ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೀ–ಟೂ ಚಳವಳಿ: ಬಿಸಿಸಿಐ ಸಿಇಒಗೂ ಕಂಟಕ

Last Updated 13 ಅಕ್ಟೋಬರ್ 2018, 16:52 IST
ಅಕ್ಷರ ಗಾತ್ರ

ಮುಂಬೈ: ಮೀ–ಟೂ ಚಳವಳಿ ಈಗ ಕ್ರಿಕೆಟ್‌ಲೋಕದ ಬಾಗಿಲನ್ನೂ ಬಡಿದಿದೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಜೋಹ್ರಿ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಮಾಡಲಾಗಿದೆ.

ಲೇಖಕಿ ಹರ್ನೀದ್ ಕೌರ್‌ ಅವರು ತಮ್ಮ ಟ್ವಿಟರ್ ಹ್ಯಾಂಡ್ಲರ್@PedestrianPoet ನಲ್ಲಿ ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದಾರೆ.

‘ರಾಹುಲ್ ಜೋಹ್ರಿ ಅವರ ಹಿಂದಿನ ಸಹೋದ್ಯೋಗಿಯೊಬ್ಬರು ಇ–ಮೇಲ್‌ನಲ್ಲಿ ಇದನ್ನು ನನಗೆ ಕಳುಹಿಸಿದ್ದಾರೆ. ಅದನ್ನು ಹಲವು ಮಾಧ್ಯಮಗಳ ಮುಖ್ಯಸ್ಥರಿಗೆ ಕಳುಹಿಸಿದ್ದೇನೆ. ಸಂತ್ರಸ್ತೆ ತಮ್ಮ ಹೆಸರನ್ನು ಗೋಪ್ಯವಾಗಿಡುವಂತೆ ಕೇಳಿಕೊಂಡಿದ್ದಾರೆ. ರಾಹುಲ್ ಜೋಹ್ರಿ ನಿಮ್ಮ ಸಮಯ ಈಗ ಶುರುವಾಗಿದೆ. #metoo’ ಎಂದು ಕೌರ್ ಟ್ವೀಟ್ ಮಾಡಿದ್ದಾರೆ. ಸಂತ್ರಸ್ತೆ ತಮಗೆ ಕಳುಹಿಸಿರುವ ಇ–ಮೇಲ್ ಬರಹದ ಸ್ಕ್ರೀನ್‌ಶಾಟ್‌ಗಳನ್ನೂ ಕೌರ್ ಟ್ವೀಟ್ ಮಾಡಿದ್ದಾರೆ.

ಆ ಸ್ಕ್ರೀನ್‌ಶಾಟ್‌ಗಳ ಸಂಗ್ರಹ ಬರಹ ಈ ಮುಂದಿನಂತಿದೆ.

‘ನನ್ನ ಹಳೆಯ ಸಹೋದ್ಯೋಗಿಯಾಗಿದ್ದ ಕಾರಣ ರಾಹುಲ್ ಜೋಹ್ರಿ ಜತೆ ಸಣ್ಣಪುಟ್ಟ ಮಾತುಕತೆ ನಡೆಯುತ್ತಿತ್ತು. ಅವರ ಕುಟುಂಬದೊಂದಿಗೂ ಒಡನಾಟವಿತ್ತು. ಡಿಸ್ಕವರಿ ವಾಹಿನಿಯ ದಕ್ಷಿಣ ಏಷ್ಯಾ ಪ್ರಧಾನ ವ್ಯವಸ್ಥಾಪಕ ಹುದ್ದೆಗೆ ರಾಹುಲ್ ನೇಮಕವಾಗಿದ್ದರು. ನನಗೂ ಬೇರೆ ಉದ್ಯೋಗದ ಅವಶ್ಯಕತೆ ಇತ್ತು. ಹೀಗಾಗಿ ಉದ್ಯೋಗದ ಬಗ್ಗೆ ಚರ್ಚಿಸಲು ರಾಹುಲ್ ಅವರನ್ನು ಕಾಫಿ ಶಾಪ್‌ನಲ್ಲಿ ಭೇಟಿ ಮಾಡಿದ್ದೆ’ ಎಂದು ಸಂತ್ರಸ್ತೆ ವಿವರಿಸಿದ್ದಾರೆ.

‘ಉದ್ಯೋಗದ ಬಗ್ಗೆ ಮಾತನಾಡುತ್ತಲೇ ರಾಹುಲ್ ತಮ್ಮ ಮನೆಗೆ ಹೋಗೋಣ ಎಂದರು. ಅವರ ಕುಟುಂಬದ ಜತೆ ಒಡನಾಟವಿದ್ದ ಕಾರಣ ರಾಹುಲ್ ಮನೆಗೆ ಹೊರಟೆ. ಆದರೆ ಅವರ ಪತ್ನಿ ಮನೆಯಲ್ಲಿರಲಿಲ್ಲ. ಅವರು ಎಲ್ಲಿದ್ದಾರೆ ಎಂದು ಕೇಳಿದಾಗ ರಾಹುಲ್ ಹಾರಿಕೆಯ ಉತ್ತರ ನೀಡಿದರು. ಡಿಸ್ಕವರಿ ವಾಹಿನಿಯಲ್ಲೇ ತಮ್ಮ ಅಧೀನ ಅಧಿಕಾರಿಯ ಹುದ್ದೆ ಖಾಲಿ ಇದೆ, ನನ್ನ ಕೆಳೆಗೆ ಕೆಲಸ ಮಾಡಲು ಅಭ್ಯಂತರವಿಲ್ಲದಿದ್ದರೆ ನಿನಗೆ ಆ ಕೆಲಸ ಸಿಗುತ್ತದೆ ಎಂದರು. ದಿಢೀರ್ ಎಂದು ನಡೆದ ಈ ಬೆಳವಣಿಗೆಗಳಿಂದ ಸುಧಾರಿಸಿಕೊಳ್ಳುವ ಮುನ್ನವೇ ರಾಹುಲ್ ತಮ್ಮ ಪ್ಯಾಂಟ್ ಬಿಚ್ಚಿದರು. ನನ್ನನ್ನೂ ವಿವಸ್ತ್ರಗೊಳಿಸಿದರು. ಇದು ನಿನ್ನ ಉದ್ಯೋಗದ ಸಂದರ್ಶನದ ಕೊನೆಯ ಭಾಗ ಎಂದರು’ ಎಂದು ಸಂತ್ರಸ್ತೆ ವಿವರಿಸಿದ್ದಾರೆ.

‘ಆಗ ನಾನೇಕೆ ಸುಮ್ಮನ್ನಿದ್ದೆ, ನಾನೇಕೆ ಪ್ರತಿಭಟಿಸಲಿಲ್ಲ ಎಂಬುದರ ಬಗ್ಗೆ ನನಗೆ ಈಗಲೂ ವಿಷಾದವಿದೆ’ ಎಂದೂ ಸಂತ್ರಸ್ತೆ ಹೇಳಿದ್ದಾರೆ.

ಕೌರ್ ಅವರ ಈ ಟ್ವೀಟ್‌ನ ಬಗ್ಗೆ ಹಲವು ಸುದ್ದಿ ಸಂಸ್ಥೆಗಳು ವರದಿ ಪ್ರಕಟಿಸಿವೆ. ಮೀ–ಟೂ ಪ್ರಕರಣಗಳ ಪರಿಶೀಲನೆಗೆ ಸುಪ್ರೀಂ ಕೋರ್ಟ್ ರಚಿಸಿರುವ ಸಮಿತಿಯು ಇದರ ಬೆನ್ನಲ್ಲೇ ರಾಹುಲ್ ಜೋಹ್ರಿಗೆ ನೋಟಿಸ್ ನೀಡಿದೆ. ‘ನಿಮ್ಮ ಮೇಲೆ ಹೊರಿಸಲಾಗಿರುವ ಲೈಂಗಿಕ ದೌರ್ಜನ್ಯದ ಬಗ್ಗೆ ಮುಂದಿನ ಒಂದು ವಾರದ ಒಳಗೆ ವಿವರಣೆ ನೀಡಿ’ ಎಂದು ಸಮಿತಿಯು ಜೋಹ್ರಿಗೆ ಸೂಚಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT