ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಂಚದ ಪಡೆದ ಹಣ ವಾಪಸ್‌ ನೀಡುವಂತೆ ಪಕ್ಷದ ಕಾರ್ಯಕರ್ತರಿಗೆ ಮಮತಾ ಸೂಚನೆ

ಇಕ್ಕಟ್ಟಿನಲ್ಲಿ ಜನಪ್ರತಿನಿಧಿಗಳು, ಪಕ್ಷಕ್ಕೂ ಹಿನ್ನಡೆ ಸಂಭವ
Last Updated 26 ಜೂನ್ 2019, 2:52 IST
ಅಕ್ಷರ ಗಾತ್ರ

ಕೋಲ್ಕತ್ತ: ಸರ್ಕಾರಿ ಯೋಜನೆಗಳನ್ನು ಜನರಿಗೆ ತಲುಪಿಸಲು ಅವರಿಂದ ಪಡೆದ ‘ಕಟ್‌ಹಣ’ವನ್ನು (ಲಂಚದ ರೂಪದಲ್ಲಿ ಪಡೆದ ಹಣ) ಮರಳಿಸುವಂತೆ ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಪಕ್ಷದ ಕಾರ್ಯಕರ್ತರಿಗೆ ಸೂಚನೆ ನೀಡಿದ್ದಾರೆ. ಈ ಸೂಚನೆ ಕಾರ್ಯಕರ್ತರನ್ನು ಇಕ್ಕಟ್ಟಿಗೆ ಸಿಲುಕಿಸಿರುವುದಲ್ಲದೆ, ಟಿಎಂಸಿಗೆ ಮುಳುವಾಗುವ ಲಕ್ಷಣವೂ ಗೋಚರಿಸಿದೆ.

ವಿವಿಧ ಸ್ಥಳೀಯ ಸಂಸ್ಥೆಗಳ ಟಿಎಂಸಿ ಸದಸ್ಯರ ಸಭೆಯನ್ನುಮಮತಾ ಅವರು ಜೂನ್ 18ರಂದು ಆಯೋಜಿಸಿದ್ದರು. ಅಲ್ಲಿ ಈ ಸೂಚನೆ ನೀಡಿದ್ದರು. ಪಕ್ಷದೊಳಗಿನಿಂದ ಭ್ರಷ್ಟಾಚಾರವನ್ನು ಕಿತ್ತೊಗೆಯುವುದು ಅವರ ಉದ್ದೇಶವಾಗಿತ್ತು.

ರಾಜ್ಯದಲ್ಲಿ ಬಲಗೊಳ್ಳುತ್ತಿರುವ ಬಿಜೆಪಿಗೆ ತಡೆ ಒಡ್ಡಿ, ಟಿಎಂಸಿ ಬೆಂಬಲಿಗರ ಸಂಖ್ಯೆಯನ್ನು ಹೆಚ್ಚಿಸುವ ಉದ್ದೇಶವೂ ಇದರ ಹಿಂದೆ ಇತ್ತು. ಆದರೆ, ಟಿಎಂಸಿ ಬೆಂಬಲಿಗರಿಗೆ ನುಂಗಲೂ ಆಗದ ಉಗುಳಲೂ ಆಗದ ಸ್ಥಿತಿ ಈಗ ಉಂಟಾಗಿದೆ. ಮಮತಾ ಅವರ ಸೂಚನೆ ಹೊರಬಿದ್ದ ಬಳಿಕ, ‘ಜನಪ್ರತಿನಿಧಿಗಳು ಲಂಚ ಪಡೆದೇ ಸೌಲಭ್ಯಗಳನ್ನು ಒದಗಿಸುತ್ತಾರೆ’ ಎಂಬುದು ಸಾಬೀತಾದಂತಾಗಿ, ಅಲ್ಲಲ್ಲಿ ಪ್ರತಿಭಟನೆಗಳು ಆರಂಭವಾಗಿವೆ. ಇಂಥ ಕೆಲವು ಪ್ರತಿಭಟನೆಗಳಿಗೆ ಬಿಜೆಪಿಯ ಬೆಂಬಲವೂ ದೊರೆಯುತ್ತಿದೆ.

ಪಕ್ಷದ ಅಧ್ಯಕ್ಷೆಯ ಸೂಚನೆಯನ್ನು ಪಾಲಿಸಿ, ಲಂಚದ ರೂಪದಲ್ಲಿ ಪಡೆದ ಹಣವನ್ನು ಮರಳಿಸಿದರೆ, ಮುಂದಿನ ಚುನಾವಣೆಯಲ್ಲಿ ಗೆದ್ದುಬರಲು ಸಾಧ್ಯವಾಗುವುದಿಲ್ಲ. ಮಾತ್ರವಲ್ಲ ‘ಲಂಚ ಪಡೆದಿದ್ದೇವೆ’ ಎಂದು ಸಾರ್ವಜನಿಕ
ವಾಗಿ ಒಪ್ಪಿಕೊಂಡಂತಾಗುತ್ತದೆ ಎಂಬುದು ಸದಸ್ಯರ ಚಿಂತೆಯಾಗಿದೆ. ಪಕ್ಷದ ಅಧ್ಯಕ್ಷರ ಸೂಚನೆ ಪಾಲಿಸುವುದು ಮತ್ತು ಸಾರ್ವಜನಿಕರ ದೂಷಣೆಗೆ ಒಳಗಾಗುವುದರಿಂದ ತಪ್ಪಿಸಿಕೊಳ್ಳಲು ಜನಪ್ರತಿನಿಧಿಗಳಲ್ಲಿ ಹಲವರು ಬಿಜೆಪಿ ಕಡೆಗೆ ವಾಲುವ ಸಾಧ್ಯತೆ ದಟ್ಟವಾಗುತ್ತಿದೆ. ಟಿಎಂಸಿಯ ಅಸಂತುಷ್ಟ ನಾಯಕರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ಕಾಯ್ದು ಕುಳಿತಿರುವ ಬಿಜೆಪಿ ಇವರೆಲ್ಲರನ್ನೂ ಅಪ್ಪಿಕೊಳ್ಳುವ ಸಾಧ್ಯತೆ ಇಲ್ಲದಿಲ್ಲ.

ಲಂಚ ಪಡೆಯುವುದು ಅಥವಾ ಸುಲಿಗೆಯು ಐಪಿಸಿ ಸೆಕ್ಷನ್‌ 384 ಹಾಗೂ 386ರ ಅಡಿ ಜಾಮೀನು ಪಡೆಯಲಾಗದಂಥ ಅಪರಾಧ. ಯಾವುದೇ ಜನಪ್ರತಿನಿಧಿಯ ವಿರುದ್ಧ ಲಂಚ ಪಡೆದ ದೂರು ಬಂದರೆ ಸೆಕ್ಷನ್‌ 409ರ (ವಂಚನೆ) ಅಡಿಯೂ ದೂರು ದಾಖಲಿಸಬೇಕು ಎಂದು ಸರ್ಕಾರವು ಪೊಲೀಸರಿಗೆ ಸೂಚನೆ ನೀಡಿದೆ. ಹೀಗಿರುವಾಗ ಸದಸ್ಯರು ಮಮತಾ ಅವರ ಸೂಚನೆಯನ್ನು ತಿರಸ್ಕರಿಸುವ ಸಾಧ್ಯತೆಯೇ ಹೆಚ್ಚು. ‘ನಮಗೆ ಮಾತ್ರ ಯಾಕೆ ಇಂಥ ಸೂಚನೆ ನೀಡಲಾಗುತ್ತಿದೆ? ಪಕ್ಷದ ಹಿರಿಯ ನಾಯಕರಿಗೂ ಈ ನಿಯಮವನ್ನು ಯಾಕೆ ಅನ್ವಯಿಸಿಲ್ಲ’ ಎಂದು ಅವರು ಮಮತಾ ಅವರನ್ನು ಪ್ರಶ್ನಿಸಲೂಬಹುದು.

ಪಕ್ಷದೊಳಗಿನ ಈ ಎಲ್ಲ ಬೆಳವಣಿಗೆಗಳಿಂದ ಉಂಟಾದ ಮುಜುಗರವನ್ನು ತಪ್ಪಿಸಿಕೊಳ್ಳಲು ಪಕ್ಷವು, ‘ಟಿಎಂಸಿಯ ಶೇ 99.99ರಷ್ಟು ಕಾರ್ಯಕರ್ತರು ಪ್ರಾಮಾಣಿಕರು’ ಎಂಬ ಹೇಳಿಕೆಯನ್ನು ಇತ್ತೀಚೆಗೆ ನೀಡಬೇಕಾಯಿತು.

ಅದೇನೇ ಇದ್ದರೂ, ಟಿಎಂಸಿ ವಿರುದ್ಧ ಹೋರಾಡಲು ಬಿಜೆಪಿಗೆ ಈಗ ಹೊಸ ಅಸ್ತ್ರವೊಂದು ಲಭಿಸಿದಂತಾಗಿದೆ. ಈಗಾಗಲೇ ಆ ಪಕ್ಷ ರಾಜ್ಯದ ವಿವಿಧ ಕಡೆಗಳಲ್ಲಿ ಪ್ರತಿಭಟನೆಗಳನ್ನು ಆರಂಭಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT