ಕ್ಷೇತ್ರ ಬಿಟ್ಟುಕೊಟ್ಟ ಕಾಂಗ್ರೆಸ್‌ಗೆ ಮಾಯಾವತಿ ಎಚ್ಚರಿಕೆ

ಬುಧವಾರ, ಏಪ್ರಿಲ್ 24, 2019
32 °C

ಕ್ಷೇತ್ರ ಬಿಟ್ಟುಕೊಟ್ಟ ಕಾಂಗ್ರೆಸ್‌ಗೆ ಮಾಯಾವತಿ ಎಚ್ಚರಿಕೆ

Published:
Updated:
Prajavani

ಲಖನೌ: ‘ಚುನಾವಣಾ ಮೈತ್ರಿಯ ವಿಚಾರದಲ್ಲಿ ಸುಳ್ಳು ಸುದ್ದಿಗಳನ್ನು ಹಬ್ಬಿಸುವುದನ್ನು ನಿಲ್ಲಿಸಬೇಕು’ ಎಂದು ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಅವರು ಕಾಂಗ್ರೆಸ್‌ಗೆ ಎಚ್ಚರಿಕೆ ನೀಡಿದ್ದಾರೆ.

‘ರಾಜ್ಯದ ಏಳು ಲೋಕಸಭಾ ಕ್ಷೇತ್ರಗಳನ್ನು ಎಸ್‌ಪಿ– ಬಿಎಸ್‌ಪಿ– ಆರ್‌ಎಲ್‌ಡಿ ಪಕ್ಷಗಳಿಗೆ ಬಿಟ್ಟುಕೊಡುತ್ತಿದ್ದೇವೆ’ ಎಂದು ಕಾಂಗ್ರೆಸ್‌ ಪಕ್ಷವು ಭಾನುವಾರ ನೀಡಿದ್ದ ಹೇಳಿಕೆಗೆ ಮಾಯಾವತಿ ಈ ಪ್ರತಿಕ್ರಿಯೆ ನೀಡಿದ್ದಾರೆ.

ಈ ಬಗ್ಗೆ ಸರಣಿ ಟ್ವೀಟ್‌ ಮಾಡಿರುವ ಮಾಯಾವತಿ, ‘ಉತ್ತರ ಪ್ರದೇಶದಲ್ಲಿ ಎಸ್‌ಪಿ– ಬಿಎಸ್‌ಪಿ– ಆರ್‌ಎಲ್‌ಡಿ ಮೈತ್ರಿಯು ಬಿಜೆಪಿಯನ್ನು ಮಣಿಸಲು ಶಕ್ತವಾಗಿದೆ. ನಾವು ಕಾಂಗ್ರೆಸ್‌ ಜೊತೆಗೆ ಮೈತ್ರಿ ಮಾಡಿಕೊಂಡಿಲ್ಲ, ಅದರ ಅಗತ್ಯವೂ ಇಲ್ಲ. ಈ ವಿಚಾರದಲ್ಲಿ ಗೊಂದಲ ಸೃಷ್ಟಿಸುವುದನ್ನು ಕಾಂಗ್ರೆಸ್‌ ನಿಲ್ಲಿಸಬೇಕು. ಬಿಎಸ್‌ಪಿ ಉತ್ತರ ಪ್ರದೇಶದಲ್ಲಾಗಲಿ, ಬೇರೆ ಯಾವುದೇ ರಾಜ್ಯದಲ್ಲಾಗಲಿ ಕಾಂಗ್ರೆಸ್‌ ಜೊತೆ ಮೈತ್ರಿ ಮಾಡಿಕೊಂಡಿಲ್ಲ. ಬೇಕಿದ್ದರೆ ರಾಜ್ಯದ ಎಲ್ಲ 80 ಲೋಕಸಭಾ ಕ್ಷೇತ್ರಗಳಲ್ಲೂ ಕಾಂಗ್ರೆಸ್‌ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿ’ ಎಂದು ಹೇಳಿದ್ದಾರೆ. ಜೊತೆಗೆ, ಇಂಥ ಸುದ್ದಿಗಳನ್ನು ನಿರ್ಲಕ್ಷಿಸುವಂತೆ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.

ಉತ್ತರ ಪ್ರದೇಶದಲ್ಲಿ ಎಸ್‌ಪಿ ಮತ್ತು ಬಿಎಸ್‌ಪಿ ಚುನಾವಣಾ ಮೈತ್ರಿ ಮಾಡಿಕೊಂಡಿದ್ದು, ಅದರ ಪ್ರಕಾರ ರಾಜ್ಯದ 37 ಲೋಕಸಭಾ ಕ್ಷೇತ್ರಗಳಲ್ಲಿ ಎಸ್‌ಪಿ ಮತ್ತು 38 ಕ್ಷೇತ್ರಗಳಲ್ಲಿ ಬಿಎಸ್‌ಪಿ ಸ್ಪರ್ಧಿಸಲಿವೆ. ಮೂರು ಕ್ಷೇತ್ರಗಳನ್ನು ಅಜಿತ್‌ ಸಿಂಗ್‌ ನೇತೃತ್ವದ ರಾಷ್ಟ್ರೀಯ ಲೋಕದಳಕ್ಕೆ ಬಿಟ್ಟುಕೊಡಲಾಗಿದೆ. ಸೋನಿಯಾ ಗಾಂಧಿ ಸ್ಪರ್ಧಿಸುವ ರಾಯಬರೇಲಿ ಮತ್ತು ರಾಹುಲ್‌ ಗಾಂಧಿ ಅವರು ಸ್ಪರ್ಧಿಸಲಿರುವ ಅಮೇಠಿ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಹಾಕದಿರಲು ಎರಡೂ ಪಕ್ಷಗಳು ತೀರ್ಮಾನಿಸಿವೆ.

‘ಕಾಂಗ್ರೆಸ್‌ ಉತ್ತರ ಪ್ರದೇಶದಲ್ಲಿ 12ಕ್ಕೂ ಹೆಚ್ಚು ಲೋಕಸಭಾ ಕ್ಷೇತ್ರಗಳನ್ನು ಇತರ ಪಕ್ಷಗಳಿಗೆ ಬಿಟ್ಟುಕೊಡುತ್ತಿದೆ. ಎಸ್‌ಪಿ ಮುಖಂಡ ಮುಲಾಯಂ ಸಿಂಗ್‌ ಅವರ ಕಟುಂಬದ ಸದಸ್ಯರು ಮತ್ತು ಮಾಯಾವತಿ ಅವರು ಸ್ಪರ್ಧಿಸುವ ಕ್ಷೇತ್ರಗಳಲ್ಲಿ ನಾವು ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಿಲ್ಲ. ಒಟ್ಟು 7 ಕ್ಷೇತ್ರಗಳನ್ನು ಎಸ್‌ಪಿ– ಬಿಎಸ್‌ಪಿ– ಆರ್‌ಎಲ್‌ಡಿಗಳಿಗೆ ಹಾಗೂ ಎರಡು ಕ್ಷೇತ್ರಗಳನ್ನು ಅಪ್ನಾದಳಕ್ಕೆ ಬಿಟ್ಟುಕೊಡಲಾಗುತ್ತಿದೆ. ಜನ ಅಧಿಕಾರ್‌ ಪಾರ್ಟಿ ಜೊತೆಗೂ ನಾವು ಚುನಾವಣಾ ಹೊಂದಾಣಿಕೆ ಮಾಡಿಕೊಂಡಿದ್ದೇವೆ’ ಎಂದು ಕಾಂಗ್ರೆಸ್‌ ಪಕ್ಷದ ಉತ್ತರ ಪ್ರದೇಶ ಘಟಕದ ಮುಖ್ಯಸ್ಥ ರಾಜ್‌ ಬಬ್ಬರ್‌ ಭಾನುವಾರ ಹೇಳಿದ್ದರು.

ನಮ್ಮಲ್ಲಿ ಗೊಂದಲ ಇಲ್ಲ: ಪ್ರಿಯಾಂಕಾ

ಮಾಯಾವತಿ ಅವರ ಟ್ವೀಟ್‌ಗೆ ಪ್ರತ್ಯುತ್ತರ ನೀಡಿರುವ ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ, ‘ಕಾಂಗ್ರೆಸ್‌ನಲ್ಲಿ ಯಾವುದೇ ಗೊಂದಲ ಇಲ್ಲ. ನಮ್ಮ ಹೋರಾಟ ಬಿಜೆಪಿ ವಿರುದ್ಧ. ಬಿಜೆಪಿಯನ್ನು ಸೋಲಿಸುವುದೇ ನಮ್ಮ ಗುರಿ’ ಎಂದಿದ್ದಾರೆ. ಭದೋಹಿಯಲ್ಲಿ ಚುನಾವಣಾ ಪ್ರಚಾರದಲ್ಲಿ ನಿರತರಾಗಿದ್ದ ಪ್ರಿಯಾಂಕಾ, ಮಾಧ್ಯಮದವರಿಗೆ ಈ ಪ್ರತಿಕ್ರಿಯೆ ನೀಡಿದರು.

ಬರಹ ಇಷ್ಟವಾಯಿತೆ?

 • 7

  Happy
 • 1

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !