ಗುರುವಾರ , ಅಕ್ಟೋಬರ್ 17, 2019
28 °C

ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್: 404 ರನ್ ಗಳಿಸಿದ ಮನೀಷ್ ಪಾಂಡೆ!

Published:
Updated:
Prajavani

ಬೆಂಗಳೂರು: ಕರ್ನಾಟಕ ತಂಡದ ನಾಯಕ ಮನೀಷ್ ಪಾಂಡೆ ಈ ಬಾರಿಯ ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಒಟ್ಟು 400 ರನ್‌ಗಳ ಗಡಿ ದಾಟಿದರು.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಎ ಗುಂಪಿನ ಪಂದ್ಯದಲ್ಲಿ ಪಾಂಡೆ ಮುಂಬೈ ತಂಡದ ವಿರುದ್ಧ ಅರ್ಧಶತಕ (62; 64ಎಸೆತ, 3ಬೌಂಡರಿ, 2 ಸಿಕ್ಸರ್) ಗಳಿಸಿದರು. ಇದರೊಂದಿಗೆ ಒಟ್ಟು ಆರು ಇನಿಂಗ್ಸ್‌ಗಳಿಂದ 404 ರನ್‌ಗಳನ್ನು ಪೇರಿಸಿದರು. ಇದರಲ್ಲಿ ಒಟ್ಟು ನಾಲ್ಕು ಅರ್ಧಶತಕಗಳು ಮತ್ತು ಒಂದು ಶತಕ ಸೇರಿವೆ.

ಬೆಳಿಗ್ಗೆ ಟಾಸ್ ಗೆದ್ದ ಮುಂಬೈ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಕೆ.ಎಲ್. ರಾಹುಲ್ (58 ರನ್) ಮತ್ತು ದೇವದತ್ತ ಪಡಿಕ್ಕಲ್ (79 ರನ್) ಅವರು ಮೊದಲ ವಿಕೆಟ್‌ಗೆ 137 ರನ್ ಸೇರಿಸಿ ಉತ್ತಮ ಆರಂಭ ನೀಡಿದರು. ಅದರ ಮೇಲೆ ಮನೀಷ್ ಆರ್ಧಶತಕದ ಬಲದಿಂದ ತಂಡವು 50 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 312 ರನ್‌ ಗಳಿಸಿತು.

ಕರುಣ್ ನಾಯರ್ ಮತ್ತೊಮ್ಮೆ ವೈಫಲ್ಯ ಅನುಭವಿಸಿದರು. ಕೇವಲ ನಾಲ್ಕು ರನ್ ಮಾತ್ರ ಗಳಿಸಿ ರನ್‌ಔಟ್ ಆದರು.ಅಭಿಷೇಕ್ ರೆಡ್ಡಿ ಬದಲು ಸ್ಥಾನ ಪಡೆದ ರೋಹನ್ ಕದಂ (32 ರನ್), ಬಿ.ಆರ್. ಶರತ್ (28 ರನ್) ಮತ್ತು ಕೊನೆಯ ಐದು ಓವರ್‌ಗಳಲ್ಲಿ ಮಿಂಚಿದ ಕೃಷ್ಣಪ್ಪ ಗೌತಮ್ (ಔಟಾಗದೆ 22) ತಂಡದ ಮೊತ್ತವನ್ನು ಮೂನ್ನೂರರ ಗಡಿ ದಾಟಿಸಿದರು.

Post Comments (+)