ಸೋಮವಾರ, ನವೆಂಬರ್ 18, 2019
25 °C

‘ಸರ್ಕಾರದ ಅದಕ್ಷತೆಯಿಂದ ಭಾರತದ ಭವಿಷ್ಯಕ್ಕೆ ಕುತ್ತು’

Published:
Updated:
Prajavani

ಮುಂಬೈ: ಆರ್ಥಿಕ ಹಿಂಜರಿತವನ್ನು ನಿಭಾಯಿಸುವಲ್ಲಿ ಬಿಜೆಪಿ ನೇತೃತ್ವದ ಸರ್ಕಾರದ ಅಸಡ್ಡೆ ಮತ್ತು ಅದಕ್ಷತೆಯು ಭಾರತೀಯರ ಆಕಾಂಕ್ಷೆ ಮತ್ತು ಭವಿಷ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ ಎಂದು ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

ಪ್ರಸಕ್ತ ಆರ್ಥಿಕ ಹಿಂಜರಿತ ಮತ್ತು ಗ್ರಾಮೀಣ ಪ್ರದೇಶದ ಸಂಕಷ್ಟಕ್ಕೆ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವೇ ಹೊಣೆ ಎಂದು ಅವರು ಆರೋಪಿಸಿದ್ದಾರೆ. ಕಾಂಗ್ರೆಸ್‌ನ ಮೇಲೆ ದೋಷ ಹೊರಿಸುವುದರಿಂದ ಯಾವ ಪ್ರಯೋಜನವು ಆಗದು ಎಂದೂ ಅವರು ಹೇಳಿದ್ದಾರೆ.  ‘ಸರ್ಕಾರವು ಸಾಕಷ್ಟು ವಿಚಾರಗಳ ಬಗ್ಗೆ ಮಾತನಾ ಡುತ್ತಿದೆ. ಎರಡು ಕೋಟಿ ಉದ್ಯೋಗ ಸೃಷ್ಟಿಸಲಾಗುವುದು ಎನ್ನುತ್ತಿದೆ. ಆದರೆ, ಅದಕ್ಕೆ ವ್ಯತಿರಿಕ್ತವಾದದ್ದು ನಡೆಯುತ್ತಿದೆ. ಜನರು ಉದ್ಯೋಗ ಕಳೆದುಕೊಳ್ಳುತ್ತಿದ್ದಾರೆ. ಸುದ್ದಿಯನ್ನು ಸರಿಯಾಗಿ ನಿರ್ವಹಿಸಬೇಕು ಎಂದು ಸರ್ಕಾರ ಭಾವಿಸಿದೆ. ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳುತ್ತಿಲ್ಲ’ ಎಂದರು. 

ನಿರ್ಮಲಾಗೆ ಪ್ರತಿಕ್ರಿಯೆ ಇಲ್ಲ: ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳು ವಸೂಲಾಗದ ಸಾಲದಿಂದ ಕಂಗೆಡಲು ಸಿಂಗ್‌ ಮತ್ತು ಅವರು ಪ್ರಧಾನಿಯಾಗಿದ್ದ ಅವಧಿಯಲ್ಲಿ ಭಾರತೀಯ ರಿಸರ್ವ್‌ ಬ್ಯಾಂಕ್‌ನ ಗವರ್ನರ್‌ ಆಗಿದ್ದ ರಘುರಾಮ್‌ ರಾಜನ್‌ ಕಾರಣ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಬುಧವಾರ ಹೇಳಿದ್ದರು. ಅದಕ್ಕೆ ಪ್ರತಿಕ್ರಿಯೆ ನೀಡಲು ಸಿಂಗ್‌ ನಿರಾಕರಿಸಿದರು.

**

ಭಾರತದ ಆರ್ಥಿಕತೆಯ ಸಮಸ್ಯೆ ಪರಿಹರಿಸಲು ವಿಶ್ವಾಸಾರ್ಹವಾದ ಮಾರ್ಗಗಳನ್ನು ಸರ್ಕಾರ ಕಂಡು ಕೊಳ್ಳಬೇಕಿತ್ತು. ಸಮಸ್ಯೆಗಳನ್ನು ಪರಿಹರಿಸಲು ಐದೂವರೆ ವರ್ಷ ಸಾಕು.
-ಮನಮೋಹನ್‌ ಸಿಂಗ್‌, ಮಾಜಿ ಪ್ರಧಾನಿ

ಪ್ರತಿಕ್ರಿಯಿಸಿ (+)