುಂಪಾಗಿ ಬಂದು ಹೋಗುವ ಸ್ಥಳಗಳಲ್ಲಿ ಕೃತಕವಾಗಿ ನೀರಿನ ಗುಂಡಿಗಳನ್ನು ಮಾಡಿ, ಟ್ಯಾಂಕರ್‌ ಮೂಲಕ ನೀರು ತುಂಬಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.

‘ಇಂದೂರ ಉಪವಲಯ ವ್ಯಾಪ್ತಿಯಲ್ಲಿ ಪ್ರಾಣಿ, ಪಕ್ಷಿಗಳಿಗೆ ಅನುಕೂಲವಾಗಲೆಂದು ನೀರಿನ ಗುಂಡಿಗಳನ್ನು ಮಾಡಲಾಗುತ್ತಿದೆ. ಸದ್ಯ ಬಸಾಪುರದಲ್ಲಿ ಒಂದು ನೀರಿನ ಗುಂಡಿ ಮಾಡಲಾಗಿದ್ದು, ಮುಂದಿನ ದಿನಗಳಲ್ಲಿ ಇಂದೂರ, ಕೊಪ್ಪ, ನಂದಿಗಟ್ಟಾ ಅರಣ್ಯ ಪ್ರದೇಶಗಳಲ್ಲಿ ಗುಂಡಿಗಳನ್ನು ನಿರ್ಮಿಸಲಾಗುವುದು. ಪ್ರಾಣಿಗಳು ನೀರಿಗಾಗಿ ತೊಂದರೆ ಅನುಭವಿಸಬಾರದೆಂದು ಇಲಾಖೆ ವತಿಯಿಂದ ಗುಂಡಿಗಳಿಗೆ ನೀರು ತುಂಬಿಸಲಾಗುತ್ತಿದೆ’ ಎಂದು ಇಂದೂರ ಉಪವಲಯ ಅರಣ್ಯಾಧಿಕಾರಿ ಬಸವರಾಜ ಪೂಜಾರಿ ಹೇಳಿದರು.

‘ಅರಣ್ಯ ಪ್ರದೇಶದ ಕೆಲವೆಡೆ ಕೆರೆ, ಕಟ್ಟೆಗಳು ಬತ್ತಿರುವುದರಿಂದ ಕಾಡುಪ್ರಾಣಿಗಳು ನೀರಿಗಾಗಿ ಗ್ರಾಮಗಳ ಸನಿಹಕ್ಕೆ ಬರುತ್ತಿವೆ. ಇದನ್ನು ಹೋಗಲಾಡಿಸಲು ಕಳೆದ ವರ್ಷ ಮಾಡಿರುವ ಕೃತಕ ಗುಂಡಿಗಳನ್ನು ದುರಸ್ತಿಗೊಳಿಸಿ ನೀರು ತುಂಬಿಸುವುದು ಹಾಗೂ ಹೊಸದಾಗಿ ಸಿಮೆಂಟ್‌ ರಿಂಗ್‌ಗಳನ್ನು ಬಳಸಿ ನೀರು ತುಂಬಿಸಲು ಇಲಾಖೆಮುಂದಾಗಿದೆ. ಸದ್ಯ ಸನವಳ್ಳಿ ಅರಣ್ಯ ಪ್ರದೇಶದಲ್ಲಿ ನೀರು ತುಂಬಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ’ ಎಂದು ವಲಯ ಅರಣ್ಯಾಧಿಕಾರಿ ಸುರೇಶ ಕುಲ್ಲೋಳ್ಳಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಪ್ರತಿ ಉಪವಲಯ ವ್ಯಾಪ್ತಿಯಲ್ಲಿ 2–3 ಗುಂಡಿಗಳನ್ನು ಮಾಡಿ ನೀರು ತುಂಬಿಸಲಾಗುವುದು. ಟ್ಯಾಂಕರ್‌ ಹೋಗಲು ಸಾಧ್ಯವಾಗದಿದ್ದರೇ ಬಕೆಟ್‌, ಕ್ಯಾನ್‌ಗಳಲ್ಲಿ ಕೊಂಡೊಯ್ದು, ಗುಂಡಿ ತುಂಬಿಸಲಾಗುತ್ತದೆ. ಗುಂಡಿಗಳಲ್ಲಿರುವ ನೀರು ಎಷ್ಟು ದಿನಕ್ಕೆ ಖಾಲಿಯಾಗುತ್ತದೆ ಎಂಬುದನ್ನು ನೋಡಿ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದು ಅವರು ಹೇಳಿದರು.

– ಶಾಂತೇಶ ಬೆನಕನಕೊಪ್ಪ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT