ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಡಿಶಾ: ನಕ್ಸಲರಿಂದ ರಸ್ತೆ ನಿರ್ಮಾಣ ಮೇಲ್ವಿಚಾರಕನ ಹತ್ಯೆ

Last Updated 12 ಮಾರ್ಚ್ 2019, 12:18 IST
ಅಕ್ಷರ ಗಾತ್ರ

ಮಲ್ಕನ್‌ಗಿರಿ (ಒಡಿಶಾ): 25 ಮಂದಿಯ ಶಸ್ತ್ರ ಸಜ್ಜಿತ ನಕ್ಸಲರ ಗುಂಪು ಸೋಮವಾರ ಸಂಜೆ ಒಡಿಶಾದ ಮಲ್ಕನ್‌ಗಿರಿ ಜಿಲ್ಲೆಯಲ್ಲಿ ರಸ್ತೆ ನಿರ್ಮಾಣ ಮೇಲ್ವಿಚಾರಕನ ಮೇಲೆ ದಾಳಿ ನಡೆಸಿ ಹತ್ಯೆ ಮಾಡಿದೆ. ಅಲ್ಲದೆ, ರಸ್ತೆ ನಿರ್ಮಾಣ ಜಾಗದಲ್ಲಿ ಮೂರು ವಾಹನಗಳು ಮತ್ತು ನೆಲ ಅಗೆಯುವ ಯಂತ್ರಕ್ಕೂ ಬೆಂಕಿ ಹಚ್ಚಿದೆ.

ನಕ್ಸಲರು ದಾಳಿ ನಡೆಸಿದಾಗ ಸ್ಥಳದಲ್ಲಿದ್ದ ನೌಕರರು ಮತ್ತು ಕಾರ್ಮಿಕರು ಓಡಿ ಹೋಗಿ ಜೀವ ಉಳಿಸಿಕೊಂಡಿದ್ದಾರೆ. ಹತ್ಯೆಯಾದ ಮೇಲ್ವಿಚಾರಕನನ್ನು ಪ್ರಭಾತ್‌ ಬಿಷೊಯಿ ಎಂದು ಗುರುತಿಸಲಾಗಿದೆ.

ಇವರನ್ನು ನಕ್ಸಲರು ಮಥಿಲಿ ಠಾಣೆ ವ್ಯಾಪ್ತಿಯ ಕುಕುರ್‌ಕಂಡಿ ಗ್ರಾಮದಲ್ಲಿ ರಸ್ತೆ ನಿರ್ಮಾಣ ಸ್ಥಳಕ್ಕೆ ಹತ್ತಿರದ ಅರಣ್ಯಕ್ಕೆ ಎಳೆದೊಯ್ದು ಮರಕ್ಕೆ ಕಟ್ಟಿಹಾಕಿ ಹತ್ಯೆ ಮಾಡಿದ್ದಾರೆ ಎಂದು ಮಲ್ಕನ್‌ಗಿರಿ ಎಸ್ಪಿ ಜಗಮೋಹನ್‌ ಮೀನಾ ತಿಳಿಸಿದ್ದಾರೆ.

ನಕ್ಸಲ್‌ ದಾಳಿ ಬಗ್ಗೆ ಸ್ಥಳೀಯರಿಂದ ಮಾಹಿತಿ ಸಿಕ್ಕಿದ ತಕ್ಷಣ ಸ್ಥಳಕ್ಕೆ ಪೊಲೀಸ್‌ ತಂಡವನ್ನು ಕಳುಹಿಸಲಾಗಿದೆ. ಛತ್ತೀಸಗಡಕ್ಕೆ ಹೊಂದಿಕೊಂಡಿರುವ ಈ ಪ್ರದೇಶದಲ್ಲಿ ನಕ್ಸಲರ ನಿಗ್ರಹಕ್ಕೆ ಜಂಟಿ ಕಾರ್ಯಾಚರಣೆ ಮತ್ತು ಗಸ್ತು ತೀವ್ರಗೊಳಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಛತ್ತೀಸಗಡದ ಮಾವೋವಾದಿಗಳು ಈ ದಾಳಿಯಲ್ಲಿ ಭಾಗಿಯಾಗಿ ಹತ್ಯೆ ನಡೆಸಿರುವ ಬಗ್ಗೆ ಶಂಕೆ ಇದೆ. ತನಿಖೆ ಪ್ರಗತಿಯಲ್ಲಿದೆ ಎಂದು ಎಸ್ಪಿ ತಿಳಿಸಿದ್ದಾರೆ.

ರಸ್ತೆ ನಿರ್ಮಾಣ ಸ್ಥಗಿತಗೊಳಿಸುವಂತೆ ನಕ್ಸಲರು ಇತ್ತೀಚೆಗಷ್ಟೇ ಬೆದರಿಕೆ ಹಾಕಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT