ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಚಿತ್ರಕತೆಗೇ ಆದ್ಯತೆ’

ಸಿನಿಮಾ ಉತ್ಸವ
Last Updated 25 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ನೀವು ಮೂಲತಃ ಸಂಕಲನಕಾರ. ಈಗ ನಿರ್ದೇಶಕನಾಗಿ ಬಡ್ತಿ ಹೊಂದಿದ್ದೀರಿ. ಹೇಗನ್ನಿಸುತ್ತೆ ಸ್ಥಿತ್ಯಂತರ?

ನಾನು ‘ಟೇಕ್‌ಆಫ್’ ನಿರ್ದೇಶಿಸಬೇಕು ಅಂದುಕೊಂಡಾಗ, ಸಿನಿರಂಗಕ್ಕೆ ಹೊಸಬರು ಬಂದಾಗ ಅನುಭವಿಸುವ ಕಷ್ಟಗಳನ್ನೇ ಎದುರಿಸಬೇಕಾಯಿತು. ಸಂಕಲನಕಾರನ ಅನುಭವ ನಿರ್ದೇಶನದಲ್ಲಿ ಉಪಯೋಗಕ್ಕೆ ಬಂತು. ಚಿತ್ರಕತೆ ಬರೆಯುವಾಗಲೇ ಯಾವುದು ಅಗತ್ಯವೋ ಅಷ್ಟನ್ನೇ ಬರೆದು ಎಡಿಟಿಂಗ್ ಕಾರ್ಯವನ್ನು ಅಲ್ಲಿಂದಲೇ ಆರಂಭಿಸಿಬಿಟ್ಟಿದ್ದೆ. ಇದರಿಂದ ಕಡಿಮೆ ದಿನಗಳಲ್ಲಿ ದೊಡ್ಡ ಸಿನಿಮಾ ಮಾಡಲು ಸಾಧ್ಯವಾಯಿತು. ಆದರೆ, ಇದನ್ನು ಸಿನಿಮಾ ತಂಡ ಮತ್ತು ಕಲಾವಿದರು ಒಪ್ಪೋದಿಲ್ಲ. ಏಕೆಂದರೆ ನಟರಿಗೆ ಒಂದು ರೀತಿಯ ಫ್ಲೋ, ಸ್ಪೇಸ್ ಬೇಕು. ಕನ್ನಡದ ರಂಗಕರ್ಮಿ ಪ್ರಕಾಶ್ ಬೆಳವಾಡಿ ನನ್ನ ಅತ್ಯುತ್ತಮ ಸ್ನೇಹಿತ. ನನ್ನ ನಿರ್ದೇಶನದ ವೈಖರಿ ನೋಡಿ ಅವರು ‘ನನ್ನ ಅಭಿನಯದಲ್ಲಿ ನಿನ್ನ ಕತ್ತರಿ ಆಡಿಸುತ್ತೀಯಾ’ ಎಂದು ಜಗಳವಾಡುತ್ತಾರೆ. ನನ್ನ ಸಿನಿಮಾಗಳಿಗೆ ನಾನು ಸಂಕಲನಕಾರನಾಗಿರುತ್ತೇನೆ. ಬಹುಶಃ ಇದು ನನ್ನ ತಂಡಕ್ಕೆ ಕಷ್ಟವಾಗಬಹುದು.

  ‘ಟೇಕ್‌ಆಫ್‌’ ಸಿನಿಮಾಕ್ಕೆ ಇಂಥದ್ದೇ ವಿಷಯ ಮತ್ತು ಇಂಥ ನಟಿಯೇ ಬೇಕು ಎಂಬುದು ಪೂರ್ವನಿರ್ಧರಿತವಾಗಿತ್ತೇ?

2014ರಲ್ಲಿ ಭಾರತೀಯ ನರ್ಸ್‌ಗಳು ಇರಾಕ್‌ನಲ್ಲಿ ಉಗ್ರರಿಂದ ಬಿಡುಗಡೆಯಾದ ಬಳಿಕ ಇಂಥ ವಿಷಯವನ್ನಿಟ್ಟುಕೊಂಡು ಸಿನಿಮಾ ಮಾಡಬೇಕು ಅಂತ ತೀವ್ರವಾಗಿ ಕಾಡಿತ್ತು. ಅದಕ್ಕಾಗಿಯೇ ಅನೇಕ ನರ್ಸ್‌ಗಳನ್ನು ಭೇಟಿ ಮಾಡಿ ಅವರ ಜೀವನಶೈಲಿ, ಬದುಕಿನ ಚಿತ್ರಣವನ್ನು ಮನದಲ್ಲಿ ಕಟ್ಟಿಕೊಂಡೆ. ಕೇರಳದ ನರ್ಸ್‌ಗಳಿಗೆ ಸಿಗುವ ಸಂಬಳ ತುಂಬಾ ಕಡಿಮೆ. ಸಣ್ಣ ಸಂಬಳದಲ್ಲಿ ಬದುಕು ಸಾಗಿಸಲಾಗದೇ ಅವರು ಹೊರದೇಶಗಳಿಗೆ ದುಡಿಯಲು ಹೋಗುತ್ತಾರೆ. ಇದು ನನ್ನನ್ನು ತೀವ್ರವಾಗಿ ತಟ್ಟಿದ್ದರ ಪರಿಣಾಮವೇ ‘ಟೇಕ್‌ಆಫ್’.

ಟಿ.ಕೆ. ಪಾರ್ವತಿ ಮತ್ತು ನಾನು ಉತ್ತಮ ಸ್ನೇಹಿತರು. ಹಾಗಂತ ಸಮೀರಾ ಪಾತ್ರಕ್ಕೆ ಅವರನ್ನೇ ಮನದಲ್ಲಿಟ್ಟುಕೊಂಡು ಚಿತ್ರಕಥೆಯನ್ನು ಬರೆಯಲಿಲ್ಲ. ಸಮೀರಾ ಪಾತ್ರಕ್ಕೆ ಆಯ್ಕೆ ಮಾಡುವ ಮೊದಲು ಪಾರ್ವತಿ ಅವರೊಂದಿಗೆ ತುಂಬಾ ಚರ್ಚಿಸಿದ್ದೆ. ಯಾವುದೇ ನಟ–ನಟಿಯ ಇಮೇಜ್ ನೋಡಿಕೊಂಡು ಚಿತ್ರಕತೆ ಬರೆಯೋದಿಲ್ಲ. ಪಾರ್ವತಿ ಸಮೀರಾ ಪಾತ್ರಕ್ಕೆ ಜೀವ ತುಂಬಿದರು, ಪ್ರಶಸ್ತಿ ಪಡೆದರು.

‘ಟೇಕ್‌ಆಫ್’ ಇಷ್ಟೊಂದು ಯಶಸ್ಸು ಗಳಿಸುತ್ತೆ ಅಂದುಕೊಂಡಿದ್ರಾ?

ಇಲ್ಲ. ಹಾಗೇ ನೋಡಿದರೆ ಈ ಸಿನಿಮಾವನ್ನು ನಾನು ಮುಖ್ಯವಾಹಿನಿಗಾಗಿ ಮಾಡಿದ್ದು. ಅದಕ್ಕೀಗ ಕಲಾತ್ಮಕ, ವಿಮರ್ಶಕ ಮತ್ತು ಪ್ರೇಕ್ಷಕರ ವಲಯದಲ್ಲಿ ಇಷ್ಟೊಂದು ಮೆಚ್ಚುಗೆ ಸಿಕ್ಕಿದ್ದು ನೋಡಿ ಮೂಕವಿಸ್ಮಿತನಾಗಿದ್ದೇನೆ. ಗೋವಾ ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿ ಮಾನ್ಯತೆ, ಪ್ರಶಸ್ತಿ ದೊರಕಿದ್ದು ನನ್ನ ಉತ್ಸಾಹವನ್ನು ಇಮ್ಮಡಿಗೊಳಿಸಿದೆ.

ಮಲಯಾಳಂ ಸಿನಿಮಾಗಳ ಟ್ರೆಂಡ್ ಹಿಂದೆ ಬೇರೆಯೇ ಇತ್ತು. ಈಗದು ಬದಲಾಗಿದೆ ಅಲ್ಲವೇ?

ಸಿನಿಮಾ ಚಿತ್ರಕತೆಯಿಂದ ಹಿಡಿದು ತಯಾರಿಕೆಯ ತನಕ ಮಹತ್ತರ ಬದಲಾವಣೆ ಕಾಣುತ್ತಿದ್ದೇವೆ. ಎಷ್ಟೊಂದು ಹೊಸ ನಟ–ನಟಿಯರು ಬರುತ್ತಿದ್ದಾರೆ. ನಮ್ಮನಮ್ಮಲೇ ಈಗ ಬಹಳಷ್ಟು ಸ್ಪರ್ಧೆ ಇದೆ. ಆದರೆ, ಅಲ್ಲಿನ ಜನರು ಈಗಲೂ ಉತ್ತಮ ಚಿತ್ರಕತೆಗೆ (ಕಂಟೆಂಟ್‌) ಮಾತ್ರ ಆದ್ಯತೆ ಕೊಡುತ್ತಾರೆಯೇ ಹೊರತು ನಾಯಕ–ನಾಯಕಿಯರಿಗಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT