ಮೋದಿ ಸರ್ಕಾರದ ನೀತಿಗಳಿಂದ ತೊಂದರೆಗೆ ಒಳಗಾಗದ ಜನವರ್ಗವೇ ಇಲ್ಲ: ಮನಮೋಹನ್‌ ಸಿಂಗ್

ಶನಿವಾರ, ಮೇ 25, 2019
27 °C

ಮೋದಿ ಸರ್ಕಾರದ ನೀತಿಗಳಿಂದ ತೊಂದರೆಗೆ ಒಳಗಾಗದ ಜನವರ್ಗವೇ ಇಲ್ಲ: ಮನಮೋಹನ್‌ ಸಿಂಗ್

Published:
Updated:

ಹಣಕಾಸು ಸಚಿವರಾಗಿ, ಪ್ರಧಾನಿಯಾಗಿ ದೇಶವನ್ನು ಆರ್ಥಿಕ ಉದಾರೀಕರಣದತ್ತ ಮುನ್ನಡೆಸಿದ್ದ ಮನಮೋಹನ್‌ ಸಿಂಗ್‌ , ಈಗಿನ ಅರ್ಥ ವ್ಯವಸ್ಥೆಯನ್ನು ವಿಶ್ಲೇಷಿಸಿದ್ದಾರೆ. ಈಗಿನ ಸರ್ಕಾರವನ್ನು ಮನೆಗೆ ಕಳುಹಿಸುವ ಕಾಲ ಪಕ್ವವಾಗಿದೆ ಎಂದು ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ

* ಐದು ವರ್ಷಗಳಲ್ಲಿ ಮೋದಿ ಅವರು ಭಾರತವನ್ನು ಪರಿವರ್ತಿಸುವ ಬಗ್ಗೆ ಹಲವು ಬಾರಿ ಮಾತನಾಡಿದ್ದಾರೆ. ದೇಶವನ್ನು ‘ನವಭಾರತ’ ಎಂದು ಬಣ್ಣಿಸಿದ್ದಾರೆ. ಸರ್ಕಾರದ ಬಗ್ಗೆ ಮೌಲ್ಯಮಾಪನ ಏನು?

ಮೋದಿ ನೇತೃತ್ವದ ಐದು ವರ್ಷಗಳು ಆಡಳಿತ ಮತ್ತು ವಿಶ್ವಾಸಾರ್ಹತೆ ವೈಫಲ್ಯದ ವಿಷಾದದ ಕತೆ. ‘ಅಚ್ಛೇ ದಿನ್‌’ ಭರವಸೆಯೊಂದಿಗೆ ಮೋದಿ ಅವರು 2014ರಲ್ಲಿ ಅಧಿಕಾರಕ್ಕೆ ಬಂದರು. ಆದರೆ, ಅವರ ಐದು ವರ್ಷದ ಆಳ್ವಿಕೆಯು ಭಾರತದ ಯುವ ಜನರು, ರೈತರು, ವರ್ತಕರು ಮತ್ತು ಪ್ರಜಾ‍ತಂತ್ರದ ಪ್ರತಿಯೊಂದು ಸಂಸ್ಥೆಗೂ ವೇದನಾದಾಯಕ ಮತ್ತು ವಿಧ್ವಂಸಕವಾದವು. ಈ ಸರ್ಕಾರವು ಜಾರಿಗೆ ತಂದ ಅಸಮರ್ಪಕ ಮತ್ತು ಅಕಾಲಿಕ ನೀತಿಗಳಿಂದಾಗಿ ತೊಂದರೆಗೆ ಒಳಗಾಗದ ಒಂದು ಜನವರ್ಗವನ್ನು ತೋರಿಸಿ.  

ವರ್ತಕರು ಮತ್ತು ಸಣ್ಣ ಉದ್ದಿಮೆದಾರರ ಗಳಿಕೆಯನ್ನು ನೋಟು ರದ್ದತಿಯು ತೊಡೆದು ಹಾಕಿತು. ಸಣ್ಣ, ಅತಿಸಣ್ಣ ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳು ಸರ್ಕಾರದ ಮೇಲಿನ ವಿಶ್ವಾಸವನ್ನೇ ಕಳೆದುಕೊಂಡವು. ಮಧ್ಯಮ ವರ್ಗವು ಕಷ್ಟಪಟ್ಟು ಮಾಡಿದ್ದ ಉಳಿತಾಯವನ್ನು ತೊಳೆದು ಹಾಕಿತು. ಮಹಿಳೆಯರು ಭದ್ರತೆ ಮತ್ತು ಸಶಕ್ತತೆಯ ಭಾವವನ್ನು ಕಳೆದುಕೊಳ್ಳುವಂತೆ ಮಾಡಿತು. ಶೋಷಿತ ವರ್ಗಗಳು ತಮ್ಮ ಪರಂಪರಾಗತ ಹಕ್ಕುಗಳನ್ನು ಕಳೆದುಕೊಂಡವು. ಸಂಸ್ಥೆಗಳು ಸ್ವಾತಂತ್ರ್ಯ ಕಳೆದುಕೊಂಡವು. ವೈಜ್ಞಾನಿಕ ಮನೋಭಾವದ ಜಾಗದಲ್ಲಿ ಮೌಢ್ಯ ನೆಲೆಯೂರಿತು. 

* ತಮ್ಮ ಸರ್ಕಾರ ಬಂದ ಬಳಿಕ ಜಾಗತಿಕ ಮಟ್ಟದಲ್ಲಿ ಭಾರತದ ಘನತೆ ಏರಿದೆ ಎಂದು ಮೋದಿ ಅವರು ಹೇಳಿಕೊಳ್ಳುತ್ತಿದ್ದಾರೆ. ಭಾರತದ ಪ್ರಧಾನಿಯಾದವರು ದಶಕಗಳಿಂದ ಭೇಟಿ ಕೊಡದ ದೇಶಗಳಿಗೆ ತಾವು ಹೋಗಿದ್ದಾಗಿ ಹೇಳಿದ್ದಾರೆ. ಈ ವಾದವನ್ನು ಒಪ್ಪುವಿರಾ?

ಭಾರತದ ವಿದೇಶಾಂಗ ನೀತಿಗೆ ರಾಷ್ಟ್ರೀಯ ಹಿತಾಸಕ್ತಿ ಆಧಾರವಾಗಿತ್ತೇ ಹೊರತು ವ್ಯಕ್ತಿಯ ವರ್ಚಸ್ಸು ವೃದ್ಧಿ ಅಲ್ಲ. ವಿದೇಶ ನೀತಿಯಲ್ಲಿ ಗಾಂಭೀರ್ಯ, ಮುತ್ಸದ್ದಿತನ ಮತ್ತು ಸಂಯಮ, ಆತಿಥೇಯ ಇನ್ನೊಂದು ದೇಶದ ಬಗ್ಗೆ ಕಾಳಜಿಗಳೆಲ್ಲವೂ ಇರಬೇಕು. ಅಂತಿಮವಾಗಿ ಭಾರತದ ಹಿತಾಸಕ್ತಿಯೇ ಮುಖ್ಯವಾಗಬೇಕು. ಯುಪಿಎ ಸರ್ಕಾರ ಇದ್ದಾಗ ಅಮೆರಿಕ, ರಷ್ಯಾ, ಫ್ರಾನ್ಸ್‌, ಚೀನಾ, ಬ್ರಿಟನ್‌ ಮತ್ತು ಐರೋಪ್ಯ ಒಕ್ಕೂಟದ ದೇಶಗಳ ಜತೆಗೆ ಭಾರತದ ಸಂಬಂಧ ಅದ್ಭುತವಾಗಿತ್ತು. ಪರಸ್ಪರ ಸಹಕಾರ ಮತ್ತು ನಮ್ಮ ರಾಷ್ಟ್ರೀಯ ಕಾಳಜಿಗಳ ಆಧಾರದಲ್ಲಿ ಈ ಸಂಬಂಧವನ್ನು ವೃದ್ಧಿ ಮಾಡಲಾಗಿತ್ತು. ಅಮೆರಿಕದ ಜತೆಗೆ ನಾಗರಿಕ ಪರಮಾಣು ಒಪ್ಪಂದ, ದಕ್ಷಿಣ ಕೊರಿಯಾ, ಜಪಾನ್‌, ಮಲೇಷ್ಯಾ, ಆಸಿಯಾನ್‌ ದೇಶಗಳ ಜತೆಗೆ ಮುಕ್ತ ವ್ಯಾಪಾರದ ಅಸಂಖ್ಯ ಒಪ್ಪಂದಗಳನ್ನು ಮಾಡಿಕೊಳ್ಳಲಾಗಿತ್ತು. ಚೀನಾ ಜತೆಗೆ ಗಡಿ ಮಾತುಕತೆ ನಡೆಸಲಾಗಿತ್ತು. ಮುಂಬೈ ದಾಳಿಯ ಬಳಿಕ ಪಾಕಿಸ್ತಾನವನ್ನು ರಾಜತಾಂತ್ರಿಕವಾಗಿ ಏಕಾಂಗಿಯಾಗಿಸಲು ಭಾರತ ಶಕ್ತವಾಗಿತ್ತು. 

* ಮೋದಿಯವರ ಮೇಲೆ ಭ್ರಷ್ಟಾಚಾರದ ಕಪ್ಪು ಚುಕ್ಕೆ ಇಲ್ಲ ಎಂಬ ಗ್ರಹಿಕೆ ಇದೆ. ನಿಮ್ಮ ಸರ್ಕಾರದ ಮೇಲೆ ವಿವಿಧ ಹಗರಣಗಳ ಆರೋಪಗಳಿದ್ದವು. ಇದಕ್ಕೆ ನಿಮ್ಮ ಪ್ರತಿಕ್ರಿಯೆ ಏನು?

ಯುಪಿಎ ಸರ್ಕಾರದ ಮೇಲೆ ನಿರಂತರ ನಿಗಾ ಇತ್ತು. ಇಂತಹ ನಿಗಾವನ್ನು ಸ್ವಾಗತಿಸಿದ್ದೆ. ಇಂತಹ ವ್ಯವಸ್ಥೆ ಪ್ರಜಾಪ್ರಭುತ್ವದಲ್ಲಿ ಹಾಸುಹೊಕ್ಕಾಗಿದೆ. ಹಲವು ಆರೋಪಗಳನ್ನು 2014ರ ಚುನಾವಣೆಯಲ್ಲಿ ಬಿಜೆಪಿ ಮುಖ್ಯ ವಿಚಾರವಾಗಿಸಿತ್ತು. ಆದರೆ, ಅವುಗಳಲ್ಲಿ ಹಲವು ನ್ಯಾಯಾಂಗದ ಪರಿಶೀಲನೆಯಲ್ಲಿ ಬಿದ್ದುಹೋದವು. ಮೇಲ್ನೋಟಕ್ಕೆ ಆರೋಪಗಳಲ್ಲಿ ಹುರುಳಿದೆ ಎಂದು ಅನಿಸಿದಾಗ ನಮ್ಮವರ ವಿರುದ್ಧವೇ ಕ್ರಮ ಕೈಗೊಳ್ಳಲು ನಾವು ಹಿಂಜರಿದಿರಲಿಲ್ಲ. ಆದರೆ, ಮೋದಿ ಸರ್ಕಾರವನ್ನು ನೋಡಿ. ಎಷ್ಟೇ ಆರೋಪ ಬಂದರೂ ಅವುಗಳ ಬಗ್ಗೆ ಪರಿಶೀಲನೆಗೇ ಸರ್ಕಾರ ಮುಂದಾಗಿಲ್ಲ.

ಆರೋಪ ಮಾಡಿದವರನ್ನೇ ಗುರಿಯಾಗಿಸುವ ಮನೋಭಾವ ಇದೆ. ಪಾರದರ್ಶಕತೆ ತರುವುದು ಮತ್ತು ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡುವ ಭರವಸೆಯೊಂದಿಗೆ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂತು. ಐದು ವರ್ಷಗಳಲ್ಲಿ ಭ್ರಷ್ಟಾಚಾರವು ಊಹಿಸಲು ಸಾಧ್ಯವಾಗದ ಮಟ್ಟಕ್ಕೆ ಏರಿದೆ. ಬಹುಶಃ, ನೋಟು ರದ್ದತಿಯು ಸ್ವತಂತ್ರ ಭಾರತದ ಅತ್ಯಂತ ದೊಡ್ಡ ಹಗರಣ. ರಫೇಲ್‌ ಯುದ್ಧ ವಿಮಾನ ಖರೀದಿ ಒಪ್ಪಂದದಲ್ಲಿನ ಎಡವಟ್ಟುಗಳು ಜನರ ಮನದಲ್ಲಿವೆ. ಅಧಿಕಾರದ ಉನ್ನತ ಸ್ಥಾನದಲ್ಲಿರುವವರ ಮೇಲೆಯೇ ಆರೋಪ ಕೇಳಿ ಬಂದಿದೆ. ಯಾವ ತಪ್ಪೂ ಆಗಿಲ್ಲ ಎಂದಾದರೆ ತನಿಖೆಗೆ ಪ್ರಧಾನಿ ಮೋದಿ ಅವರು ಹಿಂದೇಟು ಹಾಕುತ್ತಿರುವುದು ಯಾಕೆ?

* ಆರ್ಥಿಕ ಪ್ರಗತಿಯೇ ತಮ್ಮ ಅತ್ಯಂತ ದೊಡ್ಡ ಸಾಧನೆ ಎಂದು ಮೋದಿ ಅವರು ಹೇಳಿಕೊಳ್ಳುತ್ತಿದ್ದಾರೆ. ಅರ್ಥ ವ್ಯವಸ್ಥೆ ಹೇಗಿದೆ?

ಮೋದಿ ಸರ್ಕಾರಕ್ಕೆ ಭಾರಿ ಬಹುಮತ ಇತ್ತು. ರಾಜಕೀಯವಾಗಿ ಇದ್ದ ಸುಸ್ಥಿರ ಸ್ಥಿತಿಯನ್ನು ಬಳಸಿಕೊಂಡು ಆರ್ಥಿಕವಾಗಿ ದೇಶವು ಭಾರಿ ಪ‍್ರಯೋಜನ ಪಡೆದುಕೊಳ್ಳುವಂತೆ ಮಾಡಬಹುದಿತ್ತು. ಆದರೆ, ಅವರು ಅದರಲ್ಲಿ ಯಶಸ್ವಿಯಾಗಲಿಲ್ಲ. ದೇಶವು ಆರ್ಥಿಕ ಹಿಂಜರಿತದತ್ತ ಸಾಗುತ್ತಿದೆ ಎಂಬುದನ್ನು ಹಣಕಾಸು ಸಚಿವಾಲಯದ ಇತ್ತೀಚಿನ ವರದಿಗಳು ತೋರಿಸುತ್ತಿವೆ.

ಪರಿಷ್ಕೃತ ಒಟ್ಟು ದೇಶೀ ಉತ್ಪನ್ನದ (ಜಿಡಿಪಿ) ಅಂಕಿ ಅಂಶದ ಪ್ರಕಾರವೇ ಈ ತ್ರೈಮಾಸಿಕದ (ಜನವರಿ–ಏಪ್ರಿಲ್‌) ಪ್ರಗತಿ ದರ ಶೇ 6.5 ಮಾತ್ರ. ಕುಂದಿರುವ ಖರೀದಿ ಸಾಮರ್ಥ್ಯ, ನಿಶ್ಚಿತ ಹೂಡಿಕೆಯಲ್ಲಿ ಅತ್ಯಲ್ಪ ಏರಿಕೆ, ರಫ್ತು ಸ್ಥಗಿತಗಳೆಲ್ಲ ಸೇರಿ ಈ ಸ್ಥಿತಿ ನಿರ್ಮಾಣ ಆಗಿದೆ. ಉದ್ಯೋಗ ಇಲ್ಲ. ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಮೋದಿ ಅವರು ಭರವಸೆ ಕೊಟ್ಟಿದ್ದರು. ಆದರೆ, ನಮ್ಮ ಯುವ ಜನರಿಂದ ನಾಲ್ಕು ಕೋಟಿ ಉದ್ಯೋಗಗಳನ್ನು ಕಸಿದುಕೊಳ್ಳಲಾಯಿತು. ಅವರ ಭವಿಷ್ಯ ಮಂಕಾಯಿತು. ನೋಟು ರದ್ದತಿ, ದೋಷಪೂರಿತ ಜಿಎಸ್‌ಟಿ ಮತ್ತು ತೆರಿಗೆ ಭಯೋತ್ಪಾದನೆಗಳು ಸಂಘಟಿತ ಮತ್ತು ಅಸಂಘಟಿತ ವಲಯಕ್ಕೆ ಮಾರಣಾಂತಿಕ ಏಟು ಕೊಟ್ಟಿವೆ. 

* ಬಿಜೆಪಿ ವಿಭಜನವಾದಿ ಮತ್ತು ಎಲ್ಲರನ್ನೂ ಒಳಗೊಂಡ ಪ್ರಗತಿಯನ್ನು ಖಾತರಿಪಡಿಸಿಲ್ಲ ಎಂದು ಕಾಂಗ್ರೆಸ್‌ ಆರೋಪಿಸುತ್ತಿದೆ. ಇಂತಹ ಸರ್ಕಾರ ದೇಶಕ್ಕೆ ಒಳ್ಳೆಯದೇ?

ಸಮಾಜವು ಶಾಂತಿಯುತವಾಗಿ ಇಲ್ಲದಿದ್ದರೆ ಯಾವ ಬೆಳವಣಿಗೆಯೂ ಸಾಧ್ಯವಾಗದು. ಅರ್ಥ ವ್ಯವಸ್ಥೆಯ ಉತ್ತಮ ಪ್ರಗತಿಗೆ ಸಾಮರಸ್ಯ ಮತ್ತು ಒಗ್ಗಟ್ಟು ಅತ್ಯಗತ್ಯ. ವಿಭಜನೆ ಮತ್ತು ದ್ವೇಷ ಬಿಜೆಪಿಯ ಅನ್ವರ್ಥನಾಮವಾಗಿದೆ. ಸಮಾಜದ ಬಿರುಕುಗಳನ್ನೇ ಬಿಜೆಪಿ ನೆಚ್ಚಿಕೊಂಡಿದೆ. ಇದರಿಂದಾಗಿ ಸಮಾಜದಲ್ಲಿ ಅಶಾಂತಿ ಉಂಟಾಗುತ್ತದೆ. ವಿವಿಧ ರಾಜ್ಯಗಳಲ್ಲಿ ಇತ್ತೀಚೆಗೆ ಕಾಣಿಸಿಕೊಂಡ ಪ‍್ರತಿಭಟನೆಗಳು ಈ ನೀತಿಯ ಫಲ. ಎಲ್ಲರನ್ನೂ ಒಳಗೊಳ್ಳುವ ಪ್ರಗತಿಯಲ್ಲಿ ನಂಬಿಕೆ ಇಲ್ಲದ, ಅಪಸ್ವರವನ್ನೇ ಬಂಡವಾಳವಾಗಿಸಿ ತನ್ನ ರಾಜಕೀಯ ಅಸ್ತಿತ್ವದ ಬಗ್ಗೆ ಮಾತ್ರ ಕಾಳಜಿ ಹೊಂದಿರುವ ಸರ್ಕಾರವನ್ನು ಹೊರಗಟ್ಟುವ ಸಮಯ ಬಂದಿದೆ. 

ಬರಹ ಇಷ್ಟವಾಯಿತೆ?

 • 31

  Happy
 • 1

  Amused
 • 1

  Sad
 • 1

  Frustrated
 • 20

  Angry

Comments:

0 comments

Write the first review for this !