ಗುಜರಾತ್‌ನಿಂದ ಕಾಲ್ಕೀಳುತ್ತಿರುವ ವಲಸೆ ಕಾರ್ಮಿಕರು

7

ಗುಜರಾತ್‌ನಿಂದ ಕಾಲ್ಕೀಳುತ್ತಿರುವ ವಲಸೆ ಕಾರ್ಮಿಕರು

Published:
Updated:

ಅಹಮದಾಬಾದ್: ಬಿಹಾರ ಮತ್ತು ಉತ್ತರ ಪ್ರದೇಶಗಳ ಸಾವಿರಾರು ವಲಸೆ ಕಾರ್ಮಿಕರು ಉತ್ತರ ಗುಜರಾತ್‌ನಿಂದ ಸ್ವಂತ ಊರುಗಳಿಗೆ ಹಿಂದಿರುಗುತ್ತಿದ್ದಾರೆ. ಸಬರ್‌ಕಾಂತಾ ಪಟ್ಟಣದಲ್ಲಿ 14 ತಿಂಗಳ ಮಗುವಿನ ಮೇಲೆ ಅತ್ಯಾಚಾರ ನಡೆಸಿದ ಆರೋಪ ಮೇಲೆ ಕಳೆದ ವಾರ ಬಿಹಾರ ಮೂಲಕ ಕಾರ್ಮಿಕನೊಬ್ಬನನ್ನು ಪೊಲೀಸರು ಬಂಧಿಸಿದ್ದರು. ನಂತರದ ದಿನಗಳಲ್ಲಿ ವಲಸೆ ಕಾರ್ಮಿಕರ ವಿರುದ್ಧ ಪ್ರತಿಭಟನೆಗಳು ವ್ಯಾಪಕವಾಗಿದ್ದವು.

ಬಿಹಾರ ಮತ್ತು ಉತ್ತರ ಪ್ರದೇಶ ಮೂಲದ ಕಾರ್ಮಿಕರಿಗೆ ತೊಂದರೆ ಕೊಡುತ್ತಿದ್ದ 150 ಜನರನ್ನು ಈವರೆಗೆ ಬಂಧಿಸಲಾಗಿದೆ. ಹಿಂಸಾಚಾರ ವರದಿಯಾಗಿದ್ದ ಸಬರಕಾಂತ್‌ನಲ್ಲಿ ಪೊಲೀಸ್ ಗಸ್ತು ಹೆಚ್ಚಿಸಲಾಗಿದೆ. ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳ ಪ್ರತಿಕ್ರಿಯೆ ಉಲ್ಲೇಖಿಸಿ ‘ಎನ್‌ಡಿಟಿವಿ’ ವರದಿ ಮಾಡಿದೆ.

ಆರೋಪಿಯ ಬಂಧನದ ನಂತರ ಗಾಂಧಿನಗರ, ಅಹಮದಾಬಾದ್, ಪಟಾನ್, ಸಬರ್‌ಕಾಂತಾ ಮತ್ತು ಮೆಹ್ಸಾನಾ ಪಟ್ಟಣಗಳಲ್ಲಿ ಪ್ರತಿಭಟನೆಗಳು ನಡೆದಿದ್ದರು.

‘ಮಗುವಿನ ಅತ್ಯಾಚಾರ ಪ್ರಕರಣ ವರದಿಯಾದ ನಂತರ ಇತರ ರಾಜ್ಯಗಳಿಂದ ಗುಜರಾತ್‌ಗೆ ಬಂದಿರುವ ವಲಸೆ ಕಾರ್ಮಿಕರನ್ನು ಗುರಿಯಾಗಿಸಿಕೊಂಡು ಕೆಲವರು ದಾಳಿ ನಡೆಸುತ್ತಿದ್ದರು. ಇದನ್ನು ಒಪ್ಪಲು ಸಾಧ್ಯವೇ ಇಲ್ಲ. ವಲಸೆ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ವಾಸವಿರುವ ಪ್ರದೇಶಗಳಲ್ಲಿ ಗಸ್ತು ಹೆಚ್ಚಿಸಲಾಗಿದೆ. ಶಾಂತಿ ಕದಡಿದ ಆರೋಪದ ಮೇಲೆ 150 ಜನರನ್ನು ಬಂಧಿಸಲಾಗಿದೆ’ ಎಂದು ಗುಜರಾತ್ ಪೊಲೀಸ್ ಮಹಾ ನಿರ್ದೇಶಕ ಶಿವಾನಂದ ಝಾ ಎಎನ್‌ಐ ಸುದ್ದಿಸಂಸ್ಥೆಗೆ ಪ್ರತಿಕ್ರಿಯಿಸಿದ್ದಾರೆ.

ಕಾಂಗ್ರೆಸ್ ನಾಯಕ ಅಲ್ಪೇಶ್ ಠಾಕೋರ್ ‘ಶಾಂತಿ ಕಾಪಾಡಬೇಕು’ ಎಂದು ಮನವಿ ಮಾಡಿದ್ದಾರೆ. ಆದರೆ ಪ್ರಸ್ತುತ ಗುಜರಾತ್‌ನಲ್ಲಿ ಉತ್ತರ ಪ್ರದೇಶ ಮತ್ತು ಬಿಹಾರಿ ಕಾರ್ಮಿಕರ ವಿರುದ್ಧ ನಡೆಯುತ್ತಿರುವ ಹಿಂಸಾಚಾರದಲ್ಲಿ ಅಲ್ಪೇಶ್ ನಾಯಕತ್ವದ ಕ್ಷತ್ರಿಯ ಠಾಕೂರ್ ಸೇನೆಯ ಪಾತ್ರವೇ ದೊಡ್ಡದು ಎಂಬ ಆರೋಪಗಳು ವ್ಯಾಪಕವಾಗಿ ಕೇಳಿ ಬಂದಿವೆ.

ರಾಜಕೀಯ, ಜಾತಿ ಬಣ್ಣ

ಅತ್ಯಾಚಾರಕ್ಕೊಳಗಾಗಿದ್ದ ಮಗು ಠಾಕೂರ್‌ ಜಾತಿ ಸೇರಿದ್ದು ಎನ್ನುವುದನ್ನು ಕಾಂಗ್ರೆಸ್ ಶಾಸಕ ಅಲ್ಪೇಶ್‌ ರಾಜಕೀಯವಾಗಿ ಬಳಸಿಕೊಳ್ಳಲು ಯತ್ನಿಸಿದರು. ನಂತರದ ದಿನಗಳಲ್ಲಿ ವಲಸೆ ಕಾರ್ಮಿಕರ ಮೇಲೆ ವ್ಯವಸ್ಥಿತ ದಾಳಿಗಳು ನಡೆದವು. ಪೊಲೀಸರು ಗಸ್ತು ಹೆಚ್ಚಿಸಿ, ದಾಳಿಕೋರರನ್ನು ಬಂಧಿಸಲು ಆರಂಭಿಸಿದ ನಂತರ ಅಲ್ಪೇಶ್ ‘ಗುಜರಾತ್‌ಗೆ ಹೊರಗಿನಿಂದ ಬಂದವರೂ ನಮ್ಮ ಸೋದರರೇ’ ಎಂದು ಮಾತು ಬದಲಿಸಿ, ಶಾಂತಿಗೆ ಕರೆ ನೀಡಿದ್ದರೆ.

ಗುಜರಾತ್‌ನಲ್ಲಿ ವಲಸೆ ಕಾರ್ಮಿಕರ ಮೇಲೆ ನಡೆಯುತ್ತಿರುವ ದಾಳಿಯನ್ನು ಖಂಡಿಸಿರುವ ಬಿಹಾರದ ಮಾಜಿ ಉಪಮುಖ್ಯಮಂತ್ರಿ ಮತ್ತು ಶಾಸಕ ತೇಜಸ್ವಿ ಯಾದವ್, ‘ಸನ್ಮಾನ್ಯ ನರೇಂದ್ರ ಮೋದಿ ಅವರೇ 2014ರಲ್ಲಿ ನೀವು ದೇಶಕ್ಕೆ ಮಾರಿದ ಗುಜರಾತ್‌ನ ಅದ್ಘುತ ಪ್ರಪಂಚ ಇದೇ ತಾನೆ? ಉತ್ತರ ಪ್ರದೇಶ, ಬಿಹಾರ ಮತ್ತು ಮಧ್ಯ ಪ್ರದೇಶಗಳ ಕಾರ್ಮಿಕರ ಮೇಲೆ ಗುಜರಾತ್‌ನಲ್ಲಿ ಗುಂಪು ಹಲ್ಲೆಗಳು ನಡೆಯುತ್ತಿವೆ. ಬಿಜೆಪಿ/ಆರ್‌ಎಸ್‌ಎಸ್‌ ಜತೆಗೂಡಿ ಗುಜರಾತ್‌ನಲ್ಲಿ ಬಡವರು, ದಲಿತರು ಮತ್ತು ಅಲ್ಪಸಂಖ್ಯಾತರ ವಿರುದ್ಧ ದ್ವೇಷ ಬಿತ್ತಿ ಹಿಂಸೆಯ ಬೆಳೆ ತೆಗೆಯುತ್ತಿದ್ದಾರೆ. ನಾಚಿಕೆಗೇಡಿನ ಸಂಗತಿ ಇದು’ ಎಂದು ಟ್ವಿಟರ್‌ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜೀವ ಉಳಿಸಿಕೊಂಡರೆ ಸಾಕಾಗಿದೆ

‘ಸ್ಥಳೀಯರು ನಮ್ಮ ಮೇಲೆ ನಂಬಿಕೆ ಕಳೆದುಕೊಂಡಿದ್ದಾರೆ. ಜೀವ ಉಳಿಸಿಕೊಂಡರೆ ಸಾಕು ಎಂದು ಸಿಕ್ಕಷ್ಟು ಗಂಟು ಕಟ್ಟಿಕೊಂಡು ಓಡುತ್ತಿದ್ದೇವೆ. ವಲಸೆ ಕಾರ್ಮಿಕರ ಮೇಲೆ ನಡೆಯುತ್ತಿರುವ ಹಲ್ಲೆಗಳ ಹತ್ತಾರು ಕಥೆಗಳನ್ನು ಕೇಳಿ ಹೆದರಿಬಿಟ್ಟಿದ್ದೇವೆ’ ಎನ್ನುವ ಭೋಜ್‌ಪುರದ ಅಜಯ್‌ ಸಾಹು ಹೇಳಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್’ ವರದಿ ಮಾಡಿದೆ. ಮೆಹ್ಸಾನದ ರೆಸ್ಟೊರೆಂಟ್‌ನಲ್ಲಿ ಅಜಯ್ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದರು. ಗುಜರಾತ್‌ನಿಂದ ಉತ್ತರ ಪ್ರದೇಶ ಮತ್ತು ಬಿಹಾರಕ್ಕೆ ಹೊರಡುವ ಎಲ್ಲ ರೈಲು ಮತ್ತು ಬಸ್ಸುಗಳು ಭರ್ತಿಯಾಗಿವೆ.

ಬರಹ ಇಷ್ಟವಾಯಿತೆ?

 • 6

  Happy
 • 0

  Amused
 • 1

  Sad
 • 2

  Frustrated
 • 7

  Angry

Comments:

0 comments

Write the first review for this !