ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮೀ–ಟೂ’ ಆರೋಪಗಳಿಗೆ ಮಾನನಷ್ಟದ ಎದುರೇಟು

ಮೊಕದ್ದಮೆ ದಾಖಲಿಸಿದ ಕೇಂದ್ರ ಸಚಿವ ಅಕ್ಬರ್‌, ನಟ ಅಲೋಕ್‌
Last Updated 15 ಅಕ್ಟೋಬರ್ 2018, 20:00 IST
ಅಕ್ಷರ ಗಾತ್ರ

ನವದೆಹಲಿ/ಮುಂಬೈ: ಹಲವು ಗಣ್ಯ ವ್ಯಕ್ತಿಗಳ ವಿರುದ್ಧ ಹತ್ತಾರು ಮಹಿಳೆಯರು ಸಾಮಾಜಿಕ ಜಾಲತಾಣದಲ್ಲಿ ‘ಮೀ–ಟೂ’ ಅಭಿಯಾನದ ಭಾಗವಾಗಿ ಮಾಡಿದ ಲೈಂಗಿಕ ಕಿರುಕುಳ ಆರೋಪಗಳಿಗೆ ಆರೋಪಿಗಳಿಂದ ತಿರುಗೇಟು ಪರ್ವ ಆರಂಭವಾಗಿದೆ.

ತಮಗೆ 20 ವರ್ಷಗಳ ಹಿಂದೆ ಲೈಂಗಿಕ ಕಿರುಕುಳ ನೀಡಿದ್ದರು ಎಂದು ಸಾಮಾಜಿಕ ಜಾಲ ತಾಣದಲ್ಲಿ ಇತ್ತೀಚೆಗೆ ಆರೋಪಿಸಿದ ಪತ್ರಕರ್ತೆ ಪ್ರಿಯಾ ರಮಣಿ ಅವರ ವಿರುದ್ಧ ಕೇಂದ್ರ ಸಚಿವ ಎಂ.ಜೆ. ಅಕ್ಬರ್‌ ಅವರು ದೆಹಲಿಯ ಪಟಿಯಾಲಾ ಹೌಸ್‌ ನ್ಯಾಯಾಲಯದಲ್ಲಿ ಕ್ರಿಮಿನಲ್‌ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.

ತಮ್ಮ ಮೇಲೆ ಅತ್ಯಾಚಾರ ಆರೋಪ ಮಾಡಿರುವ ನಿರ್ದೇಶಕಿ ವಿಂತಾ ನಂದಾ ವಿರುದ್ಧ ಹಿರಿಯ ನಟ ಅಲೋಕ್‌ ನಾಥ್‌ ಅವರು ಮುಂಬೈನ ನ್ಯಾಯಾಲಯವೊಂದರಲ್ಲಿ ಮಾನನಷ್ಟ ದೂರು ದಾಖಲಿಸಿದ್ದಾರೆ. ವಿಂತಾ ಅವರು ಬಹಿರಂಗವಾಗಿ ಕ್ಷಮೆ ಕೇಳಬೇಕು ಮತ್ತು ಒಂದು ರೂಪಾಯಿ ಪರಿಹಾರ ನೀಡಬೇಕು ಎಂದು ಅಲೋಕ್‌ ಅವರು ದೂರಿನಲ್ಲಿ ಕೋರಿದ್ದಾರೆ.

ಯುವ ಕಾಂಗ್ರೆಸ್‌ನಿಂದ ರಾಜೀನಾಮೆಗೆ ಒತ್ತಡ

ವಿದೇಶಾಂಗ ಖಾತೆ ರಾಜ್ಯ ಸಚಿವ ಎಂ.ಜೆ.ಅಕ್ಬರ್‌ ಕೂಡಲೇ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಯುವ ಕಾಂಗ್ರೆಸ್‌ ಕಾರ್ಯಕರ್ತರು ಸೋಮವಾರ ಅವರ ನಿವಾಸದ ಎದುರು ಪ್ರತಿಭಟನೆ ನಡೆಸಿದರು.

ತೀನ್‌ ಮೂರ್ತಿ ಭವನದ ಸಮೀಪ ಸೇರಿದ ಕಾರ್ಯಕರ್ತರು ಸಚಿವರ ವಿರುದ್ಧ ಘೋಷಣೆ ಕೂಗುತ್ತ ಅವರ ನಿವಾಸಕ್ಕೆ ನುಗ್ಗಲು ಯತ್ನಿಸಿದರು.ಪೊಲೀಸ್‌ ಬ್ಯಾರಿಕೇಡ್‌ ಭೇದಿಸಿ. ಸಚಿವರ ಮನೆಗೆ ನುಗ್ಗಲು ಯತ್ನಿಸಿದ ಕೆಲವು ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು.

‘ಸಚಿವ ಅಕ್ಬರ್‌ ವಿರುದ್ಧ 10 ಮಹಿಳಾ ಪತ್ರಕರ್ತರು ಲೈಂಗಿಕ ಕಿರುಕುಳ ನೀಡಿರುವ ಬಗ್ಗೆ ಆರೋಪ ಮಾಡಿದ್ದಾರೆ. ಸಚಿವ ಸ್ಥಾನದಲ್ಲಿ ಮಂದುವರಿಯಲು ಅವರಿಗೆ ನೈತಿಕ ಹಕ್ಕಿಲ್ಲ. ಕೂಡಲೇ ರಾಜೀನಾಮೆ ನೀಡಬೇಕು’ ಎಂದು ಪ್ರತಿಭಟನೆ ನೇತೃತ್ವ ವಹಿಸಿದ್ದ ಯುವ ಕಾಂಗ್ರೆಸ್‌ ಉಪಾಧ್ಯಕ್ಷ ಬಿ.ವಿ.ಶ್ರೀನಿವಾಸ್‌ ಒತ್ತಾಯಿಸಿದರು.

‘ಬೇಟಿ ಬಚಾವೊ, ಬೇಟಿ ಪಢಾವೊ’ ಎಂದು ಬಿಜೆಪಿ ನೇತೃತ್ವದ ಸರ್ಕಾರ ಘೋಷಿಸಿದೆ. ಆದರೆ, ಅದೇ ಸರ್ಕಾರದ ಮಂತ್ರಿಯೊಬ್ಬರು ಇಂಥ ಕೃತ್ಯ ಎಸಗಿದ್ದರೂ, ಬಿಜೆಪಿ ಅವರ ವಿರುದ್ಧ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ಮೌನ ವಹಿಸಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಇಂತಹ ಬೆದರಿಕೆ ತಂತ್ರಗಳಿಂದ ತಮ್ಮನ್ನು ಮಣಿಸಲಾಗದು ಎಂದು ಆರೋಪ ಮಾಡಿರುವ ಮಹಿಳೆಯರು ಹೇಳಿದ್ದಾರೆ.

‘ನನ್ನ ವಿರುದ್ಧ ಕ್ರಿಮಿನಲ್‌ ಮಾನನಷ್ಟ ಮೊಕದ್ದಮೆ ದಾಖಲಿಸುವ ಮೂಲಕ ಅಕ್ಬರ್ ಅವರು ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ. ಅವರ ವಿರುದ್ಧ ಹಲವು ಮಹಿಳೆಯರು ಮಾಡಿರುವ ಗಂಭೀರ ಆರೋಪಗಳ ಬಗ್ಗೆ ಆತ್ಮಾವಲೋಕನ ಮಾಡುವ ಬದಲಿಗೆ ಬೆದರಿಕೆ ಮತ್ತು ಕಿರುಕುಳದ ಮೂಲಕ ಅವರನ್ನು ಸುಮ್ಮನಿರಿಸಲು ಅಕ್ಬರ್‌ ಮುಂದಾಗಿದ್ದಾರೆ’ ಎಂದು ಪ್ರಿಯಾ ರಮಣಿ ಹೇಳಿದ್ದಾರೆ.

ತಮ್ಮ ವರ್ಚಸ್ಸು ಮತ್ತು ರಾಜಕೀಯ ಸ್ಥಾನಕ್ಕೆ ಮಸಿ ಬಳಿಯುವ ಉದ್ದೇಶದಿಂದಲೇ ಈ ಆರೋಪ ಮಾಡಲಾಗಿದೆ ಎಂದು ದೂರಿನಲ್ಲಿ ಅಕ್ಬರ್‌ ಹೇಳಿದ್ದಾರೆ. ಪಟಿಯಾಲಾ ಹೌಸ್‌ ಜಿಲ್ಲಾ ನ್ಯಾಯಾಲಯದಲ್ಲಿ ಈ ದೂರು ದಾಖಲಾಗಿದೆ.

ಅಕ್ಬರ್‌ ಅವರ ವಕಾಲತ್‌ನಾಮೆಯಲ್ಲಿ 97 ವಕೀಲರ ಹೆಸರುಗಳಿವೆ. ಇವರೆಲ್ಲರಿಗೂ ಅಕ್ಬರ್‌ ಅವರನ್ನು ನ್ಯಾಯಾಲಯದಲ್ಲಿ ಪ್ರತಿನಿಧಿಸಲು ಅಧಿಕಾರ ನೀಡಲಾಗಿದೆ.

ಅಕ್ಬರ್‌ ಅವರ ರಾಜೀನಾಮೆಗೆ ಒತ್ತಡ ಹೆಚ್ಚುತ್ತಿದೆ. ಆದರೆ ಸೋಮವಾರ ಅವರು ಎಂದಿನಂತೆಯೇ ಸಚಿವಾಲಯದ ಕೆಲಸಗಳನ್ನು ಮಾಡಿದ್ದಾರೆ.

ಪ್ರಿಯಾಗೆ ಭರಪೂರ ಬೆಂಬಲ

ವಕೀಲರು ಸೇರಿ ಹಲವರು ಪ್ರಿಯಾ ಅವರ ಬೆಂಬಲಕ್ಕೆ ನಿಂತಿದ್ದಾರೆ. ಕಾನೂನು ಹೋರಾಟದ ವೆಚ್ಚ ಭರಿಸುವುದಾಗಿ ಹಲವರು ಹೇಳಿದ್ದಾರೆ. ದೇಣಿಗೆ ನೀಡುವಂತೆ ಸಾಮಾಜಿಕ ಜಾಲ ತಾಣಗಳಲ್ಲಿ ಕೆಲವರು ಕೋರಿದ್ದಾರೆ.

ದನಿಗೂಡಿಸಿದ ಸಂಗೀತಗಾರರು

ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಮಹಿಳೆಯರು ತಮಗೆ ಕಿರುಕುಳ ನೀಡಿದವರ ಹೆಸರು ಬಹಿರಂಗಪಡಿಸಬೇಕು ಎಂದು ದಕ್ಷಿಣ ಭಾರತದ 200ಕ್ಕೂ ಹೆಚ್ಚು ಕರ್ನಾಟಕ ಸಂಗೀತಗಾರರು ಒತ್ತಾಯಿಸಿದ್ದಾರೆ.

ಬೆದರಿಕೆ ಬೇಡ: ಮಾಧ್ಯಮ ಸಂಘಟನೆಗಳು

ಭಾರತೀಯ ಪತ್ರಕರ್ತೆಯರ ಸಂಘ, ಭಾರತೀಯ ಪ್ರೆಸ್‌ ಕ್ಲಬ್‌, ಪ್ರೆಸ್‌ ಅಸೋಸಿಯೇಷನ್‌, ಸೌತ್‌ ಏಷ್ಯನ್‌ ವಿಮೆನ್‌ ಇನ್‌ ಮೀಡಿಯಾ ಸಂಘಟನೆಗಳು ಜಂಟಿ ಹೇಳಿಕೆ ಬಿಡುಗಡೆ ಮಾಡಿ ಎಲ್ಲ ಆರೋಪಗಳ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಯಬೇಕು ಎಂದು ಆಗ್ರಹಿಸಿವೆ. ದೂರುದಾರರಿಗೆ ಯಾವುದೇ ಬೆದರಿಕೆ ಅಥವಾ ಕಿರುಕುಳ ನೀಡಬಾರದು ಎಂದಿವೆ.

ನ್ಯಾಯಯುತ ತನಿಖೆಗಾಗಿ, ನೈತಿಕ ಮತ್ತು ಸಾರ್ವಜನಿಕ ಜೀವನದ ಔಚಿತ್ಯ ಕಾಪಾಡಲು ಸಚಿವ ಅಕ್ಬರ್‌ ರಾಜೀನಾಮೆ ನೀಡಬೇಕು. ತನಿಖೆ ಮುಗಿಯುವ ತನಕ ಅವರು ಸಚಿವ ಸ್ಥಾನದಲ್ಲಿ ಇರಬಾರದು ಎಂದೂ ಜಂಟಿ ಹೇಳಿಕೆ ಒತ್ತಾಯಿಸಿದೆ.

‘ಮೀ ಟೂ’ ದುರ್ಬಳಕೆ ಸಲ್ಲ: ಮಾತೆ ಮಹಾದೇವಿ

ಬಾಗಲಕೋಟೆ: ‘ಶೋಷಣೆಗೆ ಒಳಗಾದ ಮಹಿಳೆಯರು ‘ಮೀ ಟೂ’ ಅಭಿಯಾನ ಆರಂಭಿಸಿರುವುದು ಒಳ್ಳೆಯ ಬೆಳವಣಿಗೆ. ಆದರೆ ಅದು ದುರ್ಬಳಕೆ ಆಗಬಾರದು’ ಎಂದು ಕೂಡಲಸಂಗಮದ ಬಸವ ಧರ್ಮ ಪೀಠದ ಮುಖ್ಯಸ್ಥೆ ಮಾತೆ ಮಹಾದೇವಿ ಹೇಳಿದರು.

‘ಶಬರಿಮಲೆ ದೇವಸ್ಥಾನಕ್ಕೆ ಹೆಣ್ಣು ಮಕ್ಕಳ ಪ್ರವೇಶಕ್ಕೆ ಸುಪ್ರೀಂಕೋರ್ಟ್‌ ಅವಕಾಶ ನೀಡಿರುವುದು ಕೂಡ ಒಳ್ಳೆಯ ತೀರ್ಮಾನ. ಮದುವೆ ನಂತರ ಅಕ್ರಮ ಸಂಬಂಧ ತಪ್ಪಲ್ಲ ಎನ್ನುವ ಸುಪ್ರೀಂಕೋರ್ಟ್‌ ತೀರ್ಪು ಸರಿಯಲ್ಲ. ಅದನ್ನು ಮರುಪರಿಶೀಲಿಸಬೇಕು’ ಎಂದು ಅವರು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT