ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಎಎ ವಿರೋಧಿಗಳಿಗೆ ಗುಂಡು: ರಾಮಭಕ್ತ ಗೋಪಾಲನ ದುಷ್ಕೃತ್ಯ

ವಿದ್ಯಾರ್ಥಿಗೆ ಗಾಯ l ಮೂಕಪ್ರೇಕ್ಷಕರಾದ ಪೊಲೀಸರು
Last Updated 31 ಜನವರಿ 2020, 1:11 IST
ಅಕ್ಷರ ಗಾತ್ರ

ನವದೆಹಲಿ: ಅಪಾರ ಸಂಖ್ಯೆಯಲ್ಲಿದ್ದ ಪೊಲೀಸರ ಸಮ್ಮುಖದಲ್ಲಿಯೇ ‘ಯೇ ಲೋ ಆಜಾದಿ’ ಎನ್ನುತ್ತಾ ಪ್ರತಿಭಟನನಿರತ ವಿದ್ಯಾರ್ಥಿ ಸಮೂಹದತ್ತ ಯುವ
ಕನೊಬ್ಬ ಗುಂಡು ಹಾರಿಸಿದ ಆತಂಕಕಾರಿ ಘಟನೆ ರಾಜಧಾನಿಯಲ್ಲಿ ಗುರುವಾರ ನಡೆದಿದೆ. ಗುಂಡೇಟಿನಿಂದ ವಿದ್ಯಾರ್ಥಿಯೊಬ್ಬರ ಕೈಗೆ ಗಾಯವಾಗಿದೆ.

ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ಜಾಮಿಯಾ ಮಿಲಿಯಾ ವಿಶ್ವವಿದ್ಯಾಲಯದ ನೂರಾರು ವಿದ್ಯಾರ್ಥಿಗಳು ಹುತಾ
ತ್ಮರ ದಿನದ ಅಂಗವಾಗಿ ಮಹಾತ್ಮ ಗಾಂಧಿ ಸಮಾಧಿ ಇರುವ ‘ರಾಜಘಾಟ್‌’ನತ್ತ ಮೆರವಣಿಗೆ ಹೊರಟಿದ್ದ ಸಂದರ್ಭದಲ್ಲಿ ಈ ಕೃತ್ಯ ನಡೆದಿದೆ.

ಕೃತ್ಯ ಎಸಗಿದ ಯುವಕ ತನ್ನನ್ನು ‘ರಾಮಭಕ್ತ್‌ ಗೋಪಾಲ’ ಎಂದು ಗುರುತಿಸಿಕೊಂಡಿದ್ದಾನೆ. ಈತ ಉತ್ತರ ಪ್ರದೇಶದ ಜೇವರ್‌ ನಿವಾಸಿ ಎಂದು ತಿಳಿದುಬಂದಿದೆ. ಈತನಿಗೆ 18 ವರ್ಷ ತುಂಬಿಲ್ಲ ಎಂದು ಹೇಳಲಾಗಿದೆ.

ವಿದ್ಯಾರ್ಥಿಗಳ ಮೆರವಣಿಗೆ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಪೊಲೀಸರು ಹೆಚ್ಚಿನ ಸಂಖ್ಯೆಯಲ್ಲಿದ್ದರೂ, ಮೌನ ಪ್ರೇಕ್ಷಕರಾದರು. ವಿದ್ಯಾರ್ಥಿಗಳೇ ಯುವಕನ ಮೇಲೆ ಮುಗಿಬಿದ್ದು ಹಿಡಿದರು. ಈತ ಸದ್ಯ ಪೊಲೀಸರ ವಶದಲ್ಲಿದ್ದಾನೆ.

ವಿದ್ಯಾರ್ಥಿಗಳ ನಡುವೆಯೇ ಇದ್ದ ಯುವಕ ಒಂದು ಹಂತದಲ್ಲಿ ಬೇರ್ಪಟ್ಟು ಗುಂಪಿಗೆ ಹಿಮ್ಮುಖವಾಗಿ ನಡೆಯುತ್ತಾ ಜಾಕೆಟ್‌ನಲ್ಲಿ ಇಟ್ಟಿದ್ದ ನಾಡಪಿಸ್ತೂಲ್ ಅನ್ನು ತೆಗೆದಿದ್ದಾನೆ. ವಿದ್ಯಾರ್ಥಿಗಳತ್ತ ಗುರಿ ಮಾಡಿ ‘ತೆಗೆದುಕೊಳ್ಳಿ ನಿಮ್ಮ ಸ್ವಾತಂತ್ರ್ಯ’ (ಯೇ ಲೋ ಆಜಾದಿ) ಎನ್ನುತ್ತಾ ಗುಂಡು ಹಾರಿಸಿದ್ದಾನೆ.

ಕಾಶ್ಮೀರ ಮೂಲದ, ಪತ್ರಿಕೋದ್ಯಮ ವಿದ್ಯಾರ್ಥಿ ಶದಾಬ್ ಫಾರೂಕ್‌ ಅವರ ಕೈಗೆ ಗುಂಡು ತಗುಲಿತು. ಗುಂಡು ಹಾರಿಸಿದ ಯುವಕನ ಖಚಿತವಾದ ಗುರುತು ಪತ್ತೆಗೆ ತನಿಖೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಹೆಚ್ಚಿದ ಆಕ್ರೋಶ: ಇಡೀ ಘಟನೆ ಆತಂಕ ಮೂಡಿಸುವುದರ ಜೊತೆಗೆ, ವಿದ್ಯಾರ್ಥಿಗಳ ಆಕ್ರೋಶಕ್ಕೂ ಕಾರಣವಾಯಿತು. ಬ್ಯಾರಿಕೇಡ್‌ ಮುರಿದು ಪೊಲೀಸರ ಜೊತೆಗೆ ಸಂಘರ್ಷಕ್ಕಿಳಿದರು. ಸಾರ್ವಜನಿಕರೂ ಪ್ರತಿಭಟನೆಯಲ್ಲಿ ಪಾಲ್ಗೊಂಡರು.

ವಿದ್ಯಾರ್ಥಿಗಳ ಗುಂಪಿನತ್ತ ಯುವಕ ರಾಜಾರೋಷವಾಗಿ ಗುಂಡು ಹಾರಿಸಿದ್ದ ದೃಶ್ಯವು ಮಾಧ್ಯಮಗಳ ಟಿ.ವಿ. ಕ್ಯಾಮೆರಾಗಳಲ್ಲಿ ಸೆರೆಯಾಗಿದ್ದು, ದೇಶವ್ಯಾಪಿ ಚರ್ಚೆಗೆ ಗ್ರಾಸವಾಯಿತು.

ಶಾಂತಿ ಪ್ರತಿಭಟನೆಗೆ ಹಿಂಸೆಯ ರೂಪ: ’ಗಾಂಧೀಜಿ ಪುಣ್ಯಸ್ಮರಣೆ ದಿನದಂದು ನಾವು ರಾಜಘಾಟ್‌ವರೆಗೆ ಹಮ್ಮಿಕೊಂಡಿದ್ದ ಶಾಂತಿಯುತ ಪ್ರತಿಭಟನಾ ಮೆರವಣಿಗೆಯು ಗುಂಡಿನ ದಾಳಿಯಿಂದಾಗಿ ಹಿಂಸಾತ್ಮಕ ರೂಪ ತಳೆಯಿತು’ ಎಂದು ವಿದ್ಯಾರ್ಥಿಗಳು ಘಟನೆಯನ್ನು ವಿವರಿಸಿದ್ದಾರೆ.

‘ನಾವು ಇಲ್ಲಿನ ಫ್ಯಾಮಿಲಿ ಹಾಸ್ಪಿಟಲ್‌ ಕಡೆಗೆ ಹೊರಟಿದ್ದೆವು. ಅಲ್ಲಿ ಬ್ಯಾರಿಕೇಡ್‌ ಹಾಕಲಾಗಿತ್ತು. ಅದೆಲ್ಲಿಂದಲೊ ಬಂದ ಯುವಕ ಪಿಸ್ತೂಲ್‌ನಿಂದ ಗುಂಡು
ಹಾರಿಸಿದ. ಒಂದು ಗುಂಡು ನನ್ನ ಗೆಳೆಯನ ಕೈಗೆ ಬಡಿಯಿತು’ ಎಂದು ವಿದ್ಯಾರ್ಥಿನಿ ಆಮ್ನಾ ಆಸಿಫ್‌ ಹೇಳಿದರು.

ಗಾಯಗೊಂಡಿರುವ ಶದಾಬ್‌ ಫಾರೂಕ್‌ನನ್ನು ಏಮ್ಸ್‌ಗೆ ದಾಖಲಿಸಲಾಗಿದೆ ಎಂದರು. ಇನ್ನೊಬ್ಬ ವಿದ್ಯಾರ್ಥಿ ಅಲ್ ಅಮೀನ್‌, ‘ಯುವಕ ನಮ್ಮತ್ತ ಪಿಸ್ತೂಲ್‌ ಗುರಿಯಾಗಿಸಿ, ಯೇ ಲೋ ಆಜಾದಿ ಎಂದು ಕೂಗಿದ’ ಎಂದು ಪ್ರತ್ಯಕ್ಷವಾಗಿ ನಡೆದ ಘಟನೆಯನ್ನು ವಿವರಿಸಿದರು.

ಫೇಸ್‌ಬುಕ್‌ ಲೈವ್‌ನಲ್ಲೂ ಎಚ್ಚರಿಕೆ

ಕೃತ್ಯಕ್ಕೆ ಮುನ್ನ ಯುವಕ ಫೇಸ್‌ಬುಕ್‌ ಲೈವ್‌ನಲ್ಲಿ ಕಾಣಿಸಿಕೊಂಡಿದ್ದ. ‘ಆಜಾದಿ ದೇ ರಹಾ ಹೂಂ (ಸ್ವಾತಂತ್ರ್ಯ ಕೊಡುತ್ತಿದ್ದೇನೆ), ‘ಶಾಹೀನ್‌ ಬಾಗ್‌ ಖೇಲ್‌ ಖತಂ (ಶಾಹೀನ್‌ಬಾಗ್ ಆಟ ಮುಗಿಯಿತು)’ ಎಂಬ ಸಂದೇಶ ಹಾಕಿದ್ದ.

‘ಅಂತಿಮಯಾತ್ರೆಯಲ್ಲಿ ನನ್ನ ದೇಹಕ್ಕೆ ಕೇಸರಿ ಬಟ್ಟೆ ಹೊದಿಸಿ. ಜೈಶ್ರೀರಾಂ ಘೋಷಣೆಗಳು ಮೊಳಗಲಿ’, ‘ನನ್ನ ಕುಟುಂಬದ ಬಗ್ಗೆ ಕಾಳಜಿ ವಹಿಸಿ’ ಎಂಬ ಸಂದೇಶಗಳನ್ನು ಪೋಸ್ಟ್ ಮಾಡಲಾಗಿತ್ತು.

ಫೇಸ್‌ಬುಕ್‌ ಖಾತೆಯಲ್ಲಿಯೂ ‘ರಾಮಭಕ್ತ್‌ ಗೋಪಾಲ್‌’ ಎಂಬ ಹೆಸರೇ ಇದೆ. ಇವುಗಳ ಚಿತ್ರ ಜಾಲತಾಣಗಳಲ್ಲಿ ವೈರಲ್ ಆದಂತೆಯೇ ಫೇಸ್‌ಬುಕ್‌ ಖಾತೆಯನ್ನು ತೆಗೆದು ಮಾಡಲಾಗಿದೆ.

ಕಟ್ಟುನಿಟ್ಟಿನ ಕ್ರಮ: ವಿದ್ಯಾರ್ಥಿಗಳತ್ತ ಗುಂಡು ಹಾರಿಸಿದ ಯುವಕನತ್ತ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಗೃಹ ಸಚಿವ ಅಮಿತ್ ಶಾ ಅವರು ದೆಹಲಿ ಪೊಲೀಸ್‌ ಕಮಿಷನರ್‌ ಅಮೂಲ್ಯ ಪಟ್ನಾಯಿಕ್ ಸೂಚಿಸಿದ್ದಾರೆ.

***

ದೆಹಲಿಯಲ್ಲಿ ಏನಾಗುತ್ತಿದೆ? ಕಾನೂನು ಸುವ್ಯವಸ್ಥೆ ಹದಗೆಡುತ್ತಿದೆ. ಕೇಂದ್ರ ಗೃಹ ಸಚಿವರೇ ದಯವಿಟ್ಟು ಶಾಂತಿ ರಕ್ಷಣೆಗೆ ಕ್ರಮ ತೆಗೆದುಕೊಳ್ಳಿ

- ಅರವಿಂದ ಕೇಜ್ರಿವಾಲ್‌, ದೆಹಲಿ ಸಿ.ಎಂ

***

ಕೇಂದ್ರ ಸರ್ಕಾರ ಇಂಥ ಬೆಳವಣಿಗೆ ಸಹಿಸದು.ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗುವುದು. ತಪ್ಪು ಮಾಡಿದವರ ವಿರುದ್ಧ ಕಠಿಣ ಕ್ರಮ ಖಚಿತ

- ಅಮಿತ್‌ ಶಾ, ಕೇಂದ್ರ ಗೃಹ ಸಚಿವ

***

ಯಾವ ರೀತಿಯ ಪೊಲೀಸ್‌ ಪಡೆಯನ್ನು ಅಮಿತ್‌ ಶಾ ಮುನ್ನಡೆಸುತ್ತಿದ್ದಾರೆ. ಯುವಕ ಗುಂಡು ಹಾರಿಸುತ್ತಿದ್ದರೂ ದೆಹಲಿ ಪೊಲೀಸರು ಕ್ರಮಕೈಗೊಂಡಿಲ್ಲ.

- ಕಾಂಗ್ರೆಸ್‌ ಪಕ್ಷದ ಟ್ವೀಟ್

***

ಕೇಂದ್ರ ಸಚಿವ ಮತ್ತು ಬಿಜೆಪಿ ಮುಖಂಡರು ಮಾಡಿದ ದ್ವೇಷ ಭಾಷಣವೇ ಹಿಂಸೆಗೆ ಪ್ರಚೋದನೆ ನೀಡಿದೆ. ಪ್ರಧಾನಿ ಮೌನವಹಿಸಿದ್ದುದರ ಫಲ ಇದು.

ಸೀತಾರಾಂ ಯೆಚೂರಿ, ಸಿಪಿಎಂ ನಾಯಕ

***

ದೇಶವು ಪ್ರಜಾಪ್ರಭುತ್ವದಿಂದ ಗುಂಪಿನ ಪ್ರಭುತ್ವದತ್ತ ಸಾಗುತ್ತಿರುವುದನ್ನು ಬಹುಶಃ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳ ಮೇಲಿನ ಗುಂಡಿನ ದಾಳಿ ಪೂರ್ಣಗೊಳಿಸಿದಂತಾಗಿಸಿದೆ.
- ಮೆಹಬೂಬಾ ಮುಫ್ತಿ, ಪಿಡಿಪಿ ಅಧ್ಯಕ್ಷೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT