ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇಕೆದಾಟು: ರಾಜ್ಯ ಸಂಸದರ ಪ್ರತಿಭಟನೆ

ಸಂಸತ್‌ ಭವನದ ಎದುರು ಒಗ್ಗಟ್ಟು ಪ್ರದರ್ಶಿಸಿದ ಸರ್ವಪಕ್ಷಗಳ ಮುಖಂಡರು
Last Updated 27 ಡಿಸೆಂಬರ್ 2018, 18:13 IST
ಅಕ್ಷರ ಗಾತ್ರ

ನವದೆಹಲಿ: ಮೇಕೆದಾಟು ಯೋಜನೆಗೆ ತಮಿಳುನಾಡು ವಿರೋಧವನ್ನು ಗಣನೆಗೆ ತೆಗೆದುಕೊಳ್ಳದೆ ಕೇಂದ್ರ ಸರ್ಕಾರದ ಅನುಮತಿ ನೀಡಬೇಕು ಎಂದು ಆಗ್ರಹಿಸಿ ರಾಜ್ಯದ ಸರ್ವ ಪಕ್ಷಗಳ ಸಂಸದರು ಸಂಸತ್‌ ಭವನದ ಆವರಣದಲ್ಲಿ ಗುರುವಾರ ಪ್ರತಿಭಟನೆ ನಡೆಸಿ ಒಗ್ಗಟ್ಟು ಪ್ರದರ್ಶಿಸಿದರು.

ಮಹಾತ್ಮಾ ಗಾಂಧಿ ಪ್ರತಿಮೆ ಎದುರು ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಲೋಕಸಭೆ ಮತ್ತು ರಾಜ್ಯಸಭೆ ಸದಸ್ಯರು ಘೋಷಣೆ ಕೂಗಿ ಗಮನ ಸೆಳೆದರು.

ರಾಜ್ಯ ಸರ್ಕಾರ ಕೈಗೆತ್ತಿಕೊಳ್ಳಲು ಉದ್ದೇಶಿಸಿರುವ ಮೇಕೆದಾಟು ಯೊಜನೆಯಿಂದ ತಮಿಳುನಾಡಿನ ಜನತೆಗೂ ಅನುಕೂಲ ಆಗಲಿದೆ. ಈ ಯೋಜನೆಯನ್ನು ವಿರೋಧಿಸುವುದು ಸರಿಯಲ್ಲ ಎಂದು ಸಂಸದರು ಘೋಷಣೆ ಕೂಗಿದರು.

ಯೋಜನೆಯಿಂದ ಬೆಂಗಳೂರು, ರಾಮನಗರದ ಜನತೆಗೆ ಕುಡಿಯುವ ನೀರು ಪೂರೈಸಲಾಗುತ್ತದೆ. ಜಲ ವಿದ್ಯುತ್ ಉತ್ಪಾದನೆಗೆ ಆದ್ಯತೆ ನೀಡಲಾಗುತ್ತದೆ. ಯಾವುದೇ ಕಾರಣಕ್ಕೂ ನೀರಾವರಿ ಉದ್ದೇಶಕ್ಕೆ ಒಂದು ಹನಿ ನೀರನ್ನೂ ಬಳಕೆ ಮಾಡುವುದಿಲ್ಲ ಎಂದು ಪ್ರತಿಭಟನಕಾರರು ತಿಳಿಸಿದರು.

ಉದ್ದೇಶಿತ ಯೋಜನೆಯ ಸ್ಥಳದಲ್ಲಿ ಸಮಾನಾಂತರ ಜಲಾಶಯ ನಿರ್ಮಿಸುವ ಮೂಲಕ ಹೆಚ್ಚುವರಿ ನೀರನ್ನು ಸಂಗ್ರಹಿಸಿ ಎರಡೂ ರಾಜ್ಯಗಳಿಗೆ ಅನುಕೂಲ ಕಲ್ಪಿಸಲಾಗುವುದು. ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಲ್ಲಿಸಲು ಕೇಂದ್ರ ಸರ್ಕಾರ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ. ಈ ಬಗ್ಗೆ ತಮಿಳುನಾಡು ಸರ್ಕಾರಕ್ಕೂ ಮನವರಿಕೆ ಮಾಡಲಾಗಿದೆ. ಆದರೂ ರಾಜಕೀಯ ಕಾರಣಗಳಿಂದ ಯೋಜನೆಗೆ ವಿರೋಧ ವ್ಯಕ್ತವಾಗಿದೆ ಎಂದು ಸಚಿವ ಡಿ.ಕೆ. ಶಿವಕುಮಾರ್‌ ಸುದ್ದಿಗಾರರಿಗೆ ತಿಳಿಸಿದರು.

ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್‌ನ ಸಂಸದರಾದ ಶೋಭಾ ಕರಂದ್ಲಾಜೆ, ಸುರೇಶ ಅಂಗಡಿ, ಪ್ರಹ್ಲಾದ್‌ ಜೋಶಿ, ಪ್ರಕಾಶ್‌ ಹುಕ್ಕೇರಿ, ಡಿ.ಕೆ. ಸುರೇಶ್, ಎಸ್‌.ಪಿ. ಮುದ್ದಹನುಮೇಗೌಡ, ಚಂದ್ರಪ್ಪ, ಶಿವಕುಮಾರ ಉದಾಸಿ, ಆರ್‌.ಧ್ರುವನಾರಾಯಣ, ವಿ.ಎಸ್‌. ಉಗ್ರಪ್ಪ, ಎಲ್‌.ಆರ್‌. ಶಿವರಾಮೇಗೌಡ, ಬಿ.ಕೆ. ಹರಿಪ್ರಸಾದ್‌, ಕುಪೇಂದ್ರ ರೆಡ್ಡಿ, ಪಿ.ಸಿ. ಗದ್ದಿಗೌಡರ್‌, ನಳಿನ್‌ಕುಮಾರ್‌ ಕಟೀಲು ಸೇರಿದಂತೆ ಬಹುತೇಕ ಸಂಸದರು ಪ್ರತಿಭಟನೆಯಲ್ಲಿ ಹಾಜರಿದ್ದರು.

ನಂತರ ತಮಿಳುನಾಡಿನ ಎಐಎಡಿಎಂಕೆ ಮತ್ತು ಡಿಎಂಕೆ ಪಕ್ಷಗಳ ಸಂಸದರು ಯೋಜನೆ ವಿರೋಧಿಸಿ ಇದೇ ಸ್ಥಳದಲ್ಲಿ ಪ್ರತಿಭಟನೆ ನಡೆಸಿದರು.ಲೋಕಸಭೆಯ ಕಲಾಪದ ವೇಳೆ ಉಭಯ ರಾಜ್ಯಗಳ ಸಂಸದರು ಯೋಜನೆಯ ಪರ ಮತ್ತು ವಿರೋಧವಾಗಿ ಪ್ರತಿಭಟನೆ ನಡೆಸಿ ಘೋಷಣೆ ಕೂಗಿದ್ದರಿಂದ ಸ್ಪೀಕರ್‌ ಸುಮಿತ್ರಾ ಮಹಾಜನ್ ಅವರು ಒಂದು ಗಂಟೆ ಅವಧಿಗೆ ಕಲಾಪ ಮುಂದೂಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT