ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಸತ್‌ನ ಹಣಕಾಸು ಸ್ಥಾಯಿ ಸಮಿತಿಯಿಂದ ಮನಮೋಹನ್ ಸಿಂಗ್ ಔಟ್

ಡಿಎಂಕೆಯ ಕನ್ಹಿಮೋಳಿ, ವೈಎಸ್ ಆರ್ ಕಾಂಗ್ರೆಸ್ ಗೆ ಒಂದೊಂದು ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನ
Last Updated 14 ಸೆಪ್ಟೆಂಬರ್ 2019, 12:21 IST
ಅಕ್ಷರ ಗಾತ್ರ

ನವದೆಹಲಿ:ಸಂಸತ್‌ನಲ್ಲಿ ಪ್ರಮುಖವಾಗಿರುವ ಹಣಕಾಸು ಸ್ಥಾಯಿ ಸಮಿತಿ ಸದಸ್ಯತ್ವದಿಂದ ಮಾಜಿ ಪ್ರಧಾನಿ ಹಾಗೂ ಅರ್ಥಶಾಸ್ತ್ರಜ್ಞ ಮನಮೋಹನ್ ಸಿಂಗ್ ಅವರನ್ನು ಕೈಬಿಡಲಾಗಿದ್ದು, ಹಣಕಾಸು ಇಲಾಖೆಯ ಎಲ್ಲಾಸ್ಥಾಯಿ ಸಮಿತಿಗಳ ಅಧ್ಯಕ್ಷರನ್ನಾಗಿ ಬಿಜೆಪಿಯ ಜಯಂತ್ ಸಿನ್ಹಾ ಅವರನ್ನು ನೇಮಕ ಮಾಡಿ ಶುಕ್ರವಾರ ತಡರಾತ್ರಿ ಸಂಸತ್‌ನ ಸ್ಪೀಕರ್ ಓಂ ಬಿರ್ಲಾ ಪ್ರಕಟಣೆ ಹೊರಡಿಸಿದ್ದಾರೆ.

ಸಂಸತ್ತಿನಲ್ಲಿರುವ ಎಲ್ಲಾ ಸ್ಥಾಯಿ ಸಮಿತಿಗಳಲ್ಲಿ ಹಣಕಾಸು ಸ್ಥಾಯಿ ಸಮಿತಿ ಹಾಗೂ ವಿದೇಶಾಂಗ ವ್ಯವಹಾರಗಳ ಸ್ಥಾಯಿ ಸಮಿತಿಗಳು ಪ್ರಮುಖವಾಗಿವೆ. ಕಳೆದ ಬಾರಿ ಈ ಎರಡೂ ಸಮಿತಿಗಳಲ್ಲಿ ಸದಸ್ಯರಾಗಿ ಕಾಂಗ್ರೆಸ್‌ನ ಡಾ.ಮನಮೋಹನ್ ಸಿಂಗ್ ಹಾಗೂ ರಾಹುಲ್ ಗಾಂಧಿ ಅವರನ್ನು ನೇಮಕ ಮಾಡಲಾಗಿತ್ತು.

ಮನಮೋಹನ್ ಸಿಂಗ್ ಅವರು ತಾವಾಗಿಯೇ ಹೊರಗುಳಿದಿದ್ದಾರೋಅಥವಾ ಬಿಜೆಪಿಯೇ ಏಕಾ ಏಕಿ ಹಣಕಾಸು ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನ ಹಾಗೂ ಸದಸ್ಯರನ್ನು ನೇಮಕಮಾಡಿದೆಯೋ ಇನ್ನೂ ತಿಳಿದುಬಂದಿಲ್ಲ. ಆದರೆ, ಹಣಕಾಸು ಸ್ಥಾಯಿ ಸಮಿತಿಯಲ್ಲಿ ಮನಮೋಹನ್ ಸಿಂಗ್ ಹೆಸರು ಕೈಬಿಟ್ಟು ಆ ಸ್ಥಾನಕ್ಕೆ ಬಿಜೆಪಿತನ್ನ ಸದಸ್ಯರನ್ನು ಆಯ್ಕೆ ಮಾಡಿಕೊಂಡಿದೆ.

ಈ ಸಂಬಂಧ ಹೇಳಿಕೆ ನೀಡಿರುವ ರಾಜ್ಯಸಭೆಯ ಛೇರ್ಮನ್ ವೆಂಕಯ್ಯನಾಯ್ಡು ಅವರು, ಡಾ.ಮನಮೋಹನ್ ಸಿಂಗ್ ಅವರಿಗಾಗಿ ಯಾವಾಗಲೂ ಸ್ಥಾನ ಖಾಲಿ ಇರುತ್ತದೆ. ಕಾಂಗ್ರೆಸ್ ಮುಖಂಡರು ಅವರ ಹೆಸರು ಸೂಚಿಸಿದರೆ ಯಾವಾಗ ಬೇಕಾದರೂ ಅವರು ಇಚ್ಚಿಸುವ ಸ್ಥಾಯಿ ಸಮಿತಿಯಲ್ಲಿ ನೇಮಕ ಮಾಡಿಕೊಳ್ಳಲಾಗುವುದು ಎಂದಿದ್ದಾರೆ.

ಉಳಿದಂತೆ ರೈಲ್ವೆ ಇಲಾಖೆಯ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಸಂಸದ ರಾಧಾಮೋಹನ್ ಸಿಂಗ್, ರಕ್ಷಣಾ ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿ ಬಿಜೆಪಿಯ ಸಂಸದ ಜೋಲ್ ಓರಮ್ ಅವರನ್ನು ನೇಮಕ ಮಾಡಲಾಗಿದೆ.

ವಿದೇಶಾಂಗ ವ್ಯವಹಾರಗಳ ಸ್ಥಾಯಿ ಸಮಿತಿ ಸದಸ್ಯತ್ವದಿಂದ ರಾಹುಲ‌್‌ಗಾಂಧಿ ಅವರನ್ನು ಕೈಬಿಡಲಾಗಿದೆ. ಅಲ್ಲದೆ, ಸಂಸದೀಯ ವ್ಯವಹಾರಗಳ ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿದ್ದ ಸಂಸದ ಶಶಿತರೂರ್ ಬದಲಿಗೆ ಸಂಸದ ಪಿ.ಪಿ.ಚೌದರಿ ಅವರನ್ನು ನೇಮಕ ಮಾಡಲಾಗಿದೆ.ರಕ್ಷಣಾ ಸ್ಥಾಯಿ ಸಮಿತಿಯ ಸದಸ್ಯರಾಗಿದ್ದ ಕಾಂಗ್ರೆಸ್‌ನ ಸೋನಿಯಾಗಾಂಧಿ ಅವರ ಸ್ಥಾನಕ್ಕೆ ಸಂಸದ ರಾಹುಲ್‌‌ಗಾಂಧಿ ಅವರನ್ನು ನೇಮಕ ಮಾಡಲಾಗಿದೆ. ರಾಯ್ ಬರೇಲಿ ಸಂಸದೆ ಸೋನಿಯಾ ಗಾಂಧಿ ಅವರಿಗೆ ಯಾವುದೇ ಸ್ಥಾಯಿ ಸಮಿತಿಯಲ್ಲಿ ಸದಸ್ಯರನ್ನಾಗಿ ಸೇರಿಸಿಲ್ಲ.

ಸಂಸತ್ತಿನ ಸ್ಥಾಯಿ ಸಮಿತಿಯಲ್ಲಿ ಆಡಳಿತ ಹಾಗೂ ವಿಪಕ್ಷಗಳ ಸಂಸದರು (ರಾಜ್ಯಸಭಾ ಸದಸ್ಯರು ಅಥವಾ ಲೋಕಸಭಾ ಸದಸ್ಯರು) ಸದಸ್ಯರಾಗಿ ನೇಮಕ ಮಾಡಿಕೊಳ್ಳಲು ಅವಕಾಶ ಇರುತ್ತಾರೆ. ಈ ಸ್ಥಾಯಿ ಸಮಿತಿಗಳು ಆಯಾ ಇಲಾಖೆಗಳ ಸಚಿವಾಲಯಗಳು ಜಾರಿಗೆ ತರುವ ಹೊಸ ನೀತಿ, ಕಾನೂನುಗಳನ್ನು ಪರಿಶೀಲಿಸಿ ಲೋಕಸಭಾ ಸ್ಪೀಕರ್‌ಗೆ ವರದಿ ಸಲ್ಲಿಸುತ್ತವೆ. ನಂತರ ಬದಲಾವಣೆ ತರಲು ಬಯಸಿದರೆ ಅಥವಾ ಲೋಪದೋಷಗಳು ಕಂಡು ಬಂದರೆ ಅದನ್ನು ತಿದ್ದುಪಡಿ ಮಾಡಲು ಅವಕಾಶ ಇದೆ.

ಬಿಜೆಪಿಯು ಈ ಬಾರಿ 303 ಲೋಕಸಭಾ ಸದಸ್ಯರು ಹಾಗೂ 78 ರಾಜ್ಯಸಭಾ ಸದಸ್ಯರನ್ನು ಒಳಗೊಂಡಿದೆ. ಬಿಜೆಪಿ 24 ಸ್ಥಾಯಿ ಸಮಿತಿಗಳಲ್ಲಿ 13 ಸ್ಥಾಯಿ ಸಮಿತಿಗಳ ಅಧ್ಯಕ್ಷ ಸ್ಥಾನಗಳನ್ನು ಪಡೆದುಕೊಂಡಿದೆ. ಕಾಂಗ್ರೆಸ್ ಕೇವಲ ಮೂರು ಸ್ಥಾಯಿ ಸಮಿತಿಗಳ ಅಧ್ಯಕ್ಷ ಸ್ಥಾನಗಳನ್ನು ಹೊಂದಿದೆ. ಕಳೆದ ಬಾರಿ ನಾಲ್ಕು ಸ್ಥಾಯಿ ಸಮಿತಿಗಳ ಅಧ್ಯಕ್ಷ ಸ್ಥಾನವನ್ನು ಹೊಂದಿತ್ತು.

ಕಳೆದ ಬಾರಿ ಗೃಹ ಇಲಾಖೆಯ ವ್ಯವಹಾರಗಳ ಸ್ಥಾಯಿಸಮಿತಿಯ ಅಧ್ಯಕ್ಷರಾಗಿದ್ದ ಪಿ.ಚಿದಂಬರಂ ಅವರನ್ನು ಈ ಬಾರಿ ಕೈ ಬಿಡಲಾಗಿದ್ದು, ಈ ಬಾರಿ ವಿದೇಶಾಂಗ ವ್ಯವಹಾರಗಳ ಸ್ಥಾಯಿ ಸಮಿತಿಯಲ್ಲಿ ಸದಸ್ಯರಾಗಿ ಮಾತ್ರ ಮುಂದುವರಿದಿದ್ದಾರೆ. ಪಕ್ಷೇತರ ಸಂಸದರಾದ ಸ್ವಪ್ನ ದಾಸ್‌ಗುಪ್ತಾ, ಸಮಾಜವಾದಿ ಪಕ್ಷ ಜಯಾಬಚ್ಚನ್, ಆರ್ ಜೆಡಿಯ ಮಿಸಾ ಭಾರ್ತಿ, ಎನ್ ಸಿಪಿ ಶರದ್ ಪವಾರ್, ಕಾಂಗ್ರೆಸ್‌‌ನ ಕಪಿಲ್ ಸಿಬಲ್, ದೆಹಲಿ ಬಿಜೆಪಿ ಘಟಕದ ಮುಖ್ಯಸ್ಥ ಮನೋಜ್ ತಿವಾರಿ ವಿದೇಶಾಂಗ ವ್ಯವಹಾರಗಳ ಸ್ಥಾಯಿ ಸಮಿತಿಯಲ್ಲಿ ಸದಸ್ಯರಾಗಿದ್ದಾರೆ.

ಹಣಕಾಸು ಸ್ಥಾಯಿ ಸಮಿತಿಯಲ್ಲಿ ಬಿಜೆಡಿಯ ಪಿನಾಕಿ ಮಿಶ್ರಾ, ತೃಣಮೂಲ ಕಾಂಗ್ರೆಸ್ ನ ಸುಗತಾ ರಾಯ್, ಕಾಂಗ್ರೆಸ್ ನ ಮನೀಷ್ ತಿವಾರಿ, ದಿಗ್ವಿಜಯ್ ಸಿಂಗ್, ಅಂಬಿಕಾ ಸೋನಿ ಅವರು ಸದಸ್ಯರಾಗಿದ್ದಾರೆ.

ರೈಲ್ವೆ ಸ್ಥಾಯಿ ಸಮಿತಿಯ ಸದಸ್ಯರಾಗಿ ಸಂಸದ ಫಾರೂಕ್ ಅಬ್ದುಲ್ಲಾ, ರಕ್ಷಣಾ ಇಲಾಖೆಯ ಸ್ಥಾಯಿ ಸಮಿತಿಯಲ್ಲಿ ಕಾಂಗ್ರೆಸ್ ನ ಅಭಿಷೇಕ್ ಮನು ಸಿಂಘ್ವಿ ಹಾಗೂ ಕ್ರಿಕೆಟಿಗ ಗೌತಮ್ ಗಂಭೀರ್ ಅವರನ್ನು ನಗರಾಭಿವೃದ್ಧಿ ಸ್ಥಾಯಿ ಸಮಿತಿ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ.

ತೃಣಮೂಲ ಕಾಂಗ್ರೆಸ್ ಸ್ಥಾಯಿಸಮಿತಿಯ ಸದಸ್ಯತ್ವವನ್ನು ಪಡೆದುಕೊಳ್ಳಲು ನಿರಾಕರಿಸಿದೆ. ತಮ್ಮ ಪಕ್ಷ 35 ಸದಸ್ಯರನ್ನು ಹೊಂದಿದ್ದರೂ ಯಾವುದೇ ಲೋಕಸಭೆಯ ಅಡಿಯಲ್ಲಿ ಬರುವ ಯಾವುದೇ ಸ್ಥಾಯಿ ಸಮಿತಿಗೆ ಅಧ್ಯಕ್ಷಸ್ಥಾನ ಕೊಡದಿರುವುದು ಸರಿಯಾದ ಕ್ರಮವಲ್ಲ ಎಂದು ಪಕ್ಷದ ಸಂಸದರ ಒಂದು ಗುಂಪು ಸಚಿವಾಲಯದ ಸಿಬ್ಬಂದಿಗೆ ಮಾಹಿತಿ ರವಾನಿಸಿದೆ ಎನ್ನಲಾಗಿದೆ.

ಟಿಆರ್ ಎಸ್ ಪಕ್ಷದ ಮುಖಂಡ ಕೇಶವರಾವ್, ವೈಎಸ್ ಆರ್ ಕಾಂಗ್ರೆಸ್ ನ ವಿಜಯಸಾಯಿ ರೆಡ್ಡಿ, ಜೆಡಿಯುನ ರಂಜನ್ ಸಿಂಗ್ , ಶಿವಸೇನೆಯ ಪ್ರತಾಪ್ ರಾವ್ ಜಾದವ್, ಡಿಎಂಕೆಯ ಕನ್ಹಿಮೋಳಿ ಒಂದೊಂದು ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT