ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಗ್ರರಿಂದ ಪ್ರತೀಕಾರ: ಪೊಲೀಸರ ಸಂಬಂಧಿಕರ ಅಪಹರಣ

ಜಮ್ಮು ಮತ್ತು ಕಾಶ್ಮೀರದ ದಕ್ಷಿಣ ಕಾಶ್ಮೀರದಲ್ಲಿ ನಡೆದ ಪ್ರಕರಣ
Last Updated 31 ಆಗಸ್ಟ್ 2018, 17:16 IST
ಅಕ್ಷರ ಗಾತ್ರ

ಶ್ರೀನಗರ: ದಕ್ಷಿಣ ಕಾಶ್ಮೀರದ ವಿವಿಧ ಸ್ಥಳಗಳಲ್ಲಿ ಗುರುವಾರ ರಾತ್ರಿ ಮನೆಗೆ ನುಗ್ಗಿದ ಭಯೋತ್ಪಾದಕರು ಪೊಲೀಸರ ಏಳು ಮಂದಿ ಸಂಬಂಧಿಕರನ್ನು ಅಪಹರಿಸಿದ್ದಾರೆ.

ಪೊಲೀಸರ ಕುಟುಂಬ ಸದಸ್ಯರ ಅಪಹರಣದ ಹೊಣೆಯನ್ನು ಹಿಜ್ಬುಲ್ ಮುಜಾಹಿದ್ದೀನ್‌ ಸಂಘಟನೆ ಹೊತ್ತುಕೊಂಡಿದೆ.

ತಮ್ಮ ಸಂಬಂಧಿಕರನ್ನು ಪೊಲೀಸರು ಬಂಧಿಸಿದ್ದಕ್ಕೆ ಪ್ರತೀಕಾರವಾಗಿ ಉಗ್ರರು ಈ ಕೃತ್ಯ ಎಸಗಿದ್ದಾರೆ. ಅಲ್ಲದೆ, ತಮ್ಮ ಸಂಬಂಧಿಕರ ಬಿಡುಗಡೆಗೆ ಉಗ್ರರು ಮೂರು ದಿನಗಳ ಗಡುವು ನೀಡಿದ್ದಾರೆ.

ಉಗ್ರರ ಈ ಕೃತ್ಯವ‌ನ್ನು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿಗಳಾದಮೆಹಬೂಬಾ ಮುಫ್ತಿ ಹಾಗೂ ಒಮರ್‌ ಅಬ್ದುಲ್ಲಾ ಅವರು ಖಂಡಿಸಿದ್ದಾರೆ.

ಕೆಲವು ಮೂಲಗಳ ಪ್ರಕಾರ, ಪೊಲೀಸರ 11 ಮಂದಿ ಸಂಬಂಧಿಗಳನ್ನು ಅಪಹರಿಸಲಾಗಿದೆ ಎನ್ನಲಾಗಿದೆ. ಆದರೆ ಈ ಮಾಹಿತಿ ದೃಢಪಟ್ಟಿಲ್ಲ.

‘ದಕ್ಷಿಣ ಕಾಶ್ಮೀರದ ಕೆಲವು ಕಡೆಗಳಲ್ಲಿ ವ್ಯಕ್ತಿಗಳ ಅಪಹರಣ ನಡೆದಿರುವ ಬಗ್ಗೆ ಗಮನಕ್ಕೆ ಬಂದಿದೆ. ಈ ಬಗ್ಗೆ ಮಾಹಿತಿ ಪಡೆಯುತ್ತಿದ್ದೇವೆ’ ಎಂದು ಪೊಲೀಸ್‌ ಇಲಾಖೆಯ ವಕ್ತಾರರು ತಿಳಿಸಿದ್ದಾರೆ.

‘ಶೋಪಿಯಾನ್‌, ಕುಲ್ಗಾಂ, ಅನಂತನಾಗ್‌ ಹಾಗೂ ಅವಂತಿಪೊರಾದಲ್ಲಿಗುರುವಾರ ರಾತ್ರಿ ಜಮ್ಮು ಮತ್ತು ಕಾಶ್ಮೀರದ ಪೊಲೀಸರ ಏಳು ಮಂದಿ ಸಂಬಂಧಿಕರನ್ನು ಅಪಹರಿಸಿದ್ದಾರೆ’ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ಅಪಹೃತರಲ್ಲಿ ಉಪ ಪೊಲೀಸ್‌ ಆಯುಕ್ತರ ಹತ್ತಿರದ ಸಂಬಂಧಿ ಅದ್ನಾನ್‌ ಅಹಮ್ಮದ್‌ ಶಾ (26) ಕೂಡ ಸೇರಿದ್ದಾರೆ. ಮತ್ತೊಂದು ಪ್ರಕರಣದಲ್ಲಿ ಪೊಲೀಸ್‌ ಅಧಿಕಾರಿಯೊಬ್ಬರ ಮಗ ಯಾಸೀರ್‌ ಭಟ್‌ನನ್ನು ಶೋಪಿಯಾನ್‌ ಜಿಲ್ಲೆಯ ವಾತೂ ಗ್ರಾಮದ ಅವರ ಮನೆಯಿಂದಲೇ ಅಪಹರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಯಾಸೀರ್‌ ತಂದೆ ಈಗ ಹಜ್‌ ಯಾತ್ರೆಗೆ ತೆರಳಿದ್ದಾರೆ.

ಏಳು ಮಂದಿಯ ಹೊರತಾಗಿ ನಡೆದ ಇತರರ ಅಪಹರಣದ ಕುರಿತು ಮಾಹಿತಿ ನೀಡಲು ಪೊಲೀಸರು ನಿರಾಕರಿಸಿದ್ದಾರೆ. ಶೋಪಿಯಾನ್‌ನ ಬರ್ಥಿಪೊರಾದಲ್ಲಿ ಕಾನ್‌ಸ್ಟೆಬಲ್‌ಗೆ ಸೇರಿದ ಸಂಬಂಧಿಕರನ್ನು ಮನೆಯೊಳಗೆ ಕೂಡಿಹಾಕಿ ಬೆಂಕಿಹಚ್ಚುವುದಾಗಿ ಉಗ್ರರು ಬೆದರಿಕೆ ಒಡ್ಡಿರುವುದು ತಿಳಿದುಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರತೀಕಾರದ ಕ್ರಮ: ವಿವಿಧ ದೇಶಗಳಿಗೆ ಬೇಕಾಗಿದ್ದ ಕುಖ್ಯಾತ ಭಯೋತ್ಪಾದಕ ಸೈಯದ್‌ ಸಲಾಹುದ್ದೀನ್‌ನ ಎರಡನೇ ಮಗನನ್ನು ರಾಷ್ಟ್ರೀಯ ತನಿಖಾ ಸಂಸ್ಥೆಯ (ಎನ್‌ಐಎ) ಅಧಿಕಾರಿಗಳು ಬಂಧಿಸಿದ ಬೆನ್ನಲ್ಲೇ ಭಯೋತ್ಪಾದಕರು ಅಪಹರಣ ನಡೆಸಿದ್ದಾರೆ.

‘ಅಪಹರಣವನ್ನು ಇಲ್ಲಿನ ನ್ಯಾಷನಲ್‌ ಕಾನ್ಫರೆನ್ಸ್‌ ಪಕ್ಷ ಕಟುವಾಗಿ ಖಂಡಿಸಿದೆ. ಅಗತ್ಯಕ್ಕಿಂತ ಹೆಚ್ಚಿನ ಸೇನೆ ನಿಯೋಜಿಸಿದ್ದರೂ, ಅಪಹರಣದ ಬಗ್ಗೆ ಮೌನವಹಿಸಲಾಗಿದೆ’ ಎಂದು ಪಕ್ಷದ ಮುಖಂಡ ಒಮರ್‌ ಅಬ್ದುಲ್ಲಾ ತಿಳಿಸಿದ್ದಾರೆ.

‘ತಮ್ಮ ನಿಯಂತ್ರಣ ಸಾಧಿಸಲು ಸೇನೆ ಅಥವಾ ಭಯೋತ್ಪಾದಕರು, ಜನಸಾಮಾನ್ಯರಿಗೆ ತೊಂದರೆ ನೀಡುವುದು ಸರಿಯಲ್ಲ. ಇರಿಂದ ಕಣಿವೆ ರಾಜ್ಯದಲ್ಲಿ ಪರಿಸ್ಥಿತಿ ಚಿಂತಾಜನಕವಾಗಿದೆ’ ಎಂದು ಪಿಡಿಪಿ ಪಕ್ಷದ ಮುಖ್ಯಸ್ಥೆ ಹಾಗೂ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ತಿಳಿಸಿದ್ದಾರೆ.

**
11 ಮಂದಿ ಅಪಹರಣ! ಕಣಿವೆ ರಾಜ್ಯದಲ್ಲಿ ಈಗ ಬೆಳವಣಿಗೆಯೂ ನಿಜಕ್ಕೂ ಕಳವಳ ಪಡುವ ವಿಚಾರ.
-ಒಮರ್ ಅಬ್ದುಲ್ಲಾ, ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT