ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾಮೈತ್ರಿಗೆ ಮೊಟಕಿದ ಮಾಯಾವತಿ

ಮಧ್ಯಪ್ರದೇಶ, ಉತ್ತರಾಖಂಡದಲ್ಲಿ ಎಸ್‌ಪಿ–ಬಿಎಸ್‌ಪಿ ಮೈತ್ರಿ: ಬಿಹಾರದಲ್ಲಿ ಏಕಾಂಗಿ ಸ್ಪರ್ಧೆ
Last Updated 25 ಫೆಬ್ರುವರಿ 2019, 18:13 IST
ಅಕ್ಷರ ಗಾತ್ರ

ಲಖನೌ/ಪಟ್ನಾ: ಬಿಜೆಪಿ ವಿರುದ್ಧದ ಪಕ್ಷಗಳನ್ನು ಒಗ್ಗೂಡಿಸಿ ಮುಂಬರುವ ಲೋಕಸಭಾ ಚುನಾವಣೆ ಎದುರಿಸುವ ಕಾಂಗ್ರೆಸ್‌ ಪಕ್ಷದ ಪ್ರಯತ್ನ ದೊಡ್ಡ ಹಿನ್ನಡೆ ಕಂಡಿದೆ.

80 ಲೋಕಸಭಾ ಕ್ಷೇತ್ರಗಳನ್ನು ಹೊಂದಿರುವ ಉತ್ತರ ಪ್ರದೇಶದಲ್ಲಿ ಎಸ್‌ಪಿ ಮತ್ತು ಬಿಎಸ್‌ಪಿ ಮೈತ್ರಿಕೂಟವು ಕಾಂಗ್ರೆಸ್‌ ಪಕ್ಷವನ್ನು ಈಗಾಗಲೇ ಹೊರಗಿಟ್ಟಿದೆ. ಅದರ ಬೆನ್ನಿಗೇ, ಕಾಂಗ್ರೆಸ್‌ ಆಳ್ವಿಕೆ ಇರುವ ಮಧ್ಯ ಪ್ರದೇಶ ಮತ್ತು ಉತ್ತರಾಖಂಡದಲ್ಲಿಯೂ ಎಸ್‌ಪಿ–ಬಿಎಸ್‌ಪಿ ಮೈತ್ರಿಕೂಟ ಸ್ಪರ್ಧಿಸಲಿದೆ. ಬಿಹಾರದ ಎಲ್ಲ 40 ಲೋಕಸಭಾ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಾಗುವುದು ಎಂದೂ ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಹೇಳಿದ್ದಾರೆ.

ಮಧ್ಯ ಪ್ರದೇಶ ಮತ್ತು ಉತ್ತರಾಖಂಡ ರಾಜ್ಯಗಳಲ್ಲಿಯೂ ಲೋಕಸಭಾ ಚುನಾವಣೆಗೆ ಮೈತ್ರಿ ವಿಸ್ತರಣೆಯಾಗಲಿದೆ ಎಂದು ಎಸ್‌ಪಿ ಅಧ್ಯಕ್ಷ ಅಖಿಲೇಶ್ ಯಾದವ್‌ ಮತ್ತು ಮಾಯಾವತಿ ಅವರು ಜಂಟಿ ಹೇಳಿಕೆ ಪ್ರಕಟಿಸಿದ್ದಾರೆ. ಈ ಹೊಂದಾಣಿಕೆ ಪ್ರಕಾರ, ಮಧ್ಯ ಪ್ರದೇಶದ ಮೂರು ಮತ್ತು ಉತ್ತರಾಖಂಡದ ಒಂದು ಕ್ಷೇತ್ರಗಳಲ್ಲಿ ಎಸ್‌ಪಿ ಸ್ಪರ್ಧಿಸಲಿದೆ. ಉಳಿದೆಲ್ಲ ಕ್ಷೇತ್ರಗಳಲ್ಲಿ ಬಿಎಸ್‌ಪಿ ಅಭ್ಯರ್ಥಿಗಳು ಕಣಕ್ಕಿಳಿಯಲಿದ್ದಾರೆ. ಮಧ್ಯ ಪ್ರದೇಶದಲ್ಲಿ ಒಟ್ಟು 29 ಮತ್ತು ಉತ್ತರಾಖಂಡದಲ್ಲಿ ಒಟ್ಟು ಐದು ಕ್ಷೇತ್ರಗಳಿವೆ.

ಬಿಜೆಪಿ ಸುದೀರ್ಘ ಕಾಲ ಪ್ರಾಬಲ್ಯ ಹೊಂದಿದ್ದ ಮಧ್ಯ ಪ್ರದೇಶ ಮತ್ತು ಉತ್ತರಾಖಂಡದಲ್ಲಿ ಕಾಂಗ್ರೆಸ್‌ ಈಗ ಚೇತರಿಸಿಕೊಂಡಿದೆ. 2014ರ ಲೋಕಸಭಾ ಚುನಾವಣೆಯಲ್ಲಿ ಉತ್ತರಾಖಂಡದ ಎಲ್ಲ ಐದು ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ದಿತ್ತು. ಮಧ್ಯ ಪ್ರದೇಶ 27 ಕ್ಷೇತ್ರಗಳನ್ನು ವಶಪಡಿಸಿಕೊಂಡಿತ್ತು. ಈ ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಎರಡು ಕ್ಷೇತ್ರಗಳಲ್ಲಿ ಗೆಲ್ಲಲು ಮಾತ್ರ ಸಾಧ್ಯವಾಗಿತ್ತು.

ಈಗ ಚಿತ್ರಣ ಸ್ವಲ್ಪ ಬದಲಾದಂತೆ ಕಾಣಿಸುತ್ತಿದೆ. ಮಧ್ಯ ಪ್ರದೇಶ ಮತ್ತು ಉತ್ತರಾಖಂಡದಲ್ಲಿ ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷವು ಉತ್ತಮ ಸಾಧನೆ ಮಾಡಿದೆ. ಉತ್ತರಾಖಂಡದಲ್ಲಿ ಭಾರಿ ಗೆಲುವು ದಾಖಲಿಸಿದರೆ, ಮಧ್ಯ ಪ್ರದೇಶದಲ್ಲಿ ಸರಳ ಬಹುಮತದ ಹತ್ತಿರಕ್ಕೆ ಬಂದಿದೆ. ಹೀಗಾಗಿ, ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ಕ್ಷೇತ್ರಗಳಲ್ಲಿ ಗೆಲ್ಲುವ ನಿರೀಕ್ಷೆಯನ್ನು ಕಾಂಗ್ರೆಸ್‌ ಇರಿಸಿಕೊಂಡಿದೆ. ಆದರೆ, ಎಸ್‌ಪಿ–ಬಿಎಸ್‌ಪಿ ಮೈತ್ರಿಕೂಟದ ಸ್ಪರ್ಧೆಯಿಂದಾಗಿ ಬಿಜೆಪಿ ವಿರೋಧಿ ಮತಗಳ ವಿಭಜನೆ ಕಾಂಗ್ರೆಸ್‌ ನಿರೀಕ್ಷೆಗೆ ತೊಡರುಗಾಲಾಗಬಹುದು.

ಬಿಹಾರದ ಎಲ್ಲ ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಮಾಯಾವತಿ ನಿರ್ಧಾರವೂ ಕಾಂಗ್ರೆಸ್‌ ಪಾಲಿಗೆ ಕಹಿ ಸುದ್ದಿ.

ಆರ್‌ಜೆಡಿ, ಕಾಂಗ್ರೆಸ್‌ ಮತ್ತು ಇತರ ಕೆಲವು ಪಕ್ಷಗಳು ಜತೆಯಾಗಿ ಮಹಾಮೈತ್ರಿಕೂಟ ರಚಿಸಿಕೊಳ್ಳಲು ನಿರ್ಧರಿಸಿವೆ. ಆರ್‌ಜೆಡಿ ನಾಯಕ ತೇಜಸ್ವಿ ಯಾದವ್‌ ಅವರು ಮಾಯಾವತಿ ಅವರನ್ನು ಇತ್ತೀಚೆಗೆ ಲಖನೌದಲ್ಲಿ ಭೇಟಿಯಾಗಿದ್ದರು. ಹಾಗಾಗಿ ಅವರೂ ಈ ಮಹಾಮೈತ್ರಿಯ ಭಾಗವಾಗಬಹುದು ಎಂದು ನಿರೀಕ್ಷಿಸಲಾಗಿತ್ತು.

ಉತ್ತರ ಪ್ರದೇಶ ಗಡಿ ಭಾಗದ ಮತ್ತು ದಲಿತ ಸಮುದಾಯದ ಮತದಾರರು ಹೆಚ್ಚಾಗಿರುವ ಒಂದೆರಡು ಕ್ಷೇತ್ರಗಳನ್ನು ಬಿಎಸ್‌ಪಿಗೆ ಬಿಟ್ಟುಕೊಡುವ ಸುಳಿವನ್ನೂ ಆರ್‌ಜೆಡಿ ಮುಖಂಡರು ನೀಡಿದ್ದರು. ಬಿಹಾರದ ಕೆಲವು ವಿಧಾನಸಭಾ ಕ್ಷೇತ್ರಗಳಲ್ಲಿ ಬಿಎಸ್‌ಪಿ ಹಿಂದೆ ಗೆದ್ದಿದೆಯಾದರೂ ಲೋಕಸಭಾ ಕ್ಷೇತ್ರದಲ್ಲಿ ಗೆದ್ದದ್ದಿಲ್ಲ. ಈ ರಾಜ್ಯದ ಸಸಾರಾಂ, ಬಕ್ಸಾರ್‌, ಗೋಪಾಲ್‌ಗಂಜ್‌ ಮತ್ತು ವಾಲ್ಮೀಕಿನಗರ ಲೋಕಸಭಾ ಕ್ಷೇತ್ರಗಳಲ್ಲಿ ಬಿಎಸ್‌ಪಿಗೆ ಸಾಕಷ್ಟು ಬೆಂಬಲಿಗರಿದ್ದಾರೆ.

ಹೀಗಾಗಿಯೇ, ಗೋಪಾಲ್‌ಗಂಜ್‌ ಕ್ಷೇತ್ರವನ್ನು ಬಿಎಸ್‌ಪಿಗೆ ಬಿಟ್ಟುಕೊಡಲು ಆರ್‌ಜೆಡಿ ಯೋಚನೆ ಮಾಡಿತ್ತು.

ಬಿಹಾರದ ಎಲ್ಲ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿ ಸಿದ್ಧಪಡಿಸುವಂತೆ ಮಾಯಾವತಿ ಸೂಚಿಸಿದ್ದಾರೆ ಎಂದು ಬಿಹಾರ ಬಿಎಸ್‌ಪಿ ಘಟಕದ ಅಧ್ಯಕ್ಷ ಭರತ್‌ ಬಿಂದ್‌ ಹೇಳಿದ್ದಾರೆ. ಇದೇ 28ರಂದು ರಾಜ್ಯದ ಮುಖಂಡರ ಜತೆಗೆ ಮಾಯಾವತಿ ಸಭೆ ನಡೆಸಲಿದ್ದು, ಬಳಿಕ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಆಗಬಹುದು ಎನ್ನಲಾಗಿದೆ.

ಸೀಟು ಹಂಚಿಕೆಯಲ್ಲಿ ಈವರೆಗೆ ಒಮ್ಮತಕ್ಕೆ ಬರಲಾಗದ್ದಕ್ಕೆಮಹಾಮೈತ್ರಿಯ ಅಂಗಪಕ್ಷಗಳಾದಹಿಂದೂಸ್ತಾನ್‌ ಅವಾಮ್‌ ಮೋರ್ಚಾದ ಮುಖ್ಯಸ್ಥ ಜಿತನ್‌ ರಾಮ್‌ ಮಾಂಝಿ ಮತ್ತು ಎಡಪಕ್ಷಗಳ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮಾಂಝಿ ಅವರು ಮಹಾಮೈತ್ರಿ ತೊರೆದು ಎನ್‌ಡಿಎ ಪಾಳಯ ಸೇರಲಿದ್ದಾರೆ ಎಂಬ ಸುದ್ದಿಗಳೂ ಪ್ರಕಟವಾಗಿವೆ. ಅದರ ಜತೆಗೆ, ಮಾಯಾವತಿ ಅವರ ನಿರ್ಧಾರ ಮಹಾಮೈತ್ರಿಗೆ ಇನ್ನಷ್ಟು ಆಘಾತ ನೀಡಲಿದೆ.

***

ಚುನಾವಣಾ ಭರವಸೆ ಈಡೇರಿಸದೆ ವಂಚನೆ, ವಿಶ್ವಾಸಘಾತುಕತನದಂತಹ ಪಾಪಗಳು ಸಂಗಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಪವಿತ್ರ ಸ್ನಾನ ಮಾಡಿದರೆ ಪರಿಹಾರವಾಗುತ್ತದೆಯೇ? ನೋಟು ರದ್ದತಿ, ಜಿಎಸ್‌ಟಿ, ದ್ವೇಷ ಸಾಧನೆ, ಜಾತೀಯತೆ, ಕೋಮುವಾದ ಮತ್ತು ಸರ್ವಾಧಿಕಾರಿ ಆಳ್ವಿಕೆಗಳ ಮೂಲಕ ಜೀವನವನ್ನು ಅಸಹನೀಯಗೊಳಿಸಿದ್ದನ್ನು ಜನರು ಕ್ಷಮಿಸುವುದಿಲ್ಲ

– ಮಾಯಾವತಿ,ಬಿಎಸ್‌ಪಿ ಮುಖ್ಯಸ್ಥೆ

ತಾರತಮ್ಯವಿಲ್ಲದ ಅಭಿವೃದ್ಧಿಯನ್ನು ಮೋದಿ ಖಾತರಿಪಡಿಸಿದ್ದಾರೆ. ಮಧ್ಯವರ್ತಿಗಳು ಮತ್ತು ಭ್ರಷ್ಟರನ್ನು ದೂರ ಇಡುವ ಬಲವಾದ ಇಚ್ಛಾಶಕ್ತಿಯನ್ನು ಅವರು ಪ್ರದರ್ಶಿಸಿದ್ದಾರೆ. ಲೂಟಿ ಲಾಬಿ ವಿರುದ್ಧ ಕಠಿಣ ಕ್ರಮ ಕೈಗೊಂಡಿದ್ದಾರೆ. ಸರ್ಕಾರದ ಒಂದೊಂದು ಪೈಸೆಯೂ ಈಗ ಬಡವರ ಉದ್ಧಾರಕ್ಕಾಗಿಯೇ ವಿನಿಯೋಗ ಆಗುತ್ತಿದೆ

– ಮುಕ್ತಾರ್‌ ಅಬ್ಬಾಸ್‌ ನಖ್ವಿ,ಕೇಂದ್ರ ಸಚಿವ

ನನ್ನ ಮೇಲಿನ ನಿರಾಧಾರ ಆರೋಪಗಳಿಂದ ಮುಕ್ತನಾಗಬೇಕಿದೆ. ಅದರತ್ತ ಗಮನ ಹರಿಸುತ್ತೇನೆ. ನನ್ನಿಂದ ಬದಲಾವಣೆ ಸಾಧ್ಯ ಎಂಬ ಭಾವನೆ ಜನರಲ್ಲಿ ಮೂಡುವ ಅಗತ್ಯ ಇದೆ. ಹಾಗಾಗಿ ನನಗೆ ಆತುರ ಇಲ್ಲ

– ರಾಬರ್ಟ್‌ ವಾದ್ರಾ,ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ

(ಸಕ್ರಿಯ ರಾಜಕಾರಣ ಪ್ರವೇಶಿಸುವ ಸುಳಿವು ನೀಡುವ ಬರಹವನ್ನು ಫೇಸ್‌ಬುಕ್‌ನಲ್ಲಿ ಭಾನುವಾರ ಪ್ರಕಟಿಸಿದ್ದರು. ಸೋಮವಾರ ಈ ಹೇಳಿಕೆ ನೀಡಿದ್ದಾರೆ)

ಕಾಂಗ್ರೆಸ್‌ ಜತೆ ಮೈತ್ರಿ: ಸಿಪಿಎಂ ದ್ವಂದ್ವ

ಮುಂಬರುವ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷದೊಂದಿಗೆ ದೇಶದ ಯಾವುದೇ ಭಾಗದಲ್ಲಿ ಯಾವುದೇ ಹೊಂದಾಣಿಕೆ ಇಲ್ಲ ಎಂದು ಸಿಪಿಎಂ ಕೇರಳ ಘಟಕದ ಪ್ರಧಾನ ಕಾರ್ಯದರ್ಶಿ ಕೊಡಿಯೇರಿ ಬಾಲಕೃಷ್ಣನ್‌ ಹೇಳಿದ್ದಾರೆ. ಆದರೆ, ಟಿಎಂಸಿ ಆಳ್ವಿಕೆ ಇರುವ ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್‌ ಜತೆಗೆ ಹೊಂದಾಣಿಕೆ ಮಾಡಿಕೊಳ್ಳಲು ಸಿಪಿಎಂ ಮುಂದಾಗಿದೆ.

ರಾಜ್ಯ ಮಟ್ಟದ ಸಮೀಕರಣಗಳನ್ನು ಗಮನದಲ್ಲಿ ಇರಿಸಿಕೊಂಡು ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳಲಾಗುವುದು ಎಂಬ ನಿರ್ಧಾರವನ್ನು ಸಿಪಿಎಂನ ಅತ್ಯುನ್ನತ ನೀತಿ ನಿರೂಪಣಾ ಘಟಕ ಪಾಲಿಟ್‌ ಬ್ಯೂರೊ ಕೈಗೊಂಡಿದೆ ಎಂದು ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಇತ್ತೀಚೆಗೆ ಹೇಳಿದ್ದರು. ಬಾಲಕೃಷ್ಣನ್‌ ಅವರೂ ಪಾಲಿಟ್‌ಬ್ಯೂರೊದ ಸದಸ್ಯ.

ಪಶ್ಚಿಮ ಬಂಗಾಳದಲ್ಲಿ ಸತತ 34 ವರ್ಷ ಸರ್ಕಾರ ನಡೆಸಿದ್ದ ಸಿಪಿಎಂ ಈಗ ದುರ್ಬಲವಾಗಿದೆ. ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ವಿರುದ್ಧ ಹೋರಾಡಲು ಸಿಪಿಎಂಗೆ ಮೈತ್ರಿ ಅನಿವಾರ್ಯವಾಗಿದೆ.

ಕೇರಳ: ‘ಕೈ’ಗಿಲ್ಲ ಮೈತ್ರಿ ಆತಂಕ

ಕೇರಳದಲ್ಲಿನ ತನ್ನ ಮೈತ್ರಿ ಪಕ್ಷಗಳ ಮನವೊಲಿಸುವಲ್ಲಿ ಕಾಂಗ್ರೆಸ್‌ ಬಹುತೇಕ ಯಶಸ್ವಿಯಾಗಿದೆ. ಇಂಡಿಯನ್‌ ಯೂನಿಯನ್‌ ಮುಸ್ಲಿಂ ಲೀಗ್‌ ಪಕ್ಷವು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ಕ್ಷೇತ್ರಗಳಿಗೆ ಬೇಡಿಕೆ ಇಟ್ಟಿತ್ತು. ಆದರೆ, ಹೆಚ್ಚು ಕ್ಷೇತ್ರಗಳ ಬೇಡಿಕೆ ಹಿಂತೆಗೆದುಕೊಳ್ಳುವಂತೆ ಕಾಂಗ್ರೆಸ್‌ ಆ ಪಕ್ಷದ ಮನವೊಲಿಸಿದೆ ಎಂದು ಹೇಳಲಾಗಿದೆ.

ಕಳೆದ ಲೋಕಸಭಾ ಚುನಾವಣೆಯಲ್ಲಿ 15 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಸ್ಪರ್ಧಿಸಿತ್ತು. ಈ ಬಾರಿ ಕಾಂಗ್ರೆಸ್‌ಗೆ 16 ಕ್ಷೇತ್ರಗಳು ಸಿಗುವ ಸಾಧ್ಯತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT