ಡ್ರೋಣ್ ರೂಪಿಸಿಕೊಟ್ಟರೆ ₹100 ಕೋಟಿ ಒಪ್ಪಂದ ಮಾಡಿಕೊಳ್ಳಲಿದೆ ವಾಯುಪಡೆ

7

ಡ್ರೋಣ್ ರೂಪಿಸಿಕೊಟ್ಟರೆ ₹100 ಕೋಟಿ ಒಪ್ಪಂದ ಮಾಡಿಕೊಳ್ಳಲಿದೆ ವಾಯುಪಡೆ

Published:
Updated:
Deccan Herald

ಬೆಂಗಳೂರು: ಭಾರತೀಯ ವಾಯುಪಡೆಯು ಮಹಾವೀರ ಚಕ್ರ ಪಡೆದ ವಾಯುಸೇನೆಯ ಮೊದಲ ಅಧಿಕಾರಿ ಮೆಹರ್‌ಸಿಂಗ್ ಗೌರವಾರ್ಥ ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ (ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಟೆಕ್ನಾಲಜಿ) ಸಮೂಹ ಡ್ರೋಣ್‌ ತಯಾರಿ ಯೋಜನೆ ಪ್ರಕಟಿಸಿದೆ. ‘ಮಹರ್‌ ಬಾಬಾ ಪ್ರೈಜ್‌’ ಸ್ಪರ್ಧೆಯೂ ಈ ಯೋಜನೆಯ ಭಾಗವಾಗಿದೆ.

ದೇಶದ ರಕ್ಷಣಾ ಕ್ಷೇತ್ರದಲ್ಲಿ ಸಾರ್ವಜನಿಕವಾಗಿ ಆಯೋಜಿಸಿರುವ ಮೊದಲ ಸ್ಪರ್ಧೆ ಇದಾಗಿದ್ದು, ವಿಜೇತರು ₹ 10 ಲಕ್ಷ ಬಹುಮಾನ ಗಿಟ್ಟಿಸಿಕೊಳ್ಳಲಿದ್ದಾರೆ. ಜೊತೆಗೆ ಡ್ರೋಣ್‌ ತಯಾರಿಕೆಗೆ ಸಂಬಂಧಿಸಿದ ₹ 100 ಕೋಟಿ ಮೊತ್ತದ ಬೃಹತ್‌ ಯೋಜನೆಯ ಒಪ್ಪಂದವನ್ನು ವಿಜೇತರೊಂದಿಗೆ ಮಾಡಿಕೊಳ್ಳಲು ವಾಯುಪಡೆ ನಿರ್ಧರಿಸಿದೆ.

ಈ ಸಂಬಂಧ ಅ.3ರಂದು ವಾಯುಸೇನೆಯ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಣೆ ಹೊರಡಿಸಲಾಗಿದೆ. ಭಾರತೀಯರು ಹಾಗೂ ಭಾರತೀಯ ಸಂಸ್ಥೆಗಳು ಮಾತ್ರವೇ ಭಾಗವಹಿಸಲು ಅವಕಾಶವಿರುವ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ನ.14ರೊಳಗೆ ಅರ್ಜಿ ಸಲ್ಲಿಸಬೇಕು.

ಉದ್ದೇಶ: ಭೂಕಂಪ, ಸುನಾಮಿ, ಪ್ರವಾಹ, ಭೂಕುಸಿತದಂಥ ಪ್ರಾಕೃತಿಕ ವಿಕೋಪ ಪರಿಸ್ಥಿತಿಯಲ್ಲಿ ಮಾನವ ರಹಿತ ವಿಮಾನಗಳ (ಡ್ರೋಣ್‌) ಮೂಲಕ ಹುಡುಕು ಕಾರ್ಯಾಚರಣೆ ನಡೆಸಲು ತಂತ್ರಜ್ಞಾನದ ನೆರವು ಪಡೆಯುವುದು ಈ ಯೋಜನೆಯ ಉದ್ದೇಶ. ಸಾಮೂಹಿಕ ಕಾರ್ಯಾಚರಣೆ ಸಂದರ್ಭದಲ್ಲಿ ಕೇವಲ ಒಂದೇ ನಿಯಂತ್ರಕದ ಮೂಲಕ 50 ಡ್ರೋಣ್‌ಗಳೊಡನೆ ನಿಖರ ಸಂವಹನ ಸಾಧಿಸಲು ಸಾಧ್ಯವಿರುವ ಕೃತಕ/ಸಮೂಹ ಬುದ್ಧಿಮತ್ತೆ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವುದು. ಆ ಮೂಲಕ ಮಾನವೀಯ ನೆರವು ಮತ್ತು ವಿಪತ್ತು ಪರಿಹಾರ (ಎಚ್‌ಎಡಿಆರ್) ಕಾರ್ಯಾಚರಣೆಗಳನ್ನು ಪರಿಣಾಮಕಾರಿಯಾಗಿ ರೂಪಿಸಲು ಸಾಧ್ಯವಾಗುತ್ತದೆ.

ಮೂರು ಹಂತದ ಸ್ಪರ್ಧೆ: ಅರ್ಜಿಗಳನ್ನು ಪರಿಶೀಲಿಸಿ (ವ್ಯಕ್ತಿ/ಸಂಸ್ಥೆಯ ಹಿನ್ನಲೆಯನ್ನೂ ಅವಲೋಕಿಸಿ) ಅರ್ಜಿಗಳ ಕಿರುಪಟ್ಟಿ ತಯಾರಿಸಲಾಗುವುದು. ಬಳಿಕ ಮೂರು ಹಂತದ ಪ್ರಕ್ರಿಯೆಗಳಿದ್ದು, ಪ್ರತಿ ಹಂತದಲ್ಲೂ ತೀರ್ಪುಗಾರರು ಕಾರ್ಯ ನಿರ್ವಹಿಸಲಿದ್ದಾರೆ.

ಮೊದಲನೇ ಹಂತ: ಸ್ಪರ್ಧಾಳು/ ಸಂಸ್ಥೆಯು ತಾವು ತಯಾರಿಸಲಿರುವ ಡ್ರೋಣ್‌ಗಳ ತಯಾರಿಕಾ ವಿಧಾನ, ಖರ್ಚು ವೆಚ್ಚಕ್ಕೆ ಸಂಬಂಧಿಸಿದ ವಿವರಗಳು ಹಾಗೂ ಮುಂದಿನ ಎರಡು ಸುತ್ತುಗಳಿಗಾಗಿ ಹಾಕಿಕೊಂಡಿರುವ ಯೋಜನೆಗಳನ್ನು ವಿವರವಾಗಿ ದಾಖಲಿಸಬೇಕು. ಡ್ರೋಣ್‌ಗಳು ಕಾರ್ಯಾಚರಿಸುವ ವಿಧಾನದ ವಿಡಿಯೊ ಅಥವಾ ಅದನ್ನು ಸೂಚಿಸುವ ಗ್ರಾಫಿಕ್‌ ಮಾಹಿತಿಯನ್ನೂ ಕಳುಹಿಸಬಹುದು. ಇದರ ಆಧಾರದಲ್ಲಿ ಒಟ್ಟು 30 ಸ್ಪರ್ಧಾಳುಗಳು ಮುಂದಿನ ಸುತ್ತಿಗೆ ಪ್ರವೇಶ ಪಡೆಯಲಿದ್ದಾರೆ.

ಎರಡನೇ ಹಂತ: ಈ ಹಂತವು ಪ್ರಾಯೋಗಿಕವಾದದ್ದು. ಒಂದೇ ನಿಯಂತ್ರಕದ ಮೂಲಕ ಕಾರ್ಯಾಚರಿಸುವ ಹತ್ತು ಡ್ರೋಣ್‌ಗಳು ಜಿಪಿಎಸ್‌ ಇರುವ ವಾತಾವರಣದಲ್ಲಿ ಭೂಮಿಯಿಂದ ಸುಮಾರು 3300 ಅಡಿ ಎತ್ತರದಲ್ಲಿ ಕೇಂದ್ರದಿಂದ 5 ಕಿ.ಮೀ. ವ್ಯಾಪ್ತಿಯಲ್ಲಿ 1 ಕಿ.ಗ್ರಾಂ ತೂಕದ ವಸ್ತುವನ್ನು ಹೊತ್ತು ಹಾರಾಟ ನಡೆಸಬೇಕು. ಜಿಪಿಎಸ್‌ ಇಲ್ಲದ ವಾತಾವರಣದಲ್ಲಿ ಕನಿಷ್ಠ ಮೂರು ಡ್ರೋಣ್‌ಗಳು ಇಷ್ಟೇ ಎತ್ತರದಿಂದ, ಅದೇ ತೂಕದ ವಸ್ತು ಹೊತ್ತು, ಸುಮಾರು ಅರ್ಧ ಕಿ.ಮೀ ವ್ಯಾಪ್ತಿಯಲ್ಲಿ ಹಾರಾಟ ನಡೆಸಬೇಕು.

ಮೂರನೇ ಹಂತ: ಈ ಹಂತದಲ್ಲಿ ಒಂದೇ ನಿಯಂತ್ರಕದ ಮೂಲಕ ಕಾರ್ಯಾಚರಿಸಬಲ್ಲ ಸುಮಾರು 50 ಡ್ರೋಣ್‌ಗಳು ಜಿಪಿಎಸ್‌ ಇರುವ ಪ್ರದೇಶದಲ್ಲಿ ಸುಮಾರು ಒಂದು ಸಾವಿರ ಅಡಿಗಳಷ್ಟು ಎತ್ತರದ ಪ್ರದೇಶದಲ್ಲಿ ಒಂದು ಕಿ.ಗ್ರಾಂ ತೂಕ ಹೊತ್ತು, ಪ್ರತಿ ದಿಕ್ಕಿಗೂ ಸುಮಾರು 50 ಕಿ.ಮೀ ವ್ಯಾಪ್ತಿಯಲ್ಲಿ ಹಾರಾಟ ನಡೆಸಬೇಕು. ಜಿಪಿಎಸ್‌ ಇಲ್ಲದ ಪ್ರದೇಶದಲ್ಲಿಯೂ ಇದೇ ಗುರಿಯನ್ನು ಪೂರೈಸಬೇಕು.

ವಿಶೇಷವೆಂದರೆ ಎರಡನೇ ಮತ್ತು ಮೂರನೇ ಹಂತದಲ್ಲಿ ಡ್ರೋಣ್‌ಗಳು ಇಂಟರ್ನೆಟ್‌ ಬಳಕೆ ಮಾಡದೆ ಕಾರ್ಯಾಚರಿಸಬೇಕು. ಎರಡನೇ ಹಂತದಲ್ಲಿ ಡ್ರೋಣ್‌ಗಳನ್ನು ತಯಾರಿಸಲು ರಕ್ಷಣಾ ಇಲಾಖೆಯಿಂದ ₹25 ಲಕ್ಷದವರೆಗೆ ಹಣಕಾಸಿನ ನೆರವು ದೊರೆಯಲಿದ್ದು, ಮೂರನೇ ಹಂತಕ್ಕೆ ಈ ನೆರವಿನ ಮೊತ್ತ ₹10 ಕೋಟಿಗೆ ಹೆಚ್ಚಾಗಲಿದೆ.

ಬಹುಮಾನ ವಿತರಣೆ ಸಮಾರಂಭವು ಮುಂದಿನ ವರ್ಷದ ಕಾರ್ಗಿಲ್‌ ವಿಜಯ ದಿವಸದಂದು (ಜುಲೈ 26) ನಡೆಯಲಿದ್ದು, ವಾಯುಪಡೆಯು ವಿಜೇತ ಸಂಸ್ಥೆಗಳೊಂದಿಗೆ ಸಮೂಹ ಡ್ರೋಣ್‌ ತಯಾರಿಸುವ ₹100 ಕೋಟಿ ಮೊತ್ತದ ರಕ್ಷಣಾ ಒಪ್ಪಂದ ಮಾಡಿಕೊಳ್ಳಲಿದೆ.

ಮಾಹಿತಿಗೆ http://indianairforce.nic.in/meharbaba/ ವೆಬ್‌ಸೈಟ್ ನೋಡಿ.

ಬರಹ ಇಷ್ಟವಾಯಿತೆ?

 • 13

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !