ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಂಧ್ರದಲ್ಲಿ ದಲಿತ ಮಹಿಳೆಗೆ ಗೃಹ ಖಾತೆ: ಅಪ್ಪನ ಮೇಲ್ಪಂಕ್ತಿ ಅನುಸರಿಸಿದ ಜಗನ್

Last Updated 11 ಜೂನ್ 2019, 11:41 IST
ಅಕ್ಷರ ಗಾತ್ರ

ದಲಿತ ಮಹಿಳೆಗೆ ಮಹತ್ವದ ಗೃಹ ಖಾತೆ ನೀಡುವ ಮೂಲಕ ಆಂಧ್ರ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ವಿಶಿಷ್ಟ ಹಾದಿ ತುಳಿದಿದ್ದಾರೆ. 2014ರಲ್ಲಿ ತೆಲಂಗಾಣ–ಆಂಧ್ರ ವಿಭಜನೆಯಾದ ನಂತರದ ಮೊದಲ ಮಹಿಳಾ ಗೃಹ ಸಚಿವರಾಗಿ ಮೆಕತೋಟಿ ಸುಚರಿತಾ ಇತಿಹಾಸ ಬರೆದಿದ್ದಾರೆ. ಜಗನ್‌ರ ತಂದೆ ವೈ.ಎಸ್.ರಾಜಶೇಖರರೆಡ್ಡಿ ಅವಿಭಜಿತ ಆಂಧ್ರ ಪ್ರದೇಶದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಮಹಿಳಾ ಗೃಹಮಂತ್ರಿಯನ್ನು ನೇಮಿಸಿದ್ದರು. ಅವರು ಗೃಹ ಸಚಿವೆಯಾಗಿ ಸಂಪುಟಕ್ಕೆ ಸೇರಿಸಿಕೊಂಡಿದ್ದ ಪಿ.ಸಬಿತಾ ಇಂದ್ರಾ ರೆಡ್ಡಿ ಈಗ ತೆಲಂಗಾಣ ರಾಷ್ಟ್ರ ಸಮಿತಿಯ ಶಾಸಕಿ.

ಸಂಪುಟ ರಚನೆ ಸಂದರ್ಭ ನಾಮಕಾವಸ್ಥೆ ಖಾತೆಗಳನ್ನು ಮಹಿಳೆಯರಿಗೆ ನೀಡುವುದು ಮಾಮೂಲು ಎಂಬಂತೆ ಆಗಿರುವ ಹಿನ್ನೆಲೆಯಲ್ಲಿ ಜಗನ್ ನಡೆ ದೇಶದ ಗಮನ ಸೆಳೆದಿದೆ. ದಲಿತ ಕುಟುಂಬದ ಮಹಿಳೆ ಮೆಕತೋಟಿ ಸುಚರಿತಾ ಅವರಿಗೆ ಮುಖ್ಯಮಂತ್ರಿ ಸ್ಥಾನದ ನಂತರದ ಮಹತ್ವದ ಖಾತೆ ದೊರೆತಿದೆ.

‘ಜಗನ್ ಬಾಬು ನನ್ನನ್ನು ಗೃಹ ಸಚಿವೆಯನ್ನಾಗಿ ಆರಿಸಿಕೊಂಡಿದ್ದು ನನಗೆ ದೊಡ್ಡ ಗೌರವ ಎನಿಸಿದೆ. ವೈಎಸ್‌ಆರ್‌ಪಿಗೆ ಆಂಧ್ರದಲ್ಲಿ ಈಗ ಉತ್ತಮ ಬಹುಮತ ಲಭಿಸಿದೆ. ಇದು ನಮ್ಮ ಮೇಲಿರುವ ಜವಾಬ್ದಾರಿಯನ್ನು ಹೆಚ್ಚಿಸಿದೆ. ಸಚಿವ ಸಂಪುಟದಲ್ಲಿ ಹಿಂದುಳಿದ ಜಾತಿಗಳಿಗೆ ಸಿಕ್ಕಿರುವ ಅತಿದೊಡ್ಡ ಪ್ರಾತಿನಿಧ್ಯವು ಜನರ ಅಭ್ಯುದಯದ ಬಗ್ಗೆ ಜಗನ್‌ ಅವರಿಗೆ ಇರುವ ಬದ್ಧತೆಯ ಪ್ರತೀಕ. ಓರ್ವ ದಲಿತ ಮಹಿಳೆಯಾಗಿ ನನಗೆ ಗೃಹ ಸಚಿವೆಯಾಗುವ ಅವಕಾಶ ಸಿಕ್ಕಿರುವುದು ದೊಡ್ಡ ಗೌರವ’ ಎಂದುಸುಚರಿತ ಪ್ರಮಾಣ ವಚನ ಸಂದರ್ಭ ಖುಷಿ ಹಂಚಿಕೊಂಡರು.

‘ಪೊಲೀಸ್ ಇಲಾಖೆಯಲ್ಲಿ ಪಾರದರ್ಶಕತೆ ತರುವುದು. ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದು ನನ್ನ ಆದ್ಯತೆ’ ಎಂದು ಅವರು ಘೋಷಿಸಿದರು.

ಗೃಹಿಣಿಯಿಂದ ಗೃಹಸಚಿವೆ ಸ್ಥಾನಕ್ಕೆ

ಸಾಮಾನ್ಯ ಗೃಹಿಣಿಯಾಗಿದ್ದ ಮಹಿಳೆ ಗೃಹ ಸಚಿವೆಯ ಸ್ಥಾನ ಮುಟ್ಟಿರುವುದರ ಹಿಂದೆ ಬರೋಬ್ಬರಿ 16 ವರ್ಷಗಳ ಪರಿಶ್ರಮವಿದೆ. 2003ರಲ್ಲಿ ಜಗನ್ ಅವರ ತಂದೆ ವೈ.ಎಸ್.ರಾಜಶೇಖರ ರೆಡ್ಡಿ ಐತಿಹಾಸಿಕ ಪಾದಯಾತ್ರೆ ನಡೆಸಿದ್ದು ಆಂಧ್ರ ರಾಜಕೀಯ ಇತಿಹಾಸದ ಮೈಲಿಗಲ್ಲು. ಈ ವೇಳೆ ಅವರು ಗುರುತಿಸಿದ ಪ್ರತಿಭೆ ಸುಚರಿತಾ. ನಂತರದ ದಿನಗಳಲ್ಲಿ ಅವರು ಸುಚರಿತಾರನ್ನು ರಾಜಕೀಯಕ್ಕೆ ಸೇರಲು ಪ್ರೇರೇಪಿಸಿ ಕಾಂಗ್ರೆಸ್‌ಗೆ ಸೇರಿಸಿಕೊಂಡರು. 2006ರಲ್ಲಿ ಗುಂಟೂರು ಜಿಲ್ಲೆಯ ಫಿರಂಗಿಪುರಂ ಕ್ಷೇತ್ರದ ಟಿಕೆಟ್ ಕೊಡಿಸಿ, ಜಿಲ್ಲಾ ಪರಿಷತ್ ಚುನಾವಣೆಯಲ್ಲಿ ಜಯಗಳಿಸಿಸುವಂತೆ ಮಾಡಿದರು.

‘ವೈ.ಎಸ್.ರಾಜಶೇಖರ ರೆಡ್ಡಿ ಅವರ ಬದ್ಧತೆ ನನಗೆ ತುಂಬಾ ಇಷ್ಟವಾಗಿತ್ತು. ಅದನ್ನು ಗಮನಿಸಿ ಅವರ ಅನುಯಾಯಿಯಾದೆ. ವೈಎಸ್‌ಆರ್ ನಿಧನದ ನಂತರವೂ ಅವರ ಕುಟುಂಬಕ್ಕೆ ನಿಷ್ಠಳಾಗಿಯೇ ಉಳಿದೆ. ಜನರ ಬಗ್ಗೆ ಅವರ ಕುಟುಂಬ ಹೊಂದಿರುವ ಪ್ರೀತಿ ನನಗೆ ತುಂಬಾ ಇಷ್ಟ’ ಎಂದು 45 ವರ್ಷದ ಸುಚರಿತಾ ಹೇಳುತ್ತಾರೆ.

ರಾಜಕೀಯ ಏಳುಬೀಳು

2009ರಲ್ಲಿ ಸುಚರಿತಾಗೆ ಗುಂಟೂರು ಜಿಲ್ಲೆಯ ಪ್ರತಿಪದು ವಿಧಾನಸಭಾ ಕ್ಷೇತ್ರದ ಟಿಕೆಟ್ ಕೊಡಿಸಿದ್ದರು ವೈಎಸ್‌ಆರ್. ಅಲ್ಲಿ ಆಕೆ ಆರಾಮವಾಗಿ ಗೆಲುವು ಸಾಧಿಸಿದ್ದರು. ಸೆಪ್ಟೆಂಬರ್ 2009ರಲ್ಲಿ ವೈಎಸ್‌ಆರ್ ನಿಧನರಾದ ನಂತರ ವೈ.ಎಸ್.ಜಗನ್‌ ಮೋಹನ್ ರೆಡ್ಡಿ ಅವರ ಜೊತೆಗೆ ಸುಚರಿತಾ ಗುರುತಿಸಿಕೊಂಡು, ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಮಾರ್ಚ್ 2011ರಲ್ಲಿ ಜಗನ್ ವೈಎಸ್‌ಆರ್‌ಸಿಪಿ ಸ್ಥಾಪಿಸಿದರು. ಮೇ 2012ರಲ್ಲಿ ನಡೆದ ಉಪ–ಚುನಾವಣೆಯಲ್ಲಿ ಸುಚರಿತಾ ಮತ್ತೊಮ್ಮೆ ಜಯಗಳಿಸಿದರು.

2014ರ ಚುನಾವಣೆಗಳಿಗೂ ಮೊದಲು ಜಗನ್‌ರ ತಾಯಿ ವೈ.ಎಸ್.ವಿಜಯಮ್ಮ ಜಿಲ್ಲೆಗಳಲ್ಲಿ ಪ್ರವಾಸ ಮಾಡಿ ಜಗನ್ ಪರ ಪ್ರಚಾರ ನಡೆಸುತ್ತಿದ್ದರು. ವಿಜಯಮ್ಮ ಅವರ ನೆರಳಿನಂತೆ ಸುಚರಿತಾ ಇರುತ್ತಿದ್ದರು. 2014ರ ಚುನಾವಣೆಗಳ ನಂತರ ವಿಜಯಮ್ಮ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದು ಕಡಿಮೆಯಾಯಿತು.

2014ರಲ್ಲಿ ಅವರು ತೆಲುಗು ದೇಶಂ ಪಕ್ಷದ ರವೆಲಾ ಕಿಶೋರ್ ಬಾಬು ಅವರ ಎದುರು ಸೋಲನುಭವಿಸಿದರು. ಆದರೂ ಅವರ ಪಕ್ಷನಿಷ್ಠೆಗೆ ಈಗ ಮತ್ತೊಮ್ಮೆ ಬೆಲೆ ಬಂತು. ಸುಚರಿತಾಗೆ ಜಗನ್ ಮತ್ತೊಮ್ಮೆ ಟಿಕೆಟ್ ಕೊಟ್ಟರು. ಈ ಬಾರಿ ಅವರಿಗೆ ಇಬ್ಬರು ದೈತ್ಯ ಎದುರಾಳಿಗಳಿದ್ದರು. ತೆಲುಗು ದೇಶಂ ಪಕ್ಷದಿಂದ ಮಾಜಿ ಸಚಿವರಾದ ಡಿ.ಮಾಣಿಕ್ಯ ವರಪ್ರಸಾದ್ ಮತ್ತು ತೆಲುಗು ದೇಶಂ ಪಕ್ಷದಿಂದ ಪವನ್ ಕಲ್ಯಾಣ್‌ರ ಜನಸೇನಾ ಪಕ್ಷಕ್ಕೆ ವಲಸೆ ಹೋಗಿದ್ದ ಮತ್ತೋರ್ವ ಮಾಜಿ ಸಚಿವ ರೇವಲ ಕಿಶೋರ್ ಬಾಬು ಅವರನ್ನು ಸುಚರಿತಾ ಮಣಿಸುವ ಮೂಲಕ ಜೈಂಟ್ ಕಿಲ್ಲರ್ ಎನಿಸಿಕೊಂಡರು.

ಪತಿ ಐಆರ್‌ಎಸ್ ಅಧಿಕಾರಿ

ಗುಂಟೂರು ಜಿಲ್ಲೆ ಫಿರಂಗಿಪುರಂ ಮೂಲದ ಸುಚರಿತಾ ಅವರ ಪತಿ ಎಂ.ದಯಾಸಾಗರ್ ಐಆರ್‌ಎಸ್ (ಇಂಡಿಯನ್ ರೆವಿನ್ಯು ಸರ್ವೀಸ್) ಅಧಿಕಾರಿ. ಪ್ರಸ್ತುತ ಮುಂಬೈನಲ್ಲಿ ಆದಾಯ ತೆರಿಗೆ ಆಯುಕ್ತರಾಗಿ (ಅಪೀಲುಗಳು) ಸೇವೆ ಸಲ್ಲಿಸುತ್ತಿದ್ದಾರೆ. ಸುಚರಿತಾರ ತಂದೆ ಎನ್.ಅಂಕಾರಾವ್ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರಾಗಿದ್ದರು. ಇಂದಿಗೂ ಅವರು ಫಿರಂಗಿಪುರಂನಲ್ಲಿ ಕ್ಲಿನಿಕ್ ನಡೆಸುತ್ತಾರೆ. 1990ರಲ್ಲಿ ರಾಜ್ಯಶಾಸ್ತ್ರದಲ್ಲಿ ಪದವಿ ಪಡೆದ ಸುಚರಿತಾ, ‘ಮನೆಯಲ್ಲಿ ನಾನೊಬ್ಬ ಸಾಮಾನ್ಯ ಗೃಹಿಣಿ’ ಎನ್ನುತ್ತಾರೆ. ಒಬ್ಬ ಮಗ ಮತ್ತು ಮಗಳೊಂದಿಗೆ ಸುಖಿ ಸಂಸಾರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT