ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ನೇತೃತ್ವದ ಸರ್ಕಾರವನ್ನು ಟೀಕಿಸಿದ ಪತ್ರಕರ್ತನಿಗೆ ಒಂದು ವರ್ಷ ಜೈಲು

ಮಣಿಪುರ: ಕಿಶೋರ್‌ಚಂದ್ರ ವಾಂಗ್‌ಖೆಮ್‌ಗೆ ಎನ್‌ಎಸ್‌ಎ ಕಾಯ್ದೆ ಅನ್ವಯ ಶಿಕ್ಷೆ
Last Updated 18 ಡಿಸೆಂಬರ್ 2018, 15:06 IST
ಅಕ್ಷರ ಗಾತ್ರ

ನವದೆಹಲಿ:ಮಣಿಪುರದ ಬಿಜೆಪಿ ನೇತೃತ್ವದ ಸರ್ಕಾರವನ್ನು ಟೀಕಿಸಿದ ಆರೋಪದಲ್ಲಿ ಇಂಫಾಲದ ಪತ್ರಕರ್ತ ಕಿಶೋರ್‌ಚಂದ್ರವಾಂಗ್‌ಖೆಮ್‌ಗೆ ರಾಷ್ಟ್ರೀಯ ಭದ್ರತಾ ಕಾಯ್ದೆ (ಎನ್‌ಎಸ್‌ಎ) ಅನ್ವಯ ಗರಿಷ್ಠ ಒಂದು ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.

ರಾಷ್ಟ್ರೀಯ ಭದ್ರತಾ ಕಾಯ್ದೆಯ ಸೆಕ್ಷನ್ 9ರ ಅನ್ವಯ ರಚಿಸಲಾಗಿರುವ ಎನ್‌ಎಸ್‌ಎ ಸಲಹಾ ಮಂಡಳಿಯು ಪತ್ರಕರ್ತನ ವಿರುದ್ಧ ರಾಜ್ಯ ಸರ್ಕಾರ ಮಾಡಿರುವ ಆರೋಪಕ್ಕೆ ಸಂಬಂಧಿಸಿ ಡಿಸೆಂಬರ್ 11ರಂದು ವಿಚಾರಣೆ ನಡೆಸಿತ್ತು. ಡಿಸೆಂಬರ್ 13ರಂದು ಅಂತಿಮ ವರದಿ ಸಿದ್ಧಪಡಿಸಿದ್ದ ಮಂಡಳಿ ಪತ್ರಕರ್ತನಿಗೆ ಜೈಲು ಶಿಕ್ಷೆ ವಿಧಿಸುವಂತೆ ಆದೇಶಿಸಿದೆ.

‘ಆರೋಪಿಯ ಈ ಹಿಂದಿನ ಚಟುವಟಿಕೆಗಳನ್ನು ಗಮನದಲ್ಲಿಟ್ಟುಕೊಂಡು ಮತ್ತು ಪೂರ್ವಾಗ್ರಹಪೀಡಿತನಾದ ಆತನಿಂದ ಭವಿಷ್ಯದಲ್ಲಿ ರಾಜ್ಯದಲ್ಲಿ ಶಾಂತಿ–ಸುವ್ಯವಸ್ಥೆಗೆ ಧಕ್ಕೆ ಉಂಟಾಗಬಹುದಾದ ಅಥವಾ ರಾಜ್ಯದ ಭದ್ರತೆಗೆ ಅಪಾಯ ತಂದೊಡ್ಡಬಲ್ಲ ಅಪಾಯ ಇರುವುದರಿಂದಎನ್‌ಎಸ್‌ಎಯ ಸೆಕ್ಷನ್ 13ರ ಅನ್ವಯ 12 ತಿಂಗಳ ವರೆಗೆ ಬಂಧನದಲ್ಲಿರಿಸಬಹುದಾಗಿದೆ’ ಎಂದು ಸಲಹಾ ಮಂಡಳಿ ಆದೇಶದಲ್ಲಿ ತಿಳಿಸಿದೆ.

ಮುಳುವಾದ ವಿಡಿಯೊ:ಸ್ಥಳೀಯ ಸುದ್ದಿವಾಹಿನಿ ಐಎಸ್‌ಟಿವಿ ನಿರೂಪಕ ಮತ್ತು ವರದಿಗಾರರಾಗಿರುವ ಕಿಶೋರ್‌ಚಂದ್ರ ಅವರು ರಾಜ್ಯ ಸರ್ಕಾರ ಮತ್ತು ಮುಖ್ಯಮಂತ್ರಿಗಳನ್ನು ಟೀಕಿಸಿಸಾಮಾಜಿಕ ಜಾಲತಾಣದಲ್ಲಿ ವಿಡಿಯೊ ಅಪ್‌ಲೋಡ್ ಮಾಡಿದ್ದರು. ಝಾನ್ಸಿ ರಾಣಿಯ ಜಯಂತಿ ಆಚರಿಸುವ ರಾಜ್ಯ ಸರ್ಕಾರ ಮತ್ತು ಮುಖ್ಯಮಂತ್ರಿಗಳ ಕ್ರಮವನ್ನು ಟೀಕಿಸಿ ಅವರು ಮಣಿಪುರಿ ಮತ್ತು ಆಂಗ್ಲ ಭಾಷೆಯಲ್ಲಿ ವಿಡಿಯೊ ಅಪ್‌ಲೋಡ್ ಮಾಡಿದ್ದರು.

ಪತ್ರಕರ್ತ ಮಾಡಿದ್ದಾರೆ ಎನ್ನಲಾದ ಟೀಕೆ ಏನು?

‘ಝಾನ್ಸಿ ರಾಣಿಯ ಜಯಂತಿ ಆಚರಿಸುವ ರಾಜ್ಯ ಸರ್ಕಾರದ ನಡೆಯಿಂದ ಆಘಾತವಾಗಿದೆ. ದೇಶದ ಏಕತೆಗಾಗಿನ ಕೊಡುಗೆಯನ್ನು ಗುರುತಿಸಿ ಝಾನ್ಸಿ ರಾಣಿಯ ಜಯಂತಿ ಆಚರಿಸುತ್ತಿರುವುದಾಗಿ ಮುಖ್ಯಮಂತ್ರಿಗಳು ಹೇಳಿದ್ದಾರೆ. ಆದರೆ, ಆಕೆ ಮಣಿಪುರಕ್ಕಾಗಿ ಏನನ್ನೂ ಮಾಡಿಲ್ಲ. ಕೇವಲ ಕೇಂದ್ರ ಸರ್ಕಾರ ಹೇಳಿದೆ ಎಂಬ ಮಾತ್ರಕ್ಕೆ ನೀವು ಜಯಂತಿ ಆಚರಿಸುತ್ತಿದ್ದೀರಿ’ ಎಂದು ವಿಡಿಯೊದಲ್ಲಿ ಕಿಶೋರ್‌ಚಂದ್ರ ಹೇಳಿದ್ದಾರೆ ಎನ್ನಲಾಗಿದೆ.

ಮುಖ್ಯಮಂತ್ರಿ ಎನ್‌.ಬೀರೆನ್ ಸಿಂಗ್ ಅವರನ್ನು ಉದ್ದೇಶಿಸಿ, ‘ಮಣಿಪುರದ ಸ್ವಾತಂತ್ರ್ಯ ಹೋರಾಟಗಾರರನ್ನು ಅವಮಾನಿಸಬೇಡಿ. ನೀವು ಬೇಕಾದರೆ ನನ್ನನ್ನು ಬಂಧಿಸಿ. ಆದರೆ, ನಾನು ಮತ್ತೆ ಮತ್ತೆ ಹೇಳುವುದು ಇದನ್ನೇ, ನೀವು ಹಿಂದುತ್ವದ ಸೂತ್ರದ ಗೊಂಬೆ’ ಎಂದು ವಿಡಿಯೊದಲ್ಲಿ ಹೇಳಿದ್ದಾರೆ ಎನ್ನಲಾಗಿದೆ.

ವಿಫಲವಾಯ್ತು ದೇಶದ್ರೋಹದ ಆರೋಪ ಹೊರಿಸುವ ಯತ್ನ

ಕಿಶೋರ್‌ಚಂದ್ರ ಅವರನ್ನು ನವೆಂಬರ್ 21ರಂದು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 294, 500 ಮತ್ತು ದೇಶದ್ರೋಹಕ್ಕೆ ಸಂಬಂಧಿಸಿದ ಸೆಕ್ಷನ್ 124ರ ಅನ್ವಯ ಬಂಧಿಸಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ ಮ್ಯಾಜಿಸ್ಟ್ರೇಟ್ ಕೋರ್ಟ್‌ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಿತ್ತು.

ದೇಶದ್ರೋಹ ಎನ್ನಲಾಗದು ಎಂದ ಕೋರ್ಟ್‌

‘ಇದು ವಿವಿಧ ಸಮುದಾಯಗಳ ನಡುವೆ ದ್ವೇಷ ಬಿತ್ತುವಂತಹ ‍ಪ್ರಕರಣವಲ್ಲ. ಭಾರತ ಸರ್ಕಾರ ಅಥವಾ ರಾಜ್ಯ ಸರ್ಕಾರದ ವಿರುದ್ಧ ದ್ವೇಷ, ತಿರಸ್ಕಾರ ಮತ್ತು ಅತೃಪ್ತಿ ಸೂಚಿಸುವುದಕ್ಕೂ ಸಂಬಂಧಿಸಿಲ್ಲ. ಇದು ಪ್ರಧಾನಮಂತ್ರಿ ಮತ್ತು ಮಣಿಪುರದ ಮುಖ್ಯಮಂತ್ರಿಗಳ ವಿರುದ್ಧ ವ್ಯಕ್ತಪಡಿಸಲಾದ ಅಭಿಪ್ರಾಯವಷ್ಟೆ. ಇದನ್ನು ಭಾರತ ಮತ್ತು ಮಣಿಪುರ ಸರ್ಕಾರದ ಮೇಲೆ ಹಿಂಸೆಗಿಳಿಯುವಂತೆ ಜನರಿಗೆ ನೀಡಿರುವ ಕರೆ ಎಂಬುದಾಗಿ ಪರಿಗಣಿಸಲಾಗದು’ ಎಂದು ಮ್ಯಾಜಿಸ್ಟ್ರೇಟ್ ಕೋರ್ಟ್‌ ಹೇಳಿತ್ತು.

ಆದಾಗ್ಯೂ, ಕಿಶೋರ್‌ಚಂದ್ರ ಅವರನ್ನು ಎನ್‌ಎಸ್‌ಎ ಕಾಯ್ದೆ ಅನ್ವಯ ಮತ್ತೆ ಬಂಧಿಸಲಾಗಿತ್ತು.ಈ ಮಧ್ಯೆ,ಕಿಶೋರ್‌ಚಂದ್ರ ಅವರನ್ನು ಐಎಸ್‌ಟಿವಿ ಸಂಸ್ಥೆ ಕೆಲಸದಿಂದ ವಜಾಗೊಳಿಸಿದೆ. ಸುದ್ದಿವಾಹಿನಿಯ ಸಂಪಾದಕರು ಪ್ರಕರಣಕ್ಕೆ ಸಂಬಂಧಿಸಿ ರಾಜ್ಯ ಸರ್ಕಾರದ ಕ್ಷಮೆಯನ್ನೂ ಕೋರಿದ್ದಾರೆ.

ಕೇಂದ್ರ ಗೃಹ ಸಚಿವಾಲಯಕ್ಕೆ ಮೇಲ್ಮನವಿ

ಜೈಲು ಶಿಕ್ಷೆ ಆದೇಶವನ್ನು ಮರುಪರಿಶೀಲಿಸುವಂತೆ ಕೋರಿ ಕೇಂದ್ರ ಗೃಹ ಸಚಿವಾಲಯಕ್ಕೆ ಮನವಿ ಮಾಡಿದ್ದೇವೆ. ಇನ್ನೆರಡು ದಿನಗಳಲ್ಲಿ ಪ್ರತಿಕ್ರಿಯೆ ದೊರೆಯುವ ನಿರೀಕ್ಷೆ ಇದೆ ಎಂದುಕಿಶೋರ್‌ಚಂದ್ರ ಅವರ ಪತ್ನಿ ರಂಜಿತಾ ಎಲಾಂಗ್‌ಬಾಮ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಪತ್ರಕರ್ತರ ಸಂಘಟನೆ ಖಂಡನೆ, ದೆಹಲಿಯಲ್ಲಿ ಪ್ರತಿಭಟನೆ

ಕಿಶೋರ್‌ಚಂದ್ರ ಅವರನ್ನು ಬಂಧಿಸಿರುವುದನ್ನು ಭಾರತೀಯ ಪತ್ರಕರ್ತರ ಸಂಘ ಖಂಡಿಸಿದ್ದು, ಶೀಘ್ರ ಬಿಡುಗಡೆ ಮಾಡುವಂತೆ ಸರ್ಕಾರವನ್ನು ಒತ್ತಾಯಿಸಿದೆ. ಬಂಧನ ಖಂಡಿಸಿ ಮಣಿಪುರ ವಿದ್ಯಾರ್ಥಿ ಸಂಘಟನೆ, ದೆಹಲಿ ಮತ್ತು ಮಣಿಪುರ ಮುಸ್ಲಿಂ ವಿದ್ಯಾರ್ಥಿಗಳ ಸಂಘಟನೆಯು ದೆಹಲಿಯ ಮಣಿಪುರ ಭವನದ ಎದುರು ಡಿಸೆಂಬರ್ 17ರಂದು ಪ್ರತಿಭಟನೆ ನಡೆಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT