ಗುಜರಾತ್‌ನಲ್ಲಿ ನಡೆಯುತ್ತಿರುವ ದಾಳಿ: ವಲಸೆ ಕಾರ್ಮಿಕರೂ ರಾಜಕೀಯ ದಾಳ

7

ಗುಜರಾತ್‌ನಲ್ಲಿ ನಡೆಯುತ್ತಿರುವ ದಾಳಿ: ವಲಸೆ ಕಾರ್ಮಿಕರೂ ರಾಜಕೀಯ ದಾಳ

Published:
Updated:

ನವದೆಹಲಿ: ಬಿಹಾರ ಮತ್ತು ಉತ್ತರ ಪ್ರದೇಶದ ವಲಸಿಗ ಕಾರ್ಮಿಕರ ಮೇಲೆ ಗುಜರಾತ್‌ನಲ್ಲಿ ನಡೆಯುತ್ತಿರುವ ಸಾಮೂಹಿಕ ದಾಳಿಗಳು ರಾಜಕೀಯ ಆಯಾಮ ಪಡೆದುಕೊಂಡಿವೆ.

ಕಾಂಗ್ರೆಸ್‌, ಆರ್‌ಜೆಡಿ ಸೇರಿದಂತೆ ಅನೇಕ ರಾಜಕೀಯ ಪಕ್ಷಗಳು ಗುಜರಾತ್‌ ಆಡಳಿತಾರೂಢ ಬಿಜೆಪಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿವೆ.

ಗುಜರಾತ್‌ನಲ್ಲಿರುವ ಬಿಜೆಪಿ ನೇತೃತ್ವದ ಸರ್ಕಾರದ ಆಡಳಿತದಲ್ಲಿ ಕಾನೂನು, ಸುವ್ಯವಸ್ಥೆ ನೆಲಕಚ್ಚಿದೆ. ಹಿಂದಿ ಭಾಷಿಕ ಕಾರ್ಮಿಕರ ಮೇಲೆ ನಡೆಯುತ್ತಿರುವ ಹಲ್ಲೆ ಅಮಾನವೀಯ ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಟ್ವೀಟ್‌ ಮಾಡಿದ್ದಾರೆ.

ಬಿಹಾರ ಮತ್ತು ಉತ್ತರ ಪ್ರದೇಶ ಕಾರ್ಮಿಕರಿಗೆ ವಲಸಿಗರು ಎಂದು ಹಣೆಪಟ್ಟಿ ಕಟ್ಟಿದ್ದನ್ನು ಆರ್‌ಜೆಡಿ ಬಲವಾಗಿ ಖಂಡಿಸಿದೆ.

ವಿರೋಧಿಗಳ ಆರೋಪಗಳಿಗೆ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ವಿಜಯ್‌ ರೂಪಾಣಿ, ‘ಕಾಂಗ್ರೆಸ್‌ ಮೊದಲು ಹಿಂಸಾಚಾರಕ್ಕೆ ಕುಮ್ಮಕ್ಕು ನೀಡುತ್ತದೆ. ನಂತರ ಕಣ್ಣೀರು ಸುರಿಸುತ್ತದೆ’ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

‘ನೆರೆಯ ರಾಜ್ಯದ ನಾಗರಿಕರನ್ನು ವಲಸಿಗರು ಎಂದು ಕರೆಯಲು ನಿಮಗೆಷ್ಟು ಧೈರ್ಯ. ಹಾಗಾದರೆ, ಉತ್ತರ ಪ್ರದೇಶದಿಂದ ಆಯ್ಕೆಯಾದ ಗುಜರಾತ್‌ನ ನರೇಂದ್ರ ಮೋದಿ ವಲಸಿಗರಲ್ಲವೇ’ ಎಂದು ತೇಜಸ್ವಿ ಯಾದವ್‌ ಅವರು ರೂಪಾಣಿ ಅವರನ್ನು ಪ್ರಶ್ನಿಸಿದ್ದಾರೆ.

ಉತ್ತರ ಪ್ರದೇಶ ಮತ್ತು ಬಿಹಾರ ರಾಜ್ಯಗಳ ಜನರು ನೂರು ಸಂಸದರನ್ನು ಆಯ್ಕೆ ಮಾಡಿ ಕಳಿಸಿದ್ದರಿಂದ ಗುಜರಾತ್‌ನ ನರೇಂದ್ರ ಮೋದಿ ಪ್ರಧಾನಿಯಾಗಿದ್ದಾರೆ ಎಂದು ಅವರು ತಿರುಗೇಟು ನೀಡಿದ್ದಾರೆ.

ಗುಜರಾತ್‌ನಲ್ಲಿ ಬಿಹಾರಿಗಳ ಮೇಲೆ ದಾಳಿಗೆ ಪ್ರಧಾನಿ ಮೋದಿ ಮತ್ತು ಅಮಿತ್‌ ಶಾ ಜೋಡಿ ಪ್ರಚೋದನೆ ನೀಡುತ್ತಿದೆ. ಹೊಟ್ಟೆ ಹೊರೆಯಲು ಅನ್ಯ ರಾಜ್ಯಗಳಿಗೆ ಹೋಗಿರುವ ಬಿಹಾರಿಗಳ ಅನ್ನವನ್ನು ಕಸಿಯಲು ಬಿಜೆಪಿ ಷಡ್ಯಂತ್ರ ರೂಪಿಸಿದೆ ಎಂದು ಆರೋಪಿಸಿದ್ದಾರೆ.

ಎನ್‌ಡಿಎ ಮಿತ್ರಪಕ್ಷ ಜೆಡಿಯು ನಾಯಕ ಮತ್ತು ಬಿಹಾರದ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಏನು ಮಾಡುತ್ತಿದ್ದಾರೆ ಎಂದು ತೇಜಸ್ವಿ ಪ್ರಶ್ನಿಸಿದ್ದಾರೆ.

ನಿತೀಶ್ ಅಭಯ: ಬಿಹಾರ ಕಾರ್ಮಿಕರ ಮೇಲಿನ ದಾಳಿಗಳನ್ನು ತಡೆಯುವ ಸಂಬಂಧ ಹಿರಿಯ ಅಧಿಕಾರಿಗಳು ಗುಜರಾತ್‌ ಅಧಿಕಾರಿಗಳ ಜತೆ ನಿರಂತರ ಸಂಪರ್ಕದಲ್ಲಿದ್ದಾರೆ ಎಂದು ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಹೇಳಿದ್ದಾರೆ.

ಗುಜರಾತ್‌ನಲ್ಲಿರುವ ಬಿಹಾರಿಗಳು ನಿರಾತಂಕ ಮತ್ತು ನಿರ್ಭಯದಿಂದ ಇರುವಂತೆ ಅವರು ಅಭಯ ನೀಡಿದ್ದಾರೆ.

ವಿಶೇಷ ನಂಟು

ಪಟ್ನಾ: ಕಳೆದ ನೂರು ವರ್ಷಗಳಿಂದ ಬಿಹಾರ ಮತ್ತು ಗುಜರಾತ್‌ ನಡುವೆ ವಿಶೇಷ ನಂಟು ಬೆಳೆದು ಬಂದಿದೆ.

ಗುಜರಾತ್‌ನಲ್ಲಿರುವ ಐಎಎಸ್‌ ಮತ್ತು ಐಪಿಎಸ್‌ ಅಧಿಕಾರಿಗಳು ಸೇರಿದಂತೆ ಹಿರಿಯ ಅಧಿಕಾರಿಗಳಲ್ಲಿ ಹೆಚ್ಚಿನವರು ಬಿಹಾರಿಗಳು.

ಗುಜರಾತ್ ಸರ್ಕಾರದ ಮುಖ್ಯ ಕಾರ್ಯದರ್ಶಿ ಜೆ.ಎನ್‌. ಸಿಂಗ್‌, ಡಿಜಿಪಿ ಶಿವಾನಂದ ಝಾ ಮತ್ತು ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಮನೋಜ್‌ ಕುಮಾರ್‌ ದಾಸ್‌ ಬಿಹಾರದವರು.

ಗುಜರಾತ್‌ ಸರ್ಕಾರದ ವಿವಿಧ ಇಲಾಖೆಗಳಲ್ಲಿರುವ ಬಿಹಾರಿಗಳ ಈ ಪಟ್ಟಿ ಹೀಗೆ ಬೆಳೆಯುತ್ತಲೇ ಹೋಗುತ್ತದೆ.

ಮಹಾತ್ಮ ಗಾಂಧಿ ಮತ್ತು ಜಯಪ್ರಕಾಶ್‌ ನಾರಾಯಣ ಅವರ ಕಾಲದಿಂದಲೂ ಎರಡೂ ರಾಜ್ಯಗಳ ನಡುವೆ ಉತ್ತಮ ಬಾಂಧವ್ಯ, ನಂಟು ಬೆಳೆದುಕೊಂಡು ಬಂದಿದೆ.

ಉದ್ಯೋಗ ಕಸಿದುಕೊಂಡ ಅಕ್ರಮ ವಲಸಿಗರು

ಶಿವಪುರಿ/ಮಧ್ಯ ಪ್ರದೇಶ (ಪಿಟಿಐ): ಅಕ್ರಮ ವಲಸಿಗರು ಭಾರತದ ಯುವ ಜನಾಂಗದ ಉದ್ಯೋಗಾವಕಾಶಗಳನ್ನು ಕಸಿದುಕೊಂಡಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಆರೋಪಿಸಿದ್ದಾರೆ.

ಕೇಂದ್ರ ಸರ್ಕಾರದ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ಅಸ್ಸಾಂನಲ್ಲಿ 40 ಲಕ್ಷ ಅಕ್ರಮ ವಲಸಿಗರನ್ನು ಗುರುತಿಸಿದಾಗ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ, ಸಮಾಜವಾದಿ ಪಕ್ಷ, ಟಿಎಂಸಿ, ಬಿಎಸ್‌ಪಿ ಸೇರಿದಂತೆ ವಿರೋಧ ಪಕ್ಷಗಳ ನಾಯಕರು ಆಕಾಶ ಬಿದ್ದು ಹೋಗುವಂತೆ ಬೊಬ್ಬೆ ಹೊಡೆದರು ಎಂದು ಲೇವಡಿ ಮಾಡಿದರು.

ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, 2018 ಮತ್ತು 2019ರ ಚುನಾವಣೆಯಲ್ಲಿ ಜಯಗಳಿಸಿದ ನಂತರ ಎಲ್ಲ 40 ಲಕ್ಷ ಅಕ್ರಮ ವಲಸಿಗರನ್ನು ದೇಶದಿಂದ ಹೊರ ಹಾಕುವುದಾಗಿ ಭರವಸೆ ನೀಡಿದರು.

***

ಗುಜರಾತ್‌ನಲ್ಲಿ ಅನ್ಯ ರಾಜ್ಯಗಳ ಕಾರ್ಮಿಕರ ಮೇಲೆ ದಾಳಿ ನಡೆಸುವ ಮೂಲಕ ಆರ್‌ಎಸ್‌ಎಸ್‌ನ ಪುಂಡರು, ಗೂಂಡಾಗಳು ಈ ದೇಶವನ್ನು ಒಡೆಯಲು ಮುಂದಾಗಿದ್ದಾರೆ. ಅದಕ್ಕೆ ನಾವು ಅವಕಾಶ ನೀಡುವುದಿಲ್ಲ

ತೇಜಸ್ವಿ ಯಾದವ್‌, ಆರ್‌ಜೆಡಿ ನಾಯಕ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !