ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ರಾಜಕಾರಣ ಹೇಗೆಂಬುದಕ್ಕೆ ಮೋದಿ, ಶಾ ನಿದರ್ಶನ’

Last Updated 25 ಏಪ್ರಿಲ್ 2019, 19:31 IST
ಅಕ್ಷರ ಗಾತ್ರ

ಕಳೆದ ಲೋಕಸಭಾ ಚುನಾವಣೆಯಲ್ಲಿ ದೆಹಲಿಯ ಎಲ್ಲ ಏಳು ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ದಿತ್ತು. ಅದಕ್ಕೆ ಮುಖ್ಯ ಕಾರಣ ಮೋದಿ ಅಲೆ. ಈ ಬಾರಿ ಬಿಜೆಪಿಯ ಜೈತ್ರಯಾತ್ರೆಗೆ ತಡೆ ಒಡ್ಡಲು ಎಎಪಿ ಮತ್ತು ಕಾಂಗ್ರೆಸ್‌ ಪಕ್ಷ ಯತ್ನಿಸುತ್ತಿವೆ. ಕೇಂದ್ರ ಸರ್ಕಾರ ಮತ್ತು ಬಿಜೆಪಿಯನ್ನು ಸಮರ್ಥಿಸಿಕೊಳ್ಳುವ ಪ್ರಮುಖ ಧ್ವನಿ ಮೀನಾಕ್ಷಿ ಲೇಖಿ ಅವರು ನವದೆಹಲಿಯಿಂದ ಮತ್ತೆ ಸ್ಪರ್ಧಿಸಿದ್ದಾರೆ. ಲೇಖಿ ಜತೆಗೆ ‘ಪ್ರಜಾವಾಣಿ’ಯ ಶೆಮಿನ್‌ ಜಾಯ್‌ ನಡೆಸಿದ ಮಾತುಕತೆಯ ಆಯ್ದ ಭಾಗ ಇಲ್ಲಿದೆ

* ದೆಹಲಿಯಲ್ಲಿ 2014ರ ಫಲಿತಾಂಶ ಪುನರಾವರ್ತಿಸುವುದು ಸುಲಭವೇ?
ಹೌದು. ಸರ್ಕಾರವೊಂದು ಏನನ್ನು ಮಾಡಬಹುದು ಎಂಬುದನ್ನು ಸುದೀರ್ಘ ಕಾಲದಿಂದ ಜನರು ನೋಡಿಯೇ ಇಲ್ಲ. ದಕ್ಷ ಸರ್ಕಾರವೊಂದು ಕೆಲಸಗಳಿಗೆ ಹೊಳಪು ತರಬಲ್ಲುದು. ಈಗ ಸರ್ಕಾರಕ್ಕೆ ಸಂಬಂಧಿಸಿ ನರೇಂದ್ರ ಮೋದಿ ಅವರಂತಹ ನಾಯಕರಿದ್ದಾರೆ. ಪಕ್ಷದ ಮಟ್ಟದಲ್ಲಿ ಅಮಿತ್‌ ಶಾ ಅವರಂತಹ ಮುಂದಾಳು ಇದ್ದಾರೆ. ಪಕ್ಷದೊಳಗೆ ಮತ್ತು ಹೊರಗೆ ರಾಜಕಾರಣ ಹೇಗೆ ಮಾಡಬೇಕು ಎಂಬುದಕ್ಕೆ ನಿದರ್ಶನದಂತೆ ಅವರಿಬ್ಬರೂ ಇದ್ದಾರೆ. ಕೊಟ್ಟ ಭರವಸೆಗಳನ್ನು ಈಡೇರಿಸಿದ್ದೇವೆ, ಹಾಗಾಗಿ ನಾವು ಗೆಲ್ಲುತ್ತೇವೆ.

* ಎಎಪಿ ಮತ್ತು ಕಾಂಗ್ರೆಸ್‌ ನಡುವೆ ಮೈತ್ರಿ ಇಲ್ಲ ಎಂಬುದು ಬಿಜೆಪಿಗೆ ಲಾಭವೇ?
ಅದನ್ನು ನಾನು ಒಪ್ಪುವುದಿಲ್ಲ. ಎಎಪಿ ಮತ್ತು ಕಾಂಗ್ರೆಸ್‌ನ ನಡುವೆ ಒಳ ಒಪ್ಪಂದ ಇದೆ. ಪರಸ್ಪರರು ಗೆಲ್ಲಲು ಸಾಧ್ಯವಾಗುವ ರೀತಿಯಲ್ಲಿ ಈ ಪಕ್ಷಗಳು ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿವೆ.

* ಚುನಾವಣಾ ಪ್ರಚಾರದ ಮಧ್ಯದಲ್ಲಿ ನೀವು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ವಿರುದ್ಧ ನ್ಯಾಯಾಂಗ ನಿಂದನೆ ದೂರು ದಾಖಲಿಸಿದ್ದೀರಿ. ‘ಚೌಕೀದಾರ್‌ ಚೋರ್‌ ಹೈ’ ಅಭಿಯಾನವು ಬಿಜೆಪಿಗೆ ಹಿನ್ನಡೆ ತಂದಿಲ್ಲವೇ?
ಇಲ್ಲ. ಯಾರಾದರೂ ಸುಳ್ಳು ಹೇಳಿದರೆ ಅದನ್ನು ಬಯಲು ಮಾಡಬೇಕು. ಕಳ್ಳರ ಪರಿವಾರದಿಂದ ಈ ಸುಳ್ಳು ಬಂದಿದೆ. ಈ ಪರಿವಾರದ ಮೂರು ಮಂದಿ ಜಾಮೀನಿನಲ್ಲಿ ಹೊರಗಡೆ ಇದ್ದಾರೆ. ಅವರ ಮೇಲೆ ವಂಚನೆ ಮತ್ತು ತೆರಿಗೆ ವಂಚನೆ ಪ್ರಕರಣಗಳಿವೆ. ಅವರು ‘ಚೌಕೀದಾರ್‌ ಚೋರ್‌ ಹೈ’ ಎಂದು ಹೇಳುವಾಗ ನಾವು ‘ಖಾಂದಾನ್‌ ಚೋರ್‌ ಹೈ’ (ಇಡೀ ಪರಿವಾರವೇ ಕಳ್ಳರು) ಎನ್ನುತ್ತೇವೆ. ಸುಪ್ರೀಂ ಕೋರ್ಟ್‌ನ ಹೆಸರನ್ನು ಚುನಾವಣಾ ಪ್ರಚಾರಕ್ಕೆ ಎಳೆದು ತಂದಿರುವುದು ಅನಪೇಕ್ಷಿತ.

* ಮತದಾನಕ್ಕೆ ಕೆಲವೇ ದಿನಗಳಿರುವಾಗ ಬಿಜೆಪಿ ಸಂಸದ, ದಲಿತ ಮುಖಂಡ ಉದಿತ್‌ ರಾಜ್‌ ಅವರು ಟಿಕೆಟ್‌ ಸಿಕ್ಕಿಲ್ಲ ಎಂದು ಕಾಂಗ್ರೆಸ್‌ ಸೇರಿದ್ದಾರಲ್ಲ...
ಇದರ ಬಗ್ಗೆ ನಾನೇನೂ ಹೇಳಲಾಗದು. ಇದು ವೈಯಕ್ತಿಕ ಆಯ್ಕೆಗಳು ಮತ್ತು ಆಕಾಂಕ್ಷೆಗಳ ವಿಚಾರ. ವ್ಯಕ್ತಿಗಳು ತಮ್ಮದೇ ಆದ ಅಭಿಪ್ರಾಯಗಳನ್ನು ಹೊಂದಿರುತ್ತಾರೆ. ಅದರ ಬಗ್ಗೆ ಮಾತನಾಡುವುದಿಲ್ಲ. ಆದರೆ, ಬಿಜೆಪಿಯನ್ನು ದಲಿತ ವಿರೋಧಿ ಎಂದು ಹೇಳುವುದು ತಪ್ಪು. ಪಕ್ಷವು ರಾಮನಾಥ ಕೋವಿಂದ್‌ ಅವರನ್ನು ರಾಷ್ಟ್ರಪತಿ ಅಭ್ಯರ್ಥಿಯನ್ನಾಗಿ ಮಾಡಿತ್ತು. ಅತಿ ಹೆಚ್ಚು ಸಂಖ್ಯೆಯ ದಲಿತ ಸಂಸದರು ಬಿಜೆಪಿಯಲ್ಲಿಯೇ ಇದ್ದಾರೆ.

* ವಿರೋಧ ಪಕ್ಷಗಳ ಒಗ್ಗಟ್ಟಿನ ಬಗ್ಗೆ ಏನಂತೀರಿ? ಕೆಲವು ರಾಜ್ಯಗಳಲ್ಲಿ ಮಹಾಮೈತ್ರಿಯು ಬಿಜೆಪಿಗೆ ಸವಾಲು ಒಡ್ಡಲಿದೆಯೇ?
ಖಂಡಿತವಾಗಿ ಇಲ್ಲ. ಈ ಪಕ್ಷಗಳ ಸಿದ್ಧಾಂತಗಳಲ್ಲಿ ಯಾವುದೇ ಸಾಮರಸ್ಯ ಇಲ್ಲ. ಸರಿಯಾದ ಧ್ಯೇಯ ಇಲ್ಲದೆ ಒಟ್ಟಾದಾಗ ಸಿದ್ಧಾಂತದಲ್ಲಿ ಸಾಮರಸ್ಯ ಸಾಧ್ಯವಿಲ್ಲ. ಜನರು ಇದನ್ನು ನೋಡುತ್ತಾರೆ. ಈಗ ಇದು ಒಂದು ಅವಕಾಶವಾದಿ ರಾಜಕಾರಣ. ಜನರಿಗೆ ಅದು ಅರಿವಾಗುತ್ತದೆ. ಪರಸ್ಪರ ವಿರುದ್ಧವಾದ ಸಿದ್ಧಾಂತಗಳು ಒಂದಾಗಿವೆ. ಮುಲಾಯಂ ಸಿಂಗ್‌ ಅವರ ಜತೆಗೆ ಮಾಯಾವತಿ ಅವರು ಎಷ್ಟು ಸುರಕ್ಷಿತ ಎಂಬ ವಾಟ್ಸ್‌ ಆ್ಯಪ್‌ ಸಂದೇಶ ಹರಿದಾಡುತ್ತಿದೆ. ಆ ಕಾಲದಲ್ಲಿ, ಎಸ್‌ಪಿ ಕಾರ್ಯಕರ್ತರು ಹಲ್ಲೆ ಮಾಡಿದ, ನಿಂದಿಸಿದ, ಕೆಟ್ಟದಾಗಿ ವರ್ತಿಸಿದ ಅದೇ ಮಾಯಾವತಿ ಅಲ್ಲವೇ ಈಗಲೂ ಇರುವುದು? ಇಂದು, ಮಾಯಾವತಿ ಅವರು ಮುಲಾಯಂ ಜತೆಗೆ ವೇದಿಕೆ ಹಂಚಿಕೊಳ್ಳುತ್ತಿದ್ದಾರೆ. ಇದು ಅವಕಾಶವಾದಿ ರಾಜಕಾರಣವಲ್ಲದೆ ಇನ್ನೇನು?

* ಅರ್ಧಕ್ಕಿಂತಲೂ ಹೆಚ್ಚಿನ ಕ್ಷೇತ್ರಗಳ ಮತದಾನ ಮುಗಿದಿದೆ. 2014ರ ಫಲಿತಾಂಶವನ್ನು ಬಿಜೆಪಿ ಪುನರಾವರ್ತಿಸಲು ಆಗದು ಎಂದು ಹೇಳಲಾಗುತ್ತಿದೆ. ಬಿಜೆಪಿಯ ಆತ್ಮವಿಶ್ವಾಸ ಹೇಗಿದೆ?
ಬಿಜೆಪಿಯ ಸಾಧನೆ ತುಂಬಾ ಚೆನ್ನಾಗಿದೆ. ದೆಹಲಿಯಲ್ಲಿ ಕುಳಿತ ಜನರು ಅದನ್ನು ವಿಶ್ಲೇಷಿಸಲಾಗದು. ಇತರ ಎಲ್ಲ ಚುನಾವಣೆಗಳ ಹಾಗೆಯೇ ಈ ಬಾರಿಯೂ ಇಂತಹ ವಿಶ್ಲೇಷಣೆಗಳು ಸುಳ್ಳಾಗಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT