ಮಾಧ್ಯಮಗಳ ಜೊತೆ ಮಾತನಾಡಲು ಹೆದರಿಕೆ ಇರಲಿಲ್ಲ: ಮೋದಿಗೆ ಟಾಂಗ್ ಕೊಟ್ಟರು ಸಿಂಗ್

7

ಮಾಧ್ಯಮಗಳ ಜೊತೆ ಮಾತನಾಡಲು ಹೆದರಿಕೆ ಇರಲಿಲ್ಲ: ಮೋದಿಗೆ ಟಾಂಗ್ ಕೊಟ್ಟರು ಸಿಂಗ್

Published:
Updated:

ನವದೆಹಲಿ: ‘ನಾನು ಪ್ರಧಾನಿಯಾಗಿದ್ದ 10 ವರ್ಷಗಳ ಅವಧಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಲು ಯಾವುದೇ ಹಿಂಜರಿಕೆ ಇರಲಿಲ್ಲ. ನಾನು ಪತ್ರಕರ್ತರೊಡನೆ ನಿಯಮಿತವಾಗಿ ಮಾತನಾಡುತ್ತಿದ್ದೆ’ ಎಂದು ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್ ಹೇಳಿದರು.

ಆರು ಸಂಪುಟಗಳಲ್ಲಿ ಪ್ರಕಟವಾಗಿರುವ ತಮ್ಮ ಭಾಷಣ ಮತ್ತು ಸಂಶೋಧನಾ ಲೇಖನಗಳ ಸಂಗ್ರಹ ‘ಚೇಂಜಿಂಗ್ ಇಂಡಿಯಾ’ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ‘ಆಗ ನಾನು ಹೆಚ್ಚು ಮಾತನಾಡುವುದಿಲ್ಲ ಎನ್ನುವುದನ್ನೇ ವಿರೋಧಿಗಳು ದೊಡ್ಡದಾಗಿ ಪ್ರಸ್ತಾಪಿಸುತ್ತಿದ್ದರು. ಆದರೆ, ನಾನು ಪ್ರತಿಬಾರಿ ವಿದೇಶ ಪ್ರವಾಸಕ್ಕೆ ಹೋಗುವಾಗ ಪತ್ರಕರ್ತರನ್ನು ಜೊತೆಗೆ ಕರೆದೊಯ್ಯುತ್ತಿದ್ದೆ. ವಿಶೇಷ ವಿಮಾನದಲ್ಲಿ ಅಥವಾ ಪ್ರವಾಸ ಮುಗಿದ ನಂತರ ಸ್ವದೇಶದಲ್ಲಿ ಪತ್ರಿಕಾಗೋಷ್ಠಿ ನಡೆಸುತ್ತಿದ್ದೆ’ ಎಂದು ಸಿಂಗ್ ನೆನಪಿಸಿಕೊಂಡರು.

ಈ ಹೇಳಿಕೆಗಳ ಮೂಲಕ ‘ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿ ಐದು ವರ್ಷ ಸಮೀಪಿಸಿದರೂ ನರೇಂದ್ರ ಮೋದಿ ಒಂದೂ ಪತ್ರಿಕಾಗೋಷ್ಠಿ ನಡೆಸಿಲ್ಲ’ ಎಂದು ಸಿಂಗ್‌ ಪರೋಕ್ಷವಾಗಿ ಟೀಕಿಸಿದರು.

‘ಜನರು ನನ್ನನ್ನು ಮಾತನಾಡದ ಪ್ರಧಾನಿ ಎಂದು ಟೀಕಿಸುತ್ತಾರೆ. ಆದರೆ ವಾಸ್ತವ ಏನು ಎಂಬುದು ಈ ಸಂಪುಟಗಳನ್ನು ನೋಡಿದಾಗ ಅರ್ಥವಾಗುತ್ತದೆ. ನಾನು ಮಾಧ್ಯಮಗಳೊಂದಿಗೆ ಮಾತನಾಡಲು ಹೆದರುತ್ತಿದ್ದ ಪ್ರಧಾನಿ ಆಗಿರಲಿಲ್ಲ. ಕೆಲವರು ನನ್ನನ್ನು ಆಕಸ್ಮಿಕವಾಗಿ ಪ್ರಧಾನಿಯಾದ ವ್ಯಕ್ತಿ ಎನ್ನುತ್ತಾರೆ. ನಾನು ಹಣಕಾಸು ಸಚಿವನಾಗಿದ್ದೂ ಕೇವಲ ಆಕಸ್ಮಿಕ ಎಂದು ನನಗೇ ಹಲವು ಬಾರಿ ಅನ್ನಿಸಿದ್ದುಂಟು’ ಎಂದು ಸಿಂಗ್ ನುಡಿದರು.

ಮೋದಿ ಅವರನ್ನು ಸಿಂಗ್ ಟೀಕಿಸುತ್ತಿರುವುದು ಇದೇ ಮೊದಲಲ್ಲ. ನವೆಂಬರ್‌ನಲ್ಲಿ ಕಾಂಗ್ರೆಸ್ ನಾಯಕ ಮನೀಶ್ ತಿವಾರಿ ಅವರ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಸಿಂಗ್, ‘ಪ್ರಧಾನಿ ಕಚೇರಿಯಲ್ಲಿ ಹೇಗೆ ವರ್ತಿಸಬೇಕೋ ಹಾಗೆ ಇರಬೇಕು. ಇದು ನರೇಂದ್ರ ಮೋದಿ ಅವರಿಗೆ ನನ್ನ ಸಲಹೆ’ ಎಂದು ಹೇಳಿದ್ದು ದೊಡ್ಡ ಸುದ್ದಿಯಾಗಿತ್ತು.

ಈ ತಿಂಗಳ ಆರಂಭದಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ‘ಈವರೆಗೆ ಒಂದೂ ಪತ್ರಿಕಾಗೋಷ್ಠಿ ನಡೆಸದ ಪ್ರಧಾನಿ’ ಎಂದು ಮೋದಿ ಅವರನ್ನು ಟೀಕಿಸಿದ್ದರು. ‘ಪತ್ರಕರ್ತರು ನಮ್ಮನ್ನು ಪ್ರಶ್ನಿಸುವುದು ಒಂದು ಥರ ಚೆನ್ನಾಗಿರುತ್ತೆ. ಪತ್ರಕರ್ತರೊಂದಿಗೆ ನಮ್ಮ ಪ್ರಧಾನಿ ಮಾತನಾಡಬೇಕು’ ಎಂದು ಸಲಹೆ ಮಾಡಿದ್ದರು.

ಬರಹ ಇಷ್ಟವಾಯಿತೆ?

 • 54

  Happy
 • 1

  Amused
 • 0

  Sad
 • 1

  Frustrated
 • 7

  Angry

Comments:

0 comments

Write the first review for this !