ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಘುಪತಿ ಭಟ್‌ ಸರ್ಟಿಫಿಕೇಟ್‌ ನೀಡುವುದು ಬೇಡ

ನಿರಂತರ ವಿದ್ಯುತ್, ಜೆ–ನರ್ಮ್‌ ಬಸ್ ಸಾಧನೆ: ಪ್ರಮೋದ್ ತಿರುಗೇಟು
Last Updated 30 ಮಾರ್ಚ್ 2018, 7:06 IST
ಅಕ್ಷರ ಗಾತ್ರ

ಉಡುಪಿ: ‘ರಾಜ್ಯವೇ ತಲೆತಗ್ಗಿಸುವಂತಹ ಕೆಲಸ ಮಾಡಿದ್ದ ಮಾಜಿ ಶಾಸಕ ಕೆ. ರಘುಪತಿ ಭಟ್, ಅವರು ನನಗೆ ಸರ್ಟಿಫಿಕೇಟ್ ನೀಡುವ ಅಗತ್ಯವಿಲ್ಲ. ಕ್ಷೇತ್ರದ ಜನತೆ ಎಂದಿಗೂ ತಲೆ ತಗ್ಗಿಸುವ ರೀತಿಯಲ್ಲಿ, ಭ್ರಷ್ಟಾಚಾರ ರಹಿತವಾಗಿ ಕಳೆದ ಐದು ವರ್ಷಗಳಿಂದ ಅಭಿವೃದ್ಧಿ ಕೆಲಸ ಮಾಡಿದ್ದೇನೆ’ ಎಂದು ಸಚಿವ ಪ್ರಮೋದ್ ಮಧ್ವರಾಜ್ ತಿರುಗೇಟು ನೀಡಿದರು.

ಜಿಲ್ಲಾ ಬಿಜೆಪಿ ಹಾಗೂ ರಘುಪತಿ ಭಟ್ ಅವರು ಇತ್ತೀಚೆಗೆ ಬಿಡುಗಡೆ ಮಾಡಿದ್ದ ಆರೋಪ ಪಟ್ಟಿಗೆ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಉತ್ತರ ನೀಡಿದರು.

‘ಶಾಸಕನಾಗಿ, ಸಂಸದೀಯ ಕಾರ್ಯದರ್ಶಿಯಾಗಿ ಹಾಗೂ ಸಚಿವನಾಗಿ ಸುಮಾರು ₹2,026 ಕೋಟಿ ಅನುದಾನವನ್ನು ಕ್ಷೇತ್ರಕ್ಕೆ ತಂದು ಕೆಲಸ ಮಾಡಿಸಿದ್ದೇನೆ. ಈ ಬಾರಿ ಬಿಜೆಪಿ ನನ್ನ ವಿರುದ್ಧ ಯಾರೇ ಅಭ್ಯರ್ಥಿಯನ್ನೂ ನಿಲ್ಲಿಸಿದರೂ ರಾಜ್ಯದಲ್ಲಿಯೇ ಅತ್ಯಧಿಕ ಮತಗಳ ಅಂತರದಿಂದ ಗೆಲ್ಲುತ್ತೇನೆ’ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಕೇಂದ್ರದ ಬಿಜೆಪಿ ಸರ್ಕಾರ ಅನುದಾನ ನೀಡದ ಕಾರಣ ಜಿಲ್ಲಾ ಆಸ್ಪತ್ರೆಯನ್ನು ₹500 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲು ಸಾಧ್ಯವಾಗಲಿಲ್ಲ. ಆದರೆ, ರಾಜ್ಯ ಸರ್ಕಾರದ ₹13.54 ಕೋಟಿ ಅನುದಾನವನ್ನು ವಿವಿಧ ಕಾಮಗಾರಿಗಳಿಗೆ ವೆಚ್ಚ ಮಾಡಲಾಗಿದೆ. ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಕೇವಲ 70 ಹಾಸಿಗೆ ಇದ್ದವು. ಆದ್ದರಿಂದ ಉದ್ಯಮಿ ಬಿ.ಆರ್. ಶೆಟ್ಟಿ ಅವರ ಸಹಭಾಗಿತ್ವದಲ್ಲಿ ಆಸ್ಪತ್ರೆಯನ್ನು ಅಭಿವೃದ್ಧಿಪಡಿಸಲಾಗಿದೆ. ಅಲ್ಲಿಯೂ ಎಲ್ಲ ಸೇವೆಗಳು ಸಂಪೂರ್ಣ ಉಚಿತವಾಗಿದೆ. ಮುಂದಿನ ತಿಂಗಳು ಅಲ್ಲಿ ಒಳ ರೋಗಿ ಸೇವೆ ಆರಂಭವಾಗಲಿದೆ ಎಂದರು.

ಸ್ನಾತಕೋತ್ತರ ಕೇಂದ್ರಕ್ಕಾಗಿ ಉಪ್ಪೂರಿನಲ್ಲಿ ಗುರುತಿಸಿದ್ದ ಜಮೀನು ಸೂಕ್ತ ಅಲ್ಲ ಎಂದು ಮಂಗಳೂರು ವಿಶ್ವವಿದ್ಯಾಲಯದ ತಜ್ಞರ ಸಮಿತಿ ವರದಿ ನೀಡಿತು. ಆದ್ದರಿಂದ ಅದನ್ನು ಕಾಪುವಿನ ಬೆಳಪು ಗ್ರಾಮಕ್ಕೆ ಸ್ಥಳಾಂತರಿಸಲಾಯಿತು. ಆದರೆ ಉಪ್ಪೂರಿನಲ್ಲಿ ₹44 ಕೋಟಿ ವೆಚ್ಚದಲ್ಲಿ ಸರ್ಕಾರಿ ಉಪಕರಣಾಗಾರ ಹಾಗೂ ತರಬೇತಿ ಕೇಂದ್ರ (ಜಿಟಿಟಿಸಿ) ಆರಂಭಿಸಲಾಗುತ್ತಿದೆ. ಎಸ್‌ಎಸ್‌ಎಲ್ಸಿ ಉತ್ತೀರ್ಣರಾದ ವಿದ್ಯಾರ್ಥಿಗಳು ಪ್ರವೇಶ ಪಡೆಯಬಹುದು. ಉತ್ತೀರ್ಣರಾದ ಎಲ್ಲರಿಗೂ ಕೆಲಸ ಸಿಗಲಿದೆ ಎಂದರು.

ವಿನಯಕುಮಾರ್ ಸೊರಕೆ ಅವರು ನಗರಾಭಿವೃದ್ಧಿ ಸಚಿವರಾಗಿದ್ದ ಕಾರಣ ಅವರ ಕ್ಷೇತ್ರದ ಕಾಪುವನ್ನು ಪುರಸಭೆಯನ್ನಾಗಿ ಮೇಲ್ದರ್ಜೆಗೇರಿಸಿದರು. ಅದನ್ನು ಬಿಟ್ಟು ರಾಜ್ಯದ ಯಾವೊಂದೂ ಗ್ರಾಮವೂ ಪುರಸಭೆಯಾಗಿಲ್ಲ. ಮುಂದೆ ಅವಕಾಶ ಬಂದಾಗ ಬ್ರಹ್ಮಾವರವನ್ನು ಪುರಸಭೆ ಮಾಡಲಾಗುವುದು. ತೆಂಕನಿಡಿಯೂರು ಹಾಗೂ ಚಾಂತಾರಿನ ಬಹುಗ್ರಾಮ ನೀರಿನ ಯೋಜನೆ ಜಾರಿಯಾಗಲಿದೆ ಎಂದರು.

**

‘ಮರಳುಗಾರಿಕೆ ಸ್ಥಗಿತಕ್ಕೆ ಕೇಂದ್ರ ಕಾರಣ’

ಕರಾವಳಿ ನಿಯಂತ್ರಣೇತರ ವಲಯದಲ್ಲಿರುವ (ನಾನ್ ಸಿಆರ್‌ಝಡ್‌) ನದಿಯಲ್ಲಿ ಮರಳು ದಿಬ್ಬ ಕಾಣಿಸಿಕೊಂಡರೆ ಮಾತ್ರ ಅದನ್ನು ತೆರವು ಮಾಡಬಹುದು ಎಂಬುದು ಕೇಂದ್ರ ಪರಿಸರ ಇಲಾಖೆಯ ನಿಯಮವಾಗಿದೆ. ಈ ನಿಯಮ ಸಡಿಲಿಸಿ ನದಿ ಒಳಗೆ ಇರುವ ಮರಳನ್ನು (ಇನ್‌ಸ್ಟ್ರೀಮ್ ಮೈನಿಂಗ್) ತೆಗೆಯಲು ಅವಕಾಶ ನೀಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಆದರೆ ಈ ವರೆಗೂ ಅವರು ನಿಯಮ ತಿದ್ದುಪಡಿ ಮಾಡಿಲ್ಲ. ಆದ್ದರಿಂದ ನಿಯಂತ್ರಣೇತರ ವಲಯದಲ್ಲಿ ಮರಳುಗಾರಿಕೆ ಸ್ಥಗಿತಗೊಳ್ಳಲು ಕೇಂದ್ರ ಸರ್ಕಾರವೇ ಕಾರಣ ಎಂದು ಪ್ರಮೋದ್ ಆರೋಪಿಸಿದರು.

‘ಕೆಲವರು ನಿಯಮಬಾಹಿರ ಮರಳುಗಾರಿಕೆ ವಿರುದ್ಧ ಹಸಿರು ಪೀಠಕ್ಕೆ ಹೋದ ಕಾರಣ ನಿಷೇಧವಾಯಿತು. ಹಸಿರು ಪೀಠದ ಆದೇಶವನ್ನು ಜಿಲ್ಲಾಧಿಕಾರಿ ಅವರು ಜಾರಿ ಮಾಡುತ್ತಿದ್ದಾರೆ. ಅದರಲ್ಲಿ ಸಚಿವರ ಪಾತ್ರ ಇರುವುದಿಲ್ಲ. ಮಣಿಪಾಲ ವಿಶ್ವವಿದ್ಯಾಲಯಕ್ಕೆ ಸರ್ಕಾರ ವಿಧಿಸಿದ್ದ ₹1200 ಕೋಟಿ ದಂಡವನ್ನು ಆಗ ಕಂದಾಯ ಸಚಿವರಾಗಿದ್ದ ವಿ. ಶ್ರೀನಿವಾಸ ಪ್ರಸಾದ್ ರದ್ದು ಮಾಡಿದರು. ಶ್ರೀನಿವಾಸ ಪ್ರಸಾದ್ ಈಗ ಬಿಜೆಪಿಯಲ್ಲೇ ಇದ್ದು ರಘುಪತಿ ಭಟ್ ಅವರನ್ನೇ ಕೇಳುವುದು ಒಳ್ಳೆಯದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT