ಪರ್ರೀಕರ್‌ ಅನಾರೋಗ್ಯ: ರಾಜೀನಾಮೆಗೆ ಹೆಚ್ಚಿದ ಒತ್ತಡ

7
ಅಧಿಕಾರ ಹಸ್ತಾಂತರಕ್ಕೆ ಮಿತ್ರಪಕ್ಷದ ಒತ್ತಾಯ: ಗೋವಾದಲ್ಲಿ ರಾಜಕೀಯ ಅಸ್ಥಿರತೆ

ಪರ್ರೀಕರ್‌ ಅನಾರೋಗ್ಯ: ರಾಜೀನಾಮೆಗೆ ಹೆಚ್ಚಿದ ಒತ್ತಡ

Published:
Updated:
Deccan Herald

ಪಣಜಿ :  ಗೋವಾ ಮುಖ್ಯಮಂತ್ರಿ ಮನೋಹರ್‌ ಪರ್ರೀಕರ್‌ ಮತ್ತೆ ಅನಾರೋಗ್ಯಕ್ಕೆ ತುತ್ತಾದ ಬೆನ್ನಲ್ಲೇ, ಅವರ ರಾಜೀನಾಮೆಗೆ ಒತ್ತಡ ಹೆಚ್ಚಿದೆ. 

ಉದರಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವ ಪರ್ರೀಕರ್‌, ಶನಿವಾರ ದೆಹಲಿಯ ಏಮ್ಸ್‌ಗೆ ದಾಖಲಾಗಿದ್ದಾರೆ. ಅಮೆರಿಕದಲ್ಲಿ ಚಿಕಿತ್ಸೆ ಪಡೆದು ಕಳೆದ ಸೆಪ್ಟೆಂಬರ್‌ನಲ್ಲಿ ಸ್ವದೇಶಕ್ಕೆ ಮರಳಿದ್ದ ಅವರು, ಕೆಲವೇ ದಿನಗಳಲ್ಲಿ ಗೋವಾದ ಕಾಂಡೊಲಿಮ್‌ ಆಸ್ಪತ್ರೆಗೆ ದಾಖಲಾಗಿದ್ದರು. 

’ಪರ್ರೀಕರ್‌ ಅವರು ಪದೇ ಪದೇ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದು, ತಮ್ಮ ಸಂಪುಟದಲ್ಲಿನ ಹಿರಿಯ ಸಚಿವರಿಗೆ ಅವರು ಸ್ಥಾನ ಬಿಟ್ಟುಕೊಡಬೇಕು’ ಎಂದು ಸರ್ಕಾರದ ಪಾಲುದಾರ ಪಕ್ಷವಾದ ಮಹಾರಾಷ್ಟ್ರವಾದಿ ಗೋಮಾಂತಕ ಪಾರ್ಟಿ (ಎಂಜಿಪಿ) ಒತ್ತಾಯಿಸಿದೆ. 

‘ಆಡಳಿತ ಸುಗಮವಾಗಿ ನಡೆಯಬೇಕೆಂದರೆ ಪರ್ರೀಕರ್‌ ಬೇರೆಯವರಿಗೆ ಅಧಿಕಾರ ಹಸ್ತಾಂತರಿಸುವುದು ಒಳಿತು’ ಎಂದು ಎಂಜಿಪಿ ಅಧ್ಯಕ್ಷ ದೀಪಕ್‌ ಧವಳಿಕರ್‌ ಅಭಿಪ್ರಾಯಪಟ್ಟಿದ್ದಾರೆ.

ಲೋಕೋಪಯೋಗಿ ಸಚಿವ ಸುದಿನ್‌ ಧವಳಿಕರ್‌ ಸದ್ಯ ಪರ್ರೀಕರ್‌ ಸಂಪುಟದಲ್ಲಿ ಹಿರಿಯ ಸದಸ್ಯರಾಗಿದ್ದಾರೆ.

‘ಪರ್ರೀಕರ್‌ ಏಕೆ ಅಧಿಕಾರ ಹಸ್ತಾಂತರಿಸಬೇಕು. ಅವರು ಸರ್ಕಾರ ನಡೆಸುತ್ತಿದ್ದಾರೆ ಮತ್ತು ಮುಖ್ಯಮಂತ್ರಿ ಹುದ್ದೆ ಖಾಲಿ ಇಲ್ಲ’ ಎಂದು ಕೃಷಿ ಸಚಿವ ವಿಜಯ್‌ ಸರ್ದೇಸಾಯಿ ಹೇಳಿದ್ದಾರೆ. 

‘ಮುಖ್ಯಮಂತ್ರಿಯವರ ಸತತ ಅನುಪಸ್ಥಿತಿಯಿಂದ ಆಡಳಿತ ವ್ಯವಸ್ಥೆ ಹದಗೆಟ್ಟು ಹೋಗಿದೆ’ ಎಂದು ಕಾಂಗ್ರೆಸ್‌ ದೂರಿದೆ. 

‘ಮುಖ್ಯಮಂತ್ರಿಯವರು ಹುದ್ದೆಯಿಂದ ಕೆಳಗೆ ಇಳಿಯುತ್ತಾರೋ, ಇಲ್ಲವೋ ಎಂಬುದು ನಮಗೆ ಗೊತ್ತಿಲ್ಲ. ಆದರೆ, ಆಡಳಿತವನ್ನು ನಾವು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. 16 ತಿಂಗಳುಗಳಿಂದ ರಾಜ್ಯದಲ್ಲಿ ಆಡಳಿತ ಯಂತ್ರ ಕುಸಿದಿದೆ. ಇದಕ್ಕೆ ಬಿಜೆಪಿ ಮತ್ತು ಎಂಜಿಪಿಯೇ ಕಾರಣ’ ಎಂದು ಕಾಂಗ್ರೆಸ್‌ ರಾಜ್ಯಘಟಕದ ಅಧ್ಯಕ್ಷ ಗಿರೀಶ ಛೋಡಂಕರ್‌ ದೂರಿದ್ದಾರೆ.

ಬಿಜೆಪಿ ಅಧ್ಯಕ್ಷ ಅಮಿತ್‌ ಶಾ, ‘ನಾವು ಪರ್ರೀಕರ್‌ ಅವರ ಆರೋಗ್ಯ ಸುಧಾರಿಸಲಿ ಎಂದು ಪ್ರಾರ್ಥಿಸುತ್ತಿದ್ದೇವೆ. ಸೂಕ್ತ ಸಮಯದಲ್ಲಿ ಈ ಕುರಿತು ಪಕ್ಷವು ನಿರ್ಧಾರ ಕೈಗೊಳ್ಳಲಾಗುವುದು. ಅಲ್ಲಿಯವರೆಗೂ ಪರ್ರೀಕರ್‌ ಅವರೇ ಮುಖ್ಯಮಂತ್ರಿಯಾಗಿ ಮುಂದುವರಿಯುವರು’ ಎಂದು ಹೇಳಿದ್ದಾರೆ.

ಗೋವಾದಲ್ಲಿ ರಾಜಕೀಯ ಅಸ್ಥಿರತೆ

ಮುಖ್ಯಮಂತ್ರಿಯವರ ಅನಾರೋಗ್ಯದ ಕಾರಣದಿಂದ ಗೋವಾದಲ್ಲಿ ರಾಜಕೀಯ ಅಸ್ಥಿರತೆ ಉಂಟಾಗಿದ್ದು, ಪರಿಸ್ಥಿತಿಯ ಲಾಭ ಪಡೆಯಲು ಕಾಂಗ್ರೆಸ್‌ ಯೋಚಿಸುತ್ತಿದೆ. 

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಏಕೈಕ ದೊಡ್ಡಪಕ್ಷವಾಗಿ ಹೊರಹೊಮ್ಮಿದ್ದರೂ, ಸರ್ಕಾರ ರಚಿಸುವಷ್ಟು ಬಹುಮತ ಪಡೆಯುವಲ್ಲಿ ಕಾಂಗ್ರೆಸ್‌ ವಿಫಲವಾಗಿದೆ. ಎಂಜಿಪಿ ಹಾಗೂ ಗೋವಾ ಫಾರ್ವರ್ಡ್‌ ಪಕ್ಷಗಳೊಡನೆ (ಜಿಎಫ್‌ಪಿ) ಸೇರಿ ಬಿಜೆಪಿ ಸರ್ಕಾರ ರಚಿಸಿದೆ. ಎಂಜಿಪಿಯೇ ಮುಖ್ಯಮಂತ್ರಿ ಬದಲಾವಣೆಗೆ ಒತ್ತಾಯಿಸುತ್ತಿರುವುದರಿಂದ ಕಾಂಗ್ರೆಸ್‌ ಮತ್ತೆ ಸರ್ಕಾರ ರಚಿಸುವ ನಿಟ್ಟಿನಲ್ಲಿ ಉತ್ಸಾಹ ತೋರುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಲಾಗುತ್ತಿದೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !