ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಡವರಿಗೆ ಹಣ, ಕಾಂಗ್ರೆಸ್‌ ಪಣ

ಅನ್ನದಾತ, ಬಡವರತ್ತ ಕಾಂಗ್ರೆಸ್‌ನ ಭರವಸೆಗಳ ನೋಟ * ಬಡತನ ನಿರ್ಮೂಲನೆ ಪ‍್ರಣಾಳಿಕೆ/
Last Updated 2 ಏಪ್ರಿಲ್ 2019, 19:58 IST
ಅಕ್ಷರ ಗಾತ್ರ

ನವದೆಹಲಿ: ‘ದ್ವೇಷಕ್ಕೆ ಬದಲಾಗಿ ಸಾಮರಸ್ಯವನ್ನು ಆಯ್ಕೆ ಮಾಡಿಕೊಳ್ಳಿ’ ಎಂದು ಮತದಾರರನ್ನು ಕೋರಿರುವ ಕಾಂಗ್ರೆಸ್‌ ಪಕ್ಷದ ಲೋಕಸಭಾ ಚುನಾವಣೆಯ ಪ್ರಣಾಳಿಕೆಯು 2030ರ ಹೊತ್ತಿಗೆ ದೇಶದಲ್ಲಿನ ಬಡತನವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವ ಭರವಸೆ ಕೊಟ್ಟಿದೆ.

50 ಪುಟಗಳ ಪ್ರಣಾಳಿಕೆಯನ್ನು ಪಕ್ಷದ ಅಧ್ಯಕ್ಷ ರಾಹುಲ್‌ ಗಾಂಧಿ ಬಿಡುಗಡೆ ಮಾಡಿದರು. ಹಿರಿಯ ಮುಖಂಡರಾದ ಮನಮೋಹನ್‌ ಸಿಂಗ್‌, ಸೋನಿಯಾ ಗಾಂಧಿ ಉಪಸ್ಥಿತರಿದ್ದರು.

ರಾಹುಲ್‌ ಅವರು ಈಗಾಗಲೇ ಹೇಳಿದ್ದ ‘ಕಡುಬಡವರಿಗೆ ಕನಿಷ್ಠ ಆದಾಯ ಖಾತರಿ ಯೋಜನೆ– ನ್ಯಾಯ್‌’ ಪ್ರಣಾಳಿಕೆಯಲ್ಲಿ ಸ್ಥಾನ ಪಡೆದುಕೊಂಡಿದೆ. ರೈತರ ಸಂಕಷ್ಟ ಪರಿಹಾರದ ಬಗ್ಗೆ ಪ್ರಣಾಳಿಕೆಯಲ್ಲಿ ಭರವಸೆಗಳನ್ನು ಕೊಡಲಾಗಿದೆ. ಪ್ರತ್ಯೇಕ ಕೃಷಿ ಬಜೆಟ್‌ ಅಂತಹ ಕ್ರಮಗಳಲ್ಲಿ ಒಂದು. ‘ಸ್ಥಗಿತ’ಗೊಂಡಿರುವ ಅರ್ಥ ವ್ಯವಸ್ಥೆಗೆ ಮರುಜೀವ ನೀಡುವ ಉದ್ದೇಶದ ಕಾರ್ಯಕ್ರಮಗಳೂ ಪ್ರಣಾಳಿಕೆಯಲ್ಲಿ ಇವೆ.

‘ಕಾಂಗ್ರೆಸ್‌ ಮಾಡಿ ತೋರಿಸಲಿದೆ’ ಎಂಬುದು ಪ್ರಣಾಳಿಕೆಯ ಶೀರ್ಷಿಕೆ. ನಿರುದ್ಯೋಗ, ಅರ್ಥವ್ಯವಸ್ಥೆ ಸ್ಥಗಿತ ಮತ್ತು ಕೃಷಿ ಕ್ಷೇತ್ರದ ಸಂಕಷ್ಟಗಳು ದೇಶವನ್ನು ಕಾಡುತ್ತಿವೆ ಎಂದು ಲೋಕಸಭೆ ಚುನಾವಣೆ ಘೋಷಣೆಗೆ ಮೊದಲೇ ಕಾಂಗ್ರೆಸ್‌ ಪಕ್ಷ ಪ್ರತಿಪಾದಿಸಲು ಆರಂಭಿಸಿತ್ತು. ಆದರೆ, ರಾಷ್ಟ್ರೀಯ ಭದ್ರತೆಯತ್ತ ಜನರ ಗಮನವನ್ನು ಸೆಳೆಯುವಲ್ಲಿ ಬಿಜೆಪಿ ಯಶಸ್ವಿಯಾಗಿದೆ. ಹಾಗಾಗಿ, ರಾಷ್ಟ್ರೀಯ ಸುರಕ್ಷತೆಯ ವಿಚಾರಗಳಿಂದ ತಳಮಟ್ಟದ ಸಮಸ್ಯೆಗಳತ್ತ ಜನರ ಗಮನವನ್ನು ತಿರುಗಿಸುವ ಪ್ರಯತ್ನವನ್ನು ಪ್ರಣಾಳಿಕೆ ಮೂಲಕ ಕಾಂಗ್ರೆಸ್‌ ಮಾಡಿದೆ.

‘ಬಡತನದ ವಿರುದ್ಧ ಸಮರ, ₹72 ಸಾವಿರ’ ಎಂಬ ಹೊಸ ಘೋಷಣೆಯೊಂದನ್ನೂ ಕಾಂಗ್ರೆಸ್‌ ರೂಪಿಸಿದೆ.

ದೇಶದಲ್ಲಿ ನಿರುದ್ಯೋಗದ ಪ್ರಮಾಣ ಶೇ 6.1ಕ್ಕೆ ಏರಿದೆ. ಇದು 45 ವರ್ಷಗಳಲ್ಲಿಯೇ ಅತಿ ಹೆಚ್ಚು ಎಂಬುದನ್ನು ಮುಂದಿಟ್ಟುಕೊಂಡಿರುವ ಪ್ರಣಾಳಿಕೆಯು, ಕೇಂದ್ರ ಸರ್ಕಾರದ ಸಂಸ್ಥೆಗಳಲ್ಲಿ ಖಾಲಿ ಇರುವ ನಾಲ್ಕು ಲಕ್ಷ ಹುದ್ದೆಗಳನ್ನು ಮುಂದಿನ ಮಾರ್ಚ್‌ನೊಳಗೆ ಭರ್ತಿ ಮಾಡುವುದಾಗಿ ಹೇಳಿದೆ. ರಾಜ್ಯಗಳಲ್ಲಿ ಖಾಲಿ ಇರುವ 20 ಲಕ್ಷ ಹುದ್ದೆಗಳನ್ನು ಭರ್ತಿ ಮಾಡುವಂತೆ ರಾಜ್ಯ ಸರ್ಕಾರಗಳ ಮನವೊಲಿಸಲಾಗುವುದು ಎಂದೂ ಹೇಳಿದೆ.

ಜನರು ಮತ್ತು ವಿವಿಧ ವಲಯಗಳ ತಜ್ಞರ ಜತೆಗೆ ವ್ಯಾಪಕ ಸಮಾಲೋಚನೆ ಬಳಿಕ ಪ್ರಣಾಳಿಕೆ ಸಿದ್ಧವಾಗಿದೆ ಎಂದು ರಾಹುಲ್‌ ತಿಳಿಸಿದರು.

ಮಹತ್ವಾಕಾಂಕ್ಷೆಯ ‘ನ್ಯಾಯ’: ಕಡು ಬಡವರಿಗೆ ಕನಿಷ್ಠ ಆದಾಯದ ಖಾತರಿ ನೀಡುವ ‘ನ್ಯಾಯ’ ಯೋಜನೆಯು ಪ್ರಣಾಳಿಕೆಯಲ್ಲಿರುವ ಅತ್ಯಂತ ಮಹತ್ವಾಕಾಂಕ್ಷಿ ಕಾರ್ಯಕ್ರಮ ಎಂದು ಮಾಧ್ಯಮ ಪ್ರತಿನಿಧಿಗಳ ಜತೆಗಿನ ಸಂವಾದದಲ್ಲಿ ರಾಹುಲ್‌ ಹೇಳಿದ್ದಾರೆ.

ಕಡುಬಡ ಕುಟುಂಬಗಳ ಬ್ಯಾಂಕ್‌ ಖಾತೆಗೆ ವರ್ಷಕ್ಕೆ ₹72 ಸಾವಿರ ಜಮೆ ಮಾಡಲಾಗುವುದು. ಸ್ಥಗಿತಗೊಂಡಿರುವ ಅರ್ಥವ್ಯವಸ್ಥೆಗೆ ಮರುಜೀವ ನೀಡಲು ಇದೊಂದು ‘ಶಾಕ್‌ ಥೆರಪಿ’ಯಂತೆ ಕೆಲಸ ಮಾಡಲಿದೆ ಎಂದರು.

ಇದು ಕಾರ್ಯಸಾಧ್ಯವಲ್ಲದ ಭರವಸೆ ಮತ್ತು ಆರ್ಥಿಕತೆ ಮೇಲೆ ಒತ್ತಡ ಹಾಕಲಿದೆ ಎಂಬ ಬಿಜೆಪಿಯ ಟೀಕೆಯನ್ನು ರಾಹುಲ್‌ ಅಲ್ಲಗಳೆದರು.

‘ಸಾಲ ಮನ್ನಾ ಕಾರ್ಯಕ್ರಮದ ಬಗ್ಗೆಯೂ ಬಿಜೆಪಿ ಹೀಗೆಯೇ ಹೇಳಿತ್ತು. ಆದರೆ, ರಾಜಸ್ಥಾನ, ಛತ್ತೀಸಗಡ ಮತ್ತು ಮಧ್ಯಪ್ರದೇಶದಲ್ಲಿ ಅಧಿಕಾರಕ್ಕೆ ಬಂದು ಎರಡೇ ದಿನದಲ್ಲಿ ಸಾಲ ಮನ್ನಾ ಮಾಡಿದ್ದೇವೆ. ಇಂತಹ ಕಾರ್ಯಕ್ರಮ ಬಿಜೆಪಿಗೆ ಕಾರ್ಯಸಾಧ್ಯವಲ್ಲ, ಆದರೆ, ಕಾಂಗ್ರೆಸ್‌ಗೆ ಸಾಧ್ಯ’ ಎಂದು ರಾಹುಲ್‌ ಹೇಳಿದರು.

‘ನಾನು ₹15 ಲಕ್ಷದ ಬಗ್ಗೆ ಮಾತನಾಡುವುದಿಲ್ಲ. ಬದಲಿಗೆ ವರ್ಷಕ್ಕೆ ₹72 ಸಾವಿರ ಕೊಡುವ ಬಗ್ಗೆ ಮಾತನಾಡುತ್ತೇನೆ. ಐದು ವರ್ಷದಲ್ಲಿ ₹3.6 ಲಕ್ಷ ನೀಡುವ ಬಗ್ಗೆ ಹೇಳುತ್ತಿದ್ದೇನೆ’ ಎಂದೂ ಅವರು ಹೇಳಿದ್ದಾರೆ.

ಭರವಸೆಯ ಪಟ್ಟಿಯ ಹೂರಣ

ಜಿಎಸ್‌ಟಿ ಸರಳೀಕರಣ: ತೆರಿಗೆ ದರ ಇಳಿಕೆ, ರಫ್ತು ಮೇಲೆ ಪೂರ್ಣ ತೆರಿಗೆ ವಿನಾಯಿತಿ, ಅಗತ್ಯ ವಸ್ತುಗಳಿಗೆ ವಿನಾಯಿತಿ

ಶಿಕ್ಷಣ: ಒಂದರಿಂದ 12ನೇ ತರಗತಿವರೆಗೆ ಕಡ್ಡಾಯ ಮತ್ತು ಉಚಿತ ಶಿಕ್ಷಣ

ದೇಶದ್ರೋಹ ಕಾಯ್ದೆ ರದ್ದು: ಭಾರತೀಯ ದಂಡ ಸಂಹಿತೆಯಲ್ಲಿ ದೇಶದ್ರೋಹವನ್ನು ಅಪರಾಧ ಎಂದು ವ್ಯಾಖ್ಯಾನಿಸುವ 124 ಎ ಸೆಕ್ಷನ್‌ ರದ್ದು ಮಾಡುವ ಭರವಸೆ. ಈ ಕಾಯ್ದೆ ದುರ್ಬಳಕೆ ಆಗುತ್ತಿದೆ ಮತ್ತು ತರುವಾಯ ಬಂದ ಕಾನೂನುಗಳಿಂದಾಗಿ ಅಪ್ರಸ್ತುತವೂ ಆಗಿದೆ

ಸಿಆರ್‌ಜಡ್‌ ತಿದ್ದುಪಡಿ: ಹೊಸದಾಗಿ ಜಾರಿಗೆ ತಂದ ಕರಾವಳಿ ನಿಯಂತ್ರಣ ವಲಯ (ಸಿಆರ್‌ಜಡ್‌) ನಿಯಮಗಳನ್ನು ರದ್ದು ಮಾಡಲಾಗುವುದು. ಕಡಲ ಕಿನಾರೆಯಲ್ಲಿ ವಾಣಿಜ್ಯ ಚಟುವಟಿಕೆಗಳಿಗೆ ಅವಕಾಶ ಕೊಡುವಂತೆ ನಿಯಮಗಳಿಗೆ ತಿದ್ದುಪಡಿ ಮಾಡಲಾಗಿದೆ ಎಂದು ಕಾಂಗ್ರೆಸ್‌ ಹೇಳಿದೆ

ಸಾಲ ಬಾಕಿ ಅಪರಾಧವಲ್ಲ: ರೈತರ ಸಾಲ ಬಾಕಿಯನ್ನು ಅಪರಾಧ ಪ್ರಕರಣ ಎಂಬುದರ ಬದಲಿಗೆ ಸಿವಿಲ್‌ ಪ್ರಕರಣವಾಗಿ ಪರಿಗಣನೆ

ನರೇಗಾ: ವರ್ಷಕ್ಕೆ ಕೆಲಸದ ದಿನಗಳು ನೂರರಿಂದ 150ಕ್ಕೆ ಏರಿಕೆ

ಬಜೆಟ್‌: ರೈಲ್ವೆ ಬಜೆಟ್‌ ಇದ್ದ ರೀತಿಯಲ್ಲಿಯೇ ಕೃಷಿಗಾಗಿ ಪ್ರತ್ಯೇಕ ಬಜೆಟ್‌

**

ಅಪಾಯಕಾರಿ, ಅನುಷ್ಠಾನ ಅಸಾಧ್ಯ: ಬಿಜೆಪಿ

ಕಾಂಗ್ರೆಸ್‌ ಪಕ್ಷದ ಪ್ರಣಾಳಿಕೆ ‘ಅಪಾಯಕಾರಿ ಮತ್ತು ಅನುಷ್ಠಾನಕ್ಕೆ ಅಸಾಧ್ಯವಾದುದು’. ದೇಶವನ್ನು ಛಿದ್ರಗೊಳಿಸುವ ಗುರಿಯನ್ನು ಇದು ಹೊಂದಿದೆ. ರಾಹುಲ್‌ ಗಾಂಧಿ ಅವರ ‘ತುಕ್ಡೆ ತುಕ್ಡೆ ಗ್ಯಾಂಗ್‌’ ಈ ಪ್ರಣಾಳಿಕೆಯನ್ನು ಸಿದ್ಧಪಡಿಸಿದೆ ಎಂದು ಬಿಜೆಪಿ ಹರಿಹಾಯ್ದಿದೆ.

ದೇಶದ್ರೋಹ ಕಾಯ್ದೆ ರದ್ದತಿಯೂ ಸೇರಿ ಕಾಂಗ್ರೆಸ್‌ ಪಕ್ಷ ನೀಡಿರುವ ಭರವಸೆಗಳಿಗೆ ಒಂದು ಮತವೂ ಬರುವುದಿಲ್ಲ ಎಂದು ಬಿಜೆಪಿ ಮುಖಂಡ ಅರುಣ್‌ ಜೇಟ್ಲಿ ಹೇಳಿದ್ದಾರೆ.

ದೇಶದ್ರೋಹ ಕಾನೂನನ್ನು ಬದಲಾಯಿಸುವ ಧೈರ್ಯವನ್ನು ಹಿಂದೆ ಪ್ರಧಾನಿಗಳಾಗಿದ್ದ ಜವಾಹರಲಾಲ್‌ ನೆಹರೂ, ಇಂದಿರಾ ಗಾಂಧಿ ಮತ್ತು ಮನಮೋಹನ್‌ ಸಿಂಗ್‌ ಅವರೇ ತೋರಿಲ್ಲ. ಪ್ರಣಾಳಿಕೆಯಲ್ಲಿ ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ವಿಚಾರ ಇದೆ. ವಿಚಾರಗಳ ಬಗ್ಗೆ ತಿಳಿವಳಿಕೆಯೇ ಇಲ್ಲದ ಕಪಟ ಮತ್ತು ಸುಳ್ಳು ಭರವಸೆಗಳಿವೆ. ಇದೊಂದು ಬೇಜವಾಬ್ದಾರಿ ಪ್ರಣಾಳಿಕೆ. ಕಾಂಗ್ರೆಸ್‌ ಸೋಲುವುದು ಖಚಿತ. ಹಾಗಾಗಿ, ಇದು ಎಂದಿಗೂ ಜಾರಿಗೆ ಬಾರದು ಎಂದು ಜೇಟ್ಲಿ ಅಭಿಪ್ರಾಯಪಟ್ಟಿದ್ದಾರೆ.

ಸಶಸ್ತ್ರ ಪಡೆಗಳ (ವಿಶೇಷಾಧಿಕಾರ) ಕಾಯ್ದೆಗೆ ತಿದ್ದುಪಡಿ ತರುವ ವಿಚಾರವು ರಾಷ್ಟ್ರೀಯ ಭದ್ರತೆಯಲ್ಲಿ ಮಾಡಿಕೊಳ್ಳುವ ರಾಜಿ. ಯೋಧರಿಗೆ ಹುತಾತ್ಮ ಸ್ಥಾನ ಕೊಡಬೇಕು ಎಂದು ಕಾಂಗ್ರೆಸ್‌ ಹಿಂದೆ ಒತ್ತಾಯಿಸಿತ್ತು. ಈಗ, ಅವರ ಮೇಲೆ ಪ್ರಕರಣ ದಾಖಲಿಸಬೇಕು ಎನ್ನುತ್ತಿದೆ. ದೇಶಕ್ಕಾಗಿ ಪ್ರಾಣ ತೆತ್ತವರ ಮೇಲೆ ಭಯೋತ್ಪಾದಕರ ಸಂಬಂಧಿಕರ ಕುಮ್ಮಕ್ಕಿನಂತೆ ಪ್ರಕರಣ ದಾಖಲಿಸಲು ಕಾಂಗ್ರೆಸ್‌ ಮುಂದಾಗಿದೆ ಎಂದು ಅವರು ಆರೋಪಿಸಿದ್ದಾರೆ.

**

ಪ್ರಣಾಳಿಕೆಯಲ್ಲಿ ನಿಜ ಇರಬೇಕು ಎಂಬ ಸ್ಪಷ್ಟ ಸೂಚನೆ ಕೊಟ್ಟಿದ್ದೆ. ಪ್ರಧಾನಿ ಪ್ರತಿದಿನವೂ ಸುಳ್ಳುಹೇಳುತ್ತಿರುವುದನ್ನು ಕಂಡಿದ್ದೇವೆ. ಹಾಗಾಗಿ ಪ್ರಣಾಳಿಕೆಯಲ್ಲಿ ಸುಳ್ಳಿನ ಒಂದೇ ಒಂದು ಅಂಶ ಇರುವುದನ್ನು ಬಯಸುವುದಿಲ್ಲ

ರಾಹುಲ್‌ ಗಾಂಧಿ, ಕಾಂಗ್ರೆಸ್‌ ಅಧ್ಯಕ್ಷ

**

ಅನುಷ್ಠಾನ ಸಾಧ್ಯವಿಲ್ಲದ ಮತ್ತು ಅಪಾಯಕಾರಿಯಾದ ಭರವಸೆಗಳನ್ನು ಅವರು (ರಾಹುಲ್‌)ಅಜ್ಞಾನದಿಂದಾಗಿ ಕೊಡುತ್ತಿದ್ದಾರೆ. ಇದಕ್ಕೆ ಮಾರುಹೋಗುವ ಮನಸ್ಥಿತಿಯಲ್ಲಿ ದೇಶ ಇಲ್ಲ

- ಅರುಣ್‌ ಜೇಟ್ಲಿ, ಕೇಂದ್ರ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT