ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಯಾರಿಕೆಯಲ್ಲಿ ಆಗುತ್ತಿಲ್ಲ ಏರಿಕೆ: ನೀತಿ ಆಯೋಗ

ಕೇಂದ್ರದ ಮಹತ್ವಾಕಾಂಕ್ಷೆಯ ರೀತಿಯಲ್ಲಿ ಇಲ್ಲ ವಾಸ್ತವ ಸ್ಥಿತಿ
Last Updated 19 ಡಿಸೆಂಬರ್ 2018, 18:56 IST
ಅಕ್ಷರ ಗಾತ್ರ

ನವದೆಹಲಿ: ಭಾರತದ ತಯಾರಿಕಾ ವಲಯದ ಮೌಲ್ಯವು ಮುಂದಿನ ನಾಲ್ಕು ವರ್ಷಗಳಲ್ಲಿ ಸುಮಾರು ₹70 ಲಕ್ಷ ಕೋಟಿಗೆ ಏರಲಿದೆ ಎಂಬ ಕೇಂದ್ರ ಸರ್ಕಾರದ ಹೇಳಿಕೆಗೆ ನೀತಿ ಆಯೋಗದ ವರದಿ ತಣ್ಣೀರೆರಚಿದೆ.

ನರೇಂದ್ರ ಮೋದಿ ಅವರು ಪ್ರಧಾನಿಯಾದ ನಂತರದ ನಾಲ್ಕೂವರೆ ವರ್ಷಗಳಲ್ಲಿ ಭಾರತದ ಒಟ್ಟು ದೇಶಿ ಉತ್ಪನ್ನದಲ್ಲಿ (ಜಿಡಿಪಿ) ತಯಾರಿಕಾ ವಲಯದ ಪಾಲು ಅರ್ಧ ಶೇಕಡಾದಷ್ಟು ಮಾತ್ರ ಏರಿಕೆಯಾಗಿದೆ ಎಂದು ನೀತಿ ಆಯೋಗ ಹೇಳಿದೆ.

‘75ನೇ ವರ್ಷದಲ್ಲಿ ನವಭಾರತದ ಕಾರ್ಯತಂತ್ರ’ ಎಂಬ ಹೆಸರಿನಲ್ಲಿ ಆಯೋಗವು ಕ್ರೋಡೀಕರಿಸಿದ ದತ್ತಾಂಶಗಳ ಪುಸ್ತಕವನ್ನು ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ಅವರು ಬುಧವಾರ ಬಿಡುಗಡೆ ಮಾಡಿದರು.

‘ಕಡಿಮೆ ಮತ್ತು ಮಧ್ಯಮ ಆದಾಯದ ದೇಶಗಳಿಗೆ ಹೋಲಿಸಿದರೆ ಭಾರತದ ಜಿಡಿಪಿಯಲ್ಲಿ ತಯಾರಿಕಾ ವಲಯದ ಪಾಲು ಕಡಿಮೆ ಇದೆ. 1991ರಲ್ಲಿ ಆರ್ಥಿಕ ಉದಾರೀಕರಣ ಜಾರಿಗೆ ಬಂದ ನಂತರದ ಕಾಲು ಶತಮಾನದಲ್ಲಿ ಈ ಪ್ರಮಾಣ ಗಣನೀಯವಾದ ಏರಿಕೆ ಕಂಡಿಲ್ಲ.

‘ತಯಾರಿಕಾ ವಲಯದೊಳಗೆ ನೋಡಿದರೆ ಹೆಚ್ಚು ಬಂಡವಾಳ ಬೇಡುವ ವಾಹನ ಮತ್ತು ಔಷಧ ಕ್ಷೇತ್ರಗಳಲ್ಲಿ ಪ್ರಗತಿಯ ಪ್ರಮಾಣ ಹೆಚ್ಚು. ಭಾರತವು ಹೊಂದಿರುವ ಕಾರ್ಮಿಕ ಶಕ್ತಿ ಮತ್ತು ಕೌಶಲದ ಪ್ರಯೋಜನ ಪಡೆಯುವಲ್ಲಿ ವಿಫಲವಾಗಿರುವುದೇ ತಯಾರಿಕಾ ಕ್ಷೇತ್ರ ಪ್ರಗತಿ ಹೊಂದದಿರಲು ಕಾರಣ’ ಎಂದು ನೀತಿ ಆಯೋಗದ ವರದಿ ಹೇಳಿದೆ.

ಸಮರ್ಪಕವಾಗಿ ರೂಪಿಸಿದ ಸಾಗರಮಾಲಾ, ಭಾರತಮಾಲಾ, ಕೈಗಾರಿಕಾ ವಸಾಹತುಗಳು ಮತ್ತು ಪ್ರಧಾನ ಮಂತ್ರಿ ಆವಾಸ್‌ ಯೋಜನೆಯಂತಹ ಸರ್ಕಾರದ ಭಾರಿ ಯೋಜನೆಗಳು ಮಾತ್ರ ದೇಶೀಯ ತಯಾರಿಕಾ ವಲಯವನ್ನು ಉತ್ತೇಜಿಸಬಲ್ಲವು ಎಂದು ವರದಿ ಅಭಿಪ್ರಾಯಪಟ್ಟಿದೆ.

ಹೆಚ್ಚು ಕಾರ್ಮಿಕರು ಬೇಕಿರುವ ವಜ್ರ ಮತ್ತು ಆಭರಣ, ಎಂಜಿನಿಯರಿಂಗ್‌ ಸರಕುಗಳು, ಚರ್ಮ ಮತ್ತು ಜವಳಿಯಂತಹ ಕ್ಷೇತ್ರಗಳು ಕುಂಟುತ್ತಿವೆ. ದೇಶದ ಕಾರ್ಮಿಕ ವರ್ಗದ ಶೇ 85ರಷ್ಟು ಮಂದಿಗೆ ಈ ಕ್ಷೇತ್ರಗಳು ಕೆಲಸ ಕೊಡುತ್ತಿವೆ. ಇಲ್ಲೆಲ್ಲ ಅನೌಪಚಾರಿಕ ಉದ್ಯೋಗ ವ್ಯವಸ್ಥೆ ಇದೆ. ಔಪಚಾರಿಕ ಕ್ಷೇತ್ರಗಳಲ್ಲಿ ಇಂತಹುದೇ ಕೆಲಸ ಮಾಡುವವರಿಗಿಂತ 20 ಪಟ್ಟು ಕಡಿಮೆ ವೇತನಕ್ಕೆ ಇವರು ದುಡಿಯುತ್ತಿದ್ದಾರೆ ಎಂಬುದನ್ನು ನೀತಿ ಆಯೋಗ ಗುರುತಿಸಿದೆ.

ಪ್ರತಿ ವರ್ಷ ಸೇರ್ಪಡೆಯಾಗುವ ಹೊಸ ಕಾರ್ಮಿಕರಿಗೆ ಉದ್ಯೋಗ ಕೊಡಲು 80–90 ಲಕ್ಷ ಉದ್ಯೋಗ ಸೃಷ್ಟಿಸಬೇಕು. ಭಾರತದ ಜನಸಂಪತ್ತಿನ ಲಾಭ ಪಡೆದುಕೊಳ್ಳಲು ಉತ್ತಮ ವೇತನ ಮತ್ತು ಉತ್ಪಾದಕತೆಯ ಉದ್ಯೋಗಗಳನ್ನು ಸೃಷ್ಟಿಸಬೇಕು ಎಂದು ವರದಿಯಲ್ಲಿ ಸಲಹೆ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT