ಶುಕ್ರವಾರ, ಡಿಸೆಂಬರ್ 13, 2019
27 °C

ಮೇಕೆದಾಟು: ಮಾತುಕತೆಗೆ ತಮಿಳುನಾಡು ನಕಾರ

ಪಿಟಿಐ Updated:

ಅಕ್ಷರ ಗಾತ್ರ : | |

ಚೆನ್ನೈ: ಉದ್ದೇಶಿತ ಮೇಕೆದಾಟು ಅಣೆಕಟ್ಟು ನಿರ್ಮಾಣ ವಿಚಾರವಾಗಿ ಕರ್ನಾಟಕ ಸರ್ಕಾರ ಮುಂದಿಟ್ಟಿರುವ ಮಾತುಕತೆ ಪ್ರಸ್ತಾಪವನ್ನು ತಮಿಳುನಾಡು ಸೋಮವಾರ ತಳ್ಳಿ ಹಾಕಿದೆ. 

ಮೇಕೆದಾಟು ವಿವಾದ ಈಗಾಗಲೇ ಸುಪ್ರೀಂ ಕೋರ್ಟ್‌ನಲ್ಲಿರುವುದರಿಂದ ಸಂಧಾನ ಮಾತುಕತೆಗೆ ಮುಂದಾದರೆ ನ್ಯಾಯಾಂಗಕ್ಕೆ ಅಗೌರವ ತೋರಿದಂತಾಗುತ್ತದೆ ಎಂದು ಹೇಳಿದೆ.

ನ್ಯಾಯಾಲಯ ಕಲಾಪಗಳಿಗೆ ತಡೆಯೊಡ್ಡುವ ಪ್ರಯತ್ನವಾಗಿ ಕರ್ನಾಟಕ ಸಂಧಾನ ಮಾತುಕತೆ ಮುಂದಾಗಿದೆ ಎಂದು ಖಾರವಾಗಿ ಪ್ರತಿಕ್ರಿಯಿಸಿದೆ.

ಯಾವುದೇ ಕಾರಣಕ್ಕೂ ತನ್ನ ಒಪ್ಪಿಗೆ ಇಲ್ಲದೆ ಮೇಕೆದಾಟು ಯೋಜನೆಯನ್ನು ಮುಂದುವರಿಸುವಂತಿಲ್ಲ ಎಂದು ತಾಕೀತು ಮಾಡಿರುವ ತಮಿಳುನಾಡು ಸರ್ಕಾರ, ಮತ್ತೊಮ್ಮೆ ತನ್ನ ಮೊದಲಿನ ನಿಲುವನ್ನು ಪುನರುಚ್ಚರಿಸಿದೆ.

ಕಾವೇರಿ ನದಿ ಜಲಾನಯನ ಪ್ರದೇಶದಲ್ಲಿ ಯಾವುದೇ ನಿರ್ಮಾಣ ಕಾರ್ಯ ಕೈಗೊಳ್ಳದಂತೆ ಮತ್ತು ವಿಸ್ತೃತ ಯೋಜನಾ ವರದಿ (ಡಿಪಿಆರ್‌) ತಯಾರಿಸದಂತೆ ಕಾನೂನು ಸಚಿವ ಸಿ. ವೆ. ಷಣ್ಮುಗಮಂ ಆಕ್ಷೇಪ ಎತ್ತಿದ್ದಾರೆ.

ಸಂಧಾನ ಮಾತುಕತೆಗೆ ಸಮಯ ಕೋರಿ ಕಳೆದ ವಾರ ಕರ್ನಾಟಕದ ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಪತ್ರ ಬರೆದಿದ್ದರು. ಸೋಮವಾರ ಮರುಪತ್ರ ಬರೆದಿರುವ ಷಣ್ಮುಗಮಂ ಅವರು ರಾಜ್ಯದ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.

ಅಣೆಕಟ್ಟು ನಿರ್ಮಿಸುವ ಸಂಬಂಧ ಕರ್ನಾಟಕ ನಡೆಸಿರುವ ಯತ್ನವು ಕಾವೇರಿ ವಿವಾದಕ್ಕೆ ಸಂಬಂಧಿಸಿದಂತೆ ಫೆಬ್ರುವರಿಯಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನ ಸ್ಪಷ್ಟ ಉಲ್ಲಂಘನೆಯಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು