ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಮ್ಮು–ಕಾಶ್ಮೀರದಲ್ಲಿ ಕಟ್ಟೆಚ್ಚರ| ಕಣಿವೆ ತೊರೆಯಲು ಪ್ರವಾಸಿ, ಯಾತ್ರಿಕರಿಗೆ ಸೂಚನೆ

Last Updated 7 ಆಗಸ್ಟ್ 2019, 5:25 IST
ಅಕ್ಷರ ಗಾತ್ರ

ಶ್ರೀನಗರ: ಅಮರನಾಥ ಯಾತ್ರಿಕರ ಮೇಲೆ ಭಯೋತ್ಪಾದಕರ ದಾಳಿ ನಡೆಯುವ ಆತಂಕ ದಟ್ಟವಾಗಿದ್ದು, ಜಮ್ಮು ಮತ್ತು ಕಾಶ್ಮೀರದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.

ಅಮರನಾಥ ಯಾತ್ರೆಗೆ ಸಂಬಂಧಿಸಿ ಕಟ್ಟುನಿಟ್ಟಿನ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಯಾತ್ರಿಕರು ಮತ್ತು ಪ್ರವಾಸಿಗರು ಜಮ್ಮು ಮತ್ತು ಕಾಶ್ಮೀರದಿಂದ ಆದಷ್ಟು ಬೇಗನೆ ಹೊರ ಹೋಗಬೇಕು ಎಂದು ಅಲ್ಲಿನ ಸರ್ಕಾರ ಸೂಚನೆ ನೀಡಿದೆ.

ಜಮ್ಮು ಮತ್ತು ಕಾಶ್ಮೀರಕ್ಕೆ ಹೆಚ್ಚುವರಿಯಾಗಿ 28 ಸಾವಿರ ಯೋಧರನ್ನು ಕಳುಹಿಸಲು ನಿರ್ಧರಿಸಲಾಗಿದೆ ಎಂಬ ಸುದ್ದಿ ಕಳವಳವನ್ನು ಇನ್ನಷ್ಟು ಹೆಚ್ಚಿಸಿದೆ.

ಅಮರನಾಥ ಯಾತ್ರಿಕರ ಮೇಲೆ ಭಯೋತ್ಪಾದಕರು ದಾಳಿ ನಡೆಸುವ ಸಾಧ್ಯತೆ ಇದೆ ಎಂದು ಗುಪ್ತಚರ ಮಾಹಿತಿ ಬಂದಿರುವ ಕಾರಣಕ್ಕೆ ಈ ಸೂಚನೆ ನೀಡಲಾಗಿದೆ.

‘ಪಾಕಿಸ್ತಾನದಿಂದ ಕಾರ್ಯಾಚರಣೆ ನಡೆಸುವ ಭಯೋತ್ಪಾದಕರು, ಅಮರನಾಥ ಯಾತ್ರಿಕರ ಮೇಲೆ ದಾಳಿ ನಡೆಸುವ ಸಂಚು ರೂಪಿಸುತ್ತಿದ್ದು ಅದು ಯಶಸ್ವಿಯಾಗಲು ಬಿಡುವುದಿಲ್ಲ’ ಎಂದು ಭಾರತೀಯ ಸೇನೆ ಶುಕ್ರವಾರ ಹೇಳಿದೆ.

ಭದ್ರತಾಪಡೆಗಳ ಜಂಟಿ ಮಾಧ್ಯಮಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಲೆಫ್ಟಿನೆಂಟ್‌ ಜನರಲ್‌ ಕೆ.ಜೆ.ಎಸ್‌. ಧಿಲ್ಲೋನ್‌, ‘ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಪರಿಸ್ಥಿತಿ ನಿಯಂತ್ರಣದಲ್ಲಿದೆ ಮತ್ತು ಬಹುತೇಕ ಶಾಂತಿಯುತವಾಗಿದೆ. ಜಮ್ಮು–ಕಾಶ್ಮೀರದಲ್ಲಿ ಶಾಂತಿ ಕದಡಲು ಪಾಕಿಸ್ತಾನಕ್ಕೆ ಅವಕಾಶ ನೀಡುವುದಿಲ್ಲ’ ಎಂದರು.

‘ಕಣಿವೆಯಲ್ಲಿ ಕಚ್ಚಾ ಬಾಂಬ್‌ ಬಳಸಿ ದಾಳಿ ನಡೆಸುವ ಸಾಧ್ಯತೆ ಇದೆ ಎಂಬ ಮಾಹಿತಿ ಲಭ್ಯವಾಗಿತ್ತು. ಆದರೆ ನಿಯಮಿತವಾಗಿ ಶೋಧ ಕಾರ್ಯ ನಡೆಸುವ ಮೂಲಕ ಆ ಸಾಧ್ಯತೆಯನ್ನು ತಡೆಯಲಾಗಿದೆ. ಶೋಫಿಯಾನ್‌ನಲ್ಲಿ ಶೋಧ ನಡೆಸಿದಾಗ ಪಾಕಿಸ್ತಾನದಲ್ಲಿ ನಿರ್ಮಿಸಲಾದ ಒಂದು ನೆಲಬಾಂಬ್‌ ಪತ್ತೆಯಾಗಿದೆ’ ಎಂದು ತಿಳಿಸಿದರು.

‘ಅಮರನಾಥ ಯಾತ್ರಾರ್ಥಿಗಳ ಮೇಲೆ ದೊಡ್ಡ ಪ್ರಮಾಣದ ದಾಳಿಗೆ ಸಿದ್ಧತೆ ನಡೆಯುತ್ತಿದೆ ಎಂಬ ಮಾಹಿತಿ ನಮಗೆ ಲಭಿಸುತ್ತಲೇ ಇದೆ. ಅದರ ಆಧಾರದಲ್ಲಿ ಯಾತ್ರೆಯ ಮಾರ್ಗದಲ್ಲಿ ಭದ್ರತಾ ಪಡೆಗಳು ಜಂಟಿಯಾಗಿ ದಾಳಿ ನಡೆಸಿ ದೊಡ್ಡ ಪ್ರಮಾಣದಲ್ಲಿ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿವೆ’ ಎಂದರು.

ಭದ್ರತೆಯಿಂದ ಉದ್ವಿಗ್ನ ಸ್ಥಿತಿ

ಸೇನೆ ಮತ್ತು ವಾಯುಪಡೆಯನ್ನು ಇಲ್ಲಿ ಸನ್ನದ್ಧ ಸ್ಥಿತಿಯಲ್ಲಿರಿಸಿರುವುದರಿಂದ ಅನೇಕ ಊಹಾಪೋಹಗಳು ಸೃಷ್ಟಿಯಾಗಿ, ಉದ್ವಿಗ್ನ ಸ್ಥಿತಿ ಉಂಟಾಗಿದೆ. ಭಾರತೀಯ ಯುದ್ಧ ವಿಮಾನಗಳು ಈ ಭಾಗದಲ್ಲಿ ಗುರುವಾರದಿಂದ ಗಸ್ತು ಹಾರಾಟ ನಡೆಸುತ್ತಿವೆ. ಸೇನಾಪಡೆಯ ನಿಯೋಜನೆ ಹೆಚ್ಚಿದ್ದರಿಂದ ಗಸ್ತು ನಡೆಸಲಾಗುತ್ತಿದೆ ಎಂದು ಹೇಳಲಾಗಿದೆ.

‘ಶ್ರೀನಗರಕ್ಕೆ ಪ್ರವೇಶ ಕಲ್ಪಿಸುವ ಪ್ರಮುಖ ರಸ್ತೆಗಳನ್ನು ಸಿಆರ್‌ಪಿಎಫ್‌ ತನ್ನ ನಿಯಂತ್ರಣಕ್ಕೆ ಪಡೆದುಕೊಂಡಿದೆ’ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ನಿರಂತರ ಕಾರ್ಯಾಚರಣೆ

* ಅಮರನಾಥಕ್ಕೆ ಸಾಗುವ ಬಾಲ್ಟಾಲ್‌, ಪಹಲ್ಗಾಂವ್‌ ಮಾರ್ಗಗಳಲ್ಲಿ ಶೋಧ

* ಶೋಧದಲ್ಲಿ ಭಾರಿ ಪ್ರಮಾಣದ ಶಸ್ತ್ರಾಸ್ತ್ರ ವಶ

* ಪತ್ತೆಯಾದ ಶಸ್ತ್ರಾಸ್ತ್ರ ಪಾಕಿಸ್ತಾನದಲ್ಲಿ ತಯಾರಾದವು ಎಂಬ ಮಾಹಿತಿ

* ಪಾಕ್‌ ಆಕ್ರಮಿತ ಕಾಶ್ಮೀರದ ಉಗ್ರರ ಶಿಬಿರಗಳು ಭರ್ತಿ, ಅವರೆಲ್ಲರೂ ಭಾರತಕ್ಕೆ ನುಸುಳಲು ಕಾಯುತ್ತಿದ್ದಾರೆ ಎಂಬ ಆತಂಕ

* ನುಸುಳುವಿಕೆ ತಡೆ ಮತ್ತು ಶೋಧದ ಮೂಲಕ ಉಗ್ರರ ಸಂಚು ವಿಫಲಗೊಳಿಸಲು ಸತತ ಕಾರ್ಯಾಚರಣೆ

*ಸೇನೆ ಹಾಗೂ ವಾಯು‍ಪಡೆಯನ್ನು ಸನ್ನದ್ಧ ಸ್ಥಿತಿಯಲ್ಲಿಡಬೇಕಾದ ಪರಿಸ್ಥಿತಿ ಈಗ ಜಮ್ಮು ಕಾಶ್ಮೀರದಲ್ಲಿ ಇದೆಯೇ? ಇದು ‘35ಎ’ ಅಥವಾ ಕ್ಷೇತ್ರ ಮರುವಿಂಗಡಣೆಗೆ ಸಂಬಂಧಿಸಿದ ವಿಷಯದಂತೆ ಕಾಣಿಸುತ್ತಿಲ್ಲ. ಬೇರೇನೋ ಬೆಳವಣಿಗೆಯಂತೆ ಕಾಣಿಸುತ್ತದೆ

ಒಮರ್‌ ಅಬ್ದುಲ್ಲಾ, ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT