ಮಸೂದ್‌ಗೆ ಉಗ್ರ ಪಟ್ಟ: ಚೀನಾ ಬೆಂಬಲ ಸಾಧ್ಯತೆ ಕ್ಷೀಣ

ಗುರುವಾರ , ಏಪ್ರಿಲ್ 25, 2019
21 °C

ಮಸೂದ್‌ಗೆ ಉಗ್ರ ಪಟ್ಟ: ಚೀನಾ ಬೆಂಬಲ ಸಾಧ್ಯತೆ ಕ್ಷೀಣ

Published:
Updated:

ಬೀಜಿಂಗ್‌: ವಿಂಗ್‌ ಕಮಾಂಡರ್‌ ಅಭಿನಂದನ್‌ ಅವರನ್ನು ಪಾಕಿಸ್ತಾನ ಬಿಡುಗಡೆ ಮಾಡಿರುವುದನ್ನು ಚೀನಾ ಸ್ವಾಗತಿಸಿದೆ. ಪ್ರಾದೇಶಿಕ ಶಾಂತಿ ಮತ್ತು ಸ್ಥಿರತೆಗಾಗಿ ಭಾರತ ಮತ್ತು ಪಾಕಿಸ್ತಾನಗಳೆರಡೂ ಭಯೋತ್ಪಾದನೆ ನಿಗ್ರಹಕ್ಕೆ ಜತೆಗೂಡಿ ಕೆಲಸ ಮಾಡಬೇಕು ಎಂದೂ ಚೀನಾ ಹೇಳಿದೆ. 

ಉಗ್ರ ಮಸೂದ್‌ ಅಜರ್‌ನನ್ನು ಭಯೋತ್ಪಾದಕ ಎಂದು ವಿಶ್ವಸಂಸ್ಥೆ ಘೋಷಿಸಬೇಕು ಎಂಬ ನಿರ್ಣಯದ ಪರ ನಿಲ್ಲುವ ಬಗ್ಗೆ ಯಾವುದೇ ಸ್ಪಷ್ಟತೆಯನ್ನು ಚೀನಾ ಪ್ರಕಟಿಸಿಲ್ಲ. ಸಂಘಟನೆಗಳು ಮತ್ತು ವ್ಯಕ್ತಿಗಳನ್ನು ಭಯೋತ್ಪಾದಕರೆಂದು ಘೋಷಿಸಲು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಸ್ಪಷ್ಟವಾದ ನಿಯಮಗಳಿವೆ. ಚೀನಾವು ಜವಾಬ್ದಾರಿಯುತವಾಗಿ ನಡೆದುಕೊಳ್ಳಲಿದೆ. ಭದ್ರತಾ ಮಂಡಳಿಯ ಎಲ್ಲ ಸಭೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಲಿದೆ ಎಂದು ಚೀನಾದ ವಿದೇಶಾಂಗ ವಕ್ತಾರರಾದ ಲು ಕಾಂಗ್‌ ಹೇಳಿದ್ದಾರೆ. ಈ ಮೂಲಕ, ಮಸೂದ್‌ನನ್ನು ಉಗ್ರನೆಂದು ಘೋಷಿಸುವ ಪ್ರಯತ್ನಕ್ಕೆ ಪೂರಕವಾಗಿ ಸ್ಪಂದಿಸುವ ಸಾಧ್ಯತೆ ಇಲ್ಲ ಎಂಬ ಪರೋಕ್ಷ ಸೂಚನೆ ನೀಡಿದೆ.

ಎರಡೂ ದೇಶಗಳ ನಡುವಣ ಮಾತುಕತೆಗೆ ಪೈಲಟ್‌ ಬಿಡುಗಡೆ ಮೊದಲ ಹೆಜ್ಜೆಯಾಗಲಿ ಎಂದು ಚೀನಾ ಆಶಿಸಿದೆ. 

‘ಎರಡೂ ದೇಶಗಳು ಸಂಯಮ ಪಾಲಿಸಬೇಕು ಎಂದು ಆರಂಭದಲಿಂದಲೂ ಚೀನಾ ಹೇಳಿಕೊಂಡು ಬಂದಿದೆ. ಮಾತುಕತೆ ಮೂಲಕ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಳ್ಳಬೇಕು ಎಂದು ಹೇಳಿದೆ’ ಎಂದು ಅಭಿನಂದನ್‌ ಬಿಡುಗಡೆಯ ಹಿಂದೆ ಚೀನಾದ ಪಾತ್ರವೇನು ಎಂಬ ಪ್ರಶ್ನೆಗೆ ಲು ಕಾಂಗ್‌ ಉತ್ತರಿಸಿದ್ದಾರೆ. 

ಎರಡೂ ದೇಶಗಳಿಗೆ ಸಂಬಂಧಿಸಿದ ವಿಚಾರಗಳ ಚರ್ಚೆಗೆ ಪೂರಕವಾದ ವಾತಾವರಣ ಸೃಷ್ಟಿಯಾಗಬೇಕು. ಭಯೋತ್ಪಾದನೆ ನಿಗ್ರಹಕ್ಕೆ ಈ ದೇಶಗಳು ಕೈಜೋಡಿಸಿದರೆ ಅದು ಪ್ರಾದೇಶಿಕ ಶಾಂತಿ ಮತ್ತು ಸ್ಥಿರತೆಗೆ ಬಹಳ ಒಳ್ಳೆಯದು ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !