ಮಂಗಳವಾರ, ಸೆಪ್ಟೆಂಬರ್ 17, 2019
24 °C

ಚಾಕು ಹಿಡಿದು ಸಂಸತ್ ಭವನ ಪ್ರವೇಶಿಸಲು ಯತ್ನಿಸಿದ ವ್ಯಕ್ತಿಯ ಬಂಧನ

Published:
Updated:

ನವದೆಹಲಿ: ಚಾಕು ಹಿಡಿದುಕೊಂಡು ಸಂಸತ್ ಭವನ ಪ್ರವೇಶಿಸಲು ಯತ್ನಿಸಿದ ವ್ಯಕ್ತಿಯೊಬ್ಬನನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.

ಬಂಧಿತನನ್ನು ದೆಹಲಿಯ ಲಕ್ಷ್ಮೀನಗರ ಪ್ರದೇಶದ ಸಾಗರ್ (26) ಎಂದು ಗುರುತಿಸಲಾಗಿದೆ. ಈತ ಬೆಳಿಗ್ಗೆ ಸುಮಾರು 10.45ರ ಸುಮಾರಿಗೆ ಚಾಕು ಹಿಡಿದುಕೊಂಡು ಸಂಸತ್‌ ಭವನದ 1ನೇ ನಂಬರ್‌ ಗೇಟ್ ಮೂಲಕ ಒಳ ಪ್ರವೇಶಿಸಲು ಯತ್ನಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

‘ಸಂಸತ್ ಒಳ ಪ್ರವೇಶಿಸಲು ಯತ್ನಿಸುತ್ತಿದ್ದಂತೆ ಅಲ್ಲಿನ ಸಿಬ್ಬಂದಿ ಆತನನ್ನು ವಶಕ್ಕೆ ಪಡೆದು ಪೊಲೀಸರಿಗೆ ಹಸ್ತಾಂತರಿಸಿದರು. ಈ ಕೃತ್ಯದಲ್ಲಿ ಭದ್ರತಾ ಲೋಪ ಕಂಡುಬಂದಿಲ್ಲ’ ಎಂದು ನವದೆಹಲಿಯ ಡಿಸಿಪಿ ಈಶ್ ಸಿಂಘಲ್ ಹೇಳಿದ್ದಾರೆ.

ಆರೋಪಿಯು ಮೇಲ್ನೋಟಕ್ಕೆ ಮಾನಸಿಕ ಅಸ್ವಸ್ಥನಂತೆ ಕಾಣಿಸುತ್ತಿದ್ದಾನೆ. ವಿಶೇಷ ದಳ ಮತ್ತು ಪೊಲೀಸರು ಜಂಟಿಯಾಗಿ ಆತನ ವಿಚಾರಣೆ ನಡೆಸುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.

Post Comments (+)