ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋರಕ್ಷಕರ ದಾಳಿಗೆ ಹೆದರಿ ಗೋವುಗಳನ್ನು ಮಾರುತ್ತಿದ್ದಾರೆ ಮೀರತ್‍ನ ಮುಸ್ಲಿಮರು!

Last Updated 26 ಡಿಸೆಂಬರ್ 2018, 11:55 IST
ಅಕ್ಷರ ಗಾತ್ರ

ಲಖನೌ: ಉತ್ತರಪ್ರದೇಶದಲ್ಲಿ ಯೋಗಿಆದಿತ್ಯನಾಥರ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಎರಡು ಗೋವುಗಳನ್ನು ಮಾರಿದ್ದೇನೆ ಅಂತಾರೆ ಬುಲಂದ್‍ಶಹರ್‌ನ ಬದರ್ ಉಲ್ ಇಸ್ಲಾಂ. ಇವರು 2004ರಲ್ಲಿ ಬಿಜೆಪಿ ಅಭ್ಯರ್ಥಿ ಕಲ್ಯಾಣ್ ಸಿಂಗ್ ವಿರುದ್ಧ ಸ್ಪರ್ಧಿಸಿ ಪರಾಭವಗೊಂಡಿದ್ದರು.

ಬದಲಾವಣೆಯ ಗಾಳಿ ಬೀಸುತ್ತಿರುವುದು ತಿಳಿದೊಡನೆ ನಾನು ನನ್ನ ಎರಡು ಗೋವುಗಳನ್ನು ಮಾರಿದೆ. ಗೋವುಗಳಿಂದಾಗಿಆಪತ್ತು ಮೈಮೇಲೆ ಎಳೆದುಕೊಳ್ಳಲು ನನಗೆ ಇಷ್ಟವಿಲ್ಲ.ನನ್ನ ಮನೆಯಲ್ಲಿ ನಾನು ದಶಕಗಳಿಂದ ಹಸು ಸಾಕುತ್ತಿದ್ದೇನೆ.ಹಾಲಿಗಾಗಿ ಅವುಗಳನ್ನು ಸಾಕಿದ್ದು, ಅವುಗಳ ಬಗ್ಗೆ ಪ್ರೀತಿಯಿದೆ ಎಂದು ಅವರು ಹೇಳಿದ್ದಾರೆ.

ಆದಿತ್ಯನಾಥರ ಸರ್ಕಾರ ಬಂದ ನಂತರ ಮೀರತ್ ನಿಂದ ಸುಮಾರು 60ಕಿಮೀ ದೂರದಲ್ಲಿರುವ ಸೌಂದತ್ ಗ್ರಾಮದಲ್ಲಿ ಹಲವಾರು ಮುಸ್ಲಿಮರು ತಮ್ಮ ಮನೆಯಲ್ಲಿದ್ದ ಹಸು ಮತ್ತು ಎತ್ತುಗಳನ್ನು ಮಾರಿದ್ದಾರೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.

ಮುಸ್ಲಿಮರೇ ಜಾಸ್ತಿಯಿರುವ ಸೌಂದತ್ ಗ್ರಾಮದಲ್ಲಿ 7,000ಕ್ಕಿಂತ ಹೆಚ್ಚು ಜನಸಂಖ್ಯೆಯಿದ್ದು, ಹಿಂದುಗಳ ಸಂಖ್ಯೆ 200 ಇದೆ.2017ರ ಚುನಾವಣೆಯ ವಿಧಾನಸಭಾ ಚುನಾವಣೆಯಲ್ಲಿ ಇಲ್ಲಿನ ಜನರು ಬಿಜೆಪಿಗೆ ಮತ ನೀಡಿದ್ದರು ಎಂದು ಬಿಜೆಪಿಯ ಮೀರತ್ ಘಟಕದ ಪ್ರಧಾನ ಕಾರ್ಯದರ್ಶಿ ಗುಲ್ಜಾರ್ ಹಸನ್ ಹೇಳಿದ್ದಾರೆ.

ಆದಾಗ್ಯೂ, ತಾವು ಅಚ್ಛೇ ದಿನದ ನಿರೀಕ್ಷೆಯಿಂದ ಬಿಜೆಪಿಗೆ ಮತ ನೀಡಿದ್ದೆವು. ಆದರೆ ಅದು ಜುಮ್ಲಾ (ಪೊಳ್ಳು) ಎಂಬುದು ಗೊತ್ತಾಯಿತು ಎನ್ನುತ್ತಾರೆ ಸ್ಥಳೀಯರು.

ವಿಭಜಿಸಿ ಆಳುವ ರಾಜನೀತಿ ಮತ್ತು ದ್ವೇಷ ರಾಜಕಾರಣದಿಂದಾಗಿ ಇಲ್ಲಿನ ಜನರು ರೋಸಿ ಹೋಗಿದ್ದಾರೆ.ಹಾಗಾಗಿ ಬಿಜೆಪಿ ಇಲ್ಲಿ ಬೆಂಬಲ ಕಳೆದುಕೊಳ್ಳಲಿದೆ. ಮುಸ್ಲಿಮರು ಜಾಸ್ತಿಯಿರುವ ಸೌಂದತ್ ಗ್ರಾಮದಲ್ಲಿ ಹಿಂದೂಗಳ ಸಂಖ್ಯೆ ಕಡಿಮೆಯೇ.ಆದರೆ ಧರ್ಮದ ಹೆಸರಿನಲ್ಲಿ ತಾರತಮ್ಯ ಮಾಡುವುದನ್ನು ನಾವು ಸಹಿಸುವುದಿಲ್ಲ. ಈ ಗ್ರಾಮದಲ್ಲಿರುವ ಏಕೈಕ ದೇಗುಲಕ್ಕೆ ಆವರಣ ನಿರ್ಮಿಸುವುದಕ್ಕೂ ನಾವು ಸಹಾಯ ಮಾಡಿದ್ದೆವು ಎಂದು ಅಲ್ಲಿನ ಗ್ರಾಮಸ್ಥರೊಬ್ಬರು ಹೇಳಿದ್ದಾರೆ.

ಈ ಗ್ರಾಮದಲ್ಲಿ ಹಿಂದೂಗಳು ಅಲ್ಪ ಸಂಖ್ಯಾತರಾಗಿದ್ದರೂ ಯಾವತ್ತೂ ಅಭದ್ರತೆ ಅನುಭವಕ್ಕೆ ಬಂದಿಲ್ಲ ಅಂತಾರೆ ಇದೇ ಗ್ರಾಮದ ಚಮನ್ ಸಿಂಗ್.

ಸೌಂದತ್ ಗ್ರಾಮದ ಮುಖ್ಯಸ್ಥ ಕಲ್ವಾ ಅವರು ಹಾಲಿಗಾಗಿ ಹಸು ಸಾಕಿದ್ದರು.ಆದರೆ ಉತ್ತರ ಪ್ರದೇಶದಲ್ಲಿ ಬಿಜೆಪಿ ಅಧಿಕಾರಕ್ಕೇರಿದ ಎರಡೇ ತಿಂಗಳಲ್ಲಿ ನನ್ನಹಸುಗಳನ್ನು ಮಾರಿದೆ.ನನ್ನ ಬಳಿ ಇದ್ದ ಎತ್ತು ಸತ್ತಾಗ ಅದನ್ನು ಮಾರುವ ಬದಲು ಹೂತು ಹಾಕಿದೆ.

ಕಳೆದ ಎರಡು ವರ್ಷಗಳಲ್ಲಿ ಇಲ್ಲಿನ ಗ್ರಾಮದ ಜನರು ಗೋರಕ್ಷಕರ ಭಯದಿಂದ 200ಕ್ಕಿಂತ ಹೆಚ್ಚು ಹಸುಗಳನ್ನು ಮಾರಿದ್ದಾರೆ. ಈಗಲೂ ಹಸು ಸಾಕುವವರು ಗೋರರಕ್ಷಕರ ಮತ್ತು ಪೊಲೀಸರ ಭಯದಿಂದ ಹಸುಗಳನ್ನು ಮೇಯಲು ಹೊರಗೆ ಬಿಡುವುದಿಲ್ಲ ಅಂತಾರೆ ಕಲ್ವಾ.

ಮೂರು ವರ್ಷಗಳ ಕಾಲ ಹಸು ಸಾಕಿದ್ದು, ಅದನ್ನೀಗ ಮಾರಿದ್ದೇನೆ ಅಂತಾರೆ ವಾಖಿಲ್ ಅಹ್ಮದ್.
ಕೋಣಗಳನ್ನು ಸಾಕುವ ಬದಲು ಹಸುಗಳನ್ನು ಸಾಕುವುದು ಆರ್ಥಿಕ ಆದಾಯವನ್ನು ತಂದುಕೊಡುತ್ತದೆ.ಹಸುಗಳನ್ನು ಸಾಕಬೇಕೆಂದಿದ್ದರೂ ಜನರಿಗೆ ಭಯವಿದೆ ಅಂತಾರೆ ಇನ್ನೊಬ್ಬ ಗ್ರಾಮಸ್ಥ ನಾಸಿರ್.

ಗೋರಕ್ಷಕರ ಭಯದಿಂದಾಗಿ ಜನರು ಹಸುಗಳನ್ನು ಹೊರಗೆ ಕರೆದೊಯ್ಯಲು ಭಯ ಪಡುತ್ತಿದ್ದಾರೆ.ಹಸುಗಳಿಗೆಆರಾಮ ಇಲ್ಲದೇ ಇದ್ದರೆ ಪಶು ವೈದ್ಯರನ್ನು ಮನೆಗೇ ಕರೆಸುತ್ತಿದ್ದೇವೆ.ಒಂದು ವೇಳೆ ಹಸುವನ್ನು ಹೊರಗೆ ಕರೆದುಕೊಂಡು ಹೋದರೆ ನಾನು ಹಸು ಜತೆ ವಾಪಸ್ ಬರುತ್ತೇನೆ ಎಂಬ ನಂಬಿಕೆ ಇಲ್ಲ ಎನ್ನುತ್ತಾರೆ ಶಂಶಾದ್.

ಚಿಕಿತ್ಸೆಗಾಗಿಹಸು ಮತ್ತು ಎತ್ತುಗಳನ್ನು ಹೊರಗೆ ಕರೆದೊಯ್ಯಲು ಭಯವಾಗುತ್ತಿದೆ.ಬಲಪಂಥೀಯ ಕಾರ್ಯಕರ್ತರು ಮತ್ತು ಪೊಲೀಸರು ನಮ್ಮಿಂದ ಹಸುಗಳನ್ನು ಕಿತ್ತುಕೊಳ್ಳುತ್ತಾರೆ. ಹಾಗಾಗಿ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಹಸುಗಳನ್ನು ಕರೆದೊಯ್ಯುವುದು ಕಷ್ಟವಾಗಿದೆ ಎಂದು ಹೆಸರು ಹೇಳಲಿಚ್ಛಿಸದ ವ್ಯಕ್ತಿಯೊಬ್ಬರು ಹೇಳಿದ್ದಾರೆ.

ಇಲ್ಲಿನ ಗ್ರಾಮಸ್ಥರ ಪ್ರಕಾರ ಗೋರಕ್ಷಕರು ದಾಳಿ ಮಾಡಿದರೂ ಪೊಲೀಸರು ಅವರ ಮೇಲೆ ಕ್ರಮ ಕೈಗೊಳ್ಳುವುದಿಲ್ಲ.

ಒಂಭತ್ತು ತಿಂಗಳ ಹಿಂದೆ ₹20,000 ಕೊಟ್ಟು ಅಹ್ಮದಾಪುರಿ ಗ್ರಾಮದ ಗುಜ್ಜಾರ್‌ನಿಂದ ನಾನು ಹಸುವೊಂದನ್ನು ತಂದಿದ್ದೆ. ಒಂದು ದಿನ ಬೆಳಗ್ಗೆ ಪರಿಕ್ಷತ್ ಗಡ್ಪೊಲೀಸರು ನನ್ನ ಮನೆಗೆ ಬಂದು ನನ್ನ ಅನುಪಸ್ಥಿತಿಯಲ್ಲಿ ಹಸುವನ್ನು ಕರೆದೊಯ್ದಿದ್ದಾರೆ. ನಾನು ಪೊಲೀಸರ ಮೊರೆ ಹೋದಾಗ ಅವರು ಗೋ ಹತ್ಯೆಮಾಡಿದ ಆರೋಪದಲ್ಲಿ ಕೇಸು ದಾಖಲಿಸುವುದಾಗಿ ಅವರು ನನಗೆ ಬೆದರಿಕೆಯೊಡ್ಡಿದ್ದರು.ಪೊಲೀಸರಿಂದ ಯಾವುದೇ ಸಹಾಯ ಸಿಗದೇ ಇದ್ದಾಗ ನಾನು ನ್ಯಾಯಾಲಯದ ಮೆಟ್ಟಿಲೇರಿದೆ. ಹಾಗೆ 103 ದಿನಗಳ ನಂತರ ನನಗೆ ನನ್ನ ಹಸು ವಾಪಸ್ ಸಿಕ್ಕಿತು.ಈಗ ನಾನು ಹಸುವನ್ನು ಭಿರೌದಾ ಗ್ರಾಮದಲ್ಲಿರುವ ಅತ್ತೆ ಮನೆಯಲ್ಲಿರಿಸಿದ್ದೇನೆ .
ಹಸುವಿನಿಂದಾಗಿ ಕುಟುಂಬಕ್ಕೆ ಆಪತ್ತನ್ನು ಅಹ್ವಾನಿಸುವುದೇಕೇ? ಹಸು ಯಾರಿಗೆ ಸೇರಿದೆಯೋಅವರು ಖುಷಿಯಾಗಿ ಬದುಕಲಿ ಎಂದು ಸಲೀಂ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT