ಮುಂಬೈ: ಹಿರಿಯ ವಿದ್ಯಾರ್ಥಿಗಳು ಜಾತಿ ನಿಂದನೆ ಮಾಡಿದ್ದರು ಎಂದು ಮನನೊಂದು ಆತ್ಮಹತ್ಯೆ ಮಾಡಿಕೊಂಡ ಸ್ನಾತಕೋತ್ತರ ವೈದ್ಯ ವಿದ್ಯಾರ್ಥಿನಿ ಪಾಯಲ್ ತಡ್ವಿ (26) ಅವರ ಪಾಲಕರು ಮಂಗಳವಾರ ಪ್ರತಿಭಟನೆ ನಡೆಸಿದರು.
ರಾಜ್ಯ ಸರ್ಕಾರದ ಬಿ.ವೈ.ಎಲ್. ನಾಯರ್ ಆಸ್ಪತ್ರೆ ಎದುರು ಪ್ರತಿಭಟನೆ ನಡೆಸಿದ ಪಾಯಲ್ ಅವರ ತಾಯಿ ಆಬಿದಾ ತಡ್ವಿ ಹಾಗೂ ಪತಿ ಸಲ್ಮಾನ್ ಅವರು, ಜಾತಿ ನಿಂದನೆ ಮಾಡಿರುವ ವಿದ್ಯಾರ್ಥಿನಿಯರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದ್ದಾರೆ.
ವಂಚಿತ್ ಬಹುಜನ ಅಘಾಡಿ, ಇತರೆ ದಲಿತ ಮತ್ತು ಬುಡಕಟ್ಟು ಸಂಘಟನೆಗಳು ಸಹ ಆಸ್ಪತ್ರೆ ಹೊರಗೆ ಪ್ರತಿಭಟನೆ ನಡೆಸಿದವು. ಪಾಯಲ್ ಅವರು ನಾಯರ್ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದರು. ಇದೇ ಆಸ್ಪತ್ರೆಯಲ್ಲಿ ಮೇ 22 ರಂದು ನೇತಾಡುತ್ತಿರುವ ಸ್ಥಿತಿಯಲ್ಲಿ ಅವರ ಮೃತದೇಹ ಪತ್ತೆಯಾಗಿತ್ತು.
‘ಪಾಯಲ್ ಅವರನ್ನು ಮೂವರು ವಿದ್ಯಾರ್ಥಿನಿಯರು ಸೇರಿ ಕೊಲೆ ಮಾಡಿರುವ ಸಾಧ್ಯತೆ ಇದೆ. ಆದರೆ, ಪೊಲೀಸರು ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ. ಆದ್ದರಿಂದ ಸರ್ಕಾರ ಮಧ್ಯ ಪ್ರವೇಶಿಸಬೇಕು’ ಎಂದು ಸಲ್ಮಾನ್ ಒತ್ತಾಯಿಸಿದ್ದಾರೆ. ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಜಾದ್ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.
ಮಹಾರಾಷ್ಟ್ರ ರಾಜ್ಯದ ಮಹಿಳಾ ಆಯೋಗವು ಆಸ್ಪತ್ರೆಯ ಆಡಳಿತ ಮಂಡಳಿಗೆ ನೋಟಿಸ್ ನೀಡಿದ್ದು, ಎಂಟು ದಿನದೊಳಗೆ ಉತ್ತರಿಸಬೇಕು ಎಂದು ಸೂಚಿಸಿದೆ.
ಹಿರಿಯ ವಿದ್ಯಾರ್ಥಿನಿಯರಾದ ಡಾ. ಹೇಮಾ ಅಹುಜಾ, ಡಾ. ಭಕ್ತಿ ಮೆಹರ್ ಮತ್ತು ಡಾ. ಅಂಕಿತಾ ಖಂಡೇಲ್‌ವಾಲ್ ಅವರ ವಿರುದ್ಧ ಜಾತಿ ನಿಂದನೆ ಮತ್ತು ಕಿರುಕುಳದ ಆರೋಪ ಮಾಡಲಾಗಿದೆ. ಈ ಮೂವರನ್ನು ಆಸ್ಪತ್ರೆಯ ಆಡಳಿತ ಮಂಡಳಿ ಅಮಾನತು ಮಾಡಿದೆ.
ಆರೋಪಿಗಳು ಮಹಾರಾಷ್ಟ್ರ ಸ್ನಾತಕೋತ್ತರ ವೈದ್ಯ ವಿದ್ಯಾರ್ಥಿಗಳ ಸಂಘಕ್ಕೆ (ಎಂಎಆರ್‌ಡಿ) ಪತ್ರ ಬರೆದಿದ್ದು, ‘ಕಾಲೇಜಿನ ವತಿಯಿಂದ ನ್ಯಾಯಯುತವಾದ ತನಿಖೆ ನಡೆಯಬೇಕು. ನಮಗೆ ನ್ಯಾಯ ದೊರಕಿಸಿಕೊಡಬೇಕು’ ಎಂದಿದ್ದಾರೆ.
ಪಾಯಲ್ ಅವರನ್ನು ಮೂವರು ವೈದ್ಯ ವಿದ್ಯಾರ್ಥಿನಿಯರು ಜಾತಿ ಹೆಸರಿನಲ್ಲಿ ನಿಂದಿಸಿದ್ದಾರೆ ಎಂಬುದಕ್ಕೆ ವಿಶ್ವಾಸಾರ್ಹವಾದ ಪುರಾವೆಗಳಿವೆ ಎಂದು ಮಹಾರಾಷ್ಟ್ರ ಸ್ನಾತಕೋತ್ತರ ವೈದ್ಯ ವಿದ್ಯಾರ್ಥಿಗಳ ಸಂಘದ (ಎಂಎಆರ್‌ಡಿ) ಅಧಿಕಾರಿಗಳು ಹೇಳಿದ್ದಾರೆ.
ಆರೋಪಿಗಳ ವಿರುದ್ಧ ದೌರ್ಜನ್ಯ ಕಾಯ್ದೆ, ರ‍್ಯಾಗಿಂಗ್ ವಿರೋಧಿ ಕಾಯ್ದೆ, ಐಟಿ ಕಾಯ್ದೆ ಮತ್ತು ಭಾರತೀಯ ದಂಡ ಸಂಹಿತೆಯ 306ನೇ ಸೆಕ್ಷನ್ (ಆತ್ಮಹತ್ಯೆಗೆ ಕುಮ್ಮಕ್ಕು) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
‘ಪಾಯಲ್ ಜಾತಿ ಯಾವುದು ಗೊತ್ತಿಲ್ಲ’
ಜಾತಿ ನಿಂದನೆ ಕಿರುಕುಳದಿಂದಾಗಿ ಆತ್ಮಹತ್ಯೆ ಮಾಡಿಕೊಂಡಿರುವ ಡಾ. ಪಾಯಲ್ ತಡ್ವಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆಸ್ಪತ್ರೆಯ ಮೂವರು ಹಿರಿಯ ವೈದ್ಯರ ವಿರುದ್ಧ ದೂರು ದಾಖಲಾಗಿದೆ. ಈ ನಡುವೆ ಮೂವರು ವೈದ್ಯರು ನಿರೀಕ್ಷಣಾ ಜಾಮೀನಿಗೆ ಕೋರ್ಟ್ ಮೆಟ್ಟಿಲೇರಿದ್ದಾರೆ. ಕಿರುಕುಳ ನೀಡಿದ ಆರೋಪದ ಎದುರಿಸುತ್ತಿರುವ ಹೇಮಾ ಅಹುಜಾ, ಭಕ್ತಿ ಮೆಹರ್, ಅಂಕಿತಾ ಖಂಡೇಲ್‌ವಾಲ್ ಅವರು ಸೆಷನ್ಸ್ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು, ‘ಪಾಯಲ್ ಜಾತಿ ಯಾವುದು ಎಂದು ನಮಗೆ ಇನ್ನೂ ಗೊತ್ತಿಲ್ಲ. ವೃತ್ತಿ ಸಂಬಂಧ ಮಾತ್ರ ಅವರ ಜತೆ ಮಾತನಾಡುತ್ತಿದ್ದೆವು’ ಎಂದಿದ್ದಾರೆ.
ಕೋರ್ಟ್‌ಗೆ ಅರ್ಜಿ ಸಲ್ಲಿಸಿದ ಒಂದು ಗಂಟೆ ನಂತರ ಡಾ.ಮೆಹರ್ ಅವರನ್ನು ಬಂಧಿಸಿದ ಪೊಲೀಸರು ವಿಚಾರಣೆ ನಡಸಿದರು.
***
ಅಗತ್ಯಬಿದ್ದರೆ ಮಹಾರಾಷ್ಟ್ರಕ್ಕೆ ಬರುತ್ತೇನೆ. ನನ್ನ ಕಿರಿಯ ಸಹೋದರಿಗೆ ನ್ಯಾಯ ಒದಗಿಸಲು ಹೋರಾಡುತ್ತೇನೆ
ಚಂದ್ರಶೇಖರ್ ಆಜಾದ್, ಭೀಮ್ ಆರ್ಮಿ ಮುಖ್ಯಸ್ಥ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.